ಶನಿವಾರ, ಸೆಪ್ಟೆಂಬರ್ 18, 2021
26 °C

ಬಹುಮುಖ ‘ಯಕ್ಷ ಪ್ರತಿಭೆ’

ಪ್ರೀತಿ ಕಾಮತ್ Updated:

ಅಕ್ಷರ ಗಾತ್ರ : | |

Prajavani

ಯಕ್ಷಗಾನ ಕರ್ನಾಟಕದ ಕರಾವಳಿ ತೀರದ ವಿಶಿಷ್ಟ ಶಾಸ್ತ್ರೀಯ ಸಾಂಪ್ರದಾಯಿಕ ಕಲಾಪ್ರಕಾರ. ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಮೆಟ್ಟಿನ ಕಲೆ ಮನೆ-ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂಥ ಯಕ್ಷಗಾನವನ್ನು ವಿಶ್ವದಾದ್ಯಂತ ಬೆಳಗಿಸಬೇಕೆಂಬ ಕನಸು ಹೊತ್ತು ಯಕ್ಷರಂಗದಲ್ಲಿ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಿದ್ದಾರೆ ಮಾಗೋಡಿನ ಉದಯೋನ್ಮುಖ ಕಲಾವಿದ, ಬಹುಮುಖ ಯಕ್ಷ ಪ್ರತಿಭೆ ಶ್ರೀಗಣೇಶ ಹೆಗಡೆ.

ಹೊನ್ನಾವರದ ಮಾಗೋಡಿನ ಸುಬ್ರಾಯ ಮತ್ತು ಮಹಾಲಕ್ಷ್ಮಿ ದಂಪತಿಯ ಪುತ್ರ ಶ್ರೀಗಣೇಶ. ವೇಷತೊಟ್ಟು, ರಂಗಸ್ಥಳದಲ್ಲಿ ನಿಂತರೆ ರಾಮ, ಹನುಮಂತ, ಈಶ್ವರ, ಭೀಮ, ಅರ್ಜುನ, ಕೌರವ, ಕಾರ್ತಿವೀರ್ಯದಂತಹ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬುತ್ತಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳ್ಕೂರು ಕೃಷ್ಣಯಾಜಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಹಾಗೂ ದಿವಂಗತ ಕಣ್ಣಿಮನೆ ಗಣಪತಿ ಭಟ್ ಅವರಂತಹ ಖ್ಯಾತನಾಮರಿಂದ ಪ್ರೇರಿತರಾದ ಶ್ರೀಗಣೇಶ, ಬಾಲ್ಯದಿಂದಲೇ ಯಕ್ಷಗಾನ ಅಭ್ಯಾಸ ಆರಂಭಿಸಿದರು. ಪ್ರಾಥಮಿಕ ಶಿಕ್ಷಣ ಕಲಿಯುವಾಗಲೇ ಯಕ್ಷರಂಗದತ್ತ ಆಸಕ್ತಿ ಬೆಳೆಸಿಕೊಂಡರು.

ಒಂದು ಕಡೆ ತಂದೆಯ ಸಹಕಾರ, ಮತ್ತೊಂದು ಕಡೆ ಏಕಲವ್ಯನಂತೆ ಯಕ್ಷಾಭ್ಯಾಸ. ಹೀಗೆ ಅವರು ಎಂಟನೇ ವಯಸ್ಸಿಗೆ ಯಕ್ಷರಂಗ ಪ್ರವೇಶಿಸಿದರು. ಸ್ವಪ್ರಯತ್ನದಿಂದ ಸಿದ್ದಿಸಿಕೊಂಡ ಈ ಕಲೆಗೆ ಜನರ ಮೆಚ್ಚುಗೆ ಸಿಕ್ಕಿತು. ಇವರು ಅಭಿನಯಿಸುವ ಪಾತ್ರಗಳಿಗೆ ಮೆಚ್ಚುಗೆ ಸೂಚಿಸಿದವರು, ಪ್ರಶಸ್ತಿ ನೀಡಿ, ಸನ್ಮಾನಿಸಿದರು.

ಬಹುಮುಖ ಪ್ರತಿಭೆ

ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀಗಣೇಶ ಅವರಿಗೆ ಯಕ್ಷಗಾನದ ಜತೆಗೆ, ಕ್ರೀಡೆ, ಬರವಣಿಗೆ, ಛಂದಸ್ಸು ಸಹಿತ ಕಾವ್ಯ ರಚನೆ, ಯೋಗಾಭ್ಯಾಸದತ್ತಲೂ ವಿಶೇಷ ಒಲವಿದೆ. ಕನ್ನಡ ಪುಸ್ತಕ ಪ್ರಾಧಿಕಾರವು ಆಯೋಜಿಸಿದ ‘ನನ್ನ ನೆಚ್ಚಿನ ಪುಸ್ತಕ ವಿಚಾರ ಮಂಡನೆ’ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯ ಜಂಟಿಯಾಗಿ ಆಯೋಜಿಸಿದ ಪ್ರಥಮ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಉತ್ತಮ ಚರ್ಚಾಪಟುವಾಗಿರುವ ಗಣೇಶ, ‘ವಿದ್ಯಾರ್ಥಿ– ವಿಜ್ಞಾನಿ’ ನೇರ ಸಂವಾದದಲ್ಲಿ ಭಾರತರತ್ನ ಸಿ.ಎನ್.ಆರ್ ರಾವ್‍ರೊಂದಿಗೆ ನಡೆದ ಸಂವಾದ ಕಾರ್ಯಕ್ರಮಕ್ಕೂ ಆಯ್ಕೆಯಾಗಿದ್ದಾರೆ. ಬಾಳಿಗ ಪರ್ಯಾಯ ಫಲಕ ಚರ್ಚಾಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಪಿ.ಎಸ್.ಕಾಮತ್ ಸ್ಮರಣಿಕೆ ಟ್ರಸ್ಟನ ಸ್ಪರ್ಧೆಯಲ್ಲಿ ಅತ್ಯುತ್ತಮ ಚರ್ಚಾಪಟುವಾಗಿ ಆಯ್ಕೆಯಾಗಿದ್ದಾರೆ.

ಎನ್‌ಸಿಸಿಯಲ್ಲೂ ಸೈ

ಎನ್.ಸಿ.ಸಿ. ಆಯೋಜಿಸಿದ ಶಿಪ್ ಅಟ್ಯಾಚ್‌ಮೆಂಟ್ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು, ಆಗ ರಕ್ಷಣಾ ಸಚಿವರಾಗಿದ್ದ ಮನೋಹರ ಪರ‍್ರಿಕ್ಕರ್ ಅವರನ್ನು ಭೇಟಿಯಾಗಿ, ದೇಶದ ಪ್ರಮುಖ ಯುದ್ಧನೌಕೆಗಳಾದ ಐ.ಎನ್.ಎಸ್. ವಿಕ್ರಮಾದಿತ್ಯ, ಐ.ಎನ್.ಎಸ್ ಮುಂಬಯಿ, ಐ.ಎನ್.ಎಸ್. ದೆಹಲಿ, ಐ.ಎನ್.ಎಸ್. ಸಹ್ಯಾದ್ರಿಗಳಲ್ಲಿ ಸಮುದ್ರ ಯಾನದಂತಹ ತರಬೇತಿಯಲ್ಲೂ ಪಾಲ್ಗೊಂಡಿದ್ದಾರೆ.

ಪ್ರಶಸ್ತಿ ಪುರಸ್ಕಾರ

ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲೂ ಸಕ್ರಿಯರಾಗಿದ್ದ ಶ್ರೀಗಣೇಶ, ರಾಜ್ಯಪಾಲ ವಜುಭಾಯಿ ವಾಲ ಅವರಿಂದ ರೋವರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಜಿಲ್ಲಾ ಮಟ್ಟದ ಅತ್ಯುನ್ನತ ಪ್ರಶಸ್ತಿ ‘ನಿಪುಣ ಪುರಸ್ಕಾರ’, ಒರಿಸ್ಸಾದ ರಾಜಧಾನಿ ಭುವನೇಶ್ವರ ದಲ್ಲಿ ನಡೆದ ರಾಷ್ಟ್ರಮಟ್ಟದ ನಾಟಕಾಭಿನಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಯುವ ಪ್ರಶಸ್ತಿ, ಶರಾವತಿ ಉತ್ಸವದಲ್ಲಿ ಸಾಧನಾ ಸನ್ಮಾನ, ಹೊನ್ನಾವರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಸನ್ಮಾನಕ್ಕೆ ಇವರು ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿರುವ ಶ್ರೀಗಣೇಶರು ಎಂದೂ ಯಕ್ಷಗಾನವನ್ನೇ ಆದ್ಯತೆಯ ಕ್ಷೇತ್ರವನ್ನಾಗಿಸಿಕೊಂಡಿದ್ದಾರೆ. ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ವಿಟ್ಟುಕೊಂಡಿದ್ದಾರೆ. ತಾನು ಬೆಳೆಯಬೇಕು, ಯಕ್ಷಕಲೆಯನ್ನೂ ವಿಶ್ವದಾದ್ಯಂತ ಪಸರಿಸ ಬೇಕೆಂಬುದು ಅವರ ಆಶಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು