ಪಂಚಮಸಾಲಿ ಪ್ರಬಲ ತಿಕ್ಕಾಟ; ಪರ–ವಿರೋಧದ ಹಗ್ಗ ಜಗ್ಗಾಟ..!

ಶುಕ್ರವಾರ, ಮೇ 24, 2019
28 °C

ಪಂಚಮಸಾಲಿ ಪ್ರಬಲ ತಿಕ್ಕಾಟ; ಪರ–ವಿರೋಧದ ಹಗ್ಗ ಜಗ್ಗಾಟ..!

Published:
Updated:

ವಿಜಯಪುರ: ಬಹಿರಂಗ ಪ್ರಚಾರದ ಕೊನೆ ದಿನವಾದ ಭಾನುವಾರ ಜಿಲ್ಲೆಯ ಪ್ರಬಲ ಸಮುದಾಯಗಳಲ್ಲೊಂದಾದ ಪಂಚಮಸಾಲಿ ಸಮಾಜದಲ್ಲಿ ‘ಮತ’ ಒಡಕು ಸೃಷ್ಟಿಯಾಗಿದೆ.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ–ವಿರೋಧ ಬ್ಯಾಟಿಂಗ್‌ ನಡೆದಿದ್ದು, ಆರೋಪ–ಪ್ರತ್ಯಾರೋಪ ತಾರಕಕ್ಕೇರಿದವು. ಜೆಡಿಎಸ್‌, ಬಿಜೆಪಿ ಮುಖಂಡರು ಬೆನ್ನಿಗೆ ನಿಂತು ತಮ್ಮ ತಮ್ಮ ಪರ ವಾದ ಮಂಡನೆಯಾಗುವಂತೆ ವ್ಯವಸ್ಥಿತ ತಂತ್ರಗಾರಿಕೆ ನಡೆಸಿದರು.

‘ರಮೇಶ ಜಿಗಜಿಣಗಿ ಪಂಚಮಸಾಲಿ ಸಮಾಜವನ್ನು ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ. ಹೀಗಾಗಿ ಸಮಾಜ ತಕ್ಕ ಪಾಠ ಕಲಿಸಲಿದ್ದು, ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಡಾ.ಸುನೀತಾ ದೇವಾನಂದ ಚವ್ಹಾಣ ಬೆಂಬಲಿಸಲಿದೆ’ ಎಂದು ರಾಜ್ಯ ವೀರಶೈವ ಪಂಚಮಸಾಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಬಸವರಾಜ ದಿಂಡೂರ ಪ್ರಕಟಿಸಿದರು.

‘ಈ ಹಿಂದೆ ನಮ್ಮ ಸಮಾಜ ಜಿಗಜಿಣಗಿ ಬೆಂಬಲಿಸಿದೆ. ಆದರೆ ಅವರು ನಮ್ಮನ್ನು ಅಪ್ಪಿಕೊಳ್ಳದೆ ತುಳಿದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಮಾಜದ ಜನರು ಒಟ್ಟಾಗಿದ್ದಾರೆ. ಉಳಿದವರು ಏನೇ ಹೇಳಿಕೊಂಡರು ಅದು ಅವರವರ ವೈಯಕ್ತಿಕ. ಸಮಾಜದ ನಿರ್ಧಾರವಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದಿ.ಬಿ.ಆರ್.ಪಾಟೀಲ ಕನಮಡಿ, ದಿ.ವಿಮಲಾಬಾಯಿ ದೇಶಮುಖ, ಸಚಿವರಾದ ಶಿವಾನಂದ ಪಾಟೀಲ, ಎಂ.ಸಿ.ಮನಗೂಳಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಎಂ.ಎಸ್.ರುದ್ರಗೌಡ, ಅಪ್ಪುಗೌಡ ಪಾಟೀಲ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ರಾಜಕೀಯ ಬೆಳವಣಿಗೆಗೆ ಜಿಗಜಿಣಗಿ ಅಡ್ಡಿಯಾಗಿದ್ದಾರೆ. ನಮ್ಮ ಸಮಾಜದ ನಾಯಕರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ’ ಎಂದು ದಿಂಡೂರ ದೂರಿದರು.

ಪಂಚಮಸಾಲಿ ಸಮಾಜದ ಮುಖಂಡರಾದ ಗುರುಶಾಂತ ನಿಡೋಣಿ, ಬಿ.ಎಂ.ಪಾಟೀಲ ದೇವರಹಿಪ್ಪರಗಿ, ಶಶಿಧರ ಸಾತಲಗಾಂವ, ಮಲ್ಲನಗೌಡ ಪಾಟೀಲ ಮನಗೂಳಿ, ಭೀಮನಗೌಡ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿದ್ದರು.

ದಿಂಡೂರ ಅಧ್ಯಕ್ಷನೇ ಅಲ್ಲ; ಸೋಮನಗೌಡ

‘ಬಸವರಾಜ ದಿಂಡೂರ ಸಮಸ್ತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷನೇ ಅಲ್ಲ. ಅವ ಈ ಹಿಂದೆ ಹರಿಹರ ಪೀಠದ ಸಮಾಜದ ಅಧ್ಯಕ್ಷನಿದ್ದ. ನಾನು ಆತನ ಹೇಳಿಕೆ ಬಗ್ಗೆ ಹಾಲಿ ಅಧ್ಯಕ್ಷ ನಾಗನಗೌಡ ಜತೆ ಮಾತನಾಡಿರುವೆ. ಸಮಾಜದ ಹೆಸರು ಹಾಳು ಮಾಡಲೇ ಜಿಗಜಿಣಗಿ ವಿರುದ್ಧ ಹೇಳಿಕೆ ನೀಡಿದ್ದಾನೆ’ ಎಂದು ಪಂಚಮಸಾಲಿ ಸಮಾಜದ ಮುಖಂಡ ಸೋಮನಗೌಡ ಪಾಟೀಲ ಯರನಾಳ ಕಿಡಿಕಾರಿದರು.

‘ದಿಂಡೂರ ವಿಜಯಪುರದಲ್ಲಿ ಎಲ್ಲಿ ಸಭೆ ನಡೆಸಿದ್ದಾನೆ. ನಾನು ಮೂರು ದಶಕದಿಂದ ಸಮಾಜ ಸಂಘಟಿಸಿರುವೆ. ಸೋಮನಗೌಡ ಪಾಟೀಲ ಯರನಾಳ ಅಂದರೇ ಸಮಾಜದ ಜನರಿಗೆ ಗೊತ್ತಿದೆ. ಜೆಡಿಎಸ್‌ನವರಿಗೆ ಬುಕ್‌ ಆಗಿ ಜಿಗಜಿಣಗಿ ವಿರುದ್ಧ ಮಾತನಾಡಿದ್ದಾನಷ್ಟೇ. ಇವನ ಹೇಳಿಕೆಯನ್ನು ಸಮಾಜ ಪರಿಗಣಿಸಬೇಕಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಬಸನಗೌಡ ಪಾಟೀಲ ಯತ್ನಾಳಗೆ ಟಿಕೆಟ್‌ ತಪ್ಪಿಸಲು ಸಾಧ್ಯವೇ. ಈಗಾಗಲೇ ಬೆಳೆದಿರುವ ನಾಯಕ ಆತ. ವಿನಾಃ ಕಾರಣ ಅವರ ಹೆಸರನ್ನು ಬಳಸಿದ್ದಾನೆ. ದಿ.ಬಿ.ಆರ್.ಪಾಟೀಲ ಕನಮಡಿ, ದಿ.ವಿಮಲಾಬಾಯಿ ದೇಶಮುಖ ಗೆಲುವಿನಲ್ಲಿ ಜಿಗಜಿಣಗಿ ಪಾತ್ರ ಸಾಕಷ್ಟಿದೆ.’

‘ಶಿವಾನಂದ ಪಾಟೀಲಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂಬುದು ಸುಳ್ಳು. ಆಗ ಎಷ್ಟು ಮಂದಿ ಪಂಚಮಸಾಲಿಗಳು ಜಿಲ್ಲೆಯಿಂದ ಸಚಿವರಾಗಿದ್ದರು ಎಂಬುದನ್ನು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಮಾಜಿ ಶಾಸಕ ರವಿಕಾಂತ ಪಾಟೀಲ ಬಿಜೆಪಿಯವರೇ ಅಲ್ಲ. ಎಂ.ಎಸ್.ರುದ್ರಗೌಡ ನಿಂತಾಗ ನಡೆದಿದ್ದೇ ಬೇರೆ. ಅಪ್ಪುಗೌಡ ಪಾಟೀಲ ಮನಗೂಳಿ, ರಾಜುಗೌಡ ಪಾಟೀಲ ಕುದರಿಸಾಲವಾಡಗಿ ತಮ್ಮ ವೈಯಕ್ತಿಕ ಶಕ್ತಿಯಿಂದ ಇನ್ನೂ ನಾಯಕರಾಗಿ ಬೆಳೆದಿಲ್ಲ. ಇದಕ್ಕೆಲ್ಲಾ ಜಿಗಜಿಣಗಿ ಕಾರಣನಾ ?’ ಎಂದು ಯರನಾಳ ಪ್ರಶ್ನೆಗಳ ಸುರಿಮಳೆಗೈದರು.

‘ದಿಂಡೂರ ದೈಹಿಕವಾಗಿ ಅಸ್ವಸ್ಥರಾಗಿದ್ದಾರೆ. ಮಾನಸಿಕವಾಗಿಯೂ ಅಸ್ವಸ್ಥರಾಗಿಬಹುದು. ಇವರ ಮಾತಿಗೆ ಸಮಾಜದ ಜನ ಕಿಮ್ಮತ್ತು ಕೊಡಬೇಕಿಲ್ಲ’ ಎಂದು ಹೇಳಿದರು.

ಭೀಮಾಶಂಕರ ಹದನೂರ, ಪ್ರಕಾಶ ಹಿಟ್ನಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !