ವಯಸ್ಸಾಗುವುದು ದೇಹಕ್ಕೇ ವಿನಾ ಮನಸ್ಸಿಗಲ್ಲ. ಆದರೂ ‘ನನಗೆ ವಯಸ್ಸಾಯಿತು’ ಎಂದುಕೊಂಡು ಜೀವನೋತ್ಸಾಹ ಕಳೆದುಕೊಳ್ಳುವವರು, ‘ನಿನಗೆ ವಯಸ್ಸಾಯಿತು ಬಿಡು’ ಎಂದು ಉತ್ಸಾಹ ಕುಂದಿಸುವವರು ಹೆಜ್ಜೆಹೆಜ್ಜೆಗೂ ಸಿಗುತ್ತಾರೆ. ವಯಸ್ಸಾಗುವಿಕೆಯನ್ನು ಗೌರವದಿಂದ ಸ್ವೀಕರಿಸುತ್ತಲೇ ಜೀವನಪ್ರೀತಿ ದಕ್ಕಿಸಿಕೊಳ್ಳುವ ಮಾರ್ಗವನ್ನು ಶೋಧಿಸಿಕೊಂಡರೆ ಬದುಕು ಸುಂದರ, ಸುರಳೀತ. ಆಂತರಿಕ ಸೌಂದರ್ಯದಿಂದ ಬಾಹ್ಯ ಸೌಂದರ್ಯವೂ ಪುಟಿಯುವ, ಬಾಹ್ಯ ಸೌಂದರ್ಯದಿಂದ ಆಂತರಿಕ ಸೌಂದರ್ಯದ ಆತ್ಮವಿಶ್ವಾಸ ಕಳೆಗಟ್ಟುವ ಸೋಜಿಗವನ್ನು ಹಿಡಿದಿಟ್ಟಿದ್ದಾರೆ ಲೇಖಕಿ, ಕವಯತ್ರಿ ಎಂ.ಆರ್.ಕಮಲಾ

‘ಹೆಣ್ಣುಮಕ್ಕಳ ವಯಸ್ಸನ್ನು ಕೇಳಬಾರದು’ ಎಂಬ ಮಾತಿನ ಹಿಂದಿನ ಮರ್ಮವೇನು? ವಯಸ್ಸನ್ನು ಮರೆಮಾಚುತ್ತಾರೆ ಎನ್ನುವುದಾದರೆ ಅದಕ್ಕೆ ಕಾರಣವೇನು? ಸಿನಿಮಾ ನಟಿಯರ ವಯಸ್ಸು ಹದಿನೆಂಟರಲ್ಲೇ ನಿಂತುಬಿಡುತ್ತದೆ ಎನ್ನುವ ಅಪಹಾಸ್ಯವೇಕೆ? ಸತ್ಯವನ್ನು ಹೇಳಿದರೆ ತಮ್ಮನ್ನು ಕಡೆಗಣಿಸುತ್ತಾರೆ ಎಂಬ ಅಳುಕೇ?– ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸರಳವಾಗಿಲ್ಲ.

ವಯಸ್ಸಾಗುವುದು ಒಂದು ಸಹಜ ಪ್ರಕ್ರಿಯೆ. ಅದು ತನಗೆ ತಾನೇ ದೋಷವೂ ಅಲ್ಲ, ಗುಣವೂ ಅಲ್ಲ. ವಯಸ್ಸಾಯಿತು ಎಂದು ಮೂಲೆಗೆ ತಳ್ಳುವ ಪ್ರವೃತ್ತಿ ಒಂದು ಕಡೆಗಾದರೆ, ಪೂಜನೀಯ ಸ್ಥಾನದಲ್ಲಿ ಇರಿಸುವುದು ಮತ್ತೊಂದು ಕಡೆ. ಈ ಎರಡು ಕೂಡ ಅಸಹಜ, ಅತಿರೇಕದ ವರ್ತನೆಗಳೇ. ಇವು ಹೆಚ್ಚಿನವರಲ್ಲಿ ಗೊಂದಲ ಸೃಷ್ಟಿಸಿ ಮನಸ್ಸನ್ನು ಅಸ್ವಸ್ಥಗೊಳಿಸುತ್ತವೆ. ‘ವಯಸ್ಸಾಗುವುದರ’ ಬಗ್ಗೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹಗಳೇ ಇದಕ್ಕೆ ಕಾರಣ.

ಇಂಥಿಂಥ ವಯಸ್ಸಿನಲ್ಲಿ ಹೀಗೆಯೇ ಇರಬೇಕು, ಹೀಗೇ ವರ್ತಿಸಬೇಕು, ಇಂಥ ಬಟ್ಟೆಯನ್ನೇ ತೊಡಬೇಕು ಎನ್ನುವ ಒತ್ತಡಗಳನ್ನೆಲ್ಲ ಅರಿವಿಗೇ ಬಾರದಂತೆ ನಮ್ಮ ಮೇಲೆ ಹೇರಲಾಗುತ್ತದೆ. ವಯಸ್ಸಾದವರು ಯೌವನಿಗರಂತೆ ಕೇಕೆ ಹಾಕಬಾರದು, ಕುಣಿಯಬಾರದು, ಹೊಸ ಶೈಲಿಯ ಉಡುಪುಗಳನ್ನು ಧರಿಸಬಾರದು ಎಂದೆಲ್ಲ ತಲೆಗೆ ತುಂಬಿರುವುದರಿಂದ, ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರು ಅಪಹಾಸ್ಯಕ್ಕೆ ಈಡಾಗುವುದೇ ಹೆಚ್ಚು.

ಕೆ.ಎಸ್.ನರಸಿಂಹಸ್ವಾಮಿ ಅವರಂತಹ ಸೂಕ್ಷ್ಮ ಸಂವೇದನೆಯ ಕವಿಯೇ ‘ನಲವತ್ತರ ಚೆಲುವೆ’ ಕವನದಲ್ಲಿ, ದಿನವೂ ಹೊಸ ಸೀರೆ ಉಡುವ ಜೀವನ್ಮುಖಿ ಹೆಣ್ಣುಮಗಳನ್ನು ‘ನಲವತ್ತರ ಮೇಲೊದಗಿದೆ ಹೊಸ ಪ್ರಾಯದ ಸರದಿ’ ಎನ್ನುತ್ತಾರೆ. ಬಹುಶಃ ವ್ಯಂಗ್ಯವನ್ನು ಬಿಟ್ಟು ಪ್ರೀತಿಯಿಂದ ನಲವತ್ತರ ಚೆಲುವೆಯ ಒಳಗನ್ನು ಅವರು ನೋಡಬಹುದಿತ್ತು.

‘ನಿನಗೆ ವಯಸ್ಸಾಯಿತು ಬಿಡು’ ಎಂದು ಮಾತನಾಡದ ಮನೆಯೊಂದಿದೆಯೇ? ಅದೊಂದು ಮನಸ್ಸನ್ನು ಕುಗ್ಗಿಸುವ ಮಾತು. ಇದೇ ಮಾತನ್ನು ಯಾರೂ ಚುಕ್ಕೆ ಚಂದ್ರರಿಗೆ, ಬೆಟ್ಟ ಗುಡ್ಡಗಳಿಗೆ, ನದಿ, ಕಡಲಿಗೆ ಹೇಳುವುದಿಲ್ಲ. ಕೈ ಸುಕ್ಕುಗಟ್ಟುವುದು, ಬಿಳಿ ಕೂದಲು ಮೂಡುವುದು, ಕಣ್ಣು ಕಾಂತಿ ಕಳೆದುಕೊಳ್ಳುವುದು, ನೆನಪಿನ ಶಕ್ತಿ ಕಮ್ಮಿಯಾಗುವುದು ವಯೋಧರ್ಮ. ಆದರೆ ಒಳಗಿನ ಚೈತನ್ಯಕ್ಕೆ ಮುದಿತನ ಎಂಬುದಿಲ್ಲ ಎನ್ನುವುದನ್ನು ಅರ್ಥಮಾಡಿಸುವ ರೀತಿಯಲ್ಲಿ ಕಿರಿಯರನ್ನು ಬೆಳೆಸುತ್ತಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಹಿರಿಯರು ಕೂಡ ಇಂತಹ ಪೂರ್ವಗ್ರಹಗಳಿಗೆ ಒಳಗಾಗಿಯೇ ಬದುಕುತ್ತಾರೆ.

ಯೌವನದ ಆಕರ್ಷಣೆಗೆ ಒಳಗಾಗದವರಾರು? ಲ್ಯಾಟಿನ್ ಅಮೆರಿಕದ ಪ್ರಸಿದ್ಧ ಬರಹಗಾರ್ತಿ ಇಸಬೆಲ್ ಅಯಾಂಡೆ 2006ರಲ್ಲಿ ಇಟಲಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ ಕ್ರೀಡೆಯಲ್ಲಿ, ‘ಚಲನಚಿತ್ರಗಳ ದೇವತೆ’ ಎಂದೇ ಪ್ರಸಿದ್ಧಳಾಗಿದ್ದ ಆ ದೇಶದ ಸೋಫಿಯಾ ಲೊರೆನ್ ಅವರನ್ನು ಭೇಟಿಯಾಗುತ್ತಾರೆ. ಇಸಬೆಲ್ ಅವರೊಂದಿಗೆ ಒಲಿಂಪಿಕ್ ಬಾವುಟ ಹಿಡಿದು ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದ ಎಂಟು ಹೆಣ್ಣುಮಕ್ಕಳಲ್ಲಿ ಸೋಫಿಯಾ ಕೂಡ ಒಬ್ಬರು. ‘ಎಪ್ಪತ್ತು ವರ್ಷ ದಾಟಿದ್ದ ಸೋಫಿಯಾ ಕೋಳಿಗಳ ನಡುವಿನ ನವಿಲಿನಂತೆ ಇದ್ದಳು’ ಎಂದು ಇಸಬೆಲ್ ಬರೆಯುತ್ತಾರೆ. ಅಜೇಯ ಯೌವನದ, ಆಕರ್ಷಣೆಯ ಗುಟ್ಟೇನು ಎಂಬ ಪ್ರಶ್ನೆಗೆ ಸಂದರ್ಶನವೊಂದರಲ್ಲಿ ಸೋಫಿಯಾ, ‘ಸದಾ ಸಂತೋಷವಾಗಿ ಇರುತ್ತೇನೆ, ನೇರವಾಗಿ ನಿಲ್ಲುತ್ತೇನೆ. ನರಳುವುದು, ಆಪಾದನೆ ಮಾಡುವುದು, ಕೆಮ್ಮುವುದನ್ನೆಲ್ಲ ಮಾಡುವುದಿಲ್ಲ. ಮುದುಕರ ಗೊಣಗಾಟಗಳಂತೂ ಇಲ್ಲವೇ ಇಲ್ಲ’ ಎಂದಿದ್ದರು. ಅಲ್ಲಿಂದ ಮುಂದೆ ಇಸಬೆಲ್ ಉತ್ತಮ ಭಂಗಿಯಲ್ಲಿ ಇರುವುದನ್ನು ಅಭ್ಯಾಸ ಮಾಡಿಕೊಂಡರು. ಆದರೆ ಅದಷ್ಟೇ ವೃದ್ಧಾಪ್ಯದಲ್ಲಿ ಸಂತಸವನ್ನು ನೀಡುವುದಿಲ್ಲ ಎಂದಾಕೆಗೆ ಅರ್ಥವಾಗಿದ್ದು ಗೆಳತಿ ಓಲ್ಗಾ ಮುರ್ರೆಯನ್ನು ನೋಡಿದಾಗ.

94ನೇ ವಯಸ್ಸಿನಲ್ಲೂ ಓಲ್ಗಾ ಕನ್ನಡಕವನ್ನಾಗಲೀ ಕಿವಿ ಕೇಳಿಸುವ ಯಂತ್ರವನ್ನಾಗಲೀ ಹಾಕಿಕೊಳ್ಳದೆ, ಲೇನ್ ಬದಲಿಸದೆ ಕಾರನ್ನು ಓಡಿಸುತ್ತಿದ್ದರು. ಆ ಶಕ್ತಿಶಾಲಿ ಹೆಣ್ಣುಮಗಳ ಬದುಕಿಗೆ ಇದ್ದ ಉದ್ದೇಶವೇ ಸಂತಸದಿಂದ ಇರುವುದು ಹೇಗೆ ಎಂಬ ಬಗ್ಗೆ ತನಗೆ ಮಾರ್ಗದರ್ಶನವನ್ನು ನೀಡಿತ್ತು ಎಂದು ಇಸಬೆಲ್ ಹೇಳಿದ್ದಾರೆ. ಓಲ್ಗಾ ತಮ್ಮ ಅರವತ್ತನೇ ವಯಸ್ಸಿನಲ್ಲಿ ನೇಪಾಳದ ಬೆಟ್ಟಗಳಲ್ಲಿ ಟ್ರೆಕಿಂಗ್ ಮಾಡಲು ಹೋಗಿ ಕಾಲು ಮುರಿದುಕೊಂಡಿದ್ದರು. ಜೊತೆಗಿದ್ದ ಶೆರ್ಪಾ ಆಕೆಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು, ಬಡತನ ತಾಂಡವವಾಡುತ್ತಿದ್ದ ಹಳ್ಳಿಯೊಂದಕ್ಕೆ ಕರೆದೊಯ್ದ. ಬಸ್ಸಿಗಾಗಿ ಕಾಯುತ್ತಿದ್ದಾಗ, ಅಲ್ಲಿ ನಡೆಯುತ್ತಿದ್ದ ‘ಹಬ್ಬ’ವೊಂದಕ್ಕೆ ಓಲ್ಗಾ ಸಾಕ್ಷಿಯಾದರು. ಆ ನಿಗದಿತ ದಿನದಂದು ಬಸ್ಸುಗಳಲ್ಲಿ ಬಂದಿಳಿಯುತ್ತಿದ್ದ ಏಜೆಂಟರು, ಆರರಿಂದ ಎಂಟು ವರ್ಷದ ಹುಡುಗಿಯರನ್ನು ಎರಡು ಆಡುಗಳ ಬೆಲೆಗೆ ಕೊಳ್ಳುತ್ತಿದ್ದರು. ಈ ಹೆಣ್ಣುಮಕ್ಕಳು ಒಳ್ಳೆಯ ಕುಟುಂಬವನ್ನು ಸೇರಿ, ಶಾಲೆಗೆ ಹೋಗುತ್ತಾರೆ ಎಂದು ಪೋಷಕರನ್ನು ನಂಬಿಸಿ ಕರೆದೊಯ್ಯುತ್ತಿದ್ದರು. ಆದರೆ ಆ ಹುಡುಗಿಯರನ್ನು ಜೀತಗಾರರನ್ನಾಗಿ ಮಾಡುತ್ತಿದ್ದರು ಇಲ್ಲವೇ ವೇಶ್ಯಾಗೃಹಕ್ಕೆ ತಳ್ಳುತ್ತಿದ್ದರು. ಈ ವಿಷಯ ಓಲ್ಗಾ ಅವರಿಗೆ ನಂತರ ತಿಳಿಯಿತು.

ಕ್ಯಾಲಿಫೋರ್ನಿಯಾಗೆ ಮರಳಿದ ಓಲ್ಗಾ, ಶೋಷಣೆಗೊಳಗಾದ ಮಕ್ಕಳ ವಸತಿ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ‘ನೇಪಾಳ್ ಯೂಥ್ ಫೌಂಡೇಶನ್’ ಸಂಸ್ಥೆಯನ್ನು ಸ್ಥಾಪಿಸಿದರು. ಹೆಚ್ಚುಕಮ್ಮಿ ಹದಿನೈದು ಸಾವಿರ ಹೆಣ್ಣುಮಕ್ಕಳನ್ನು ಜೀತದಿಂದ ಪಾರು ಮಾಡಿದರು. ಪರಿತ್ಯಕ್ತ ಮತ್ತು ಅನಾಥ ಮಕ್ಕಳಿಗೆ ವಸತಿಶಾಲೆಗಳು, ಪೌಷ್ಟಿಕಾಂಶದ ಕ್ಲಿನಿಕ್ಗಳನ್ನು ಸ್ಥಾಪಿಸಿದರು. ವೃದ್ಧಾಪ್ಯದಲ್ಲೂ ಓಲ್ಗಾ ಆರೋಗ್ಯಕರವಾಗಿ, ಶಕ್ತಿಶಾಲಿಯಾಗಿ ಇದ್ದುದಕ್ಕೆ ಇದೇ ಕಾರಣ (ಹೋದ ವರ್ಷ ಓಲ್ಗಾ ನಿಧನರಾದರು). ನಾವು ಕೂಡ ವಯಸ್ಸಿನ ಬಗ್ಗೆ ಇರುವ ಎಲ್ಲ ಪೂರ್ವಗ್ರಹಗಳನ್ನೂ ಕಿತ್ತೆಸೆದು, ಬದುಕಿರುವತನಕ ‘ಜೀವಂತ’ವಾಗಿ, ಸಂತಸದಿಂದ ಇರುವ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎನ್ನಿಸುತ್ತದೆ.

ಫ್ರಾನ್ಸ್ನ ಚೆಲುವೆಯರು

ಫ್ರಾನ್ಸಿನ ಯಾವುದೇ ನಗರಕ್ಕೆ ಭೇಟಿ ನೀಡಿದರೂ ಕಾಣಸಿಗುವ ಸಾಮಾನ್ಯ ದೃಶ್ಯವೆಂದರೆ, ತೊಂಬತ್ತನ್ನು ದಾಟಿದವರಲ್ಲೂ ಚಿಮ್ಮುವ ಉತ್ಸಾಹ, ಉಲ್ಲಾಸದ ನಡಿಗೆ, ನಗು, ಅನುಭವಗಳ ವಿನಿಮಯ, ಸ್ವಾವಲಂಬಿ ಜೀವನ. ವಯಸ್ಸಿನ ಬಗ್ಗೆ ಇರಬಹುದಾದ ಸಂಕುಚಿತ ಭಾವನೆಗಳನ್ನು ದಾಟಿರುವುದೇ ಇದಕ್ಕೆ ಕಾರಣ.

ಕೆಲವೊಮ್ಮೆ ಮಾನಸಿಕ ಸ್ಥಿತಿಯೇ ಯೌವನಿಗರನ್ನು ವೃದ್ಧರನ್ನಾಗಿಸಬಹುದು, ವೃದ್ಧರಲ್ಲಿ ಯೌವನದ ಉತ್ಸಾಹವನ್ನು ತುಂಬಬಹುದು. ಹೊಸ ವಿಷಯಗಳ ಕಲಿಕೆಯನ್ನು ನಿರಾಕರಿಸಿದರೆ, ಹತಾಶೆ, ನಿರಾಶೆಗಳಲ್ಲಿ ಮುಳುಗಿ ನಿಂದಿಸುವುದನ್ನೇ ರೂಢಿಸಿಕೊಂಡರೆ, ಸಿನಿಕತನವೇ ಆದರ್ಶವಾದರೆ, ಅಂತಃಕರಣದ ಸೆಲೆ ಬತ್ತಿಹೋದರೆ ಮಾನಸಿಕ ಮುದಿತನವನ್ನು ಆಹ್ವಾನಿಸಿಕೊಂಡಂತೆಯೇ ಸರಿ.

ಒಳಚೇತನಕ್ಕೆ ಸೋಕದ ವಯಸ್ಸಿನ ಗಾಳಿ

‘ನಾನು ತೊಂಬತ್ತಕ್ಕೆ ಕಾಲಿಡುತ್ತಿರುವೆ, ನೋಡಿ, ನನ್ನ ಸುತ್ತಲೂ ಎಷ್ಟೆಲ್ಲ ಅವಾಂತರಗಳನ್ನು ಸೃಷ್ಟಿಸಿರುವೆ’ ಎಂದು 2013ರಲ್ಲಿ ಜೈಪುರ ಸಾಹಿತ್ಯೋತ್ಸವದಲ್ಲಿ ಹೇಳಿದ್ದ ಮಹಾಶ್ವೇತಾ ದೇವಿ, ವಿಶ್ವಪ್ರಸಿದ್ಧ ಲೇಖಕಿ. ವಿವಿಧ ರಾಜ್ಯಗಳಲ್ಲಿ ಮಹಿಳಾ ಹಕ್ಕು, ಭೂಮಿ ಹಕ್ಕು, ಆದಿವಾಸಿ ಮಹಿಳೆಯರ ಆರೋಗ್ಯಕ್ಕಾಗಿ ಪಟ್ಟ ಶ್ರಮಕ್ಕೆ ಅವರಿಗೆಂದೂ ವಯೋಮಿತಿ ಅಡ್ಡಿಯಾಗಿರಲಿಲ್ಲ.

ಅವರ ಕೃತಿಯೊಂದರಲ್ಲಿ, ಗರ್ಭದಲ್ಲಿರುವ ಹೆಣ್ಣುಭ್ರೂಣಕ್ಕೆ ಅಜ್ಜಿ ಹೇಳುವ ಕಥೆಯೊಂದಿದೆ. ಮೊಮ್ಮಗಳು ಅನಿಷ್ಟಗಳನ್ನು ತೊಡೆದುಹಾಕಲು ಯತ್ನಿಸುವಾಗ, ಹೆಣ್ಣಿನ ವಿವಿಧ ವಯೋಮಾನದ
ಪಡಿಪಾಟಲುಗಳು ಕಣ್ಣಮುಂದೆ ಚಾಚುತ್ತವೆ. ಜೀವಚೈತನ್ಯದ ಚಿಲುಮೆಯಾಗಿದ್ದ ಮಹಾಶ್ವೇತಾ ದೇವಿಯವರು ಯೌವನದಲ್ಲಿದ್ದಾಗಿನ ಮತ್ತು ವಯೋವೃದ್ಧರಾಗಿದ್ದಾಗಿನ ಭಾವಚಿತ್ರಗಳನ್ನು ಹೋಲಿಸಿ ನೋಡಿದರೆ, ನಗುಮುಖದ ಕಾಂತಿ, ಆತ್ಮವಿಶ್ವಾಸಕ್ಕೆ ಮಾತ್ರ ಒಂದಿನಿತೂ ಚ್ಯುತಿ ಬಾರದೇ ಇದ್ದುದನ್ನು ಕಾಣಬಹುದು. ಅವರ ಒಳಚೇತನಕ್ಕೆ ಎಂದಿಗೂ ವಯಸ್ಸಿನ ಗಾಳಿ ಸೋಕಿರಲೇ ಇಲ್ಲ.

ಸ್ಮಾರ್ಟ್ ಆಗಿರಲು ಏನಡ್ಡಿ?

ಒಮ್ಮೆ ವಿಶಾಖಪಟ್ಟಣದಲ್ಲಿ ಶೂಟಿಂಗ್ನಲ್ಲಿದ್ದೆ. ಜಯಾ ಅಂತ ಒಬ್ಬಳು ‘ಲಕ್ಷ್ಮಿ ನನ್ನ ಫ್ರೆಂಡು, ಅವಳನ್ನು ನೋಡಬೇಕು’ ಅಂತ ಹೇಳಿಕಳಿಸಿದ್ದಳು. ನಾನಿದ್ದ ಜಾಗದಿಂದಲೇ ಅವಳನ್ನು ನೋಡಿದೆ. ತಲೆಕೂದಲೆಲ್ಲಾ ಬೆಳ್ಳಗಾಗಿಹೋಗಿತ್ತು. ಚೈತನ್ಯವೆಲ್ಲಾ ಉಡುಗಿ ಹೋದಂತೆ ಇದ್ದಳು. ಮೊಮ್ಮಗನನ್ನು ಆಡಲು ಬಿಟ್ಟು ಸೋತ ಮುಖದಲ್ಲಿ ನೋಡುತ್ತಾ ನಿಂತಿದ್ದಳು. ‘ಅವಳು ನನ್ನ ಸೀನಿಯರ್, ತುಂಬಾ ವರ್ಷ ಫೇಲಾಗಿ, ಫೇಲಾಗಿ ಓದಿದ್ದಾಳೆ. ಅಂಥವಳ ಜೊತೆ ಐ ಡೋಂಟ್ ವಾಂಟ್ ಟು ಮಿಕ್ಸ್’ ಅಂತ ಹೇಳಿಬಿಟ್ಟೆ.

ಅಂದರೆ, ನಮಗೆ ಎಷ್ಟೇ ವಯಸ್ಸಾದರೂ ಅದನ್ಯಾಕೆ ತೋರಿಸಿಕೊಳ್ಳಬೇಕು? ವಿ ಲಿವ್ ಓನ್ಲಿ ಒನ್ಸ್. ನಾವು ಚೆನ್ನಾಗಿ ಇರಬೇಕು. ನಮಗೆ ವಯಸ್ಸಾದರೆ ವಯಸ್ಸಾದ ಥರಾನೇ ಇರಬೇಕು ಅಂತೇನೂ ಇಲ್ಲ. ‘ನನಗೆ ವಯಸ್ಸಾಗಿ ಹೋಯ್ತು’ ಅಂತ ಹಲುಬುತ್ತಲೇ ಇರುವವರು ತಮ್ಮ ಎನರ್ಜಿಯನ್ನೂ ಹೋಗಿಸಿಕೊಂಡು ನಮ್ಮನ್ನೂ ಅವರತ್ತಲೇ ಎಳೆದುಕೊಂಡು ಬಿಡುತ್ತಾರೆ. ಅಂಥವರ ಜೊತೆ ನಾನು ಸೇರುವುದೇ ಇಲ್ಲ. ಅವರು ಸ್ನೇಹಿತರಾಗಿರಲಿ, ಸಂಬಂಧಿಕರೇ ಆಗಿರಲಿ, ‘ಸ್ಮಾರ್ಟ್ ಇದ್ರೆ ಮಾತ್ರ ನನ್ನ ಹತ್ತಿರಕ್ಕೆ ಬನ್ನಿ, ಇಲ್ಲಾ ಅಂದ್ರೆ ಬರಲೇಬೇಡಿ, ಯಾಕಂದ್ರೆ ನನಗೂ ನಿಮ್ಮ ಗಾಳಿ ಬೀಸಿಬಿಡುತ್ತದೆ’ ಅಂತ ಹೇಳಿಬಿಡ್ತೀನಿ.

ಲಕ್ಷ್ಮಿ, ಚಿತ್ರನಟಿ

ಆತ್ಮವಿಶ್ವಾಸ ಕೊಡುವ ಅಲಂಕಾರ

ನಮ್ಮನ್ನು ನಾವು ಅಂದಗೊಳಿಸಿಕೊಳ್ಳುವುದೆಂದರೆ ಸುತ್ತಲಿನ ವಾತಾವರಣವನ್ನು ಸುಂದರಗೊಳಿಸುವುದು ಎಂದೇ ಅರ್ಥ. ಗಿಡ ಮರಗಳು ತಮ್ಮ ವಯಸ್ಸನ್ನು ಲೆಕ್ಕಿಸದೆ ದಿನ ದಿನವೂ ಅಪೂರ್ವ ಬಣ್ಣಗಳನ್ನು ತೆರೆದಿಡುವಾಗ ನಾವೇಕೆ ಸಪ್ಪಗಿರಬೇಕು? ಚೆನ್ನಾಗಿ ಕಾಣಿಸಿಕೊಳ್ಳುವುದರ ಬಗ್ಗೆ ಮನುಷ್ಯನಿಗೆ ವಯಸ್ಸು ಯಾಕೆ ಆತಂಕ ಹುಟ್ಟಿಸಬೇಕು? ಅಭಿರುಚಿಪೂರ್ಣ ಅಲಂಕಾರ, ಬಣ್ಣ ಬಣ್ಣದ ಬಟ್ಟೆಗಳು, ಕೇಶ ವಿನ್ಯಾಸ ಎಲ್ಲವೂ ಅಪಾರವಾದ ಆತ್ಮವಿಶ್ವಾಸವನ್ನು ನೀಡಬಲ್ಲವು, ಮನಸ್ಸನ್ನು ಮುದವಾಗಿ ಇರಿಸಬಲ್ಲವು, ನಕಾರಾತ್ಮಕತೆಯನ್ನು ಹೋಗಲಾಡಿಸಬಲ್ಲವು. ವಿವೇಚನೆಯಿಂದ ಮಾಡಿಕೊಳ್ಳುವ ಮೇಕ್ಅಪ್ ಕೂಡ ಒಂದು ಪವಾಡವೇ.

ವಯಸ್ಸು ನಮ್ಮ ಚೈತನ್ಯವನ್ನು, ನಮ್ಮ ಆಸಕ್ತಿಯನ್ನು, ಈ ಜಗತ್ತಿನ ಆಗುಹೋಗುಗಳಲ್ಲಿ ಭಾಗವಹಿಸುವುದನ್ನು ತಡೆಹಿಡಿಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.