ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಮೈಡಿಯ: ಯುವಜನರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸೋಂಕು

Last Updated 6 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕು (ಎಸ್‌ಟಿಐ) ಕ್ಲಮೈಡಿಯ. ಕ್ಲಮೈಡಿಯ ಟ್ರಾಕೊಮಾಟಿಸ್ ಎಂಬ ಬ್ಯಾಕ್ಟೀರಿಯದಿಂದ ಹರಡುವ ಈ ಸೋಂಕು ಲೈಂಗಿಕ ಕಾಯಿಲೆಗೆ ಮಾತ್ರವಲ್ಲ, ಅಂಧತ್ವಕ್ಕೂ ಕಾರಣವಾಗಬಹುದು. ಸೋಂಕು ತಗುಲಿದ ಜೀವಕೋಶದೊಳಗೆ ಈ ಬ್ಯಾಕ್ಟೀರಿಯ ಬಹು ಬೇಗ ಬೆಳವಣಿಗೆಯಾಗಿ ಅವುಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾಗುವುದು ಇದರ ಲಕ್ಷಣ.

ಈ ಸೋಂಕು ಯಾವುದೇ ವಯಸ್ಸಿನ ವ್ಯಕ್ತಿಯನ್ನು ಬಾಧಿಸಬಹುದು. ಆದರೆ ಪುರುಷರಿಗಿಂತ ಹೆಚ್ಚಾಗಿ ಲೈಂಗಿಕವಾಗಿ ಸಕ್ರಿಯರಾಗಿರುವ ಹದಿಹರೆಯದ ಹೆಣ್ಣುಮಕ್ಕಳು, ಯುವತಿಯರೇ ಹೆಚ್ಚು ಬಾಧೆಗೊಳಗಾಗುವವರು. ಭಾರತದಲ್ಲಂತೂ ಪ್ರತಿ ವರ್ಷ 10 ಲಕ್ಷಕ್ಕಿಂತಲೂ ಹೆಚ್ಚು ಈ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.

ಕ್ಲಮೈಡಿಯ ಸೋಂಕು ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಜೊತೆ ಯಾವುದೆ ರೀತಿಯ ಲೈಂಗಿಕ ಸಂಪರ್ಕ ನಡೆಸಿದರೆ ಬರುತ್ತದೆ. ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ತಾಯಿಯಿಂದ ಮಗುವಿಗೆ ಹೆರಿಗೆಯ ಸಂದರ್ಭದಲ್ಲಿ ಹರಡಬಹುದು. ಆಗ ಇದು ನವಜಾತ ಶಿಶುಗಳಲ್ಲಿ ಕಂಜಂಕ್ಟಿವಿಟಿಸ್ ಅಥವಾ ನ್ಯುಮೋನಿಯಾವನ್ನು ಉಂಟುಮಾಡುತ್ತದೆ. ಮೂತ್ರನಾಳ ಮತ್ತು ಗುದನಾಳ ಒಳಭಾಗದ ಅಂಗಾಂಶಗಳ ಉರಿಯೂತಕ್ಕೆ ಹೆಚ್ಚಾಗಿ ಈ ಸೋಂಕು ಕಾರಣ. ಇದು ಗುಣಪಡಿಸಬಹುದಾದ ಸಮಸ್ಯೆಯಾಗಿದ್ದರೂ ಕೂಡ ನಿರ್ಲಕ್ಷಿಸುವುದು, ಚಿಕಿತ್ಸೆ ಪಡೆಯಲು ವಿಳಂಬ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕ್ಲಮೈಡಿಯ ಲಕ್ಷಣಗಳು

ಆರಂಭಿಕ ಹಂತದಲ್ಲಿ, ಸೋಂಕು ಸಾಮಾನ್ಯವಾಗಿ ಲಕ್ಷಣರಹಿತವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿ ಅದರಿಂದ ಬಳಲುತ್ತಿರುವುದನ್ನು ಕಂಡು ಹಿಡಿಯುವುದು ಕಷ್ಟ. ಮೂತ್ರ ವಿಸರ್ಜನೆ ಸಂದರ್ಭದಲ್ಲಿ ಕಂಡುಬರುವ ನೋವು, ಗುದನಾಳದ ನೋವು, ರಕ್ತಸ್ರಾವದಂತಹ ಸಾಮಾನ್ಯ ಲಕ್ಷಣಗಳು ಇದ್ದರೂ, ಲಿಂಗ ಆಧಾರಿತ ನಿರ್ದಿಷ್ಟ ರೋಗಲಕ್ಷಣಗಳನ್ನು ಗಮನಿಸಬೇಕು.

ಮಹಿಳೆಯರಲ್ಲಿ..

ಜನನಾಂಗದಿಂದ ತೀಕ್ಷ್ಣವಾದ ದುರ್ವಾಸನೆಯಿಂದ ಕೂಡಿದ ಸ್ರಾವ.

ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು.

ಋತುಸ್ರಾವದ ನಂತರ ಮತ್ತು ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ.

ಪುರುಷರಲ್ಲಿ..

ಜನನಾಂಗದ ತುದಿಯಿಂದ ಸಣ್ಣ ಪ್ರಮಾಣದಲ್ಲಿ ಬಣ್ಣರಹಿತ ಸ್ರಾವ.

ವೃಷಣ ಪ್ರದೇಶದಲ್ಲಿ ಊತ ಮತ್ತು ನೋವು

ತೊಂದರೆಗಳು

ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಎಚ್‌ಐವಿಯಂತಹ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು. ಮಹಿಳೆಯರಲ್ಲಿ ಸೋಂಕು ಫ್ಯಾಲೊಪಿಯನ್ ಟ್ಯೂಬ್‌ಗಳಿಗೆ ಹರಡಬಹುದು, ಇದು ಪೆಲ್ವಿಕ್‌ನಲ್ಲಿ ಉರಿಯೂತದ ಕಾಯಿಲೆಗೆ ಕಾರಣವಾಗಬಹುದು. ಗರ್ಭಾಶಯದ ಕೆಳಗಿನ ಭಾಗ ಮತ್ತು ಫ್ಯಾಲೊಪಿಯನ್ ಟ್ಯೂಬ್‌ನಲ್ಲಿ ಸರ್ವಿಸೈಟಿಸ್ ಮತ್ತು ಸಾಲ್ಪಿಂಜೈಟಿಸ್ ಎಂದು ಕರೆಯಲಾಗುವ ಉರಿಯೂತಕ್ಕೆ ಕಾರಣವಾಗಬಹುದು. ಜನನಾಂಗ ವ್ಯೂಹಕ್ಕೇ ಧಕ್ಕೆಯುಂಟಾಗಿ ಸಂತಾನಹೀನತೆಯಂತಹ ಸಮಸ್ಯೆ ತಲೆದೋರಬಹುದು.

ಕ್ಲಮೈಡಿಯವು ಪುರುಷರಲ್ಲಿ ವೀರ್ಯವನ್ನು ವೃಷಣಗಳಿಗೆ ಸಾಗಿಸುವ ನಾಳಗಳಿಗೆ ಸೋಂಕು ಉಂಟು ಮಾಡಿ ನಾಳಗಳಿಗೆ ಧಕ್ಕೆ ಉಂಟು ಮಾಡಬಹುದು. ಮೂತ್ರನಾಳ ಮತ್ತು ಪ್ರಾಸ್ಟೇಟ್ ಗ್ರಂಥಿಗಳಲ್ಲಿ ಉರಿಯೂತ ಉಂಟು ಮಾಡಬಹುದು. ಜೊತೆಗೆ ನಪುಂಸಕತೆಗೆ ಕಾರಣವಾಗುತ್ತದೆ.

ಅಪಾಯಕಾರಿ ಅಂಶಗಳು

ಲೈಂಗಿಕವಾಗಿ ಸಕ್ರಿಯವಾಗಿರುವ ಯಾವುದೇ ವ್ಯಕ್ತಿ ಕ್ಲಮೈಡಿಯ ಸೋಂಕಿಗೆ ಒಳಗಾಗಬಹುದು. ಇದು ಯುವಜನರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಯಾಗಿದೆ. ಒಂದಕ್ಕಿಂತ ಹೆಚ್ಚು ಸಂಗಾತಿಗಳ ಜೊತೆ, ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ ಇಟ್ಟುಕೊಂಡರೆ ಮತ್ತು ಇತರ ಲೈಂಗಿಕ ಕಾಯಿಲೆಯಿದ್ದರೆ ಸೋಂಕಿನ ಅಪಾಯ ಸಹಜವಾಗಿಯೇ ಹೆಚ್ಚಾಗುತ್ತದೆ.

ಮೌಖಿಕ ಅಥವಾ ಗುದ ಸಂಭೋಗದ ಮೂಲಕವೂ ಬ್ಯಾಕ್ಟೀರಿಯಾ ಹರಡುವುದರಿಂದ, ಸಲಿಂಗಿಗಳಲ್ಲಿ ಇದರ ಸೋಂಕಿನ ಅಪಾಯ ಹೆಚ್ಚು.

ರೋಗನಿರ್ಣಯ ಮತ್ತು ಪರೀಕ್ಷೆಗಳು

ಬ್ಯಾಕ್ಟೀರಿಯಾ ಇರುವಿಕೆಯನ್ನು ಪರೀಕ್ಷಿಸಲು ಮೂತ್ರ ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷೆಗಳನ್ನು ಶಿಫಾರಸು ಮಾಡಲಾಗುತ್ತದೆ. ಪುರುಷರ ಮೂತ್ರನಾಳದಿಂದ ಅಥವಾ ಮಹಿಳೆಯರ ಗರ್ಭಕಂಠದಿಂದ ಸ್ವ್ಯಾಬ್ ಬಳಸಿ ಸಂಗ್ರಹಿಸಿದ ಮಾದರಿಯನ್ನು ಪರೀಕ್ಷಿಸಲು ಸೂಚಿಸಬಹುದು.

ಚಿಕಿತ್ಸೆ ಹೇಗೆ?

ಇದು ಬ್ಯಾಕ್ಟೀರಿಯಾದ ಮೂಲಕ ಹರಡುವ ಸೋಂಕಾಗಿರುವುದರಿಂದ, ಇದಕ್ಕೆ ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಬಹುದು. ಮಹಿಳೆಯರಲ್ಲಿ ಸಮಸ್ಯೆ ತೀವ್ರತರವಾಗಿದ್ದರೆ ಆಸ್ಪತ್ರೆಗೆ ದಾಖಲು ಮಾಡಿ ಐವಿ ಔಷಧ ನೀಡಬೇಕಾಗುತ್ತದೆ. ಪದೆಪದೆ ಸೋಂಕಾಗುವುದನ್ನು ತಪ್ಪಿಸಲು ಸೋಂಕು ಪೂರ್ತಿ ಗುಣವಾಗುವವರೆಗೆ ಯಾವುದೇ ಲೈಂಗಿಕ ಚಟುವಟಿಕೆಯನ್ನು ನಡೆಸಬಾರದು.

ತಡೆಯುವುದು ಹೇಗೆ?

ಯೋನಿಯ ಒಳಭಾಗವನ್ನು ನೀರು ಅಥವಾ ಇತರ ದ್ರಾವಣಗಳಿಂದ ಸ್ವಚ್ಛ ಗೊಳಿಸುವ ಪ್ರಕ್ರಿಯೆ(ಡೌಚಿಂಗ್) ಮಹಿಳೆಯರಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಸೋಂಕನ್ನು ಗುಣಪಡಿಸಬಹುದಾದರೂ, ಅದನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಒಳಿತು.

ಸುರಕ್ಷಿತ ಲೈಂಗಿಕತೆ, ಕಾಂಡೋಮ್‌ಗಳನ್ನು ಬಳಸುವುದು.

ನಿಯಮಿತ ಪರೀಕ್ಷೆಗಳಿಗೆ ಒಳಗಾಗುವುದು.

(ಲೇಖಕಿ ಸಹಾಯಕ ಸಲಹೆಗಾರರು,ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಸಕ್ರಾ ವರ್ಲ್ಡ್ ಆಸ್ಪತ್ರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT