ಶನಿವಾರ, ನವೆಂಬರ್ 23, 2019
17 °C
ಏನಾದ್ರೂ ಕೇಳ್ಬೋದು

ರಾಜಿಪಂಚಾಯಿತಿ ದಾಂಪತ್ಯವನ್ನು ಉಳಿಸಬಲ್ಲದೇ?

Published:
Updated:

ವಯಸ್ಸು 24. ಮದುವೆಯಾಗಿ ಆರು ತಿಂಗಳು. ಮೊದಲ ಮೂರು ತಿಂಗಳು ದಾಂಪತ್ಯ ಚೆನ್ನಾಗಿತ್ತು. ಈಗ ನನ್ನ ಗಂಡನಿಗೆ ಪ್ರೀತಿ, ನಂಬಿಕೆ ಇಲ್ಲ. ಯಾವ ವಿಷಯವನ್ನೂ ಹೇಳಿಕೊಳ್ಳುವುದಿಲ್ಲ. ಅವರ ಅಮ್ಮನ ಬಳಿ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಅವರಿಗೆ ದುಡ್ಡೇ ಮುಖ್ಯ. ಈ ವಿಚಾರವಾಗಿ ಎರಡು ಬಾರಿ ಪಂಚಾಯಿತಿ ಮಾಡಿದ್ದಾರೆ. ಇದರಿಂದ ನನ್ನ ಮರ್ಯಾದೆ ತೆಗೆದೆ ಅಂತ ನನ್ನ ತವರುಮನೆಯವರ ಬಗೆಗೆ ಕೇವಲವಾಗಿ ಮಾತನಾಡುತ್ತಾರೆ. ಓದಿಸುವುದಕ್ಕೆ, ಕೆಲಸಕ್ಕೆ ಕಳಿಸುವುದಕ್ಕೆ ಒಪ್ಪಿಕೊಂಡಿದ್ದರೂ ಈಗ ಜಗಳ ಮಾಡ್ತಾರೆ. ಮಗು ಕೂಡ ಬೇಡ ಅಂತಾರೆ. ಬಿ.ಎಸ್‌ಸಿ. ಓದಿದ್ದೇನೆ. ವಿಚ್ಛೇದನ ತೊಗೊಳ್ಳೋಕೆ ಸಮಾಜದ ಭಯ. ಇದಕ್ಕೆ ಪರಿಹಾರ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ

ಉತ್ತರ: ನಿಮ್ಮಿಬ್ಬರ ಸಂಬಂಧ ಸ್ಥಿರವಾಗಿಲ್ಲದಿರುವಾಗ ಮಗು ಬಂದರೆ ತೊಂದರೆಗಳು ಹೆಚ್ಚುತ್ತವೆ. ಸದ್ಯಕ್ಕೆ ತಾಯಿಯಾಗುವ ಯೋಚನೆಯನ್ನು ಮುಂದೂಡಿ. ನಿಮ್ಮಿಬ್ಬರ ಸಂಬಂಧವನ್ನು ಸರಿಪಡಿಸಿಕೊಳ್ಳುವ ಬಗ್ಗೆ ಮಾತ್ರ ಯೋಚಿಸಿ.

ಕುಟುಂಬದವರ ಉದ್ದೇಶ ಪ್ರಾಮಾಣಿಕವಾಗಿದ್ದರೂ ಮಿತಿಗಳನ್ನು ತಿಳಿಯದೆ ಮಾಡುವ ಕೌಟುಂಬಿಕ ರಾಜಿಪಂಚಾಯಿತಿಗಳು ದಾಂಪತ್ಯವನ್ನು ಹೇಗೆ ಹಾಳು ಮಾಡಬಹುದು ಎನ್ನುವುದಕ್ಕೆ ನೀವು ಉದಾಹರಣೆ. ನಿಮ್ಮಿಬ್ಬರ ಸಂಬಂಧದಲ್ಲಿ ಮೂರನೆಯವರ ಪ್ರವೇಶದಿಂದ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ. ನೀವಿಬ್ಬರೇ ಚರ್ಚಿಸಿ ಅಥವಾ ದಾಂಪತ್ಯ ಚಿಕಿತ್ಸಕರ ಸಹಾಯ ಪಡೆದು ಮುಂದುವರೆಯಬೇಕು. ಹಿಂದೆ ನಿಮ್ಮಿಂದಾಗಿಯೇ ರಾಜಿಪಂಚಾಯಿತಿ ನಡೆದಿದ್ದರೆ ತಿಳಿವಳಿಕೆಯ ಕೊರತೆಯಿಂದಾದ ನಿಮ್ಮ ತಪ್ಪನ್ನು ಪತಿಯೆದುರು ಒಪ್ಪಿಕೊಂಡು ನಾವಿಬ್ಬರೇ ಕುಳಿತು ಭಿನ್ನಾಭಿಪ್ರಾಯಗಳ ಬಗ್ಗೆ ಮಾತನಾಡೋಣ ಎಂದು ತಿಳಿಸಿ. ನಿಮ್ಮಿಬ್ಬರಿಗೂ ಆಗುತ್ತಿರುವ ತೊಂದರೆಗಳನ್ನು ಬೇರೆಬೇರೆಯಾಗಿ ಪಟ್ಟಿ ಮಾಡಿಕೊಳ್ಳಿ. ಒಂದೊಂದೇ ಸಮಸ್ಯೆಯನ್ನು ಚರ್ಚಿಸುತ್ತಾ ಹೋಗಿ. ಹೀಗೆ ಚರ್ಚೆ ಮಾಡುವಾಗ ಇಬ್ಬರೂ ಮತ್ತೊಬ್ಬರನ್ನು ದೂಷಿಸುವಂತಿಲ್ಲ, ಕೋಪ ಮಾಡಿಕೊಳ್ಳುವಂತಿಲ್ಲ ಮತ್ತು ಮಾತನ್ನು ನಿಲ್ಲಿಸಿ ಮಾನಸಿಕವಾಗಿ ದೂರವಾಗುವಂತಿಲ್ಲ. ನಿಮ್ಮನಿಮ್ಮ ಕಷ್ಟಗಳ ಕುರಿತು ಮಾತ್ರ ಮಾತನಾಡಿ. ಇದು ಸಾಧ್ಯವಾಗದಿದ್ದರೆ ದಾಂಪತ್ಯ ಚಿಕಿತ್ಸಕರ ಸಹಾಯ ಪಡೆಯಿರಿ.

ಎಲ್ಲದಕ್ಕೂ ಪತಿಯ ಒಪ್ಪಿಗೆ, ಸಹಕಾರವನ್ನು ನಿರೀಕ್ಷಿಸುತ್ತಿರುವುದನ್ನು ನೋಡಿದರೆ ಮದುವೆಯೆಂದರೆ ಹೆಣ್ಣು ತನ್ನ ವ್ಯಕ್ತಿತ್ವವನ್ನು ಗಂಡನಿಗೆ ಒಪ್ಪಿಸುವುದು ಎಂದು ನೀವು ತಿಳಿದುಕೊಂಡಂತಿದೆ. ಹೀಗೆ ನಿಮ್ಮ ಸ್ವಂತಿಕೆಯನ್ನು ಕಳೆದುಕೊಂಡಾಗ ಸಮಾಧಾನದಲ್ಲಿರಲು ಹೇಗೆ ಸಾಧ್ಯ? ನಿಮ್ಮ ಸ್ವಂತಿಕೆ, ಸಂತೋಷವನ್ನು ಪಡೆಯುವ ದಾರಿಗಳನ್ನು ಹುಡುಕಿ. ಹೆಚ್ಚಿನ ಓದು, ಉದ್ಯೋಗ, ನಿಮ್ಮದೇ ಸ್ನೇಹಿತರು, ಹವ್ಯಾಸ ಎಂದು ಮುಂದುವರೆಯಿರಿ. ಪತಿಗೆ ನಿಮ್ಮ ನಿರ್ಧಾರಗಳನ್ನು ತಿಳಿಸಿ ಇದರಿಂದ ನಿಮ್ಮಿಬ್ಬರ ನಡುವೆ ಸಮಸ್ಯೆಗಳು ತಾತ್ಕಾಲಿವಾಗಿ ಹೆಚ್ಚಾದಂತೆ ಅನ್ನಿಸಿದರೂ ನಿಧಾನವಾಗಿ ನಿಮ್ಮ ಪ್ರೀತಿ, ಪ್ರಾಮಾಣಿಕತೆಯಿಂದ ಅವರ ಗೌರವವನ್ನು ಪಡೆದುಕೊಳ್ಳಬಲ್ಲಿರಿ.

*
ನಾನೊಂದು ಹುಡುಗಿಯನ್ನು ಇಷ್ಟಪಡುತ್ತಿದ್ದು ಅವಳಿಗೆ ತಿಳಿಸಿದ್ದೇನೆ. ಹುಡುಗಿ ಸರಿಯಾಗಿ ಉತ್ತರಿಸುತ್ತಿಲ್ಲ, ನೀನು ಇಷ್ಟವಿಲ್ಲ ಎಂದು ಹೇಳುತ್ತಾಳೆ. ನಾನು ಅವಳ ಮನಸ್ಸಿನ ಮೇಲೆ ನಂಬಿಕೆ ಇಟ್ಟಿದ್ದೇನೆ. ನನ್ನ ಪ್ರೀತಿ ಯಶಸ್ವಿಯಾಗುತ್ತಾ?
–ಹೆಸರು, ಊರು ಬೇಡ

ಉತ್ತರ:  ನಿಮ್ಮಿಬ್ಬರ ಯಾವುದೇ ವಿವರಗಳನ್ನು ತಿಳಿಸದೆ ಜ್ಯೋತಿಷಿಯನ್ನು ಕೇಳುವಂತೆ ಪ್ರಶ್ನಿಸಿದರೆ ಹೇಗೆ ಉತ್ತರಿಸುವುದು? ಯೌವನದ ನಿಮ್ಮ ಆಕರ್ಷಣೆ ಸಹಜ ಎಂದುಕೊಳ್ಳೋಣ. ಅದನ್ನು ಪ್ರೀತಿಯಾಗಿ ಪರಿವರ್ತಿಸಲು ಎಲ್ಲರಿಗೂ ಅವರದ್ದೇ ಆದ ಯೋಚನೆಗಳಿರುತ್ತವೆ. ಹುಡುಗಿ ಎಂತಹ ಜೀವನಸಂಗಾತಿಯನ್ನು ಇಷ್ಟಪಡುತ್ತಾಳೆ? ನನ್ನ ವ್ಯಕ್ತಿತ್ವ ಮತ್ತು ಸ್ವಂತಿಕೆಯನ್ನು ಕಳೆದುಕೊಳ್ಳದೆ ನಾನು ಹಾಗೆ ಆಗಲು ಸಾಧ್ಯವೆ? ನನಗೆ ಎಂತಹ ಸಂಗಾತಿ ಬೇಕು? ಅದಕ್ಕೆ ಹುಡುಗಿ ಸೂಕ್ತವಾಗಬಹುದೇ? ಎಲ್ಲವನ್ನೂ ಹುಡುಗಿಯೊಡನೆ ಮಾತನಾಡಿ. ಇಬ್ಬರಲ್ಲಿ ಒಬ್ಬರಿಗೆ ಸೂಕ್ತ ಎನ್ನಿಸದಿದ್ದರೆ ಈ ಆಕರ್ಷಣೆಯಿಂದ ಹೊರಬರುವ ದಾರಿಗಳನ್ನು ಹುಡುಕಲೇಬೇಕಾಗುತ್ತದೆ.

**
ನಾನು ಬಿ.ಎ. ಓದುತ್ತಿದ್ದು ಎ.ಸಿ. ಆಗಬೇಕೆಂದಿದ್ದೇನೆ. ಓದಲು ಕುಳಿತರೆ ಕೆಟ್ಟ ಆಲೋಚನೆಗಳು ಮೂಡುತ್ತವೆ. ಮೆದುಳು ಧನಾತ್ಮಕ ಯೋಚನೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಓದಿನ ಮೇಲೆ ಪರಿಣಾಮವಾಗುತ್ತದೆ. ಮೆದುಳು ಧನಾತ್ಮಕ ಯೋಚನೆ ಒಪ್ಪಿಕೊಳ್ಳುವುದಕ್ಕೆ, ಋಣಾತ್ಮಕ ಯೋಚನೆ ಮರೆಯುವುದಕ್ಕೆ ಪರಿಹಾರ ತಿಳಿಸಿಕೊಡಿ.
–ಹೆಸರು, ಊರು ತಿಳಿಸಿಲ್ಲ

ಉತ್ತರ: ಜನಪ್ರಿಯ ಮನಃಶಾಸ್ತ್ರ ನಿಮ್ಮಲ್ಲಿ ತಪ್ಪು ತಿಳಿವಳಿಕೆಗಳನ್ನು ಮೂಡಿಸಿವೆ. ಮೆದುಳಿನ ಯೋಚನೆಗಳನ್ನು ಬೇಕಾದಂತೆ ತಿರಸ್ಕರಿಸುವ, ಬದಲಾಯಿಸುವ ಸ್ವಾತಂತ್ರ್ಯವನ್ನು ಪ್ರಕೃತಿ ನಮಗೆ ನೀಡಿಲ್ಲ. ಋಣಾತ್ಮಕ ಯೋಚನೆಗಳು ನಿಮ್ಮ ಕುರಿತು ನಿಮ್ಮೊಳಗೆ ಇರುವ ಹಿಂಜರಿಕೆ, ಕೀಳರಿಮೆ, ಅಪನಂಬಿಕೆ, ಬೇಸರ ಮುಂತಾದ ಅನಿಸಿಕೆಗಳನ್ನು ಸೂಚಿಸುತ್ತಾ ನಿಮಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಅವುಗಳನ್ನು ದೂರ ತಳ್ಳಿ ನಿಮ್ಮನ್ನು ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ? ನೆಗಡಿಯಾಗುವ ಮೂಗನ್ನು ಕತ್ತರಿಸಲು ಸಾಧ್ಯವೇ? ಋಣಾತ್ಮಕ ಯೋಚನೆಗಳು ನನ್ನ ಬಗ್ಗೆ ಏನು ಹೇಳುತ್ತಿವೆ? ಅದರ ಮೂಲವೇನು? ಅದು ನಿಜವೇ ಅಥವಾ ಕಲ್ಪಿಸಿಕೊಂಡದ್ದೇ? ನಿಜವಾಗಿದ್ದರೆ ನನ್ನನ್ನು ಹೇಗೆ ಬದಲಾಯಿಸಿಕೊಳ್ಳುವುದು? ಕಲ್ಪನೆಯಾಗಿದ್ದರೆ ಇಂತಹ ಯೋಚನೆಗಳು ಮನುಷ್ಯ ಸಹಜ ಎಂದು ಒಪ್ಪಿಕೊಂಡು ಅವುಗಳ ಹಿಂದೆ ಓಡುವ ಪ್ರವೃತ್ತಿಗೆ ತಡೆಹಾಕಿ. ಎಲ್ಲವನ್ನೂ ಬರೆದಿಟ್ಟುಕೊಂಡು ಆಗಾಗ ಗಮನಿಸುತ್ತಿರಿ.

ಮೆದುಳನ್ನು ವಾಹನದಂತೆ ಚಲಾಯಿಸಲು ಸಾಧ್ಯವಿಲ್ಲ. ಸಾಕುನಾಯಿಂತೆ ನಿಧಾನವಾಗಿ ಅದಕ್ಕೆ ತರಬೇತಿ ನೀಡಬಹುದು. 

ಪ್ರತಿಕ್ರಿಯಿಸಿ (+)