ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗನೇ ಮುಟ್ಟು ಆರಂಭವಾಗುವುದು ಅಪಾಯವೇ?

Published 3 ಜೂನ್ 2023, 0:43 IST
Last Updated 3 ಜೂನ್ 2023, 0:43 IST
ಅಕ್ಷರ ಗಾತ್ರ

ನನ್ನ ಮಗಳಿಗೆ ಈಗ 9 ವರ್ಷ ಈಗಾಗಲೇ ಮುಟ್ಟುಆರಂಭವಾಗಿದೆ. ಎಲ್ಲರೂ ಮುಂದೆ ತೊಂದರೆ ಎನ್ನುತ್ತಿದ್ದಾರೆ. ನಮಗೆಲ್ಲಾ 14 ವರ್ಷದ ಮೇಲೆ ಮುಟ್ಟುಬಂದಿತ್ತು. ನನಗೆ ಒಬ್ಬಳೇ ಮಗಳು. ನಾನು ತೋರಿಸಿದ ವೈದ್ಯರು ಇದೆಲ್ಲಾ ಈಗ ಸಾಮಾನ್ಯ ಎಂದಿದ್ದಾರೆ. ಆದರೂ ನನಗೆ ಭಯವಾಗುತ್ತಿದೆ. ಇದರಿಂದ ಏನು ತೊಂದರೆ ಇಲ್ಲವಾ ?

ಹೆಸರಿಲ್ಲ, ಊರುಇಲ್ಲ

ಉತ್ತರ: ಇತ್ತೀಚೆಗೆ ಹೆಣ್ಣುಮಕ್ಕಳು ಬೇಗ ಋತುಮತಿಯರಾಗುತ್ತಿರುವುದು ಸಾಮಾನ್ಯವಾಗಿದೆ. ದಶಕಗಳು ಕಳೆದ ಹಾಗೆ ಈ ಋತುಪ್ರಾಪ್ತಿಯ ವಯಸ್ಸು ಕಡಿಮೆಯಾಗುತ್ತಿದೆ. 8 ವರ್ಷಗಳೊಳಗೆ ಮುಟ್ಟುಆರಂಭವಾದರೆ ಅದನ್ನು ಅಕಾಲಿಕ ಋತುಪ್ರಾಪ್ತಿ ಎನ್ನುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅಕಾಲಿಕ ಋತುಪ್ರಾಪ್ತಿಗೆ ಕಾರಣಗಳು ತಿಳಿದಿಲ್ಲ.

ಇತ್ತೀಚಿನ ಸಂಶೋಧನೆಯ ಪ್ರಕಾರ ಹರೆಯದ ಆರಂಭಕ್ಕೆ ಮೊದಲು ಶರೀರದಲ್ಲಿ ಕಿಸ್ಪೆಪ್ಟಿನ್ ಎಂಬ ಹಾರ್ಮೋನಿನ ಮಟ್ಟ ಹೆಚ್ಚಾಗುತ್ತದೆ. ಇದು ಮೆದುಳಿನ ಹೈಪೋಥಲಾಮಸ್‌ನಿಂದ ಲಯಬದ್ಧವಾಗಿ ಹಾರ್ಮೋನುಗಳನ್ನ ಬಿಡುಗಡೆಗೊಳಿಸುತ್ತದೆ. ಇದರಿಂದ ಹೈಫೋಥಲಾಮಸ್-ಪಿಟ್ಯೂಟರಿ-ಅಂಡಾಶಯ ಅಕ್ಷೆಯು ಪ್ರಚೋದನೆಗೊಳಗಾಗಿ ಸಂತಾನೋತ್ಪತ್ತಿ ಅಂಗಗಳು ಚುರುಕಾಗಿ ಕಾರ್ಯಾರಂಭಿಸುತ್ತವೆ. ಈ ಕಿಸ್ಪೆಪ್ಟಿನ್ ಹಾರ್ಮೋನಿನ ಮಟ್ಟ ಹೆಚ್ಚಾಗುವ ಮೊದಲು ಶರೀರದಲ್ಲಿ ಸಾಕಷ್ಟು ಅವಶ್ಯಕ ಮಟ್ಟದ ಶಾರೀರಿಕ ಕೊಬ್ಬು ಶೇಖರಣೆಯಾಗಿ ಇದರ ಸಂಕೇತ ಮೆದುಳಿಗೆ  ರವಾನೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕ ಆಹಾರ, ಜಂಕ್‌ಫುಡ್ ಸೇವನೆ, ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆಗಳ ಪರಿಣಾಮ ಚಿಕ್ಕವಯಸ್ಸಿನಲ್ಲೇ ಬೊಜ್ಜು ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲಿಯೇ ಉದ್ರೇಕಕರ ಅಂಶಗಳಿಗೆ ತೆರೆದು ಕೊಳ್ಳುತ್ತಿರುವ ಕಾರಣ ಹೈಫೋಥಲಾಮಸ್‌ಗೆ ಬೇಗನೆ ಸಂದೇಶ ತಲುಪಿ ಬೇಗ ಹರೆಯ ಆರಂಭವಾಗಲು ಕಾರಣವಾಗಬಹುದು.

ಹೀಗೆ 10 ವರ್ಷದೊಳಗೆ ಮುಟ್ಟು ಆರಂಭವಾಗುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ನೀವು ಭಯಪಡುವುದು ಬೇಡ. ಬದಲಾಗಿ ಪರಿಸ್ಥಿತಿಯನ್ನು ಎದುರಿಸಲು, ಋತುಚಕ್ರ ನಿರ್ವಹಣೆಯ ಬಗ್ಗೆ ಮಗಳಿಗೆ ಸಾಕಷ್ಟು ಮಾಹಿತಿ ಸಿಗುವ ಹಾಗೆ ನೋಡಿಕೊಳ್ಳಿ. ಏಕೆಂದರೆ, ಹುಡುಗಿಯರಲ್ಲಿ ಮುಟ್ಟು ಆರಂಭವಾಗುವುದು, ಸಂತಾನಾಭಿವೃದ್ದಿ ಅಂಗಗಳು ಕಾರ್ಯೋನ್ಮುಖವಾಗಲು ಶುರುವಾಗಿವೆ ಎಂಬ ಎಚ್ಚರಿಕೆಯ ಗಂಟೆ. ಜೊತೆಗೆ ಹುಡುಗಿಯರಲ್ಲಿ ಮುಟ್ಟು ಆರಂಭವಾದಾಗಿಂದ ಮುಂದೆ ಮೂರ್ನಾಲ್ಕು ವರ್ಷಗಳೊಳಗೆ ದೇಹದ ಗಾತ್ರ ಮತ್ತು ಎತ್ತರದಲ್ಲಿ ಬೆಳವಣಿಗೆಯಾಗುತ್ತದೆ. ಜೊತೆಗೆ ಸ್ತನಗಳ ಬೆಳವಣಿಗೆ ಮತ್ತು ಕಂಕಳು ಹಾಗೂ ಭಗೋಷ್ಟದ ಭಾಗದಲ್ಲಿ ಕೂದಲುಗಳು ಬೆಳೆಯುತ್ತವೆ. ಇವೆಲ್ಲ ಮಕ್ಕಳನ್ನು ಮುಜುಗರಕ್ಕೆ ಈಡುಮಾಡುವ ಬೆಳವಣಿಗೆಗಳು. ಹೀಗಾಗಿ ಕೆಲ ಹುಡುಗಿಯರು ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ಇದರಿಂದ ಕೆಲಸ ಕಾರ್ಯಗಳ ಮೇಲೂ ಪರಿಣಾಮಬೀರುತ್ತದೆ. 

ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಅವರಿಗೆ ಸೂಕ್ತ ತಿಳಿವಳಿಕೆಗಳನ್ನು ನೀಡುತ್ತಾ ಆತ್ಮವಿಶ್ವಾಸ ಹೆಚ್ಚಿಸುವುದು ತಾಯಂದಿರ ಕರ್ತವ್ಯ ವಾಗಿದೆ. ಋತುಚಕ್ರದ ವೇಳೆ ಹೊರಜನನಾಂಗದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪ್ರತಿ ನಾಲ್ಕೈದುಗಂಟೆಗೊಮ್ಮೆ ಪ್ಯಾಡ್‌ ಬದಲಾಯಿಸಲು ತಿಳಿಸಬೇಕು. ಪರಿಸರಸ್ನೇಹಿ ಪ್ಯಾಡ್‌ಗಳ ಬಳಕೆಯ ಬಗ್ಗೆ, ಅವುಗಳನ್ನು ಸೂಕ್ತ ವಿಲೇವಾರಿ ಬಗ್ಗೆ ಮಾಹಿತಿಕೊಡಬೇಕು.

ಋತುಚಕ್ರ ಆರಂಭವಾಗಿ  ಮೂರ್ನಾಲ್ಕು ವರ್ಷಗಳೊಳಗೆ ಉದ್ದನೆಯ ಮೂಳೆಗಳು ಕೂಡಿಕೊಳ್ಳುತ್ತವೆ. ಇದರಿಂದ ಗಾತ್ರದಲ್ಲಿ ಗಿಡ್ಡವಾಗುವ ಸಾಧ್ಯತೆಗಳು ಇವೆ. ಹಾಗಾಗಿ ಸಾಕಷ್ಟು ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಬೇಕು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಪ್ರಭಾವದಿಂದ ಚಿಕ್ಕವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಕುಟುಂಬದ ಹಿರಿಯರು ಎಚ್ಚರವಹಿಸಬೇಕು. ಸಕಾಲಿಕವಾಗಿ ಹೆಣ್ಣುಮಕ್ಕಳಿಗೆ ತಜ್ಞವೈದ್ಯರ ಮಾಹಿತಿ ಹಾಗೂ ಮಾರ್ಗದರ್ಶನ ದೊರೆತರೆ ಮುಂದೆ ಪ್ರಬುದ್ದವಾದ ಸಂತಾನೋತ್ಪತ್ತಿ ಅವಧಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಅಷ್ಟೇಅಲ್ಲ ಇತ್ತೀಚೆಗೆ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯಿಂದ ಫಾಲಿಸಿಸ್ಟಿಕ್ ಓವರಿಯನ್ ಡಿಸೀಸ್ (ಪಿ.ಸಿ.ಓ.ಡಿ) ಸಮಸ್ಯೆಯೂ ಹೆಚ್ಚುತ್ತಿದ್ದು ನಿಮ್ಮ ಮಗಳು ಅಗತ್ಯಕ್ಕಿಂತ ಹೆಚ್ಚು ತೂಕಗಳಿಸದ ಹಾಗೇ ನೋಡಿಕೊಳ್ಳಿ. ಅದಕ್ಕಾಗಿ ಅವಳಿಗೆ ಜಂಕ್‌ಫುಡ್ ಸೇವನೆ ಮಿತಗೊಳಿಸಿ ಸಾಕಷ್ಟು ದೈಹಿಕ ಚಟುವಟಿಕೆ ಮಾಡಲು ಪ್ರಚೋದಿಸಿ. ಹೀಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚೇನು ತೊಂದರೆಯಾ ಗುವುದಿಲ್ಲ. ಧೈರ್ಯದಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT