ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಪಟೈಟಿಸ್ ‘ಎ’ಯಿಂದ ‘ಇ’ವರೆಗೆ..

Last Updated 26 ಜುಲೈ 2019, 19:30 IST
ಅಕ್ಷರ ಗಾತ್ರ

ಎ, ಬಿ, ಸಿ, ಡಿ, ಇ– ಆಂಗ್ಲಭಾಷಾ ವರ್ಣಮಾಲೆಯ ಈ ಅಕ್ಷರಗಳು ಮನುಷ್ಯರಲ್ಲಿ ಪ್ರಾಥಮಿಕವಾಗಿ ಯಕೃತ್ತಿನ ಉರಿಯೂತ ಅಥವಾ ಹೆಪಟೈಟಿಸ್ ಉಂಟುಮಾಡುವ ವೈರಸ್‌ಗಳ ನಾಮಧೇಯಗಳು. ಈ ಐದು ಬಗೆಯ ವೈರಸ್‌ಗಳು ಮನುಷ್ಯರಲ್ಲಿ ವೈವಿಧ್ಯಮಯ ಯಕೃತ್ತಿನ ತೊಂದರೆಗಳನ್ನು ಉಂಟು ಮಾಡುತ್ತವೆ.

ಎ ಮತ್ತು ಇ ಹೆಪಟೈಟಿಸ್ ರೋಗಿಗಳ ಮಲದಲ್ಲಿರುವ ವೈರಸ್‌ಗಳು. ಇತರರು ಸೇವಿಸುವ ಆಹಾರ ಮತ್ತು ನೀರನ್ನು ಸೇರಿಕೊಂಡು ಅವರಿಗೂ ಹರಡುತ್ತವೆ. ಬಿ, ಸಿ, ಡಿ ಗಳು ರಕ್ತದ ಮುಖಾಂತರ, ಕಲುಷಿತ ಚುಚ್ಚುಮದ್ದುಗಳ ಸೂಜಿಗಳಿಂದ, ಮಾದಕದ್ರವ್ಯ ವ್ಯಸನಿಗಳು ಶುದ್ಧೀಕರಿಸದೇ ಉಪಯೋಗಿಸುವ ಸೂಜಿಗಳಿಂದ ಹರಡುತ್ತವೆ. ಬಿ ಯು ತಾಯಿಯಿಂದ ಗರ್ಭಸ್ಥ ಶಿಶುವಿಗೆ, ಹೆರಿಗೆಯ ವೇಳೆ, ಸ್ತನ್ಯಪಾನದ ಸಂದರ್ಭದಲ್ಲಿ ಹರಡಬಹುದು. ಲೈಂಗಿಕ ಸಂಪರ್ಕದಿಂದಲೂ ಬಿ ಹೆಪಟೈಟಿಸ್ ವೈರಸ್ ಹರಡಬಹುದು. ಡಿ ವೈರಸ್‌ಗೆ ಸ್ವತಂತ್ರವಾದ ಇರುವಿಕೆ ಇಲ್ಲ. ಇದು ಹೆಪಟೈಟಿಸ್ ಬಿ ಜೊತೆಗೆ ತಳಕು ಹಾಕಿಕೊಂಡು ಅದರ ತೀವ್ರತೆಯನ್ನು ಉಲ್ಬಣಿಸುತ್ತದೆ. ಇತ್ತೀಚಿನ ಕೆಲವು ಸಂಶೋಧನೆಗಳಲ್ಲಿ ಹೆಪಟೈಟಿಸ್ ಇ ಕೂಡಾ ಸಣ್ಣ ಪ್ರಮಾಣದಲ್ಲಿ ರಕ್ತದ ಮೂಲಕ ಹರಡಬಹುದು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ದೀರ್ಘಕಾಲೀನ ಯಕೃತ್ತಿನ ತೊಂದರೆಗಳನ್ನು ಉಂಟು ಮಾಡಬಹುದೆಂಬ ಸತ್ಯ ಹೊರಬಿದ್ದಿದೆ.

ಬಿ, ಸಿ, ಡಿ, ವೈರಸ್‌ಗಳು ಕೆಲವೊಮ್ಮೆ ಯಾವ ಲಕ್ಷಣಗಳನ್ನೂ ತೋರದೆ ದೇಹದಲ್ಲಿರಬಹುದು. ಇವುಗಳು ಕಾಲಾಂತರದಲ್ಲಿ ಯಕೃತ್ತಿನ ಉರಿಯೂತ(ಕ್ರಾನಿಕ್ ಹೆಪಟೈಟಿಸ್), ಯಕೃತ್ತಿನ ಪೂರ್ತಿ ವೈಫಲ್ಯವಾದ ಸಿರೋಸಿಸ್ ಹಾಗೂ ಯಕೃತ್ತಿನ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಯಾವುದೇ ರೀತಿಯ ಹೆಪಟೈಟಿಸ್ ವೈರಸ್ ಮೊದಲೇ ಯಕೃತ್ತಿಗೆ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಮಾರಣಾಂತಿಕವಾಗಿ ಪರಿಣಮಿಸಬಹುದು.

ಈ ಪ್ರಾಥಮಿಕ ಐದು ತರಹದ ವೈರಸ್‌ಗಳಲ್ಲದೆ ಇನ್ನೂ ಕೆಲವು ವೈರಸ್‌ಗಳು, ರಾಸಾಯನಿಕಗಳು, ಔಷಧಿಗಳು, ಫಂಗಸ್‌ಗಳು, ಆಲ್ಕೋಹಾಲ್ ಹೆಪಟೈಟಿಸ್‌ಗೆ ಕಾರಣವಾಗಬಹುದು.

ಲಕ್ಷಣಗಳು

ಹೆಪಟೈಟಿಸ್ ಎ ಮತ್ತು ಇ ಸೋಂಕುಗಳಲ್ಲಿ ಮೊದಲಿಗೆ ಲಘುವಾದ ತಲೆನೋವು, ಸುಸ್ತು, ಮೈ ಕೈ ನೋವು, ಹಸಿವೆ ಕಡಿಮೆಯಾಗುವುದು, ವಾಂತಿ ಬರುವ ಅನುಭವಗಳು ಶುರುವಾಗುತ್ತವೆ. ಕೆಲವು ದಿನಗಳಿಂದ ಎರಡು ವಾರಗಳ ಒಳಗೆ ಕಾಮಾಲೆ ಅಥವಾ ಜಾಂಡಿಸ್ ಕಾಣಿಸಿಕೊಳ್ಳುತ್ತದೆ (ಅಕ್ಯೂಟ್ ಹೆಪಟೈಟಿಸ್) . ವಾಂತಿ, ಭೇದಿ, ಕಣ್ಣಿನ ಹಳದಿ ಬಣ್ಣ, ಮೂತ್ರದ ಬಣ್ಣ ಕಡುವಾಗುವುದು ಎಲ್ಲವೂ ಕಾಣಿಸಿಕೊಳ್ಳುತ್ತವೆ. ಕೆಲವು ದಿನಗಳ ನಂತರ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು ಸಂಪೂರ್ಣ ಆರೋಗ್ಯವಂತನಾಗಬಹುದು.ಗುಣಮುಖರಾದ ಮೇಲೆ ಸಾಧಾರಣ ವ್ಯಕ್ತಿಗಳಲ್ಲಿ ಯಾವ ಕುರುಹೂ ಉಳಿಯುವುದಿಲ್ಲ.

ಬಿ ಮತ್ತು ಸಿ ವೈರಸ್‌ಗಳ ಸೋಂಕು ಉಂಟಾದಾಗ ಮೇಲೆ ಹೇಳಿದ ಲಕ್ಷಣಗಳೆಲ್ಲವೂ ಕಂಡು ಬರುತ್ತವೆ. ಸ್ವಲ್ಪ ತೀವ್ರವಾಗಿ ಹಾಗೂ ದೀರ್ಘವಾಗಿ ಜಾಂಡಿಸ್‌ನ ಲಕ್ಷಣಗಳು ಉಳಿಯುತ್ತವೆ. ಕಾಲಕ್ರಮೇಣ ಸಾಮಾನ್ಯ ಸ್ಥಿತಿ ಮರಳುತ್ತದೆ. ಆದರೆ ಕೆಲವರಲ್ಲಿ ಆರು ತಿಂಗಳ ನಂತರವೂ ಯಕೃತ್ತಿಗೆ ಸಂಬಂಧಪಟ್ಟ ಪರೀಕ್ಷೆಗಳು ಸಾಮಾನ್ಯ ಸ್ಥಿತಿಗೆ ತಲುಪದೇ ಇದ್ದಾಗ 'ಕ್ರಾನಿಕ್ ಆ್ಯಕ್ಟಿವ್ ಹೆಪಟೈಟಿಸ್' (CAH) ಎನ್ನುತ್ತಾರೆ. ಈ ಸ್ಥಿತಿಯು ಹಲವಾರು ವರ್ಷಗಳ ನಂತರ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‌ಗೆ ದಾರಿಯಾಗಬಹುದು.

ಆದರೆ ಮತ್ತೆ ಕೆಲವರಲ್ಲಿ ರಕ್ತದಲ್ಲಿ ಇರುವ ಬಿ ಅಥವಾ ಸಿ ವೈರಸ್‌ನ ಇರುವಿಕೆ ಯಾವುದೇ ಲಕ್ಷಣಗಳನ್ನು ತೋರಿಸದೇ ಮೌನವಾಗಿರಬಹುದು. ಡ(ಅದರಲ್ಲೂ ತಾಯಿಯಿಂದ ಮಕ್ಕಳಿಗೆ ಹೆರಿಗೆಯ ಸಮಯದಲ್ಲಿ ಹರಡಿದಾಗ). ದಶಕಗಳ ನಂತರ ಇವರು ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಬಲಿಯಾಗಬಹುದು.

ಪತ್ತೆ ಹಚ್ಚುವಿಕೆ

ಪ್ರತಿಯೊಂದು ವೈರಸ್‌ನ ಇರುವಿಕೆಯನ್ನು ರಕ್ತಪರೀಕ್ಷೆಗಳ ಮೂಲಕ ದೃಢೀಕರಿಸಬಹುದು. ಯಕೃತ್ತಿನ ಕೆಲಸದ ಮೇಲಾಗುವ ಪರಿಣಾಮಗಳ ಬಗೆಗೂ ಸಂಬಂಧಪಟ್ಟ ರಕ್ತ ಪರೀಕ್ಷೆಗಳಿಂದ ತಿಳಿಯಬಹುದು. ಬೇರೆ ಪರೀಕ್ಷೆಗಳ ಅವಶ್ಯಕತೆ ರೋಗದ ತೀವ್ರತೆಗೆ ಅನುಸಾರವಾಗಿ ಬೇಕಾಗಬಹುದು. CAH ಪತ್ತೆಗೆ ಯಕೃತ್ತಿನ ಬಯಾಪ್ಸಿ ಬೇಕು.

ಚಿಕಿತ್ಸೆ

ಎ ಮತ್ತು ಇ 'ಅಕ್ಯೂಟ್ ಹೆಪಟೈಟಿಸ್' ಚಿಕಿತ್ಸೆ ಸುಲಭ. ಸಾಕಷ್ಟು ವಿಶ್ರಾಂತಿ, ಪಥ್ಯಗಳ ಜೊತೆಗೆ ತನ್ನಿಂದ ತಾನಾಗಿಯೇ ರೋಗಿಗಳು ಗುಣಮುಖರಾಗುತ್ತಾರೆ. ಯಕೃತ್ತಿಗೆ ಘಾಸಿ ಮಾಡುವಂತಹ ಯಾವುದೇ ಆಹಾರವನ್ನು, ಔಷಧಿಗಳನ್ನು ಸೇವಿಸಬಾರದು. ಮದ್ಯಪಾನದ ಚಟವುಳ್ಳವರು ಪೂರ್ತಿಯಾಗಿ ವರ್ಜಿಸುವುದೊಳಿತು. ಸಾಧಾರಣವಾಗಿ ಜ್ವರಕ್ಕೆ ಕೊಡುವ ಪ್ಯಾರಾಸಿಟಮಾಲ್ ಕೂಡಾ ವರ್ಜ್ಯ. ಎರಡರಿಂದ ಆರು ವಾರಗಳಲ್ಲಿ ಪೂರ್ತಿ ಗುಣಮುಖರಾಗುತ್ತಾರೆ.

ಬಿ ಮತ್ತು ಸಿ ಗಳಿಂದ ಉಂಟಾಗುವ ಜಾಂಡಿಸ್‌ಗೂ ವಿಶ್ರಾಂತಿಯೇ ಮುಖ್ಯ. ಸಹಜಸ್ಥಿತಿಗೆ ಮರಳಲು ಇವುಗಳು ಸ್ವಲ್ಪ ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಸಾಮಾನ್ಯ ಸ್ಥಿತಿಗೆ ಮರಳದೆ ಕ್ರಾನಿಕ್ ಆ್ಯಕ್ಟಿವ್ ಹೆಪಟೈಟಿಸ್ ಸ್ಥಿತಿ ತಲುಪಿದಾಗ ತಜ್ಞರ ಮಾರ್ಗದರ್ಶನದಲ್ಲಿ ಇಂಟರ್ ಫೆರಾನ್ ಮತ್ತು ಹಲವಾರು ಆ್ಯಂಟಿವೈರಲ್ ಔಷಧಿಗಳನ್ನು ನೀಡಬೇಕಾಗುತ್ತದೆ. ಈ ಬೆಳವಣಿಗೆಗಳು ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗಳಿಂದ ಉಂಟಾಗುವ ಮರಣಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಾಯಕ. ಈ ಎರಡು ವೈರಸ್‌ಗಳು ಹೆಚ್ಚಾಗಿ ಹರಡುವ ಸಮಾಜಗಳಲ್ಲಿ ಎಲ್ಲರನ್ನೂ ಪರೀಕ್ಷೆಗೊಳಪಡಿಸಿ ರೋಗ ಪತ್ತೆ ಹಚ್ಚಿ CAH ಇರುವವರಿಗೆ ಸರಿಯಾದ ಔಷಧೋಪಚಾರ ನೀಡುವುದು ಅವಶ್ಯ.

ಮುನ್ನೆಚ್ಚರಿಕೆ

ನೀರು ಮತ್ತು ಆಹಾರದ ಮೂಲಕ ಹರಡುವ ಹೆಪಟೈಟಿಸ್ ಸೋಂಕು ಜನರ ಜೀವನ ಮಟ್ಟ ಸುಧಾರಿಸಿ ನೈರ್ಮಲ್ಯ ಸರಿಯಾಗಿದ್ದಾಗ ತಾನಾಗಿಯೇ ಹದ್ದುಬಸ್ತಿಗೆ ಬರುತ್ತದೆ.

ಶುದ್ಧವಾದ ನೀರು ಮತ್ತು ಆಹಾರ ಪದಾರ್ಥಗಳ ಸೇವನೆ ಅತಿ ಮುಖ್ಯ.

ಹೆಪಟೈಟಿಸ್ ಎ ಮತ್ತು ಬಿ ಗಳಿಗೆ ಪರಿಣಾಮಕಾರಿಯಾದ ಲಸಿಕೆಗಳಿವೆ. ಭಾರತದಲ್ಲಿ ಬಿ ಲಸಿಕೆಯನ್ನು ಮಕ್ಕಳಿಗೆ ಹಾಕಿಸುವುದು ಕಡ್ಡಾಯ. ಮೊದಲ ಚುಚ್ಚುಮದ್ದನ್ನು ಜನನವಾದ ಕೂಡಲೇ ಕೊಡಬೇಕು. ಹೆಪಟೈಟಿಸ್ ಡಿಯನ್ನು ಬಿ ಲಸಿಕೆ ನೀಡುವುದರಿಂದಲೇ ತಡೆಗಟ್ಟಬಹುದು. ಹೆಪಟೈಟಿಸ್ ಇ ಗೆ ಲಸಿಕೆ ತಯಾರಾಗಿದ್ದರೂ ಸಾರ್ವಜನಿಕ ಉಪಯೋಗದ ಸುರಕ್ಷತೆಯ ಬಗ್ಗೆ ಇನ್ನೂ ಸಂಶಯಗಳಿರುವುದರಿಂದ ಮಾರುಕಟ್ಟೆಗೆ ಬಂದಿಲ್ಲ. ಹೆಪಟೈಟಿಸ್ ಸಿ ಗೆ ಇನ್ನೂ ಯಾವ ಲಸಿಕೆಯೂ ಲಭ್ಯವಿಲ್ಲ. ಸಂಶೋಧನೆಗಳು ನಡೆಯುತ್ತಿವೆ.

ರಕ್ತದಾನದ ಸಂದರ್ಭದಲ್ಲಿ, ಯಾವುದೇ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಮೊದಲು ರಕ್ತದಿಂದ ಹರಡುವಂತಹ ಹೆಪಟೈಟಿಸ್ ವೈರಸ್‌ಗಳ ಇರುವಿಕೆಯ ಬಗ್ಗೆ ಪತ್ತೆ ನಡೆಸುವುದು ಕಡ್ಡಾಯ.

ಹೆಪಟೈಟಿಸ್ ಎ ರೋಗಿಗಳ ಅತಿ ಹತ್ತಿರದ ಸಂಬಂಧಿಕರಿಗೆ ಹರಡದಂತೆ ಹೈಪರ್ ಇಮ್ಯೂನ್ ಗ್ಲಾಬ್ಯುಲಿನ್ ಎಂಬ ಚುಚ್ಚುಮದ್ದನ್ನು ಲಸಿಕೆಯ ಜೊತೆಗೆ ನೀಡಬಹುದು.

ಆಕಸ್ಮಿಕವಾಗಿ ಕಲುಷಿತ ಸೂಜಿ ಚುಚ್ಚಿದಾಗ(ಹೆಚ್ಚಾಗಿ ಆರೋಗ್ಯ ಸಂಬಂಧಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರಲ್ಲಿ) ಅಥವಾ ಹೆಪಟೈಟಿಸ್ ಬಿ ವೈರಸ್ ರಕ್ತದಲ್ಲಿರುವ ಗರ್ಭಿಣಿಯರು ಜನ್ಮ ನೀಡಿದಾಗ ಹೆಪಟೈಟಿಸ್ ಬಿ ಇಮ್ಯೂನ್ ಗ್ಲಾಬುಲಿನ್ ಚುಚ್ಚುಮದ್ದು ರೋಗ ತಡೆಗಟ್ಟುವಿಕೆಯಲ್ಲಿ ಸಹಕಾರಿ. ಜನ್ಮ ತಾಳಿದ ಶಿಶು ಇಮ್ಯೂನ್ ಗ್ಲಾಬ್ಯುಲಿನ್ ಜೊತೆಗೆ ಕೂಡಲೇ ಲಸಿಕೆಯನ್ನೂ ಪಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT