ಶನಿವಾರ, ಮಾರ್ಚ್ 28, 2020
19 °C

ವಿಶ್ವ ಮಹಿಳಾ ದಿನಾಚರಣೆ | ಗಟ್ಟಿಗಿತ್ತಿಯರ ಸೊಲೊ ಟ್ರಾವೆಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಪ್ರತಿವರ್ಷ ಶೇ 80ರಷ್ಟು ಮಹಿಳೆಯರು ಏಕಾಂಗಿ ಪ್ರವಾಸ (Solo Travel) ಕೈಗೊಳ್ಳುತ್ತಾರೆ. ಅದರಲ್ಲಿ ಕರ್ನಾಟಕದ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. 2019ರಲ್ಲಿ ಝಾಸ್ಟೆಲ್ ಮೂಲಕ ಒಬ್ಬಂಟಿ ಪ್ರವಾಸ ಕೈಗೊಂಡವರಲ್ಲಿ ಶೇ 17.7ರಷ್ಟು ಮಹಿಳೆಯರು ಕರ್ನಾಟಕದವರು, ಶೇ 16ರಷ್ಟು ಮಹಿಳೆಯರು ಬೆಂಗಳೂರಿನವರು ಎನ್ನುತ್ತದೆ ಝಾಸ್ಟೆಲ್ ಪ್ರವಾಸಿ ಕಂಪನಿಯ ವರದಿ. ‘ವಿಶ್ವ ಮಹಿಳಾ ದಿನಾಚರಣೆ’ ನೆಪದಲ್ಲಿ ಮಹಿಳೆಯರ ಸೊಲೊ ಟ್ರಾವೆಲ್ ಸುತ್ತ ಒಂದಿಷ್ಟು ಸುತ್ತಾಟ.

***

ಸೊಲೊ ಟ್ರಾವೆಲ್ ಅಥವಾ ಏಕಾಂಗಿ ಯಾನ–  ಇದು ಈಚಿನ ವರ್ಷಗಳಲ್ಲಿ ಮಹಿಳೆಯರ ಲೋಕದ ಹೊಸ ಮಂತ್ರ. ಮಹಿಳೆಯರಿಗೆ ಏಕಾಂಗಿ ಪ್ರವಾಸ ಎಂದರೆ ವಿರಾಮಕ್ಕಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡುವುದಷ್ಟೇ ಆಗಿರುವುದಿಲ್ಲ. ನಿತ್ಯದ ಜಂಜಡದಿಂದ ಬಿಡುವು, ಸಾಹಸ, ವ್ಯಕ್ತಿಗತ ಸ್ವಾತಂತ್ರ್ಯ, ಹೊಸ ಅನುಭವಗಳನ್ನು ಗಳಿಸುವ ಆಸಕ್ತಿ, ಜೀವನದ ಭಿನ್ನ ಆಯಾಮಗಳ ಅನ್ವೇಷಣೆ ಹೀಗೆ ವಿವಿಧ ಅಂಶಗಳು ಒಳಗೊಂಡಿರುತ್ತವೆ.

ಒಂದಷ್ಟು ಸಿದ್ಧತೆ ಜತೆಗೆ ಸ್ಥೈರ್ಯ, ಜಾಗರೂಕ ಮನೋಭಾವ, ಅನಿರೀಕ್ಷಿತ ಪರಿಸ್ಥಿತಿ ಎದುರಾದರೂ ನಿಭಾಯಿಸಬಲ್ಲ ಛಾತಿ ಇದ್ದರೆ ಮಹಿಳೆಯರಿಗೆ ಏಕಾಂಗಿ ಯಾನದಲ್ಲಿ ಹೊಸ ಲೋಕ ಪರಿಚಯವಾಗುತ್ತದೆ.

ಪ್ರವಾಸಿ ಕಂಪನಿಗಳು ಇಂಥ ಮಹಿಳಾ ಯಾನಿಗಳನ್ನು ಗಮನದಲ್ಲಿರಿಸಿಕೊಂಡು ಸೊಲೊ ಟ್ರಿಪ್‌ಗಳನ್ನು ಆಯೋಜಿಸುತ್ತವೆ. ಕೆಲವರು ತಾವೇ ಪ್ರವಾಸಕ್ಕೆ ವ್ಯವಸ್ಥೆ ಮಾಡಿಕೊಳ್ಳುವವರೂ ಇದ್ದಾರೆ. ಅಂಥ ಕೆಲವು ಮಹಿಳೆಯರು ತಮ್ಮ ಏಕಾಂಗಿ ಯಾನದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

***

ಕೆಲಸದ ಒತ್ತಡ ಕೆಲವೊಮ್ಮೆ ತೀವ್ರವಾಗಿರುತ್ತದೆ. ಇದರಿಂದ ಬಿಡುವು ಪಡೆದು ಹೊಸ ಉತ್ಸಾಹ ಗಳಿಸಲು ಏಕಾಂಗಿಯಾಗಿ ಪ್ರವಾಸ ಹೋಗುತ್ತೇನೆ. ಜನರೊಂದಿಗೆ ಹೇಗೆ ವರ್ತಿಸಬೇಕು, ಪ್ರತಿಕ್ರಿಯಿಸಬೇಕು ಎನ್ನುವುದನ್ನು ಈ ಪ್ರವಾಸ ಹೆಚ್ಚು ಚೆನ್ನಾಗಿ ಕಲಿಸುತ್ತದೆ.

ಪ್ರವಾಸಿ ಲೇಖನ ಹಾಗೂ ಬ್ಲಾಗ್‌ಗಳು ಸೇರಿದಂತೆ ಸಾಕಷ್ಟು ಓದುವ ಅಭ್ಯಾಸ ಇದೆ. ನನ್ನ ಆಸಕ್ತಿಗೆ ಹೊಂದುವ ಚಟುವಟಿಕೆಗಳು ಲಭ್ಯವಾಗುವಂತಹ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಒಂಟಿಯಾಗಿ ಪ್ರವಾಸ ಮಾಡುವುದರಿಂದಾಗಿ ನಾನೇ ಟ್ರಿಪ್ ಪ್ಲಾನ್ ಮಾಡಿಕೊಳ್ಳುತ್ತೇನೆ. ಇದು ಹೆಚ್ಚು ಸುರಕ್ಷಿತ ಎನಿಸುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕೆಲವೊಮ್ಮೆ ಯೋಜನೆಗಳು ಏರುಪೇರಾಗುತ್ತವೆ. ಆದರೆ ಅದು ಹೊಸ ಪಾಠ ಕಲಿಸುತ್ತದೆ.

ಪ್ರವಾಸದಲ್ಲಿ ಸಾಹಸಮಯ ಚಟುವಟಿಕೆ ಗಳನ್ನು ಮಾಡಲು ನನಗೆ ಹೆಚ್ಚು ಇಷ್ಟ. ಸಮಾನ ಮನೋಭಾವದ ಸಂಗಡಿಗರು ದೊರಕುವುದು ಕೆಲವೊಮ್ಮೆ ಕಷ್ಟ. ಒಬ್ಬಳೇ ಪ್ರವಾಸ ಮಾಡುವುದರಿಂದ ಯಾರ ಅಡ್ಡಿಯೂ ಇಲ್ಲದೆ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

-ಮಾನ್ವಿತಾ, ಚಾರ್ಟರ್ಡ್ ಅಕೌಂಟೆಂಟ್, ಬೆಂಗಳೂರು

****

ಸುತ್ತಲಿನ ಜನರಿಂದ ಕೊಂಚ ಬಿಡುಗಡೆ ಪಡೆಯಲು ಆಗಾಗ ಒಂಟಿಯಾಗಿ ಪ್ರವಾಸಕ್ಕೆ ಹೋಗುತ್ತೇನೆ. ಹೆಚ್ಚು ಪ್ರಸಿದ್ಧವಲ್ಲದ ಸ್ಥಳ, ಜನದಟ್ಟಣೆ ಇಲ್ಲದ ಸೀಸನ್ ಆಯ್ಕೆ ಮಾಡಿಕೊಂಡು ನನ್ನ ತಿರುಗಾಟವನ್ನು ನಾನೇ ಪ್ಲಾನ್ ಮಾಡಿಕೊಳ್ಳುತ್ತೇನೆ. ಈ ಪ್ರವಾಸದಿಂದ ಸ್ವಾವಲಂಬಿ ಮನೋಭಾವ ಮತ್ತಷ್ಟು ದೃಢವಾಗುತ್ತದೆ.

ಯಾವೆಲ್ಲಾ ಸ್ಥಳಗಳಿಗೆ ಸುತ್ತಾಡಬೇಕು ಎಂದು ಪಟ್ಟಿ ಮಾಡಿಕೊಂಡು ಅದಕ್ಕೆ ಸೂಕ್ತವಾಗುವಂತೆ ಹೋಟೆಲ್, ಹೋಂಸ್ಟೇ ಗಳನ್ನು ಹುಡುಕಿ ಅವುಗಳ ರಿವ್ಯೂ ಪರಿಶೀಲಿಸಿ ಬಳಿಕ ಬುಕ್ ಮಾಡುತ್ತೇನೆ.

ಮೊದಲ ಸೊಲೊ ಟ್ರಿಪ್‌ನಲ್ಲಿ ಮುಂಗಾರು ಆರಂಭಕ್ಕೂ ಮೊದಲು ಗೋವಾಕ್ಕೆ ತೆರಳಿದ್ದೆ. ಅಲ್ಲಿ ಹೋಂಸ್ಟೇನಲ್ಲಿ ಉಳಿದುಕೊಂಡಿದ್ದೆ. ದ್ವಿಚಕ್ರವಾಹನ ಬಾಡಿಗೆಗೆ ಪಡೆದು ಸುತ್ತಾಡಿದೆ. ಈ ವೇಳೆ ಸ್ಥಳೀಯರ ಪರಿಚಯವಾಯಿತು. ಪಣಜಿಯಲ್ಲಿ ಡ್ರಾಪ್ ಕೇಳಿದ ಕೆಲವರನ್ನು ಅವರ ಹಳ್ಳಿಗಳಿಗೆ ತಲುಪಿಸಿದ್ದು, ಸುತ್ತಾಟದ ಹೊಸ ಅನುಭವ ಕೊಟ್ಟಿತು. ಶ್ರೀಲಂಕಾ ಹಾಗೂ ಕೊಚ್ಚಿ ಪ್ರವಾಸದಲ್ಲಿ ಹೋಟೆಲ್‌ನಲ್ಲಿ ಉಳಿದಿದ್ದೆ. ಶ್ರೀಲಂಕಾದಲ್ಲಿ ಸಿಗಿರಿಯಾ, ಹಿಕ್ಕಡುವಾದಲ್ಲಿ ಸುತ್ತಾಡಿದೆ. ಬೆಂಗಳೂರಿನಿಂದ ಪ್ರವಾಸಿ ತಾಣದವರೆಗಿನ ಪ್ರಯಾಣದಲ್ಲಿ ಯಾವುದೇ ರೀತಿ ಅಸುರಕ್ಷತೆ ಎನಿಸಿಲ್ಲ. ಆಯಾ ಸ್ಥಳಗಳಲ್ಲಿಯೂ ನನಗೆ ಎದುರಾದ ಬಹುತೇಕರು ಸ್ನೇಹಯುತವಾಗಿಯೇ ಕಂಡುಬಂದರು.

-ಕವನ, ಫಾರ್ಮಾ ಕಂಪನಿಯಲ್ಲಿ ಸಹಾಯಕ ವಿಜ್ಞಾನಿ, ಬೆಂಗಳೂರು

***

ರಾಜ್ಯದಲ್ಲಿ ನನ್ನ ಮೊದಲ ಸೋಲೊ ಪ್ರವಾಸದಲ್ಲಿ ಆಗುಂಬೆಗೆ ಹೋಗಿದ್ದೆ. ಬಳಿಕ ಹಂಪಿ, ಚಿಕ್ಕಮಗಳೂರು, ಗೋಕರ್ಣಕ್ಕೆ ಪ್ರವಾಸ ಕೈಗೊಂಡಿದ್ದೆ. ಕರ್ನಾಟಕದಲ್ಲಿ ಮಾಡಿದ ಏಕಾಂಗಿ ಪ್ರವಾಸಗಳಲ್ಲಿ ನನಗೆ ಯಾವುದೇ ರೀತಿ ಅಸುರಕ್ಷತೆ ಎನಿಸಿಲ್ಲ. ಕ್ಲಿಷ್ಟಕರ ಸ್ಥಿತಿ ಎದುರಾಗುವ ಸಾಧ್ಯತೆ ಇರುತ್ತದೆ. ಆದರೆ ಆತ್ಮವಿಶ್ವಾಸದಿಂದ ಇಂತಹ ಸ್ಥಿತಿ ನಿಭಾಯಿಸಬಹುದು.

ಪುದುಚೇರಿ, ಕೇರಳ, ತಮಿಳುನಾಡು, ಉತ್ತರಾಖಂಡ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳಕ್ಕೆ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದೇನೆ. ಪ್ರವಾಸದ ವೇಳೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡದಿದ್ದರೂ‌ ಒಮ್ಮೆ ಖಿನ್ನತೆ ಆವರಿಸಿದಾಗ, ಪಶ್ಚಿಮ ಬಂಗಾಳದಲ್ಲಿ ಸಂಡಕ್‌ಫು–ಫಲುಟ್ ಚಾರಣ ಕೈಗೊಂಡೆ. ಅದಕ್ಕೂ ಮೊದಲು ಹೆಚ್ಚು ಪ್ರಸಿದ್ಧವಲ್ಲದ ಥಿಂಚುಲೆ ಪ್ರದೇಶಕ್ಕೆ ಒಂಟಿಯಾಗಿ ಪ್ರವಾಸ ಹೋಗಿದ್ದೆ. ಈ ಚಾರಣ ಮತ್ತು ಪ್ರವಾಸ ಮುಗಿಸಿ ಮರಳಿದಾಗ ನಾನು ಹೊಸ ವ್ಯಕ್ತಿಯಾಗಿದ್ದೆ. ಖಿನ್ನತೆಯಿಂದ ಹೊರಬಂದಿರುವುದಾಗಿ ವೈದ್ಯರು ಹೇಳಿದರು. ಇದು ಏಕಾಂಗಿಯಾಗಿ ಪ್ರವಾಸ ಮಾಡಿದ ನನಗೆ ದೊರಕಿದ ಅತ್ಯುತ್ತಮ ಅನುಭವ.

-ಶ್ರೀವಿದ್ಯಾ, ಯೋಗ ಅಭ್ಯಾಸಿ, ಬೆಂಗಳೂರು

***

ಸಂಗತಿಗಳು ತೀರಾ ಅಸ್ತವ್ಯಸ್ತವಾಗುತ್ತಿದೆ ಎನಿಸಿದಾಗ ಬಿಡುವು ಬೇಕು ಅನಿಸುತ್ತದೆ. ಆಗ ಏಕಾಂಗಿಯಾಗಿ ಪ್ರವಾಸ ಮಾಡುತ್ತೇನೆ.

ಮುಂಬೈನಲ್ಲಿ ಯುವ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಸಣ್ಣಕಥೆಯೊಂದನ್ನು ಓದಲು ಹೋಗಿದ್ದು ನನ್ನ ಮೊದಲ ಒಂಟಿ ಯಾನ. ಬಸ್‌ನಲ್ಲಿ ಹೋಗುವಾಗ ಕೆಲವರು ಸ್ನೇಹಿತರಾದರು. ಮುಂಬೈನಲ್ಲಿ ಮಾರ್ಕೆಟ್‌ಗಳಲ್ಲಿ ಸುತ್ತಾಡಿದೆ. ಲೋಕಲ್ ರೈಲಿನಲ್ಲಿ ಅಡ್ಡಾಡಿದೆ. ಪ್ಲಾಟ್ ಫಾರ್ಮ್ , ರೈಲಿನ ಸಮಯದ ಬಗ್ಗೆ ನನಗೆ ಸ್ಥಳೀಯರು ಮಾಹಿತಿ ನೀಡಿದರು. ಮುಖಾಮುಖಿಯಾದವರೆಲ್ಲಾ ಸ್ನೇಹಯುತವಾಗಿ ನೆರವಾದರು. ಇಂಥ ಯಾನದಲ್ಲಿ ಹೊಸ ಸಂಗತಿಗಳನ್ನು ಕಲಿಯಬಹುದು. ಹುಡುಗಿ ಎನ್ನುವ ಕಾರಣದಿಂದ ಒಬ್ಬಂಟಿ ಯಾನದ ಅವಕಾಶ ಕಳೆದುಕೊಳ್ಳಬಾರದು.

ಆವಂತಿಕಾ ಕಾಮತ್, ವಿದ್ಯಾರ್ಥಿನಿ, ಎನ್ ಎಂಎ ಎಂಐಟಿ, ನಿಟ್ಟೆ (ಮಂಗಳೂರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು