ಮದುವೆಯಾಗಿ ಒಂದು ವರ್ಷವಾಯಿತು. ಮದುವೆಯ ಸಮಯದಲ್ಲಿ ಮುಟ್ಟು ಮುಂದೆ ಹೋಗುವ ಮಾತ್ರೆಯನ್ನು ಡಾಕ್ಟರ್ ಸಲಹೆಯ ಮೇರೆಗೆ ತೆಗೆದುಕೊಂಡಿದ್ದೆ.ಈಗ ಮದುವೆಯ ನಂತರ ಮುಟ್ಟು ತಡವಾಗಿ ಬರುತ್ತಿದೆ ಮತ್ತು ಅತಿಯಾದ ರಕ್ತಸ್ರಾವವೂ ಆಗುತ್ತಿದೆ, ಮತ್ತೆ ದೇವಸ್ಥಾನಕ್ಕೆ ಹೋಗುವಾಗಲೂ ಮುಟ್ಟು ಮುಂದೆ ಹೋಗುವ ಮಾತ್ರೆ ತೆಗೆದುಕೊಂಡಿದ್ದೆ. ಈಗ ಒಂದು ವರ್ಷವಾದರೂ ಗರ್ಭವೂ ನಿಲ್ಲುತ್ತಿಲ್ಲ. ಇದಕ್ಕೆಲ್ಲಾ ಮುಟ್ಟು ಮುಂದೂಡುವ ಮಾತ್ರೆಯೇ ಕಾರಣವೇ? ನನಗೆ ಮಕ್ಕಳಾಗಲು ತೊಂದರೆಯೇ?
ಪ್ರಜ್ಞಾ ಅವರೇ ಭಯ ಬೇಡ, ನೀವು ಒಂದೆರಡು ಬಾರಿ ಮುಟ್ಟು ಮುಂದೆ ಹೋಗುವ ಮಾತ್ರೆ ತೆಗೆದುಕೊಂಡರೆ ಗರ್ಭಧಾರಣೆಯಾಗಲು ತೊಂದರೆಯೇನೂ ಆಗಲಿಕ್ಕಿಲ್ಲ. ಆದರೆ ನಿಮ್ಮ ತೂಕವು ಹೆಚ್ಚಾಗುತ್ತಿದೆ ಎಂದು ತಿಳಿಸಿರುವುದರಿಂದ ನಿಮಗೆ ಹೈಪೋಥೈರಾಯಿಡಿಸಂ ಇರುವ ಸಾಧ್ಯತೆಯೂ ಇದೆ. ಈ ಬಗ್ಗೆ ನೀವು ತಜ್ಞರಿಂದ ಪರೀಕ್ಷಿಸಿಕೊಳ್ಳಿ. ಆದರೆ ನೀವು ಪದೇ ಪದೇ ಮುಟ್ಟನ್ನು ಹಿಂದೆ ಮುಂದೆ ಮಾಡಲು ಮಾತ್ರೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಈ ಮಾತ್ರೆ ತೆಗೆದುಕೊಂಡ ಋತುಚಕ್ರದ ಅವಧಿಯಲ್ಲಿಯೇ ಏನಾದರೂ ನಿಮಗೆ ಗರ್ಭಧಾರಣೆಯಾದಲ್ಲಿ ಮಾತ್ರೆಯಿಂದ ತೊಂದರೆಯಾಗುತ್ತೇನೋ ಎಂದು ಗೊಂದಲ ಉಂಟಾಗಬಹುದು. ಎಷ್ಟೋ ಬಾರಿ ಈ ಕುರಿತಾಗಿ ಗರ್ಭಪಾತ ಮಾಡಿ ಎನ್ನುವ ಮಹಿಳೆಯರು ಸಾಕಷ್ಟಿದ್ದಾರೆ.
ನೀವಷ್ಟೇ ಅಲ್ಲ ಮುಟ್ಟನ್ನು ಮುಂದೆ ಹಿಂದೆ ಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯೂ ಮುಟ್ಟು ಹೇಗೆ ಮುಂದೂಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದಿರಬೇಕು. ಮಾಸಿಕಋತುಚಕ್ರ ಸಂಪೂರ್ಣವಾಗಿ ಹಾರ್ಮೋನುಗಳ ನಿಯಂತ್ರಣದಲ್ಲಿರುವ ಪ್ರಕ್ರಿಯೆ. ನಾಲ್ಕು ದಿನಗಳ ಋತುಸ್ರಾವದ ನಂತರ ಅಂಡಾಶಯದಿಂದ ಅಂಡೋತ್ಪತ್ತಿಯಾಗುವ ಹಾಗೆ ಪ್ರಚೋದನೆಯಾಗಿ ಇಸ್ಟ್ರೋಜನ್ ಹಾರ್ಮೋನಿನ ಹೆಚ್ಚಳವಾಗುತ್ತದೆ. ಅಂಡಾಣು ಉತ್ಪತ್ತಿಯಾದ ನಂತರ ಪ್ರೊಜೆಸ್ಟಿರಾನ್ ಹಾರ್ಮೋನ್ ಹೆಚ್ಚಾಗುತ್ತದೆ. ಈ ಎರಡೂ ಹಾರ್ಮೋನುಗಳ ಹೆಚ್ಚಳವನ್ನು ಮೆದುಳು ಗ್ರಹಿಸುವುದರಿಂದ ಇವುಗಳ ಉತ್ಪಾದನಾ ಹಾರ್ಮೋನುಗಳು ಕಡಿಮೆಯಾಗಿ ಇದರಿಂದ ಗರ್ಭಕೋಶದಲ್ಲಿ ಭ್ರೂಣಾಗಮನಕ್ಕೆ ಸಿದ್ದಗೊಳ್ಳಲು ಬೆಳೆಯುತ್ತಿರುವ ಒಳಪದರವು ಕಳಚಿ ಹೊರಬರುವುದೇ ಮಾಸಿಕ ಋತುಸ್ರಾವ. ಒಮ್ಮೆ ಈ ಋತುಚಕ್ರದಲ್ಲೇನಾದರೂ ಅಂಡೋತ್ಪತ್ತಿಯಾದ ನಂತರ ಅದು ವೀರ್ಯಾಣುಗಳ ಜೊತೆಗೆ ಮಿಲಿತವಾದರೆ ಗರ್ಭಧಾರಣೆಯಾಗಿ ಹೆರಿಗೆಯವರೆಗೆ ಮುಟ್ಟಾಗುವುದೇ ಇಲ್ಲ. ಇವಿಷ್ಟ್ಟು ವೈಜ್ಞಾನಿಕ ಸತ್ಯವನ್ನು ತಿಳಿದ ಮೇಲೆ ಈ ಫ್ರೀ-ಫೋನ್ ಮಾತ್ರೆಗಳ ಬಗ್ಗೆಯೂ ತಿಳಿಯಬೇಕು.
ಈ ಮಾತ್ರೆಗಳಲ್ಲಿ ಕೃತಕವಾದ ಇಸ್ಟೊಜನ್ ಅಥವಾ ಪ್ರೊಜೆಸ್ಟಿರಾನ್ ಮಾತ್ರೆಗಳನ್ನೇ ಸೇವಿಸಿ ಹಾರ್ಮೋನು ಮಟ್ಟ ಹೆಚ್ಚಾಗಿಯೇ ಇದೆ ಎಂದು ಮೆದುಳು ಅರ್ಥೈಸಿ ಮುಟ್ಟಾಗದಂತೆ ತಡೆಯುತ್ತದೆ. ಆದ್ದರಿಂದ ಇವುಗಳನ್ನು ತೆಗೆದುಕೊಳ್ಳುತ್ತಿರುವಾಗ ಮುಟ್ಟಾಗುವುದಿಲ್ಲ. ನಿಲ್ಲಿಸಿದ ಮೇಲೆ ಹಾರ್ಮೋನು ಮಟ್ಟ ಕಡಿಮೆಯಾಗಿ, ಮೆದುಳಿನ ಸಂದೇಶ ನಿಂತುಹೋಗಿ ಋತುಚಕ್ರ ಪುನಃ ಆರಂಭವಾಗುತ್ತದೆ. ಮೆದುಳಿಗೆ ತಾತ್ಕಾಲಿಕವಾಗಿ ಕೃತಕ ಮಾತ್ರೆಗಳನ್ನು ಸೇವಿಸುವುದರ ಮೂಲಕ ಮೋಸದ ಸಂದೇಶ ಉಂಟುಮಾಡಿ ಮುಟ್ಟನ್ನು ಮುಂದು ಹಾಕುತ್ತಿದ್ದೇವೆಂದು ಪ್ರತಿಯೊಬ್ಬ ಹೆಣ್ಣಿಗೂ ತಿಳಿದಿರಬೇಕು. ಸಂತಾನ ನಿರೋಧಕ ಮಾತ್ರೆಗಳಲ್ಲಿಯೂ, ಹಾರ್ಮೋನು ಮಾತ್ರೆಗಳಲ್ಲಿಯೂ ಈ ತತ್ವವನ್ನು ಅಳವಡಿಸಲಾಗಿದೆ. ಆದ್ದರಿಂದ ಅತಿ ಅವಶ್ಯವಿದ್ದರೆ ಮಾತ್ರ ವೈದ್ಯರ ಸಲಹೆಯ ಮೇರೆಗೆ ಅನಿವಾರ್ಯವಾದಲ್ಲಿ ಮಾತ್ರ ಮುಟ್ಟು ಮುಂದೂಡುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಸುಮ್ಮ ಸುಮ್ಮನೇ ಸಣ್ಣಪುಟ್ಟ ನೆವಕ್ಕೆಲ್ಲಾ ಹಿಂದೆ ಮುಂದೆ ಮಾಡಲು ಹೋಗದೇ ನಿಸರ್ಗ ಸಹಜವಾದ ವೈಜ್ಞಾನಿಕ ಕ್ರಿಯೆಯಾದ ಮುಟ್ಟನ್ನು ಇದ್ದ ಹಾಗೆಯೇ ಒಪ್ಪಿಕೊಂಡು ನಿರ್ವಹಿಸಲು ಕಲಿಯಬೇಕು. ಮುಟ್ಟು ಹಿಂದೆ ಮಾಡುವುದರಲ್ಲಿಯೂ ಇದೇ ತತ್ವ ಅಡಗಿದೆ. ಆದ್ದರಿಂದ ನೀವು ಚಿಂತಿಸದೇ ಭಯ ಬೀಳದೇ ತಜ್ಞರನ್ನು ಸಂಪರ್ಕಿಸಿ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.