ಬುಧವಾರ, ನವೆಂಬರ್ 13, 2019
28 °C

ನಗರದ ಬದುಕು ಇಷ್ಟಭದ್ರತೆಯದ್ದೇ ಕಷ್ಟ

Published:
Updated:
Prajavani

ಶಿಕ್ಷಣ, ಉದ್ಯೋಗದ ಸಲುವಾಗಿ ಮಹಾನಗರಗಳಿಗೆ ವಲಸೆ ಬರುವ ಯುವತಿಯರು ಸುರಕ್ಷತೆ ವಿಷಯದಲ್ಲಿ ಆತಂಕಿತರಾಗಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಬದುಕು ಕಟ್ಟಿಕೊಳ್ಳಲು ಬಂದಿರುವ ಯುವತಿಯರು ವಾಸ್ತವ್ಯದ ಬಗ್ಗೆಯೂ ಚಿಂತಿತರಾಗಿದ್ದು, ಅವರಿಗೆ ಭದ್ರತೆ ಒದಗಿಸಲು ನಗರಾಡಳಿತ ‘ಸುರಕ್ಷಿತ ನಗರ’ ಯೋಜನೆ ಕೈಗೊಳ್ಳುವ ಜರೂರಿದೆ.

ಆಕೆ ದೇವಿಕಾ ಕಿಮಾನೇಕರ್‌. ಕಾರವಾರದ ಬಳಿಯ ಗ್ರಾಮವೊಂದರಿಂದ ಬೆಂಗಳೂರಿಗೆ ಬಂದು ಆರು ತಿಂಗಳಾದವಷ್ಟೇ. ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಆಡಿಟರ್‌. ವೇತನ ಸಾಕಷ್ಟು ಸಿಗುತ್ತಿದ್ದರೂ ಯಾವಾಗಲೂ ಮನಸ್ಸಿನಲ್ಲಿ ಭಯ ಹೊತ್ತುಕೊಂಡೇ ಓಡಾಡಬೇಕಾದ ಪರಿಸ್ಥಿತಿ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸಂಜೆ ಟ್ಯಾಕ್ಸಿಯಲ್ಲಿ ಬರುವಾಗ ಚಾಲಕನೇ ಕಿರುಕುಳ ನೀಡಿದ್ದ. ಪೊಲೀಸ್‌ ದೂರು, ಚಾಲಕನ ವಿಚಾರಣೆ ಎಲ್ಲ ನಡೆದರೂ ಅದರಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದಳು ದೇವಿಕಾ.

***

ಬೆಳಗಾವಿಯ ಸುಜಾತಾ ದೇಸಾಯಿಯದ್ದು ಇನ್ನೊಂದು ಕಥೆ. ಸಿ.ಎ. ಓದಲೆಂದು ಚೆನ್ನೈನಲ್ಲಿ ಪೇಯಿಂಗ್‌ ಗೆಸ್ಟ್‌ ಆಗಿ ಸೇರಿಕೊಂಡಿದ್ದಳು. ಆದರೆ ಮಧ್ಯರಾತ್ರಿ ಆಗಂತುಕನೊಬ್ಬ ಸೆಕೆಯೆಂದು ತೆರೆದಿಟ್ಟ ಕಿಟಕಿಯಿಂದ ನುಗ್ಗಿ ಮೈಮೇಲೆ ಕೈಹಾಕಿದ್ದ. ಸುಜಾತಾ ಚೀರಿಕೊಂಡಾಗ ಅಕ್ಕಪಕ್ಕದ ಕೊಠಡಿಯಲ್ಲಿದ್ದವರು ಓಡಿ ಬಂದಿದ್ದರಿಂದ ಆತ ತಪ್ಪಿಸಿಕೊಂಡಿದ್ದ. ಸುಜಾತಾ ಬಚಾವಾದರೂ ಆ ಆಘಾತದಿಂದ ಚೆನ್ನೈ ತೊರೆದು ಬೆಳಗಾವಿಯಲ್ಲಿದ್ದ ಪೋಷಕರನ್ನು ಸೇರಿಕೊಂಡಿದ್ದಾಳೆ.

ಇಂತಹ ಘಟನೆಗಳು ಬೃಹತ್‌ ನಗರಗಳಲ್ಲಿ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತವೆ. ವರದಿಯಾಗದ ಘಟನೆಗಳೆಷ್ಟೋ. ಉದ್ಯೋಗಕ್ಕೆ, ಓದಿಗೆ ನಗರಕ್ಕೆ ವಲಸೆ ಬರುವ ಯುವತಿಯರು ಸುರಕ್ಷತೆಯಿಲ್ಲದೇ ಆತಂಕ ಅನುಭವಿಸುವಂತಾಗಿದೆ.

ಈ ನಗರಕ್ಕೆ ವಲಸೆ ಬರುವುದು ಇಂದು ನಿನ್ನೆಯದಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ಶಿಕ್ಷಣ, ಉದ್ಯೋಗದ ಸಲುವಾಗಿ ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ಹಳ್ಳಿಗಳಿಂದ ಮಾತ್ರವಲ್ಲ, ಸಣ್ಣ ಪಟ್ಟಣಗಳು, ಇತರ ಜಿಲ್ಲಾ ಕೇಂದ್ರಗಳು, ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಹೆಣ್ಣುಮಕ್ಕಳು ವಲಸೆ ಹೋಗುತ್ತಿದ್ದಾರೆ. ಶೈಕ್ಷಣಿಕವಾಗಿ ಸಾಧನೆ ಮಾಡುವ ಅಥವಾ ವೃತ್ತಿಯಲ್ಲಿ ಮೇಲೇರುವ ಆಸೆಯಿಂದ ಮಾತ್ರವಲ್ಲ, ಸ್ವತಂತ್ರವಾಗಿ ಬದುಕುವ ಮನೋಭಾವ, ತಮ್ಮದೇ ಆದ ಜೀವನಶೈಲಿ ರೂಢಿಸಿಕೊಳ್ಳುವ ಬಯಕೆಯೂ ಈ ವಲಸೆಗೆ ಕಾರಣ. ಆದರೆ ಇಂತಹ ನಗರಗಳು ಮಹಿಳೆಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಇತ್ತೀಚಿನ ಕೆಲವು ವರ್ಷಗಳಲ್ಲಿ ಉತ್ತರವಿಲ್ಲದೇ ಕಾಡಿಸುತ್ತಿವೆ.

ವಾಸ್ತವ್ಯದ ಕುರಿತ ಆತಂಕ
‘ಅಪರಿಚಿತ ನಗರದಲ್ಲಿ ವಾಸ್ತವ್ಯ ಹಾಗೂ ಸುರಕ್ಷತೆ ಮಹಿಳೆಯರಿಗೆ ಅತ್ಯಂತ ಆತಂಕ ತರುವ ಸಂಗತಿಗಳು’ ಎಂಬುದು ನೆಸ್ಟ್‌ಅವೇ ಟೆಕ್ನಾಲಜೀಸ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಬಹಿರಂಗವಾಗಿದೆ. ಬೆಂಗಳೂರು ಸೇರಿದಂತೆ ಚೆನ್ನೈ, ದೆಹಲಿ, ಹೈದರಾಬಾದ್‌, ಪುಣೆ ಹಾಗೂ ಮುಂಬೈ ನಗರಗಳಲ್ಲಿ ಸುಮಾರು ಒಂದು ಸಾವಿರ ಮಹಿಳೆಯರನ್ನು ಸಮೀಕ್ಷೆ ಮಾಡಿದಾಗ 400ಕ್ಕಿಂತ ಅಧಿಕ ಮಹಿಳೆಯರು ಇಂತಹ ಆತಂಕ ವ್ಯಕ್ತಪಡಿಸಿದರು.

‘ನಾನು ನನ್ನ ತಂದೆ– ತಾಯಿಯ ಅನುಮತಿ ಪಡೆದೇ ಇಲ್ಲಿಗೆ ಬಂದಿದ್ದು. ಆದರೆ ಒಬ್ಬಿಬ್ಬರು ಬಂಧುಗಳಿದ್ದರೂ ಹೆಚ್ಚಿನ ಸಹಾಯವೇನೂ ಆಗಿಲ್ಲ. ಹೀಗಾಗಿ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದೇನೆ. ಕಚೇರಿಯಿಂದ ಎಷ್ಟು ಬೇಗ ಹೊರಟರೂ ರಾತ್ರಿ 9 ಆಗಿಬಿಡುತ್ತದೆ. ಮೆಟ್ರೊ ನಿಲ್ದಾಣದಿಂದ ಐದೇ ನಿಮಿಷ. ಆದರೂ ಅಪರಿಚಿತ ಪುರುಷರು ಹಿಂಬಾಲಿಸಿಕೊಂಡು ಬಂದಿದ್ದಿದೆ. ಒಂದೆರಡು ಬಾರಿ ಓಡಿಕೊಂಡು ಕೊಠಡಿ ಸೇರಿಕೊಂಡಿದ್ದೇನೆ. ಬಾಡಿಗೆ ಮನೆ ಹುಡುಕಿ ತಾಯಿಯನ್ನು ಕರೆಸಿಕೊಂಡರೆ ಹೇಗೆ ಎಂಬ ಆಲೋಚನೆಯೂ ಇದೆ’ ಎನ್ನುವ ರಟ್ಟಿಹಳ್ಳಿಯ ಉಮಾ ದೈವಜ್ಞ, ಸಣ್ಣ ಊರಿನ ತನ್ನಂಥವಳಿಗೆ ಈ ಆತಂಕ ಸಹಜ ಎಂದು ಒಪ್ಪಿಕೊಳ್ಳುತ್ತಾಳೆ.

ಮಾನಸಿಕ ಆಘಾತ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನ ವಿವಿಧ ಮಹಾನಗರಗಳಲ್ಲಿ ಮೂವರಲ್ಲಿ ಒಬ್ಬಳು ಮಹಿಳೆ ದೈಹಿಕ ಅಥವಾ ಲೈಂಗಿಕ ಹಲ್ಲೆಗೆ ಒಳಗಾಗುತ್ತಾಳಂತೆ. ಇದು ಆಕೆಯ ಭಾವನಾತ್ಮಕ ಹಾಗೂ ಮಾನಸಿಕ ಆಘಾತಕ್ಕೆ ಕಾರಣವಾಗಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಉದ್ಯೋಗದ ಸ್ಥಳದಲ್ಲಿ ತೋರಿಸಲು ವಿಫಲಳಾಗುವುದು ಸಹಜ. ಒತ್ತಡದಿಂದ ಓಡಾಟಕ್ಕೇ ಕಡಿವಾಣ ಹಾಕುವಂತಹ ಪರಿಸ್ಥಿತಿ ಇದೆ.

ದೇಶದ ಆರ್ಥಿಕತೆಗೆ ಮಹಿಳೆಯರ ಕೊಡುಗೆ ಪುರುಷರ ಸಮಸಮಕ್ಕೆ ಬರುತ್ತಿದೆ. ಹೀಗಿರುವಾಗ ನಮ್ಮ ನಗರಗಳನ್ನು ಹೆಚ್ಚು ಸುರಕ್ಷಿತ, ಹೆಚ್ಚು ಭದ್ರತೆ, ಹೆಚ್ಚು ಆರಾಮದಾಯಕವಾಗಿ ಮಾಡಬೇಕಾಗುತ್ತದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ, ರಸ್ತೆಯಲ್ಲಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ, ಮನರಂಜನಾ ಸ್ಥಳದಲ್ಲಿ ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ, ಹಿಂಸಾತ್ಮಕ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಜೊತೆಗೆ ಅಶ್ಲೀಲ ಟೀಕೆಗಳನ್ನು ಮಾಡುವುದು, ದುರುಗುಟ್ಟಿ ನೋಡುವುದು ಅಥವಾ ಮೈಕೈ ಮುಟ್ಟುವುದಂತೂ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕಳೆದ ವರ್ಷ ಥಾಮ್ಸನ್‌ ರಾಯಿಟರ್ಸ್‌ ಪ್ರತಿಷ್ಠಾನ ನಡೆಸಿದ ಸಮೀಕ್ಷೆಯಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಹೇಳಿತ್ತು.

ಹಾಗಾದರೆ ನಗರಗಳಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತ ಎಂಬ ಭಾವನೆ ಮೂಡಿಸಬೇಕಾದರೆ ನಗರಾಡಳಿತ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನಗರದಲ್ಲಿ ರಸ್ತೆ ದೀಪ ಇರದ ಪ್ರದೇಶದಲ್ಲೇ ಹೆಚ್ಚು ಅಪರಾಧ ನಡೆಯುವುದು. ಇದು ಬೆಂಗಳೂರು, ಮುಂಬೈ, ಚೆನ್ನೈ, ಭೋಪಾಲ್‌ನಿಂದಲೂ ವರದಿಯಾಗಿದೆ. ಹೀಗಾಗಿ ನಗರಾಡಳಿತ ಬೀದಿ ದೀಪ ಹಾಕಿಸುವ ಬಗ್ಗೆ ಹೆಚ್ಚು ಗಮನ ನೀಡಬೇಕು.

ಜನಸಂದಣಿಯಿದ್ದರೆ ಭಯ ಕಡಿಮೆ
ಹೆಚ್ಚು ಜನರ ಓಡಾಟವಿರುವ ಅಂದರೆ ಕೆಫೆ, ಉಪಾಹಾರಗೃಹ, ಮನರಂಜನ ಸ್ಥಳ, ಪಾರ್ಕ್‌ ಇರುವ ಕಡೆ ಇಂತಹ ಅಪರಾಧ ಕಡಿಮೆ. ಇಂತಹ ಜಾಗಗಳಲ್ಲಿ ಮಹಿಳೆಯರು ಹೆಚ್ಚು ಭದ್ರತೆಯ ಭಾವ ಅನುಭವಿಸುತ್ತಾರೆ ಎನ್ನುತ್ತಾರೆ ಆಪ್ತ ಸಮಾಲೋಚಕಿ ರೇಣುಕಾ ಶ್ರೀನಿವಾಸ್‌.

ನಗರ ಯೋಜನೆ ಹೇಗಿರಬೇಕು?
ಸುರಕ್ಷಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ– ಬಸ್‌, ಮೆಟ್ರೊ ರೈಲು ಪಯಣವನ್ನು ಮಹಿಳೆಯರಿಗೆ ಹೆಚ್ಚು ಸುರಕ್ಷಿತವಾಗುವಂತೆ ನೋಡಿಕೊಳ್ಳಬೇಕು. ಸಂಜೆಯ ನಂತರ ಮಹಿಳೆಯರಿಗೇ ಪ್ರತ್ಯೇಕ ಬಸ್‌ ಸೇವೆ ಒದಗಿಸಿದರೆ ಅನುಕೂಲ. ಟ್ಯಾಕ್ಸಿ, ಆಟೊ, ಕಾರ್‌ಪೂಲ್‌ನಂತಹ ಸೇವೆಯ ಮೇಲೆ ನಿಗಾ ಇಡಬೇಕು.

ಮನೆ, ಇತರ ಕಟ್ಟಡಗಳ ಗೇಟ್‌ ರಸ್ತೆಯ ಕಡೆ ಮುಖ ಮಾಡಿದ್ದರೆ ಹೆಚ್ಚು ಸೂಕ್ತ. ಕಟ್ಟಡದ ಪಕ್ಕ ಅಥವಾ ಹಿಂಭಾಗದಲ್ಲಿ ಮೆಟ್ಟಿಲುಗಳನ್ನಿಟ್ಟು ಏರಿ ಹೋಗುವಾಗ ಹಲವು ಯುವತಿಯರಿಗೆ ಅಹಿತಕರ ಅನುಭವವಾಗಿದ್ದೂ ಇದೆ.

ಕಠಿಣ ಕಾನೂನು

ಒಟ್ಟಿನಲ್ಲಿ ಪುರುಷರನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ನಗರ ಯೋಜನೆಯನ್ನು ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಸ್ತರಿಸಿದರೆ ನಗರಗಳು ಮಹಿಳೆಯರಿಗೆ ಹೆಚ್ಚು ಸುರಕ್ಷಿತ ಎನಿಸಲು ಸಾಧ್ಯ.

* ಮಹಾನಗರಗಳಲ್ಲಿ ಮಹಿಳೆಯರ ಸುರಕ್ಷತೆಗೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದರೂ ಅವು ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೀಗಾಗಿ ಮಹಿಳೆಯರ ಆತಂಕವೂ ಕೊನೆಯಿಲ್ಲದೇ ಮುಂದುವರಿಯುವಂತಾಗಿದೆ.

*ವಿಶೇಷ ಪ್ಯಾನಿಕ್ ಬಟನ್ ಹಾಗೂ ಮಹಿಳಾ ಪೊಲೀಸ್ ಗಸ್ತು ತಂಡಗಳನ್ನು ದೆಹಲಿ, ಬೆಂಗಳೂರು ಸೇರಿದಂತೆ ಎಂಟು ಪ್ರಮುಖ ನಗರಗಳಲ್ಲಿ ವಿಶೇಷ ಮಹಿಳಾ ಸುರಕ್ಷತಾ ಕಾರ್ಯಕ್ರಮದಡಿಯಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವಾಲಯ ಕಳೆದ ವರ್ಷವೇ ಪ್ರಕಟಿಸಿತ್ತು.

*ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆ ಮತ್ತು ಮಕ್ಕಳಿಗಾಗಿ ಬಸ್‌ ನಿಲುಗಡೆ, ಸ್ಮಾರ್ಟ್ ಎಲ್ಇಡಿ ಬೀದಿ ದೀಪಗಳು ಹಾಗೂ ಸಿಸಿ ಟಿವಿಗಳ ಅಳವಡಿಕೆ, ವಿಧಿವಿಜ್ಞಾನ ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಮಹಿಳಾ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ಬರಲಿವೆ.

* ಇದು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಲಕ್ನೋದಲ್ಲಿ 2020-21 ರೊಳಗೆ ಜಾರಿಗೆ ಬರಲಿದೆ.

* ದೇಶದ ಮಹಿಳೆಯರಿಗೆ ಸುರಕ್ಷತೆ ಮತ್ತು ರಕ್ಷಣೆ ನೀಡುವ ಉದ್ದೇಶದಿಂದ 2013 ರಲ್ಲಿ ‘ನಿರ್ಭಯ ನಿಧಿ’ ಸ್ಥಾಪಿಸಲಾಗಿದೆ.

* ಬೆಂಗಳೂರಿನಲ್ಲಿ ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಲಾಗಿದ್ದು, ಇಂತಹ ದೌರ್ಜನ್ಯದ ಬಗ್ಗೆ ದೂರು ನೀಡಿದರೆ ನೆರವಿಗೆ ಧಾವಿಸುತ್ತಾರೆ.

* ಮಹಿಳೆಯರ ಸುರಕ್ಷತೆಗೆ ಬೇರೆ ಬೇರೆ ನಗರಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ಗಮನಾರ್ಹ. ದೆಹಲಿಯಲ್ಲಿ ಬಸ್‌ನಲ್ಲಿ ಪಯಣಿಸುವಾಗ ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚಾಲಕ ಹಾಗೂ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ. ಇದೇ ರೀತಿ ಅಲ್ಲಿ ಟ್ಯಾಕ್ಸಿ ಚಾಲಕಿಯರಿಗೂ ಭದ್ರತೆ ಒದಗಿಸಲಾಗಿದೆ.

* ಹೈದರಾಬಾದ್‌ನಲ್ಲಿ ‘ಷೀ ಟೀಮ್‌’ಗಳನ್ನು ರಚಿಸಲಾಗಿದ್ದು, ಮಹಿಳೆಯರು ಸಾವರ್ಜನಿಕ ಸ್ಥಳದಲ್ಲಿ ಪುಂಡರಿಂದ ತೊಂದರೆಯಾದರೆ ಕೂಡಲೇ ಈ ತಂಡಗಳು ನೆರವಿಗೆ ಧಾವಿಸುತ್ತವೆ.

ಪ್ರತಿಕ್ರಿಯಿಸಿ (+)