ಗುರುವಾರ , ಅಕ್ಟೋಬರ್ 22, 2020
22 °C

ಮಿಸೆಸ್‌ ಸೌತ್‌ ಇಂಡಿಯಾ ಶ್ರೀದೇವಿಗೆ ಆತ್ಮವಿಶ್ವಾಸವೇ ಗೆಲುವು

ರೇಷ್ಮಾ Updated:

ಅಕ್ಷರ ಗಾತ್ರ : | |

Sridevi Appachcha

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ‘ಮಿಸೆಸ್ ಸೌತ್‌ ಇಂಡಿಯಾ’ ಫ್ಯಾಷನ್‌ ಷೋ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ‘ರೀ ಬರ್ತ್‌ ಮಾಡೆಲಿಂಗ್ ಅಕಾಡೆಮಿ’ ಆಯೋಜಿಸಿರುವ‌  ರಾಜ್ಯಮಟ್ಟದ ಈ ಷೋನಲ್ಲಿ ಆಯ್ಕೆಯಾದ 5 ಮಂದಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶ ಗಿಟ್ಟಿಸಿಕೊಂಡರು. ಈ ಬಾರಿ ರಾಷ್ಟ್ರಮಟ್ಟದ ಸ್ಪರ್ಧೆ ಗೋವಾದಲ್ಲಿ ನಡೆಯಲಿದೆ. ಈ ಷೋನಲ್ಲಿ ‘ಮಿಸೆಸ್ ಕರ್ನಾಟಕ ಕರ್ವಿ’ ವಿಜೇತರಾಗಿದ್ದ ಶ್ರೀದೇವಿ ಅಪ್ಪಚ್ಚ ಅವರು ತಮ್ಮ ಮಾಡೆಲಿಂಗ್ ಕ್ಷೇತ್ರದ ಪಯಣದ ಕುರಿತು ‘ಪ್ರಜಾಪ್ಲಸ್‌’ನೊಂದಿಗೆ ಮಾತನಾಡಿದ್ದಾರೆ. 

ಮಾಡೆಲಿಂಗ್‌ನಲ್ಲಿ ಆಸಕ್ತಿ ಮೂಡಲು ಕಾರಣ?

ನನಗೆ ಬಾಲ್ಯದಿಂದಲೂ ಮಾಡೆಲಿಂಗ್‌ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆ ಇತ್ತು. ಚಿಕ್ಕವಳಿದ್ದಾಗಲೇ ಮೇಕಪ್‌ ಮಾಡಿಕೊಳ್ಳುತ್ತಿದೆ, ಮಾಡೆಲ್‌ಗಳಂತೆ ರ‍್ಯಾಂಪ್‌ವಾಕ್‌ ಮಾಡುತ್ತಿದ್ದೆ. ಆದರೆ ನಾನು ದಪ್ಪಗಿದ್ದ ಕಾರಣ ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಸಿಗಲಿಲ್ಲ. ಸಿನಿಮಾಗಳಿಂದ ಅವಕಾಶ ಬಂದರೂ ನನಗೆ ಆ ಕ್ಷೇತ್ರ ಇಷ್ಟವಿರಲಿಲ್ಲ. ಈಗ ಮದುವೆಯಾಗಿ ಮಗು ಆದ ಮೇಲೆ ಮತ್ತೆ ಪ್ರಯತ್ನ ಮಾಡಿದೆ. ಈ ಪ್ರಯತ್ನಕ್ಕೆ ಆಯೋಜಕರಾದ ನಂದಿನಿ ನಾಗರಾಜ್ ಸಹಾಯ ಮಾಡಿದ್ದರು. ಪ್ಲಸ್‌ಸೈಜ್‌ನವರೂ ಮಾಡೆಲಿಂಗ್‌ ಮಾಡಬಹುದು ಎಂದು ಕೇಳಿದ್ದೆ. ಮನೆಯವರ ಸಹಕಾರದಿಂದ ಈ ಕ್ಷೇತ್ರಕ್ಕೆ ಬಂದು ಈಗ ರಾಜ್ಯ ಮಟ್ಟದ ಷೋನಲ್ಲಿ ವಿಜೇತಳಾಗಿದ್ದೇನೆ.

ಮಾಡೆಲ್‌ ಆಗಲು ಮುಖ್ಯ ಮಾನದಂಡ ಏನು?

ಮಾಡೆಲ್‌ ಆಗಲು ಆತ್ಮವಿಶ್ವಾಸ ತುಂಬಾ ಮುಖ್ಯ. ಇಲ್ಲಿ ಬಟ್ಟೆ, ಆಕಾರ, ಬಣ್ಣ ಎಲ್ಲವೂ ಮುಖ್ಯ. ಪ್ರೇಕ್ಷಕರ ಮುಂದೆ ಹೇಗೆ ಬೇಕಾದರೂ ನಡೆಯಬಲ್ಲೆ, ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸ ಹಾಗೂ ನಂಬಿಕೆ ಮೊದಲು ನಮ್ಮೊಳಗಿರಬೇಕು. ನಮ್ಮಿಂದ ಇದು ಸಾಧ್ಯ ಎಂಬುದು ಮನಸ್ಸಿನಲ್ಲಿ ಮೂಡಿದರೆ ಆಗ ಮಾಡೆಲಿಂಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯ.

ಮಾಡೆಲಿಂಗ್ ಕ್ಷೇತ್ರಕ್ಕೆ ಬರುವವರಿಗೆ ನಿಮ್ಮ ಕಿವಿ ಮಾತು?‌‌

ಮಾಡೆಲಿಂಗ್ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆ ಇರಿಸಿಕೊಂಡಿರುವವರಿಗೆ, ಅವಕಾಶಗಳು ಸಿಗದೇ ಇರುವವರಿಗೆ ನಾನು ಹೇಳುವುದು ಏನೆಂದರೆ ವಯಸ್ಸು, ದೇಹಾಕಾರ ಯಾವುದೇ ಇರಲಿ ಈ ಕ್ಷೇತ್ರದಲ್ಲಿ ಸಾಧಿಸುತ್ತೇನೆ ಎಂಬ ಕನಸು ಹೊಂದಿರುವುದು ಮುಖ್ಯ. ಮಾಡೆಲಿಂಗ್‌ನಲ್ಲಿ ನಿಮಗೆ ಆಸಕ್ತಿ ಇದ್ದರೆ ಅದರ ಮೇಲೆ ಒಲವಿಟ್ಟು ಮುಂದುವರಿಯಬೇಕು. ಒಂದು ವರ್ಷ ಮಾಡಿ ನಂತರ ನನಗೆ ಇಷ್ಟವಿಲ್ಲ ಎಂದು ಬಿಡಬಾರದು. ಮಾಡೆಲಿಂಗ್ ಎನ್ನುವುದು ಒಂದು ಕಲೆ, ಅದು ಎಲ್ಲರಿಗೂ ಒಲಿಯುವುದಿಲ್ಲ. ಒಮ್ಮೆ ಮಾಡೆಲ್ ಎನ್ನಿಸಿಕೊಂಡವರು ಮುಂದೆ ಬರುವವರಿಗೆ ಮಾರ್ಗದರ್ಶಿಯಾಗಿ ಇರಬೇಕು. 

ಬಾಡಿ ಶೇಮಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ?

ಜಗತ್ತಿನಲ್ಲಿ ದಪ್ಪಗಿರುವವರನ್ನು, ಬೆಳ್ಳಗಿರುವವರನ್ನು, ತೆಳ್ಳಗಿರುವವರನ್ನು ಎಲ್ಲರನ್ನೂ ಸೃಷ್ಟಿ ಮಾಡಿದ್ದು ಆ ದೇವರು. ಎಲ್ಲರನ್ನೂ ಒಬ್ಬನೇ ಸೃಷ್ಟಿ ಮಾಡಿದ್ದು ಎಂದ ಮೇಲೆ ನಮ್ಮ ಸೃಷ್ಟಿಗೆ ಒಂದು ಕಾರಣವಿರುತ್ತದೆ. ಅದೇನೇ ಇರಲಿ ಅದನ್ನೆಲ್ಲಾ ಮೆಟ್ಟಿ ನಡೆಯಬೇಕು. ದಪ್ಪಗಿದ್ದೇನೆ, ಕಪ್ಪಗಿದ್ದೇನೆ ಎಂಬುದನ್ನೆಲ್ಲಾ ತಲೆಯಿಂದ ತೆಗೆದು ಹಾಕಿ ಮುಂದೆ ನಡೆಯಬೇಕು. ಬಾಡಿ ಶೇಮಿಂಗ್ ಅನುಭವಿಸಿದವರಿಗೆ ನಾವು ಹೇಳುವುದು ಏನೆಂದರೆ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ದಾರಿಯಲ್ಲಿ ಸಾಗಬೇಕು. ಬೇರೆಯವರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಯೋಚಿಸುತ್ತಾ ಕೂರಬಾರದು. ನಮ್ಮ ಕಣ್ಣಲ್ಲಿ ಆತ್ಮವಿಶ್ವಾಸ ಇದ್ದರೆ ಯಾರೂ ನಮ್ಮ ಬಗ್ಗೆ ಕೀಳಾಗಿ ಮಾತನಾಡೊಲ್ಲ.

ವೈಯಕ್ತಿಕ ಜೀವನದ ಬಗ್ಗೆ..

ನಾನು ಕೊಡಗಿನವಳು. ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ವಡಾಫೋನ್‌ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದೆ. ಮಾಡೆಲಿಂಗ್ ಮೇಲಿನ ಪ್ರೀತಿಯಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ನನಗೆ ಮದುವೆಯಾಗಿ 14 ವರ್ಷವಾಗಿದೆ. ಹನ್ನೊಂದು ವರ್ಷದ ಮಗಳಿದ್ದಾಳೆ.

ಭವಿಷ್ಯದ ಯೋಜನೆಗಳು?

ಸದ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದೇನೆ. ನನಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜೇತಳಾಗಬೇಕೆಂಬ ಆಸೆ ಇದೆ. ಆ ಕಾರಣಕ್ಕೆ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು