ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಆಸಕ್ತಿತೀರದ ಗೊಂದಲ

Last Updated 2 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ನಾನು ಬಾಲ್ಯದಿಂದಲೇ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದೆ. ಯಾವುದೇ ಚಟುವಟಿಕೆಯಲ್ಲೂ ಎಂದಿಗೂ ನಿರಾಸಕ್ತಿ ಎಂಬುದು ಇರಲಿಲ್ಲ. ಆದರೆ, ಈಗ ನನಗೆ ನನ್ನ ಸ್ವಂತ ಹವ್ಯಾಸ ಯಾವುದು ಎಂದು ತಿಳಿದುಕೊಳ್ಳುವಲ್ಲಿ ಗೊಂದಲವಾಗುತ್ತಿದೆ. ನನ್ನ ಸ್ವಂತ ಆಸಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡಿ.

ಹೆಸರು, ಊರು ಬೇಡ

ನಮ್ಮ ಮನಸ್ಸಿಗೆ ಖುಷಿ ಕೊಡುವ ಹವ್ಯಾಸ ಹಾಗೂ ನಾವು ಮಾಡುವ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಹಾಯ ಮಾಡುತ್ತವೆ. ಜೊತೆಗೆ ಅವು ನಮ್ಮ ಜೀವನದ ಉದ್ದೇಶವನ್ನು ಅರ್ಥ ಮಾಡಿಸುತ್ತವೆ. ಕೆಲವೊಮ್ಮೆ ನಾವು ಯಾವ ಹವ್ಯಾಸವನ್ನು ಮುಂದುವರಿಸಬೇಕು ಎಂಬುದರ ಬಗ್ಗೆ ನಮಗೆ ಗೊಂದಲವಿರುತ್ತದೆ. ಆದರೆ ಯಾವ ಚಟುವಟಿಕೆ ನಮಗೆ ಒತ್ತಡ ತರುವುದಿಲ್ಲವೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮ್ಮಿಂದ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ನಿಮಗೆ ನೀವೇ ಒತ್ತಡ ತಂದುಕೊಳ್ಳಬೇಡಿ. ಕೆಲ ಸಮಯ ವಿರಾಮ ತೆಗೆದುಕೊಳ್ಳಿ. ಮತ್ತೆ ಎಲ್ಲವನ್ನೂ ಹೊಸತಾಗಿ ಆರಂಭಿಸಿ. ನಿಮಗೆ ಯಾವ ಚಟುವಟಿಕೆ ಮಾಡಲು ಇಷ್ಟ ಹಾಗೂ ಯಾವುದು ನಿಮಗೆ ಖುಷಿ ಕೊಡುತ್ತದೆ ಎಂಬುದನ್ನು ಗಮನಿಸಿ. ಅದನ್ನು ಆಯ್ಕೆ ಮಾಡಿಕೊಂಡು ಅದನ್ನು ಕೆಲ ಕಾಲ ಮಾಡಿ. ನೀವು ಅದಕ್ಕೆ ಹೊಂದಿಕೊಂಡಿದ್ದೀರಾ ಎಂಬುದನ್ನು ಗಮನಿಸಿ. ಯಾವುದನ್ನೂ ಅತಿಯಾಗಿ ಮಾಡಬೇಡಿ. ನಿಮಗೆ ಎಲ್ಲಾ ಚಟುವಟಿಕೆಯನ್ನು ಒಂದೇ ಬಾರಿಗೆ ಮಾಡುವ ಸಾಮರ್ಥ್ಯವಿದ್ದರೂ ಒಂದು ಬಾರಿಗೆ ಒಂದನ್ನೇ ಮಾಡಿ. ನೀವು ಬಾಲ್ಯದಲ್ಲಿ ಇಷ್ಟಪಟ್ಟು ಮಾಡಿದ ಚಟುವಟಿಕೆಗಳನ್ನು ನೆನಪು ಮಾಡಿಕೊಳ್ಳಿ ಮತ್ತು ಅದನ್ನು ‍ಪುನರಾವರ್ತಿಸಲು ಪ್ರಯತ್ನ ಮಾಡಿ. ಆಗ ನೀವು ಚಟುವಟಿಕೆಗಳನ್ನು ಹವ್ಯಾಸವನ್ನಾಗಿ ಪರಿವರ್ತಿಸಿಕೊಂಡು ಅದನ್ನು ನಿಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದು. ಅದರಂತೆಯೇ ನಿಮ್ಮ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿಕೊಳ್ಳಿ. ಆಗ ಖಂಡಿತ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ತಿರ್ಮಾನಕ್ಕೆ ಬರುತ್ತೀರಿ. ಬಹು ಕಾಲ ಉಳಿಯುವ ಹವ್ಯಾಸವನ್ನು ರೂಢಿಸಿಕೊಳ್ಳಿ.

ನನಗೆ ಮನೆಯಲ್ಲಿ ಹುಡುಗನನ್ನು ನೋಡುತ್ತಿದ್ದಾರೆ. ಆದರೆ ನಾನು ನಮ್ಮ ಸಂಬಂಧಿಕರೊಬ್ಬರನ್ನು ಪ್ರೀತಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಎಲ್ಲಾ ವಿಷಯ ಗೊತ್ತಿದೆ. ಆದರೆ ಮದುವೆಗೆ ಮುಂದುವರಿಯುತ್ತಿಲ್ಲ. ನನ್ನ ತಂದೆ ಮದುವೆ ವಿಷಯವಾಗಿ ನನ್ನ ಬಳಿ ಏನನ್ನೂ ಮಾತನಾಡುತ್ತಿಲ್ಲ. ಈ ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ನೆಮ್ಮದಿ ಇಲ್ಲದಂತಾಗಿದೆ.

ಹೆಸರು, ಊರು ಬೇಡ

ನಿಮ್ಮ ಮನೆಯ ಪ್ರತಿಯೊಬ್ಬರಿಗೂ ನಿಮ್ಮ ಪ್ರೀತಿ ಹಾಗೂ ನೀವು ಆ ಹುಡುಗನನ್ನೇ ಮದುವೆಯಾಗಬೇಕು ಎಂದು ಬಯಸುತ್ತಿರುವುದು ತಿಳಿದಿದೆ. ಜೊತೆಗೆ ಆ ಹುಡುಗನೂ ನಿಮ್ಮನ್ನು ಪ್ರೀತಿಸಿ, ಮದುವೆಯಾಗಲು ಬಯಸುತ್ತಿದ್ದರೆ ಅವರೂ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ತಂದೆ–ತಾಯಿಗಳ ಜೊತೆ ಮಾತನಾಡಬೇಕು. ಮೊದಲು ಅವರು ನಿಮ್ಮನ್ನು ಮದುವೆಯಾಗಲು ಬಯಸುತ್ತಿದ್ದಾರಾ ಎಂದು ತಿಳಿದುಕೊಳ್ಳಿ. ನಂತರ ಅವರ ತಂದೆ–ತಾಯಿ ಜೊತೆ ನಿಮ್ಮ ಪ್ರೀತಿ ಬಗ್ಗೆ ತಿಳಿಸಿ ಮದುವೆ ಮಾತುಕತೆಯಾಡಲು ಅವರ ತಂದೆ–ತಾಯಿಯನ್ನು ನಿಮ್ಮ ಮನೆಗೆ ಕರೆ ತರಲು ಹೇಳಿ. ಈ ವಿಧಾನದಿಂದ ವಿಷಯವು ಸುಲಭವಾಗುತ್ತದೆ. ಸಂವಹನದಲ್ಲಿನ ಸ್ವಷ್ಟತೆಯಿಂದ ಸಂಬಂಧವೂ ಆರೋಗ್ಯಕರವಾಗಿರುತ್ತದೆ. ಒಂದೊಮ್ಮೆ ಆ ಹುಡುಗನಿಗೆ ಅವರ ತಂದೆ–ತಾಯಿಯ ಜೊತೆ ಮಾತನಾಡಲು ಸಾಧ್ಯವಾಗದಿದ್ದರೆ ಆಗ ಅವರು ನಿಮ್ಮ ತಂದೆ–ತಾಯಿಗಳ ಜೊತೆ ಮಾತನಾಡಲು ಮುಂದೆ ಬರಬೇಕು ಮತ್ತು ನಿರ್ಧಾರ ತೆಗೆದುಕೊಳ್ಳಬೇಕು. ಕುಟುಂಬದವರ ಸಹಕಾರವೂ ತುಂಬಾ ಮುಖ್ಯ. ಆರೋಗ್ಯಕರ ಹಾಗೂ ಪ್ರೌಢ ಸಂವಹನ ಮತ್ತು ಸ್ವಷ್ಟ ಮನಃಸ್ಥಿತಿಯೊಂದಿಗೆ ಈ ವಿಷಯದಲ್ಲಿ ಮುಂದುವರಿಯಿರಿ.

ನಾನು ಪ್ರಥಮ ಪಿಯುಸಿ ಓದುತ್ತಿದ್ದೇನೆ. ನನಗೆ ಓದುವಾಗ ತಲೆಯಲ್ಲಿ ಕೆಟ್ಟ ಕೆಟ್ಟ ಯೋಚನೆಗಳು ಬರುತ್ತವೆ. ಚೆನ್ನಾಗಿ ಓದಬೇಕು ಎಂದುಕೊಂಡರೂ ಸಾಧ್ಯವಾಗುವುದಿಲ್ಲ. ತುಂಬ ಓದುವ ಆಸೆ ಇದೆ. ಆದರೆ ಆಗುತ್ತಿಲ್ಲ. ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

ಹೆಸರು, ಊರು ಬೇಡ

ನಿಮ್ಮ ತಲೆಯಲ್ಲಿ ಮೂಡುವ ಋಣಾತ್ಮಕ ಯೋಚನೆಗಳನ್ನು ಗುರುತಿಸಿ. ಆ ಯೋಚನೆಗಳನ್ನು ಯಾವ ಅಂಶ ಪ್ರಚೋದಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಧನಾತ್ಮಕವಾಗಿ ಯೋಚಿಸಿ ಹಾಗೂ ಬೇರೆ ಕೆಲಸಗಳನ್ನು ಮಾಡುವ ಮೂಲಕ ತಕ್ಷಣವೇ ಆ ಯೋಚನೆಗಳನ್ನು ತಲೆಯಿಂದ ಓಡಿಸಲು ಪ್ರಯತ್ನಿಸಿ ಮತ್ತು ಇದನ್ನು ನಿರಂತರವಾಗಿ ಮಾಡಿ. ನೀವು ಬಳಸುವ ಪದಗಳ ಮೇಲೆ ಗಮನವಿಡಿ. ಯಾಕೆಂದರೆ ನೀವು ಬಳಸುವ ಪದಗಳು ಬೇರೆಯವರ ಜೊತೆ ಹೇಗೆ ಗಟ್ಟಿಯಾಗಿ ಮಾತನಾಡುತ್ತೀರಿ ಮತ್ತು ನಿಮ್ಮೊಳಗೆ ನೀವೇ ಮಾನಸಿಕವಾಗಿ ಹಾಗೂ ಮೌಖಿಕವಾಗಿ ಹೇಗೆ ಮಾತನಾಡಿಕೊಳ್ಳುತ್ತೀರಿ ಎಂಬುದನ್ನು ಒಳಗೊಂಡಿರುತ್ತದೆ. ಕೆಟ್ಟ ಹಾಗೂ ಒರಟು ಪದಗಳನ್ನು ಒಳ್ಳೆಯ ಹಾಗೂ ಸೌಮ್ಯ ಪದಗಳಿಗೆ ಪರಿವರ್ತಿಸಿಕೊಳ್ಳಿ. ಅಂತಿಮವಾಗಿ ಧನಾತ್ಮಕ ಪದಗಳನ್ನು ಬಳಸಿ.

ಒಳ್ಳೆಯ ಯೋಚನೆಗಳನ್ನು ಮಾಡುವ ಮೂಲಕ ದಿನವನ್ನು ಆರಂಭಿಸಿ. ಅದು ಪರಿಮಳಭರಿತ ಕಾಫಿ ಹೀರುವಾಗ ಇರಬಹುದು ಅಥವಾ ನಿಮ್ಮ ಮನಸ್ಸಿಗೆ ಇಷ್ಟವಾಗುವ ಹಾಡು ಕೇಳುವ ಮೂಲಕವಾದರೂ ಆಗಿರಬಹುದು. ಕಾಫಿ ಚೆನ್ನಾಗಿದೆ ಅಥವಾ ಹಾಡು ಚೆನ್ನಾಗಿದೆ ಎಂದು ನಿಮ್ಮಲ್ಲೇ ಹೇಳಿಕೊಳ್ಳುವುದರಿಂದ ಆ ದಿನ ಧನಾತ್ಮಕವಾಗಿ ಸಂತಸದಿಂದ ಆರಂಭವಾಗುತ್ತದೆ. ಇದರಿಂದ ನಿಮ್ಮಲ್ಲಿ ಋಣಾತ್ಮಕ ಯೋಚನೆ ಬರಲು ಸಾಧ್ಯವಿಲ್ಲ. ನಿಮಗೆ ತುಂಬಾ ಒತ್ತಡ ಎನ್ನಿಸಿದಾಗ ಒಂದು ಸಣ್ಣ ವಿರಾಮ ಪಡೆದುಕೊಳ್ಳಿ. ಒತ್ತಡ ನೀಡಿದ ವಿಷಯವನ್ನು ಹೊರತು ಪಡಿಸಿ ಬೇರೆ ವಿಷಯದತ್ತ ಗಮನ ನೀಡಿ. ಆರೋಗ್ಯಕರ ಹವ್ಯಾಸವನ್ನು ರೂಢಿಸಿಕೊಳ್ಳಿ. ಪ್ರತಿದಿನ ಧ್ಯಾನ ಹಾಗೂ ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮನ್ನು ಶಾಂತವಾಗಿರಿಸುತ್ತದೆ. ನಿಮ್ಮ ಋಣಾತ್ಮಕ ಯೋಚನೆಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಒಬ್ಬ ಒಳ್ಳೆಯ ಆಪ್ತಸಮಾಲೋಚಕರ ಬಳಿ ಒಂದೆರೆಡು ಸೆಷನ್ ಪಡೆದುಕೊಳ್ಳಿ. ಅದರಿಂದ ಖಂಡಿತ ನಿಮಗೆ ಸಹಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT