ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮಹಿಳಾ ವಿಜ್ಞಾನಿಗಳ ವಿಶಿಷ್ಟ ಕ್ಯಾಲೆಂಡರ್

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅಭಯ ಮಹಿಳಾ ವೇದಿಕೆ ಸದಸ್ಯೆಯರ
Last Updated 13 ಮಾರ್ಚ್ 2021, 13:31 IST
ಅಕ್ಷರ ಗಾತ್ರ

ವಿಜ್ಞಾನ, ಸಂಶೋಧನಾ ಮತ್ತು ಸಾಮಾಜಿಕ ಕ್ಷೇತ್ರದ ಸಾಧಕರ ಪಟ್ಟಿ ಮಾಡುತ್ತ ಹೋದರೆ, ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರ ಹೆಸರು ಹೆಚ್ಚು ಕಂಡು ಬರುವುದಿಲ್ಲ. ಬಹುತೇಕ ಸಂದರ್ಭದಲ್ಲಿ ಮಹಿಳೆಯರು ಆಯಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದರೂ ಬೇರೆ ಬೇರೆ ಕಾರಣಗಳಿಂದ ಬೆಳಕಿಗೆ ಬರುವುದಿಲ್ಲ. ದಾಖಲೆಗಳು ಕೂಡ ಸಿಗುವುದಿಲ್ಲ!

ಮಹಿಳೆಯರಿಗೆ ಸೂಕ್ತ ನ್ಯಾಯ ಸಿಗಬೇಕು ಮತ್ತು ಅವರ ಕೊಡುಗೆ, ಸಾಧನೆಗಳು ಎಲ್ಲರಿಗೂ ತಿಳಿಯಬೇಕು ಎಂಬ ಕಾಳಜಿ ಅಭಯ ಮಹಿಳಾ ವೇದಿಕೆಯ ಸದಸ್ಯೆಯರದ್ದು. ಈ ಕಾರಣದಿಂದಲೇ ಅವರು ಜಗತ್ತಿನ ಬಹುತೇಕ ದೇಶಗಳ ಮಹಿಳಾ ವಿಜ್ಞಾನಿಗಳದ್ದೇ ವಿಶೇಷ ಕ್ಯಾಲೆಂಡರ್ ಹೊರತಂದಿದ್ದಾರೆ.

ಬದುಕು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನಡಿ ಕ್ಯಾಲೆಂಡರ್ ಹೊರತಂದಿರುವ ವೇದಿಕೆಯ ಸದಸ್ಯೆಯರು ಆಯಾ ಮಹಿಳಾ ವಿಜ್ಞಾನಿಗಳ ಜನ್ಮದಿನದಂದು ಅವರ ಭಾವಚಿತ್ರ, ದೇಶ ಮತ್ತು ಸಂಶೋಧನೆಯ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಒಟ್ಟು 366 ಮಹಿಳಾ ವಿಜ್ಞಾನಿಗಳ ಅಪರೂಪದ ವಿವರ ಸಂಗ್ರಹವಿದೆ.

ಆಸಕ್ತಿಕರ ಸಂಗತಿಯೆಂದರೆ, ಈ ಕ್ಯಾಲೆಂಡರ್‌ನಲ್ಲಿ ಎಲ್ಲಿಯೂ 2021ರ ವರ್ಷದ ಪ್ರಸ್ತಾಪವಿಲ್ಲ. ಇದನ್ನು ಸಾರ್ವಕಾಲಿಕ ಮತ್ತು ಸಂಪೂರ್ಣವಾಗಿ ಮಹಿಳಾ ವಿಜ್ಞಾನಿಗಳಿಗೆ ಸಮರ್ಪಿಸಲಾಗಿದೆ. ಎಲ್ಲರ ಚಿತ್ರಗಳು ಮತ್ತು ಮಾಹಿತಿ ಸಿಗುವುದು ಕಷ್ಟ. ಆದರೆ, ಅವುಗಳ ಸಂಗ್ರಹಣೆಗಾಗಿ ವೇದಿಕೆಯ ಸದಸ್ಯೆಯರು 6 ತಿಂಗಳಿಗೂ ಹೆಚ್ಚು ಸಮಯ ಶ್ರಮಿಸಿದರು.

ಪ್ರತಿ ವರ್ಷ ಮಹಿಳೆಯರ ಕುರಿತು ಬೇರೆ ಬೇರೆ ಪರಿಕಲ್ಪನೆಯೊಂದಿಗೆ ವೇದಿಕೆಯ ಸದಸ್ಯರು ಜನವರಿ ವೇಳೆಗೆ ಕ್ಯಾಲೆಂಡರ್ ಹೊರತರುತ್ತಿದ್ದರು. ಆದರೆ, ಈ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್‌ 8ರಂದು ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು, ಎಲ್ಲರಿಗೂ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ಈ ಸಲವೂ ಜನವರಿಯಲ್ಲೇ ಕ್ಯಾಲೆಂಡರ್‌ ಹೊರತರಲು ಪ್ರಯತ್ನಿಸಿದೆವು. ಆದರೆ, ಕೋವಿಡ್, ಮುದ್ರಣ ಸಮಸ್ಯೆ ಮತ್ತು ಇನ್ನಿತರ ಕಾರಣಗಳಿಂದ ಸಾಧ್ಯವಾಗಲಿಲ್ಲ. ಎರಡು ತಿಂಗಳು ವಿಳಂಬವಾದರೂ ತೊಂದರೆಯಿಲ್ಲ, ಮಾರ್ಚ್‌ 8ರಂದು ಕ್ಯಾಲೆಂಡರ್ ಬಿಡುಗಡೆ ಮಾಡಿದೆವು. ನಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ವೇದಿಕೆಯ ಸಂಚಾಲಕಿ ಡಾ. ಜಿ.ಸುಧಾ ತಿಳಿಸುತ್ತಾರೆ.

‘1300ನೇ ಇಸವಿಯಿಂದ ಈಗಿನವರೆಗಿನ ಬಹುತೇಕ ಮಹಿಳಾ ವಿಜ್ಞಾನಿಗಳ ಚಿತ್ರ, ಮಾಹಿತಿಯನ್ನು ದಾಖಲಿಸಿದ್ದೇವೆ. ಅಮೆರಿಕ, ರಷ್ಯಾ ಅಲ್ಲದೇ ಅಲ್ಲದೇ ಟ್ರಿನಿಡಾಡ್, ಟೊಬ್ಯಾಗೊ, ಜಪಾನ್‌ನಂತಹ ದೇಶಗಳ ವಿಜ್ಞಾನಿಗಳ ಮಾಹಿತಿ ಕಲೆ ಹಾಕಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ಸಾಧಕರೂ ಇದ್ದಾರೆ’ ಎಂದು ಅವರು ವಿವರಿಸುತ್ತಾರೆ.

‘ಮಾಹಿತಿ ಸಂಗ್ರಹಣೆ ತುಂಬಾ ಕಷ್ಟದ ಕೆಲಸವಾಗಿದ್ದು, ಎಲ್ಲವೂ ಅಂತರ್ಜಾಲದಲ್ಲಿ ಲಭ್ಯವಾಗಲಿಲ್ಲ. ಕೆಲ ವಿಜ್ಞಾನ ಪುಸ್ತಕಗಳು, ಸಂಶೋಧನಾ ಗ್ರಂಥಗಳು ಅಲ್ಲದೇ ಕಿರುಪುಸ್ತಕಗಳಿಂದ ಮಾಹಿತಿ ಸಂಗ್ರಹಿಸಿದೆವು. ಕೆಲ ವಿಜ್ಞಾನಿಗಳನ್ನೂ ಸಂಪರ್ಕಿಸಿದೆವು. ಎಲ್ಲರ ಸಾಧನೆ ಮತ್ತು ಕೊಡುಗೆ ದಾಖಲಿಸುವುದು ತುಂಬಾ ಮುಖ್ಯವಾಗಿತ್ತು’ ಎನ್ನುತ್ತಾರೆ ಅವರು.

‘ಒಬ್ಬೊಬ್ಬ ವಿಜ್ಞಾನಿಯ ಮಾಹಿತಿ ಕಲೆ ಹಾಕುತ್ತ ಸಾಗಿದಂತೆ, ಅವರು ಎದುರಿಸಿದ ಸವಾಲು, ಕೈಗೊಂಡ ಹೋರಾಟ, ತೋರಿದ ಧೈರ್ಯ, ಛಲ ಎಲ್ಲವೂ ಅಚ್ಚರಿ ಮೂಡಿಸಿತು. 1300 ರಿಂದ 1900ರವರೆಗಿನ ಕಾಲಘಟ್ಟದಲ್ಲಿ ಮಹಿಳೆಯರು ನೆಮ್ಮದಿಯಿಂದ ಬದುಕುವುದಿರಲಿ, ಬದುಕಲು ಶಿಕ್ಷಣ ಕೂಡ ಪಡೆಯುವಂತಿರಲಿಲ್ಲ’ ಎಂದರು.

ಈ ಕ್ಯಾಲೆಂಡರ್‌ ಸಿದ್ಧಪಡಿಸುವಲ್ಲಿ ಡಾ. ಜಿ.ಸುಧಾ ಅವರೊಂದಿಗೆ ಲೀಲಾ ಅಪ್ಪಾಜಿ, ವಿಜಯಲಕ್ಷ್ಮಿ, ಅಶ್ವಿನಿ.ವಿ, ನಿಲೀನಾ ಥಾಮಸ್ ಮತ್ತು ಹಾರಿಕಾ ಗಗ್ಗರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರೂ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಊರುಗಳಲ್ಲಿದ್ದಾರೆ. ತಮ್ಮ ದೈನಂದಿನ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಈ ಕ್ಯಾಲೆಂಡರ್ ಸಿದ್ಧಪಡಿಸಿದ್ದಾರೆ.

ಈ ಕ್ಯಾಲೆಂಡರ್ ಬೇಕಿದ್ದಲ್ಲಿ, ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9448160213

ಇ–ಮೇಲ್ ವಿಳಾಸ: abhayamahilavedike2021@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT