ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ಬಂಧನಕ್ಕೂ ದಿಗ್ಬಂಧನವೇ!

Last Updated 27 ಜೂನ್ 2020, 6:44 IST
ಅಕ್ಷರ ಗಾತ್ರ
ADVERTISEMENT
""

‘ಮದುವೆ ಎನ್ನೋದು ಒಬ್ಬರ ಬದುಕಿನಲ್ಲಿ ತುಂಬಾ ಮುಖ್ಯ. ನನಗಂತೂ ಬಾಳ ಸಂಗಾತಿ ಜೊತೆ ಹೆಜ್ಜೆ ಹಾಕುವ ಕನಸೇ ಖುಷಿ ಕೊಡುತ್ತಿತ್ತು. ಮನೆಯವರು ಹುಡುಗನನ್ನು ಹುಡುಕಿ ನಿಶ್ಚಿತಾರ್ಥ ಕೂಡ ಮಾಡಿದ್ದರು. ಆದರೆ ಈ ಲಾಕ್‌ಡೌನ್‌ ಮದುವೆಯ ಕನಸನ್ನೆಲ್ಲ ನುಚ್ಚುನೂರು ಮಾಡಿಬಿಟ್ಟಿದೆ’ ಎಂದು ನಿಟ್ಟುಸಿರು ಬಿಡುವ ದೀಪಿಕಾ ರಾವ್‌, ‘ಸರಳವಾಗಿ ಮನೆಯಲ್ಲೋ, ದೇವಸ್ಥಾನದಲ್ಲೋ ಮದುವೆಯಾಗೋಣ ಎಂದರೆ ಹುಡುಗನ ಕಡೆಯವರಿಗೆ ಇಷ್ಟವಿಲ್ಲ. ಕೊರೊನಾ ಕಡಿಮೆಯಾಗುವವರೆಗೆ ಕಾಯೋಣ ಎಂದರು. ಅದಕ್ಕೂ ಒಪ್ಪಿಕೊಂಡರೆ ಏನಾಯ್ತೋ ಏನೋ ಹುಡುಗನೇ ‘‘ನನಗೆ ಈ ಹುಡುಗಿ ಇಷ್ಟವಿಲ್ಲ’’ ಎಂಬ ಹೊಸ ವರಸೆ ಶುರು ಮಾಡಿಬಿಟ್ಟ’ ಎಂದು ಆತಂಕದಿಂದಲೇ ಹೇಳುವಾಗ ಈ ಕೋವಿಡ್‌–19 ಎಂಬುದು ಬದುಕಿನ ಎಲ್ಲಾ ಮಜಲುಗಳಿಗೂ ನುಗ್ಗಿ ಹಾಳು ಮಾಡುತ್ತಿದೆಯಲ್ಲ ಎನಿಸದಿರದು.

ಆರೋಗ್ಯ, ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಈಗಿನ ಆದ್ಯತೆಯೇನೋ ಹೌದು. ಆದರೆ ಒಂದಲ್ಲ ಎರಡಲ್ಲ, ಮೂರ್ನಾಲ್ಕು ತಿಂಗಳುಗಳು ಕಳೆದರೂ ಕೋವಿಡ್‌– 19 ಎಂಬ ಪಿಡುಗು ಕಡಿಮೆಯಾಗದೆ ಬಾಧಿಸುತ್ತಿದ್ದು, ಬದುಕಿನ ಎಲ್ಲಾ ಸ್ತರಗಳ ಮೇಲೂ ಪ್ರಭಾವ ಬೀರಿದೆ. ನಿಶ್ಚಯವಾದ ಎಷ್ಟೋ ಮದುವೆಗಳನ್ನು ಮುಂದೂಡಲಾಗಿದೆ. ಕೆಲವರು 25– 30 ಜನರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮದುವೆ ಸೀಸನ್‌ನಲ್ಲಿ ನಡೆದ ವಿವಾಹಗಳು ಶೇ 15– 20ರಷ್ಟು ಮಾತ್ರ. ಈಗಂತೂ ಆಷಾಢ ಪ್ರಾರಂಭವಾಗಿದ್ದು, ಕೆಲವು ಸಮುದಾಯಗಳಲ್ಲಿ ವಿವಾಹ ಮಾಡಿಕೊಳ್ಳುವುದು ನಿಷಿದ್ಧ ಎಂಬ ಸಂಪ್ರದಾಯವಿದೆ. ಕೊರೊನಾ ಸೋಂಕು ತಂದೊಡ್ಡಿದ ಹೊಸ ರೀತಿಯ ಜನಜೀವನ (ನ್ಯೂ ನಾರ್ಮಲ್ಸ್‌)ದಲ್ಲಿ ಬದಲಾವಣೆಗಳು ಅನಿವಾರ್ಯ ಕೂಡ.

ಅನಿಶ್ಚಿತ ಪರಿಸ್ಥಿತಿ

ಹೊಸ ಪರಿಸ್ಥಿತಿಗೆ ಹೊಂದಿಕೊಂಡರೂ ಸಹ ಕೆಲವು ಕಡೆ ಮನ ಮುದುಡಿಸುವಂತಹ ಘಟನೆಗಳು ನಡೆಯುತ್ತಿವೆ. ಈಗೆರಡು ತಿಂಗಳ ಹಿಂದೆ ನಿಶ್ಚಯವಾದ ಹುಡುಗಿ ಕೆಲಸ ಕಳೆದುಕೊಂಡ ಟೆಕಿಯನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದಾಗ ಆತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿತು. ಮದುವೆ ನಿಶ್ಚಯವಾದ ನಂತರ ಹುಡುಗ ಅಥವಾ ಹುಡುಗಿ ಮದುವೆ ಬೇಡ ಎನ್ನುವಂತಹ ಹಲವು ಪ್ರಕರಣಗಳು ನಡೆದಿವೆ. ಉದ್ಯೋಗ ಕಳೆದುಕೊಳ್ಳುವ ಭಯ, ಹದಗೆಟ್ಟ ಹಣಕಾಸು ಸ್ಥಿತಿ, ಭವಿಷ್ಯದ ಅನಿಶ್ಚಿತತೆ, ಪರಿಸ್ಥಿತಿಯಿಂದಾಗಿ ಆವರಿಸಿಕೊಂಡ ಖಿನ್ನತೆ.. ಹೀಗೆ ಇದಕ್ಕೆ ಹಲವು ಕಾರಣಗಳಿರಬಹುದು.

‘ಮದುವೆ ವಿಜೃಂಭಣೆಯಿಂದ ನಡೆಯಬೇಕೆಂದು ಹಣ ಕೂಡಿಟ್ಟಿದ್ದೆ. ಅಪ್ಪ ಕೂಡ ಉತ್ಸಾಹದಿಂದ ಓಡಾಡುತ್ತಿದ್ದರು. ಆದರೆ ಈಗ ಮನೆಯಲ್ಲೇ ಹತ್ತಿರದ ಸಂಬಂಧಿಕರ ನಡುವೆ ಮದುವೆ ಮಾಡಿಕೊಂಡೆ’ ಎನ್ನುವ ರೀತು ನಿಹಾಲ್‌ಗೆ, ಪ್ರೀತಿಸಿದ ಹುಡುಗನ ಜೊತೆ ಮದುವೆಯಾದರೂ ಆಯಿತಲ್ಲ ಎಂದು ಸಮಾಧಾನ.

ಎಷ್ಟೆಂದರೂ ಆರೋಗ್ಯ, ಕುಟುಂಬದವರ, ಸಂಬಂಧಿಕರ ಆ ಮೂಲಕ ಸಮುದಾಯದ ಸುರಕ್ಷತೆ ಮುಖ್ಯ ಅಲ್ಲವೇ? ಕೂಡಿಟ್ಟ ಹಣ ಬೇರೆಯದಕ್ಕೆ ಖರ್ಚಾದರೂ ಚಿಂತೆಯಿಲ್ಲ, ಮದುವೆ ಮುಂದೂಡುವುದೋ, ರದ್ದುಗೊಳಿಸುವುದೋ ಒಳ್ಳೆಯದು ಎನ್ನುವವರೂ ಇದ್ದಾರೆ.

‘ಕಳೆದ ವರ್ಷ ಬೆಂಗಳೂರಿನಲ್ಲಿ ಏಪ್ರಿಲ್‌– ಮೇ ತಿಂಗಳಲ್ಲಿ ಒಟ್ಟು 15–16 ಮದುವೆ ಗುತ್ತಿಗೆಗಳು ಸಿಕ್ಕಿದ್ದವು. ಆದರೆ ಈ ಬಾರಿ ಫೆಬ್ರುವರಿಯೊಳಗೆ ಸಿಕ್ಕಿದ್ದು ಕೆಲವು ಮಾತ್ರ. ಮದುವೆ ಮುಹೂರ್ತ ಮಾರ್ಚ್‌ ನಂತರವೇ ಜಾಸ್ತಿ ಇತ್ತು. ಒಂದಿಬ್ಬರು ಕೇಳಿಕೊಂಡು ಬಂದಾಗ, ಸರಳವಾಗಿ ಮನೆಯಲ್ಲೇ ಮಾಡಿಕೊಳ್ಳಿರೆಂದು ಹೇಳಿ ಕಳಿಸಿದೆ’ ಎನ್ನುತ್ತಾರೆ ವಿವಾಹದ ಆಯೋಜಕ (ವೆಡ್ಡಿಂಗ್‌ ಪ್ಲ್ಯಾನರ್‌) ನಿತೇಶ್‌ ಅಗರ್‌ವಾಲ್‌.

ಮೆಟ್ರಿಮೋನಿಯಲ್‌ ವೆಬ್‌ಸೈಟ್‌ಗಳು ಕೂಡ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಆಮಿಷ ಒಡ್ಡುತ್ತಿವೆ. ಈಗ ನಿಶ್ಚಯ ಮಾಡಿಕೊಳ್ಳಿ, ಕೊರೊನಾ ಸಮಸ್ಯೆ ಮುಗಿದ ನಂತರ ಮದುವೆಗೆ ಮುಂದಡಿ ಇಡಿ ಎಂಬ ಘೋಷಣೆಯೊಂದಿಗೆ ಜಾಹೀರಾತು ನೀಡುತ್ತಿವೆ. ಸದ್ಯ ಸರಳ ವಿವಾಹವಾಗಿ ಝೂಮ್‌ನಲ್ಲಿ ಆಪ್ತರಿಗೆ ಸಮಾರಂಭದ ಕ್ಷಣಗಳನ್ನು ತೋರಿಸಿ, ಮುಂದೆ ಅನುಕೂಲವಾದರೆ ಆರತಕ್ಷತೆ ಇಟ್ಟುಕೊಳ್ಳಿ.

* ಎರಡೂ ಕಡೆಯುವರು ಒಪ್ಪಿದರೆ ಸರಳ ವಿವಾಹವಾಗಿ. ಇಲ್ಲದಿದ್ದರೆ ಮುಂದೂಡಿ. ಆದರೆ ಬದ್ಧತೆ ಇರುವುದು ಮುಖ್ಯ. ಇದನ್ನು ಖಾತ್ರಿಪಡಿಸಿಕೊಳ್ಳುವುದು ನಿಮಗೆ ಬಿಟ್ಟಿದ್ದು.

* ಆಷಾಢ ಮುಗಿದ ನಂತರ ಮದುವೆಯೆಂದು ಮದುವೆ ಛತ್ರ ಬುಕ್‌ ಮಾಡಲು ಹೋಗಬೇಡಿ. ಈ ಕೋವಿಡ್‌– 19 ಯಾವಾಗ ಶಮನವಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.

* ಮದುವೆ ಮುಂದೂಡಿದರೆ ನಿರಾಶೆಯಾಗುತ್ತದೆ ಹೌದು. ಆದರೆ ಇಡೀ ಜಗತ್ತು ಸೋಂಕಿನ ಸಮಸ್ಯೆ ಎದುರಿಸುತ್ತಿರುವಾಗ ಆ ನಿರಾಶೆಯನ್ನು ನುಂಗಿಕೊಳ್ಳಿ. ಸ್ನೇಹಿತರ ಜೊತೆ ದುಗುಡ ಹಂಚಿಕೊಂಡರೆ ಕೊಂಚ ಶಮನವಾಗುತ್ತದೆ.

* ನಿಶ್ಚಯವಾದ ಹುಡುಗನ ಜೊತೆ ಸಂಪರ್ಕದಲ್ಲಿರಿ. (ಫೋನ್‌, ವಾಟ್ಸ್‌ಆ್ಯಪ್‌ ಮೂಲಕ!)

* ಮದುವೆ ಆಯೋಜಕರ ಜೊತೆ, ಛತ್ರದವರ ಜೊತೆ ಸಂಪರ್ಕದಲ್ಲಿರಿ.

ಹಲವು ಕಡೆ ವಿಶೇಷವಾಗಿ ಸಣ್ಣ ಪುಟ್ಟ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಮನೆಯಲ್ಲೇ ಸರಳ ವಿವಾಹಗಳು ಸಾಕಷ್ಟು ನಡೆದಿವೆ. ಮನೆಯವರು, ಹತ್ತಿರದ ಸಂಬಂಧಿಕರೆಂದು 15– 20 ಜನರಷ್ಟೇ ಸೇರಿ ವಿವಾಹ ಮಾಡಿಕೊಂಡವರಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾದ ನಂತರ ಆರತಕ್ಷತೆ ಇಟ್ಟುಕೊಂಡರಾಯಿತು ಎಂಬುದು ಇಂತಹ ಸರಳ ಮದುವೆ ಮಾಡಿಕೊಂಡ ಹಲವರು ನಿರ್ಧರಿಸಿದ್ದು ಒಳ್ಳೆಯ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT