ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿತನ ಎಂಬ ಸಿರಿತನ

Last Updated 27 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಹಿರಿತನವೆಂಬುದು ಒಂದು ಗರಿಮೆಯೇ. ಕೆಲವು ಹಿರಿಯರಿಗೆ ತಮ್ಮ ಹಿರಿತನವೇ ಸಿರಿತನ. ನಿವೃತ್ತಿಯಾಗಿ, ಮನೆಯ ಹೆಚ್ಚಿನ ಜವಾಬ್ದಾರಿ ಇಲ್ಲದ ಕೆಲವರು ತಮ್ಮ ತಮ್ಮ ಪರಿಸ್ಥಿತಿಗೆ ತಕ್ಕಂತೆ ತಮ್ಮ ಹವ್ಯಾಸಗಳಲ್ಲಿ ತೊಡಗಿಕೊಂಡು, ತಮ್ಮಂತಹವರ ಒಡನಾಟದಲ್ಲಿ ಹಿರಿತನದ ಸವಿಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಾಗಿ ಪುರುಷರು ನಿವೃತ್ತಿಯ ನಂತರ ಪ್ರವೃತ್ತಿಗಳಲ್ಲಿ ಸುಲಭವಾಗಿ ತೊಡಗಿಸಿಕೊಳ್ಳಬಹುದು. ದುಡಿಯುವ ಮಹಿಳೆಯರಿಗೆ ನಿವೃತ್ತಿ ನಂತರ ಹೊರಗಿನ ಕೆಲಸ ಇಲ್ಲವಾಗಬಹುದು; ಮನೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮನೆ ನಿರ್ವಹಣೆಯದೇ ಮುಖ್ಯ ಕೆಲಸವಾಗಿರುವ ಮಹಿಳೆಯರಿಗೆ ನಿವೃತ್ತಿ ಎಂಬುದೇನೂ ಇರುವುದಿಲ್ಲ. ವಯಸ್ಸಾಗುತ್ತಿದ್ದಂತೆ ಕೆಲಸದ ಒತ್ತಡ ಕಡಿಮೆಯಾಗಬಹುದು. ಮಹಿಳೆಯರು ಮನೆ ಕೆಲಸಗಳ ಜೊತೆಗೆ ಹವ್ಯಾಸಗಳಲ್ಲೂ ಕೈಯಾಡಿಸಿದರೆ ಖಾಲಿತನಕ್ಕೆ ಅವಕಾಶವೇ ಇರುವುದಿಲ್ಲ.

ಮುಪ್ಪಿಗಿರಲಿ ಮೂರು ಕಾಸು

ಜೀವನದ ಸಂಜೆಯಲ್ಲಿ ಸವಿಸವಿ ನೆನಪಿನ ಕಚುಗುಳಿ ಅನುಭವಿಸಬೇಕಾದರೆ ಹಣಕಾಸಿನ ಕಿರಿಕಿರಿ ಇರಬಾರದು. ಕೆಲವರಿಗೆ ನಿವೃತ್ತಿಯ ಬಿಡುವಿನ ಸಮಯವನ್ನು ಹಾಯಾಗಿ ಕಳೆಯುವ ಖುಷಿ ಒಂದೆಡೆಯಾದರೆ, ಮತ್ತೊಂದೆಡೆ ಕೈಯಲ್ಲಿ ಕಾಸಿಲ್ಲದಿರುವ ಬೇಸರ. ದುಡಿಯುವಾಗ ಎಲ್ಲವನ್ನೂ ಸಂಸಾರಕ್ಕೇ ಬಳಸಿ ಏನೂ ಉಳಿತಾಯ ಮಾಡದಿದ್ದರೆ ಇದೇ ಪರಿಸ್ಥಿತಿ. ಹಾಗಾಗಿ ಮುಪ್ಪಿಗಿರಬೇಕು ಮೂರು ಕಾಸು. ಕೈಯಲ್ಲಿ ಸ್ವಲ್ಪ ಕಾಸಿದ್ದರೆ ಆರೋಗ್ಯ ರಕ್ಷಣೆ, ಹವ್ಯಾಸ, ಪ್ರವಾಸ ಇನ್ನಿತರ ಚಟುವಟಿಕೆಗಳಿಗೆ ಇರುವುದಿಲ್ಲ ತ್ರಾಸು. ಇನ್ನು ಆಸ್ತಿಯ ವಿಚಾರದಲ್ಲಿ ತಾವು ಮತ್ತು ತಮ್ಮ ಸಂಗಾತಿ ಬದುಕಿರುವವರೆಗೂ ತಮಗೂ ಒಂದು ಪಾಲನ್ನೂ ಇಟ್ಟುಕೊಳ್ಳುವುದು ಅತಿ ಮುಖ್ಯ.

ಸಮಸ್ಯೆಗಳ ಸಂಧಿಕಾಲ

ಹಿರಿತನ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳ ಸಂಧಿಕಾಲವೆಂದೇ ಹೇಳಬಹುದು. ಯೌವನವಿರುವಾಗ ಎಷ್ಟೇ ಕೆಲಸ ಮಾಡಿದರೂ ನಡೆಯುತ್ತದೆ. ಆದರೆ ಈಗ ಸ್ವಲ್ಪಕ್ಕೇ ಸುಸ್ತಾಗುತ್ತದೆ, ವಿಶ್ರಾಂತಿ ಬೇಕು ಎನಿಸುತ್ತದೆ. ಕೆಲವರಿಗೆ ಮಾನಸಿಕ ತೊಂದರೆಯೂ ಉಂಟಾಗಬಹುದು. ಮರೆವು ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯ, ಮನೆಯವರ ನೆರವು ಹಾಗೂ ಆತ್ಮವಿಶ್ವಾಸ ಮುಖ್ಯ.

ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ಈಗ ಮಾರಣಾಂತಿಕ ಕಾಯಿಲೆಗಳನ್ನೂ ಆರಂಭದಲ್ಲೇ ಗುರುತಿಸಿದರೆ ಗುಣಪಡಿಸುವುದು ಸುಲಭ. ವಯೋಸಹಜವಾದ ಕೆಲವು ಆರೋಗ್ಯ ತೊಂದರೆಗಳ ಬಗ್ಗೆ ನಿರ್ಲಕ್ಷಿಸದೆ ಆಗಾಗ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಿದ್ದರೆ, ಹಿರಿವಯಸ್ಸಿನ ದೈಹಿಕ ಕಿರಿಕಿರಿ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು. ವೃದ್ಧಾಪ್ಯ ಶಾಸ್ತ್ರ (ಜೇರಿಯಾಟ್ರಿ) ದಲ್ಲಿ ಪರಿಣತಿ ಪಡೆದಿರುವ ವೈದ್ಯರ ಸಂಪರ್ಕ ಉತ್ತಮ.

ಮನೆಯವರ ನೆರವು ಕೆಲವೊಮ್ಮ ಸಿಗದೇ ಹೋಗಬಹುದು. ಎಲ್ಲ ಸಂದರ್ಭಗಳಲ್ಲೂ ಅವರ ಮೇಲೆ ಅವಲಂಬಿತರಾಗಲೂ ಸಾಧ್ಯವಿಲ್ಲ. ಆಗ ನಿಮ್ಮ ಆರೋಗ್ಯ ರಕ್ಷಣೆ ನಿಮ್ಮದೇ ಜವಾಬ್ದಾರಿ. ಮನೆಯಲ್ಲಿ ಯಾರೂ ನೋಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಿಮ್ಮಂತಹವರನ್ನು ಆರೈಕೆ ಮಾಡುವಂತಹ ಸಂಸ್ಥೆಗಳ, ಸೇವಕರ ಮೊರೆ ಹೋಗಬಹುದು. ಒಂಟಿಯಾಗಿರುವುದಕ್ಕಿಂತ, ನಿಮ್ಮಂತೆ ಇರುವ ಇತರರ ಜೊತೆ ವಾಸಿಸುವುದು ಒಳಿತು.

ಉದಾಸೀನವೇ ಮದ್ದು

ಕೆಲವು ಹಿರಿಯರಿಗೆ ಸಾವಿಗಿಂತ ಹಿರಿತನದಲ್ಲಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ ಎಂಬ ಅಂಜಿಕೆ. ಹಾಗೆಯೇ ಕಿರಿಯರು ತಮ್ಮನ್ನು ಗೌರವಿಸುವುದಿಲ್ಲ ಎಂಬ ಆತಂಕ. ಮನೆಯ ಹಿರಿಯರನ್ನು ಗೌರವದಿಂದ ಕಾಣುವವರು ಇರುವಂತೆ ಹಿರಿಯರನ್ನು ಅವಹೇಳನ ಮಾಡುವವರೂ ಇದ್ದಾರೆ. ಗೌರವ ಸಿಗದಿದ್ದ ಕಡೆ ಅದನ್ನು ನಿರೀಕ್ಷಿಸುವುದೂ ತಪ್ಪು, ಅಂಥವರನ್ನು ನಿರ್ಲಕ್ಷಿಸುವುದೇ ಲೇಸು.

ಇಂತಹದ್ದನ್ನು ತಪ್ಪಿಸಿಕೊಳ್ಳುವ ದಾರಿ ಎಂದರೆ ಇಡೀ ದಿನ ಕ್ರಿಯಾಶೀಲರಾಗಿರುವುದು. ತಮಗೆ ತಿಳಿದಿರುವ ವಿಷಯಗಳ ಬಗ್ಗೆ ತಿಳಿಸಿಕೊಡುವುದು, ತಮಗೆ ಆಸಕ್ತಿ ಇರುವ ವಿಷಯಗಳ ಕಲಿಕೆಯಲ್ಲಿ ತೊಡಗುವುದು, ಇಷ್ಟವಾದ ಕೆಲಸಗಳನ್ನು ಮಾಡುತ್ತಿರುವುದು.. ಇದರಿಂದ ನೆಮ್ಮದಿಯ ಜೊತೆಗೆ ದೇಹ ಮತ್ತು ಮನಸ್ಸು ಆರೋಗ್ಯವಾಗಿರಲೂ ಸಾಧ್ಯ, ಕಿರಿಯರಿಗೂ ಸ್ಫೂರ್ತಿದಾಯಕ.

ಬದಲಾವಣೆ ಪರ್ವ

ತಾವು ಕಲಿಸಿಕೊಟ್ಟ ಮಕ್ಕಳಿಂದಲೇ ಮುಂದೆ ಹಿರಿಯರು ಕಲಿಯುವ ಪರಿಸ್ಥಿತಿ ಬರಬಹುದು. ಇದು ಬದಲಾವಣೆಯ ಪರ್ವ. ಹೊಸ ಹೊಸ ವಿಷಯಗಳ ಕಲಿಕೆ, ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುವುದು ಅನಿವಾರ್ಯ. ತಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಕೆ ಮಾಡಿಕೊಳ್ಳದಿರುವುದೇ ಉತ್ತಮ. ಪೀಳಿಗೆಗಳ ನಡುವಿನ ಅಂತರ ಇಂದು- ನಿನ್ನೆಯದಲ್ಲ. ಎಲ್ಲ ಕಾಲಕ್ಕೂ ಆಗುವಂತಹದ್ದು.

Cherish all your happy moments; they make a fine cusion for your old age- ಅಮೆರಿಕದ ಖ್ಯಾತ ಕಾದಂಬರಿಗಾರ ಬೂತ್ ಟಕಿಂಗ್‌ಟನ್ ಹೇಳಿರುವ ಈ ಮಾತು ತುಂಬಾ ಪ್ರಸ್ತುತ. ಕಳೆದ ಮಧುರ ಕ್ಷಣಗಳನ್ನು ನೆನೆಯುವುದು ಒಂದು ರೀತಿಯ ಖುಷಿ. ಬದುಕಿನಲ್ಲಿ ನೋವು, ದುಃಖ ಸಹಜ. ಇದರ ಜೊತೆಗಿರುವ ಒಂದಷ್ಟು ಖುಷಿಯನ್ನೂ ಆಗಾಗ ನೆನಪಿಸಿಕೊಂಡರೆ ಬೇಸರ, ನೋವು, ನಿರಾಸೆ ಮಾಯವಾಗಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT