ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹಿತನನ್ನು ಮದುವೆಯಾಗಬಹುದೇ?

Last Updated 16 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

27ರ ವಿಚ್ಚೇದಿತ ಮಹಿಳೆ. ನಾನು ಪ್ರೀತಿಸುತ್ತಿರುವ ವ್ಯಕ್ತಿಗೆ ಮದುವೆಯಾಗಿದೆ. ‘ನಿನ್ನನ್ನೂ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ, ಮನೆಯವರನ್ನೂ ಒಪ್ಪಿಸುತ್ತೇನೆ, ಎಲ್ಲರೂ ಒಟ್ಟಿಗೆ ಇರೋಣ’ ಎನ್ನುತ್ತಿದ್ದಾರೆ. ನನಗೆ ಅವರ ಮೇಲೆ ನಂಬಿಕೆಯಿದೆ. ಆದರೆ ಮನೆಯವರು ಒಪ್ಪುತ್ತಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ವಿಚ್ಚೇದಿತರಾಗಿ ಸಂಗಾತಿಯ ಹುಡುಕಾಟದಲ್ಲಿರುವ ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಲೇ ಕೆಲವು ವಾಸ್ತವಾಂಶಗಳ ಕಡೆಗೆ ನಿಮ್ಮ ಗಮನ ಸೆಳೆಯುತ್ತೇನೆ. ನಿಮ್ಮ ಪ್ರಿಯಕರನ ಪತ್ನಿಯ ಜೊತೆ ನೇರವಾಗಿ ಮಾತನಾಡಿ ಅವರ ಒಪ್ಪಿಗೆ ಪಡೆದಿದ್ದೀರಾ? ಆ ಮಹಿಳೆಯ ಸ್ಥಾನದಲ್ಲಿ ನೀವಿದ್ದಿದ್ದರೆ ಪತಿಗೆ ಎರಡನೇ ಮದುವೆಯಾಗಲು ಒಪ್ಪಿಗೆ ಕೊಡುತ್ತಿದ್ದಿರಾ? ಇಸ್ಲಾಂ ಧರ್ಮದವರ ಹೊರತಾಗಿ ಉಳಿದವರಿಗೆ ಭಾರತದಲ್ಲಿ ಬಹುಪತ್ನಿತ್ವ ಕಾನೂನುಬಾಹಿರ ಎನ್ನುವುದು ಗೊತ್ತಿದೆಯೇ? ಹಾಗೊಮ್ಮೆ ನೀವು ಮದುವೆಯಾದರೆ ನಿಮ್ಮ ಪತಿಗೆ ಶಿಕ್ಷೆಯಾಗುವುದಲ್ಲದೆ ನಿಮಗೆ ಪತ್ನಿಯ ಸ್ಥಾನವೂ ದೊರಕುವುದಿಲ್ಲ. ಕಾನೂನುಬದ್ಧವಾಗಿ ಮದುವೆಯಾಗದೆ ಜೊತೆಯಲ್ಲಿದ್ದರೆ ನಿಮಗೆ ಸಿಗುವುದು ಸಾಮಾಜಿಕ ಮನ್ನಣೆಯಿಲ್ಲದ ಉಪಪತ್ನಿಯ ಸ್ಥಾನ ಮಾತ್ರ. ಇದು ನಿಮಗೆ ಒಪ್ಪಿಗೆಯೇ? ನಿಮಗೆ ಹುಟ್ಟುವ ಮಕ್ಕಳಿಗೆ ಅಪ್ಪನ ಹೆಸರನ್ನು ಹೇಗೆ ಕೊಡುತ್ತೀರಿ? ಇನ್ನೂ 27 ವರ್ಷದವರಾಗಿರುವ ನೀವು ಹತಾಶರಾಗಿ ಇಂತಹ ಅವಾಸ್ತವ ಆಕರ್ಷಣೆಗೆ ಒಳಗಾಗುವುದರ ಬದಲು ವಿದ್ಯೆ, ಉದ್ಯೋಗ, ಹವ್ಯಾಸಗಳ ಮೂಲಕ ಗಟ್ಟಿಯಾದ ಸ್ವಂತ ವ್ಯಕ್ತಿತ್ವನ್ನು ರೂಪಿಸಿಕೊಂಡರೆ ಹೇಗಿರುತ್ತದೆ? ಮುಂದೆ ನಿಮ್ಮನ್ನು ಪ್ರೀತಿಸುವ, ಗೌರವಿಸುವ, ಸಾಮಾಜಿಕ ಸ್ಥಾನಮಾನ ನೀಡುವ ಜೊತೆಗಾರ ಸಿಗಲೇಬೇಕಲ್ಲವೇ?

23 ವರ್ಷದ ಯುವಕ. ಪೊಲೀಸ್‌ ಕಾನ್‌ಸ್ಟೇಬಲ್‌. ನಾನು ಪ್ರೀತಿಸುತ್ತಿರುವ ಹುಡುಗಿ ಬೇರೆ ಜಾತಿಯವಳಾದ್ದರಿಂದ ಇಬ್ಬರ ಮನೆಯಲ್ಲಿಯೂ ಒಪ್ಪುತ್ತಿಲ್ಲ. ಇದರಿಂದ ನೆಮ್ಮದಿ ಕಳೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಓದಲಾಗುತ್ತಿಲ್ಲ. ಹಾಗಾಗಿ ನನ್ನ ಆಸೆಗಳೆಲ್ಲಾ ಮಣ್ಣುಪಾಲಾಗುತ್ತದೆ ಎನ್ನುವ ಭಯ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ

ನೀವೊಬ್ಬ ಪೊಲೀಸ್‌ ಕಾನ್‌ಸ್ಟೇಬಲ್‌ ಅಲ್ಲವೇ? ಮುಂದೆ ಸಬ್‌ಇನ್‌ಸ್ಪೆಕ್ಟರ್‌ ಆಗುತ್ತೀರಿ. ಕಾನೂನುಬದ್ಧವಾಗಿ ಮದುವೆಗೆ ಅರ್ಹರಿರುವ ಇಬ್ಬರು ಯುವಪ್ರೇಮಿಗಳು ನಿಮ್ಮ ಸಹಾಯ ಕೇಳಿದರೆ ಪೊಲೀಸ್‌ ಆಗಿ ಏನು ಮಾಡುತ್ತೀರಿ? ಅದನ್ನೇ ನೀವೂ ಮಾಡಿ. ಕುಟುಂಬದವರ ಸಂಬಂಧ ಕಡಿದುಕೊಳ್ಳದೆ ಮುಂದುವರೆಸಿ. ನಿಧಾನವಾಗಿ ಅವರ ಮನಸ್ಸು ಬದಲಾಗುತ್ತದೆ.

50 ವರ್ಷದ ಪುರುಷ. ನನಗೆ ಮುಖಮೈಥುನ ಮತ್ತು ಹೆಚ್ಚಿನ ಲೈಂಗಿಕಸುಖ ಬೇಕೆನ್ನಿಸುತ್ತದೆ. ಆದರೆ ಹೆಂಡತಿ ಸಹಕರಿಸುತ್ತಿಲ್ಲ. ಸಲಹೆ ನೀಡಿ.

ಹೆಸರಿಲ್ಲ, ಗದಗ

ನಿಮಗೆ ಹೆಚ್ಚಿನ ಮತ್ತು ವೈವಿಧ್ಯಮಯ ಲೈಂಗಿಕ ಸುಖ ಬೇಕೆನ್ನಿಸುವುದು ಸಹಜ. ಇದನ್ನು ಪತ್ನಿಯಿಂದ ನಿರೀಕ್ಷಿಸುವುದಾದರೆ ಅದು ಅವರಿಗೂ ಆಕರ್ಷಕ ಅನ್ನಿಸಬೇಕಲ್ಲವೇ? ಅದಕ್ಕಾಗಿ ಅವರ ಜೊತೆ ಮಾತನಾಡಿದ್ದೀರಾ? ಅವರ ಆಸಕ್ತಿ, ಆತಂಕಗಳ ಕುರಿತಾಗಿ ಗೌರವದಿಂದ ಚರ್ಚೆ ಮಾಡಿದ್ದೀರಾ? ಲೈಂಗಿಕತೆಯ ಹೊರತಾಗಿ ಇಬ್ಬರ ನಡುವಿನ ಆತ್ಮೀಯತೆ ಹೇಗಿದೆ? ಇಬ್ಬರೂ ಯುವಪ್ರೇಮಿಗಳಂತಾದರೆ ಲೈಂಗಿಕ ಸುಖ ಹೆಚ್ಚಾಗಬಹುದಲ್ಲವೇ? ಹಾಗಾಗುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ನಂತರ ನಿಮಗೆ ಬೇಕಾದ ಎಲ್ಲಾ ಸುಖವೂ ದೊರೆಯುತ್ತದೆ.

* 25ರ ಅವಿವಾಹಿತ ಯುವಕ. ಶಿಶ್ನದ ಮುಂದಿನ ಚರ್ಮ ಹಿಂದಕ್ಕೆ ಸರಿಯುವುದಿಲ್ಲ. ಇದರಿಂದ ಲೈಂಗಿಕ ಜೀವನಕ್ಕೆ ತೊಂದರೆಯಾಗಬಹುದೆಂಬ ಭಯ, ಪರಿಹಾರವೇನು?

ಹೆಸರು ತಿಳಿಸಿಲ್ಲ, ಬಳ್ಳಾರಿ.

ಇದಕ್ಕೆ ಒಂದು ಸರಳವಾದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹಿಂಜರಿಯದೆ ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ. ನಿಮ್ಮೆಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ.

* ಬಾಲ್ಯದ ಗೆಳತಿ ಮತ್ತು ನಾನು ಬಹಳ ಪ್ರೀತಿಸುತ್ತೇವೆ. ಜಾತಿ ಬೇರೆಯಾಗಿರುವುದರಿಂದ ಮದುವೆ ಸಾಧ್ಯವಿಲ್ಲ ಎನ್ನುತ್ತಾಳೆ. ಅವಳಿಗೆ ಮನೆಯವರು ಸಂಬಂಧಿಕರ ಹುಡುಗನೊಬ್ಬನನ್ನು ನೋಡಿದ್ದಾರೆ. ಕೆಲವೊಮ್ಮೆ ಅವಳು ನಾನು ಮದುವೆಯನ್ನೇ ಆಗುವುದಿಲ್ಲ ಹಾಗೆಯೇ ಇದ್ದುಬಿಡುತ್ತೇನೆ ಎನ್ನುತ್ತಾಳೆ. ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ನಿಮ್ಮಿಬ್ಬರ ನಡುವೆ ಯೌವನದ ಆಕರ್ಷಣೆಯಿದೆ. ಅದನ್ನು ದೀರ್ಘಕಾಲ ಉಳಿಯಬಲ್ಲ ಪ್ರೀತಿಯಾಗಿ ಬದಲಾಯಿಸಲು ಇಬ್ಬರಿಗೂ ಜೀವನದ ದಾರಿಯ ಬಗೆಗೆ ಸ್ಪಷ್ಟತೆ ಬೇಕಲ್ಲವೇ? ಪತ್ರವನ್ನು ನೋಡಿದರೆ ಇಬ್ಬರಿಗೂ ಬಹಳ ಅಸ್ಪಷ್ಟತೆ ಇದೆ ಎನ್ನಿಸುತ್ತದೆ. ಇದರ ಕುರಿತಾಗಿ ಇಬ್ಬರೂ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿದೆ. ಮೊದಲು ಇಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗುವುದು ಹೇಗೆ ಎಂದು ಯೋಚಿಸಿ. ಆಗ ನಿಮ್ಮದೇ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರುತ್ತದೆ.

* 21ರ ಯುವತಿ. ನಾನು ಇಷ್ಟಪಡುವ ಹುಡುಗ ನನಗಿಂತ 2 ವರ್ಷ ಚಿಕ್ಕವನು. ಮನೆಯಲ್ಲಿ ವಿಷಯ ತಿಳಿದು ಅಡ್ಡಿಪಡಿಸಿದರೂ ನಾವು ದೂರವಾಗಿಲ್ಲ. ಅವರಿಗೆ ಮದುವೆಯಾಗಲು 3 ವರ್ಷದ ಅಗತ್ಯವಿದೆ. ನಾನೂ ಕಾಯಲು ಸಿದ್ಧಳಿದ್ದೇನೆ. ಆದರೆ ಜಾತಿ, ಆಸ್ತಿಗಳ ವಿಚಾರಕ್ಕಾಗಿ ಇಬ್ಬರ ಮನೆಯಲ್ಲಿಯೂ ಒಪ್ಪುತ್ತಿಲ್ಲ. ನನ್ನಿಷ್ಟದವರನ್ನು ಮದುವೆಯಾಗಲು ಮನೆಯವರು ಒಪ್ಪುತ್ತಿಲ್ಲ. ಮನೆಯವರ ಆಯ್ಕೆ ನನಗಿಷ್ಟವಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಶತಶತಮಾನಗಳಿಂದ ಒಪ್ಪಿಕೊಂಡು ಬಂದಿರುವ ಸಾಮಾಜಿಕ ನೀತಿ–ನಿಯಮಗಳನ್ನು ಮೀರಿ ಮದುವೆಯಾಗುವುದನ್ನು ಹಿರಿಯರು ವಿರೋಧಿಸುವುದು ಸಹಜ. ಅವರ ಒಪ್ಪಿಗೆಯನ್ನು ಮೀರಿ ಮದುವೆಯಾಗಲು ನೀವೇಕೆ ಕಷ್ಟಪಡುತ್ತಿದ್ದೀರಿ ಎಂದು ಯೋಚಿಸಿ. ಹಿರಿಯವರನ್ನು ಪ್ರೀತಿಸುವುದು, ಗೌರವಿಸುವುದು ಎಂದರೆ ಅವರು ಹೇಳಿದಂತೆ ಬದುಕುವುದು ಎಂದುಕೊಂಡಿದ್ದೀರಾ? ಅವರಿಷ್ಟದಂತೆ ಮದುವೆಯಾದಾಗ ಕಹಿಯಾಗುವ ನಿಮ್ಮ ಮನಸ್ಸಿನಿಂದ ಪೋಷಕರನ್ನು ಗೌರವಿಸುವುದು ಹೇಗೆ ಸಾಧ್ಯವಾಗುತ್ತದೆ? ನಿಮ್ಮಿಷ್ಟದವರನ್ನು ಮದುವೆಯಾಗಿಯೂ ಪೋಷಕರನ್ನು ಪ್ರೀತಿಸುವುದು, ಗೌರವಿಸುವುದು ಹೇಗೆ? ಅವರಾಗಿಯೇ ನಿಮ್ಮನ್ನು ದೂರ ಮಾಡಿದರೂ ನೀವು ಅವರ ಮೇಲಿನ ಪ್ರೀತಿಯನ್ನು, ಗೌರವವನ್ನು ಕಳೆದುಕೊಳ್ಳದಿದ್ದರೆ ಏನಾಗಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮೊಳಗೇ ಉತ್ತರ ಹುಡುಕಿ. ಯಾವುದೇ ಒತ್ತಡಕ್ಕೂ ಒಳಗಾಗದೆ ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ.

* 28ರ ಯುವಕ. ಇನ್ನು ಮೂರು ತಿಂಗಳಿನಲ್ಲಿ ಮನೆಯವರು ಮದುವೆಮಾಡಲು ನಿರ್ಧರಿಸಿದ್ದಾರೆ. ಸುಮಾರು ತಿಂಗಳಿನಿಂದ ನಾನು ಹಸ್ತಮೈಥುನ ಮಾಡುತ್ತೇನೆ. ಇದರಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗಬಹುದೇ?

ಶ್ರೀನಾಥ್‌, ಊರಿನ ಹೆಸರಿಲ್ಲ.

ದೈಹಿಕವಾಗಿ ಖಂಡಿತಾ ತೊಂದರೆಯಾಗುವುದಿಲ್ಲ. ಆದರೆ ಹಸ್ತಮೈಥುನದ ಕುರಿತಾದ ತಪ್ಪು ತಿಳಿವಳಿಕೆಗಳಿಂದ ಮೂಡಿದ ಹಿಂಜರಿಕೆ, ಕೀಳರಿಮೆಗಳು ನಿಮಗೆ ತೊಂದರೆ ಮಾಡಬಹುದು. ಇದರ ಬಗೆಗ ಈ ಅಂಕಣದಲ್ಲಿ ವಿವರವಾಗಿ ಬರೆಯಲಾಗಿದೆ. 30 01 2021ರ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣವನ್ನು ಓದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT