ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ಕೂಲ್‌ ಕೂಲ್‌ ಕಾಟನ್‌ ಸೀರೆ

Last Updated 24 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಹತ್ತಿ ಬಟ್ಟೆಗಳು ದೇಹಕ್ಕೂ ಮನಸ್ಸಿಗೂ ಹಿತವೆನಿಸುತ್ತವೆ. ಅದರಲ್ಲಿಯೂ ಕಾಟನ್‌ ಸೀರೆಗಳು ಸರಳವಾಗಿಯೂ ಸುಂದರವಾಗಿಯೂ ಕಾಣಬೇಕೆನ್ನುವವರ ಅಚ್ಚುಮೆಚ್ಚು. ಬೇಸಿಗೆ ಮಾತ್ರವಲ್ಲದೇ ಎಲ್ಲ ಕಾಲದಲ್ಲಿಯೂ ಟ್ರೆಂಡಿಯಾಗಿ ಕಾಣಿಸುವ ಈ ಸೀರೆಗಳಲ್ಲಿಯೂ ಹಲವು ಬಗೆಗಳಿವೆ. ಆಯಾ ಪ್ರದೇಶದ ಕಲಾತ್ಮಕ ಕುಸುರಿಯು ಕಾಟನ್‌ ಸೀರೆಗಳ ಅಂದವನ್ನು ದ್ವಿಗುಣಗೊಳಿಸುತ್ತದೆ.

ಕೈಮಗ್ಗದಿಂದ ತಯಾರಾಗುವ ಕಾಟನ್‌ ಸೀರೆಗಳು ಸ್ವಲ್ಪ ದುಬಾರಿ ಎನಿಸಿದರೂ ಅದು ನೀಡುವ ‘ಎಲಿಗೆಂಟ್ ಲುಕ್‌’ ಬೇರೆಯದೆ. ಹಾಗೆಯೇ ಕಾಟನ್‌ ಸೀರೆಗಳ ಮೇಲೆ ಕಲಾತ್ಮಕ ಕುಸುರಿಯ ಪ್ರಿಂಟೆಂಡ್‌ ಸೀರೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳಿಗೂ ಹೆಚ್ಚಿನ ಬೇಡಿಕೆ ಇದೆ. ಇಂಥ ಕೆಲವು ಸೀರೆಗಳ ಪರಿಚಯ ಇಲ್ಲಿದೆ..

ಸಂಬಲ್ಪುರಿ ಸೀರೆ: ಒಡಿಯಾ ಸಂಸ್ಕೃತಿಯನ್ನು ಬಿಂಬಿಸುವ ಈ ಸೀರೆಯು ಕೆಂಪು, ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಣದಲ್ಲಿದ್ದು, ಶಂಖ, ಚಕ್ರ ಹಾಗೂ ಹೂವಿನ ಚಿತ್ರಗಳು ಮುಖ್ಯವಾಗಿರುತ್ತವೆ. ಫ್ಯಾಬ್ರಿಕ್‌ ಬಣ್ಣ, ಚಿತ್ತಾರದ ಬಣ್ಣದ ಕಾಂಬಿನೇಷನ್‌ನಿಂದಾಗಿ ಸೀರೆ ಮನಸೂರೆ ಮಾಡುತ್ತದೆ.

ಖಾದಿ ಸೀರೆ: ಖಾದಿ ಸೀರೆಗಳು ಕೈಮಗ್ಗದ ಸೀರೆಗಳಾಗಿದ್ದು, ಹತ್ತಿ ದಾರ ಮತ್ತು ಸಿಲ್ಕ್‌ ದಾರಗಳಿಂದೂ ನೇಯಲಾಗುತ್ತದೆ. ಖಾದಿ ಸೀರೆಗಳು ಬೇಸಿಗೆಗೆ ಹಿತವೆನಿಸಿದರೆ, ಚಳಿಗಾಲದಲ್ಲಿ ಬೆಚ್ಚನೆಯ ಮುದ ನೀಡುತ್ತದೆ.

ಗದ್ವಾಲ್ ಸೀರೆ: ಮದುವೆ ಸಮಾರಂಭಗಳಿಗೂ ಹೊಂದುವಂಥ ಸೀರೆಯಿದು. ನೇಯ್ಗೆ ಕಾಟನ್‌ ಆಗಿದ್ದರೂ, ಬಾರ್ಡರ್‌ನ ರಿಚ್‌ ಲುಕ್‌ನಿಂದಾಗಿ ಈ ಸೀರೆಯನ್ನು ಎಲ್ಲ ಸಮಾರಂಭಗಳಿಗೂ ಉಡಬಹುದು. ತೆಲಂಗಾಣದ ಗದ್ವಾಲ್‌ ಎನ್ನುವ ಪ್ರದೇಶದಲ್ಲಿ ನೇಯುವ ಈ ಸೀರೆ ಹೆಂಗಳೆಯರ ಅಚ್ಚುಮೆಚ್ಚು. ಗಾಢ ಬಣ್ಣದಲ್ಲಿ ಲಭ್ಯವಿರುವ ಈ ಬಗೆಯ ಸೀರೆಗಳ ಬಾರ್ಡರ್‌ ಹಳದಿ ಅಥವಾ ತಾಮ್ರದ ಬಣ್ಣದಲ್ಲಿರುತ್ತದೆ.

ಚಂದೇರಿ ಸೀರೆ: ಮಧ್ಯಪ್ರದೇಶದ ಈ ಚಂದೇರಿ ಸೀರೆಯು ತನ್ನ ಹೊಳಪು, ಕುಸುರಿಯಿಂದಾಗಿ ಮಾನ್ಯತೆ ಗಳಿಸಿದೆ. ಸಾಮಾನ್ಯವಾಗಿ ಚಂದೇರಿ ಸೀರೆ ಮೇಲೆ ಸಾಂಪ್ರಾದಾಯಿಕ ಶೈಲಿಯ ನಾಣ್ಯದಾಕಾರದ ಪ್ರಿಂಟ್‌ಗಳಿರುತ್ತದೆ. ಕಾಟನ್‌ ಫ್ಯಾಬ್ರಿಕ್‌ ಮೇಲೆ ರೇಷ್ಮೆ ಎಳೆಗಳಿಂದ ಮಾಡಿದ ಹೂವಿನ ವಿನ್ಯಾಸ, ನವಿಲಿನ ಕುಸುರಿಯನ್ನು ನೋಡಬಹುದು. ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಸೀರೆಗಳ ಪಟ್ಟಿಯಲ್ಲಿ ಚಂದೇರಿ ರೇಷ್ಮೆ ಸೀರೆಯೂ ಒಂದಾಗಿದೆ.

ಪೋಚಂಪಲ್ಲಿ ಸೀರೆ: ತೆಲಂಗಾಣದ ಪೋಚಂಪಲ್ಲಿಯಲ್ಲಿ ಸಿದ್ಧವಾಗುವ ಈ ಸೀರೆಯು ಬಹಳ ಮೃದುವಾಗಿರುತ್ತದೆ. ಹಗುರ ಬಟ್ಟೆಯಿಂದಾಗಿ ಉಡುವುದಕ್ಕೆ ಹಿತವೆನಿಸುವ ಸೀರೆಯಿದೆ. ಇದು ಸಂಪೂರ್ಣ ಹತ್ತಿ ಬಟ್ಟೆಯಲ್ಲಿ ಲಭ್ಯವಿದೆ. ಜತೆಗೆ ರೇಷ್ಮೆ ಮಿಶ್ರಿತ ಹತ್ತಿ ಬಟ್ಟೆಯಲ್ಲಿಯೂ ಲಭ್ಯವಿರುತ್ತದೆ. ಎಲ್ಲ ಸಮಾರಂಭಗಳಿಗೂ ಹೇಳಿ ಮಾಡಿಸಿದ ಸೀರೆಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT