ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬಕ್ಕೆ ವಸ್ತ್ರ ವೈಭವ

Last Updated 25 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ದೀಪಾವಳಿ ಎಂದರೆ ಬೆಳಕು, ಬಣ್ಣ. ಮನೆಮನೆಯಲ್ಲೂ ಬೆಳಕು ಹಬ್ಬದ ಹುಮ್ಮಸ್ಸನ್ನು ಹೆಚ್ಚಿಸಿದರೆ, ಬಣ್ಣಗಳು ಅಲಂಕಾರದ ಅಂದವನ್ನು ಹೆಚ್ಚಿಸುತ್ತವೆ. ಹಬ್ಬದಲ್ಲಿ ಮನಸ್ಸಿನ ಮುದ ಹೆಚ್ಚಿಸಲು ಇವಷ್ಟೇ ಇದ್ದರೆ ಸಾಕೇ ಅಥವಾ ಮೈ ಸೊಗಸನ್ನೂ ಹೆಚ್ಚಿಸಲು ವಸ್ತ್ರಾಭರಣಗಳು ಬೇಡವೇ!

ಈ ದೀಪದ ಹಬ್ಬಕ್ಕೆ ಹೊಸಬಟ್ಟೆ, ಆಭರಣಗಳ ಗುಂಗು ಇಂದು ನಿನ್ನೆಯದಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೂಡ ಈ ‘ದೊಡ್ಡ ಹಬ್ಬ’ಕ್ಕೆ ಮನೆ ಮಂದಿಗೆಲ್ಲ ಹೊಸ ವಸ್ತ್ರಗಳನ್ನು ತರುವ ಹುರುಪು. ಧನ ತ್ರಯೋದಶಿ (ಧನ್‌ ತೇರಾಸ್‌)ಗೆ ಚಿನ್ನದ ಒಡವೆ ತಂದು ಮರುದಿನ ಅಮಾವಾಸ್ಯೆಯಂದು ಪೂಜಿಸಿ ತೊಡುವ ಹರ್ಷ.

ನಗರಗಳಲ್ಲಿ ಇದಕ್ಕೊಂದಿಷ್ಟು ಕಮರ್ಷಿಯಲ್‌ ಸ್ಪರ್ಶವಿದ್ದರೂ ಸೀರೆ, ಆಧುನಿಕ ಉಡುಪುಗಳ ವಿಷಯ ಬಂದಾಗ ಇವೆಲ್ಲ ತಹತಹಗಳು ಹಿಂದೆ ಸರಿದು, ಹೊಸತನ ಅನುಭವಿಸುವ ಭಾವನೆಗಳು ಮುಂಚೂಣಿಗೆ ಬಂದು ಬಿಡುತ್ತವೆ.

ಈ ಹಬ್ಬದ ಖುಷಿಗೆ ವಾರ್ಡ್‌ರೋಬ್‌ನಲ್ಲಿ ತಾಜಾತನಕ್ಕೊಂದಿಷ್ಟು ಅವಕಾಶ ಕೊಡಿ. ಈ ಸಂದರ್ಭದಲ್ಲಿ ಸದ್ದು ಮಾಡುತ್ತಿರುವ ಬಣ್ಣವೆಂದರೆ ಅದು ತಿಳಿ ರಂಗು. ಸಾಂಪ್ರದಾಯಕ ಉಡುಪುಗಳಿಗೆ ಒಂದಿಷ್ಟು ಆಧುನಿಕ ಸ್ಪರ್ಶವನ್ನು ನೀಡಿ, ಹಗುರವೆನಿಸುವಂತೆ ಮಾಡಿ, ಅವುಗಳನ್ನು ತೊಟ್ಟಾಗ ಆಡಂಬರವಾಗಿ ಕಾಣುವಂತೆ ಕೈಚಳಕ ಮೆರೆಯುತ್ತಿದ್ದಾರೆ ಉಡುಪು ವಿನ್ಯಾಸಕರು. ನೀವು ಧರಿಸಿದ ಉಡುಪುಗಳಿಗೆ ಹೊಂದುವಂತಹ ಆಭರಣ, ಅದು ಫ್ಯಾಷನ್‌ ಒಡವೆಗಳೇ ಇರಲಿ, ಹಗುರವಾದ ಚಿನ್ನದ ಅಥವಾ ಬೆಳ್ಳಿಯ ಆಭರಣಗಳೇ ಇರಲಿ, ಪ್ರಯೋಗಕ್ಕೆ, ಸೃಜನಶೀಲತೆಗೆ ಅವಕಾಶವಿದ್ದೇ ಇರುತ್ತದೆ.

ರೇಷ್ಮೆ, ಸ್ಯಾಟಿನ್‌ ವಸ್ತ್ರ ವೈಭವಕ್ಕೂ ಈ ದೀಪಾವಳಿ ಹಬ್ಬದಲ್ಲಿ ಅವಕಾಶವಿದೆ. ಸೀರೆಗಳು ಮಾತ್ರವಲ್ಲ, ಅನಾರ್ಕಲಿ, ಚೂಡಿದಾರ್‌– ಕುರ್ತಾಗೂ ಈ ಸಂದರ್ಭ ಸೂಕ್ತ. ಕುರ್ತಾವನ್ನು ಪಲಾಜೊ ಅಥವಾ ಪ್ಯಾಂಟ್‌ ಜೊತೆಗೆ ಧರಿಸಿ ಮಿಕ್ಸ್‌ ಅಂಡ್‌ ಮ್ಯಾಚ್‌ ಮಾಡಬಹುದು. ಲೆಹಂಗಾ ಅಥವಾ ಇತರ ಉಡುಪಿನ ಮೇಲೆ ಉದ್ದನೆಯ ಕುರ್ತಾ ಧರಿಸಿ ಮೆರೆಯಬಹುದು. ಪಲಾಜೊ, ಸ್ಕರ್ಟ್‌ ಜೊತೆ ಬನಾರಸಿ ದುಪಟ್ಟಾ ಇಡೀ ಹಬ್ಬದ ರಂಗನ್ನೇ ಬದಲಿಸಿಬಿಡಬಹುದು. ಸರಳವಾದ ಕುರ್ತಾ ಜೊತೆ ಪಲಾಜೊ ಅಥವಾ ನೆರಿಗೆಯುಳ್ಳ ಸ್ಕರ್ಟ್‌ ಧರಿಸಿ ಆಕ್ಸಿಡೈಸ್‌ ಮಾಡಿದ ನೆಕ್ಲೇಸ್‌ ಮತ್ತು ಬ್ರೇಸ್‌ಲೆಟ್‌ ಹಾಕಿಕೊಂಡರೆ ಅದರ ಸ್ಟೈಲ್‌ ವಿಭಿನ್ನವಾಗಿ ಕಾಣುತ್ತದೆ.

(ಲೇಖಕಿ ವೋಗ್‌ ಆರ್ಟ್‌ ಅಂಡ್‌ ಡಿಸೈನ್‌ ಇನ್‌ಸ್ಟಿಟ್ಯೂಟ್‌ ಉಪನ್ಯಾಸಕಿ)

ರೂಪದರ್ಶಿಗಳು ವೋಗ್‌ ಆರ್ಟ್‌ ಅಂಡ್‌ ಡಿಸೈನ್‌ ಇನ್‌ಸ್ವಿಟ್ಯೂಟ್‌ ವಿದ್ಯಾರ್ಥಿನಿಯರು
ರೂಪದರ್ಶಿಗಳು ವೋಗ್‌ ಆರ್ಟ್‌ ಅಂಡ್‌ ಡಿಸೈನ್‌ ಇನ್‌ಸ್ವಿಟ್ಯೂಟ್‌ ವಿದ್ಯಾರ್ಥಿನಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT