ಭಾನುವಾರ, ಫೆಬ್ರವರಿ 28, 2021
31 °C

ಏಕೆ, ಅವಸರವು ಹೇಳು..!

ಅನನ್ಯ ಆರ್‌.ಪಿ. Updated:

ಅಕ್ಷರ ಗಾತ್ರ : | |

Prajavani

ಈ ಧಾವಂತದ ಬದುಕಿನಲ್ಲೂ ಮಹತ್ವದ ಕೆಲಸವನ್ನು ಮುಂದೂಡುವ ಮನೋಭಾವ ಹಲವರದ್ದು. ಡೆಡ್‌ಲೈನ್‌ ಎದುರಾದಾಗ ಅವಸರದಲ್ಲಿ ಮಾಡಲು ಹೋಗಿ ಎಡವಿ ಬೀಳುವುದು, ಒತ್ತಡ ಅನುಭವಿಸುವುದಕ್ಕಿಂತ ಒಂದಿಷ್ಟು ಸೂತ್ರಗಳನ್ನು ಅನುಸರಿಸಿದರೆ ಕೆಲಸ ಮಾಡುವುದು ಸಲೀಸಾಗುತ್ತದೆ.

**

ಆಕೆ ಇರುವುದೇ ಹಾಗೆ. ಬೆಳಿಗ್ಗೆ ತೆರೆದ ಫೈಲ್‌ ಹಾಗೆಯೇ ಮಿನಿಮೈಸ್‌ ಆಗಿ ಲ್ಯಾಪ್‌ಟಾಪ್‌ನ ಅಂಚಿಗೆ ಕೂತಿರುತ್ತದೆ. ಅಂದು ನೋಡಿ ಉತ್ತರಿಸಬೇಕಾದ ಮೇಲ್‌ಗಳು ರಾಶಿರಾಶಿ ಬಿದ್ದಿದ್ದರೂ ಒಂದೇ ಮೇಲ್‌ ಮೇಲೆ ಅರ್ಧಂಬರ್ಧ ಕಣ್ಣಾಡಿಸುವುದು. ಫೋನ್‌ ಬಂದಾಗಲೆಲ್ಲ ‘ಆಮೇಲೆ ಮಾತಾಡ್ತೀನಿ’ ಎನ್ನುವ ಸಿದ್ಧ ಉತ್ತರ. ಬೆರಳುಗಳು ಮಾತ್ರ ಮೊಬೈಲ್‌ನಲ್ಲಿ ಆನ್‌ಲೈನ್‌ ಷಾಪಿಂಗ್‌, ಸಾಮಾಜಿಕ ಜಾಲತಾಣದ ಆ್ಯಪ್‌ನಲ್ಲೇ ಓಡಾಡುತ್ತಿರುತ್ತವೆ. ಮಧ್ಯೆ ಮಧ್ಯೆ ಕಾಫಿ ಬ್ರೇಕ್‌.

ಇದು ಮಧ್ಯಾಹ್ನದವರೆಗೂ ಮುಂದುವರಿದು ಇನ್ನೇನು ಗಡಿಯಾರದ ಚಿಕ್ಕ ಮುಳ್ಳು ಐದರ ಸಮೀಪ ಹೋಗಬೇಕು.. ಎನ್ನುವಷ್ಟರಲ್ಲಿ ಆಕೆಯ ಗಡಿಬಿಡಿ ಶುರು. ಫೈಲ್‌ಗಳು ಮ್ಯಾಕ್ಸಿಮೈಸ್‌ ಆಗಿ ಸ್ಕ್ರೀನ್‌ ಮೇಲೆ ಬಂದು ಕೂರುತ್ತವೆ. ಒಂಚೂರು ಅದನ್ನು ನೋಡುವುದು, ಇನ್ನೊಮ್ಮೆ ಮೇಲ್‌ಬಾಕ್ಸ್‌ನಲ್ಲಿ ತಡಬಡಾಯಿಸುವುದು, ತನ್ನನ್ನೇ ತಾನು ಬಯ್ದುಕೊಳ್ಳುವುದು.. ಅಷ್ಟರಲ್ಲೇ ಅಂದಿನ ಡೆಡ್‌ಲೈನ್‌ ಮುಕ್ತಾಯ. ಕೆಲಸವೆಲ್ಲ ನಾಳೆಗೆ ಮುಂದೂಡಿಕೆ.

ಮುಂದೂಡುವುದು ಏಕೆ?

ಇದನ್ನು ಆಲಸ್ಯ ಎನ್ನುತ್ತೀರಾ? ಅಲ್ಲವೇ ಅಲ್ಲ. ಮಾಮೂಲು ಕೆಲಸವೇ ಹೀಗೆ ಎನ್ನಿ ಅಥವಾ ನಮ್ಮ ಮೆದುಳೇ ಅದಕ್ಕೆ ಸೆಟ್‌ ಆಗಿಬಿಟ್ಟಿದೆ ಎನ್ನಿ.. ಒಟ್ಟಿನಲ್ಲಿ ಯಾವುದೇ ಕೆಲಸವಿರಲಿ, ಮುಂದೂಡುವುದು ನಮ್ಮ ಜನ್ಮಸಿದ್ಧ ಹಕ್ಕು ಎಂಬಂತಾಗಿಬಿಟ್ಟಿದೆ. ಎಲ್ಲಿಯವರೆಗೆ ಎಂದರೆ ಇನ್ನೇನು ಅದು ‘ನನ್ನ ಕತ್ತಿನವರೆಗೆ ಬಂದಿದೆಯಪ್ಪಾ?’ ಎನ್ನುವವರೆಗೂ ಆ ಕೆಲಸವನ್ನು ಒತ್ತಟ್ಟಿಗೆ ಇಟ್ಟು ಕೂರುವುದು ನಮ್ಮ ಜಾಯಮಾನ. ಹಾಂ! ಇದಕ್ಕೆ ಲಿಂಗಭೇದವೂ ಇಲ್ಲ. ಆದರೆ ಡೆಡ್‌ಲೈನ್‌ ಬಂದಾಗ ಒತ್ತಡ ಅನುಭವಿಸುವವರು ಮಹಿಳೆಯರೇ!

‘ಪತ್ರಿಕೆಯೊಂದರ ಭಾನುವಾರದ ಸಂಚಿಕೆಗೆ ಲೇಖನ ಬರೆಯುತ್ತೇನೆಂದು ಒಪ್ಪಿಕೊಂಡು ತಿಂಗಳಾಯಿತು. ಈ ಭಾನುವಾರವಾದರೂ ಅರ್ಧ ದಿನ ಕೂತು ಬರೆಯಲೇ ಬೇಕು ಎಂದು ಹಿಂದಿನ ದಿನ ನಿರ್ಧಾರ ಮಾಡಿರುತ್ತೇನೆ. ಆದರೆ ಅಂದು ಬೇಡದ ಕೆಲಸಗಳು, ಆದರೆ ನನಗೆ ಇಷ್ಟವಾದ ಸಿನಿಮಾ ನೋಡುತ್ತ ಕೂತೆ. ಸಮಯ ಸರಿದಿದ್ದೇ ಗೊತ್ತಾಗಲಿಲ್ಲ’ ಎನ್ನುವಾಗ ಲೇಖಕಿ ಮಧುಮಿತಾ ಭಜಂತ್ರಿಯ ಮುಖದಲ್ಲಿ ತಪ್ಪಿತಸ್ಥ ಭಾವ ಮೂಡಿತ್ತು. ಹಾಗಂತ ಆಕೆ ಮುಂದಿನ ಭಾನುವಾರ ಲೇಖನ ಬರೆಯುವ ಕೆಲಸ ಮುಗಿಸುತ್ತಾಳೆ ಎಂದುಕೊಳ್ಳಬೇಡಿ. ಆಕೆಗೆ ಮತ್ತೇನೋ ಹವ್ಯಾಸಗಳು ನೆನಪಾಗಿ ಸಂಪಾದಕರಿಗೆ ನೀಡಿದ ಭರವಸೆ ಮರೆತೇ ಹೋಗಿರುತ್ತದೆ. ‘ನಾಳೆ ಬೇಕೇ ಬೇಕು, ಇಲ್ಲದಿದ್ದರೆ ಬೇರೆ ಲೇಖಕರನ್ನು ಕೋರಬೇಕಾಗುತ್ತದೆ’ ಎಂಬ ಕಠಿಣ ಮಾತು ಸಂಪಾದಕರಿಂದ ಬಂದಾಗ ಮಾತ್ರ ರಾತ್ರಿಯಾದರೂ ಕೂತು ಬರೆದು ಮರುದಿನ ನಿದ್ರೆ ಕೊರತೆಯಾಗಿದ್ದಕ್ಕೆ ತಲೆನೋವು ಅನುಭವಿಸುವ ಹಣೆಬರಹ ಆಕೆಯದು.

ಗುಣಮಟ್ಟದ ಮೇಲೆ ಪರಿಣಾಮ

ಮೇಲ್ನೋಟಕ್ಕೆ ಇದೇನು ಮಹಾ! ಡೆಡ್‌ಲೈನ್‌ ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದು ಸುಲಭ ಎನ್ನಿಸಬಹುದು. ಆದರೆ ಇಲ್ಲಿ ಬಹಳಷ್ಟು ಸಲ ತೊಂದರೆ ಬೇರೆಯವರಿಂದ ಬರಲಾರದು. ನಮಗೆ ನಾವೇ ತೊಂದರೆ ಮಾಡಿಕೊಳ್ಳುವುದು, ನಂತರ ಅವಸರದಲ್ಲಿ ಕೆಲಸ ಮಾಡಲು ಹೋಗಿ ಒತ್ತಡ ಅನುಭವಿಸುವುದು. ಇದು ಕೆಲಸದ ಗುಣಮಟ್ಟದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ.

ಅಂದರೆ ಒಂದು ಕೆಲಸದ ಪ್ರಾಮುಖ್ಯತೆ ಗೊತ್ತಿದ್ದರೂ, ಇನ್ನೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ಆ ಕೆಲಸ ಕಷ್ಟಕರ ಅಥವಾ ಮನಸ್ಸಿಗೆ ಒಗ್ಗುವುದಿಲ್ಲ ಎಂದು ಅನಿಸಿದರೆ ಅದು ಎಷ್ಟೇ ಮಹತ್ವದ್ದಾದರೂ ಬದಿಗಿಟ್ಟು, ಯಾವುದು ಸುಲಭವೋ, ಮನಸ್ಸಿಗೆ ಹಿತ ಎನ್ನಿಸುವುದೋ ಅದನ್ನೇ ಮಾಡುತ್ತ ಕೂರುವುದು. ಆಗ ಮುಖ್ಯವಾದ ಕೆಲಸಗಳೆಲ್ಲ ಬಾಕಿ ಉಳಿದು ಮನಸ್ಸನ್ನು ಕುಟುಕಲು ಆರಂಭಿಸುತ್ತವೆ. ಏನನ್ನೂ ಸಾಧಿಸಿಲ್ಲ ಎಂಬ ತಪ್ಪಿತಸ್ಥ ಭಾವ ಕಾಡಲು ಶುರುವಾಗುತ್ತದೆ. ಉತ್ಪಾದಕತೆ ಕುಸಿದು, ಗುರಿ ಮುಟ್ಟಲು ವಿಫಲರಾಗಬೇಕಾಗುತ್ತದೆ.

ಆರಂಭಶೂರರು!

ಇಲ್ಲಿ ಆರಂಭಶೂರರೇ ಅಧಿಕ. ಎಲ್ಲದಕ್ಕೂ ಯೋಜನೆ ರೂಪಿಸಿ ಕೆಲಸ ಮಾಡುವ ಹುಮ್ಮಸ್ಸು ಬಹುತೇಕರದ್ದು. ಸೋಮವಾರ, ಮಂಗಳವಾರ.. ಎಂದೆಲ್ಲ ವೇಳಾಪಟ್ಟಿ ಹಾಕಿಕೊಂಡು, ಆದ್ಯತೆ ಮೇಲೆ ಕೆಲಸ ಗುರುತಿಸುತ್ತ ಹೋಗುತ್ತಾರೆ. ಆದರೆ ಜಾರಿಗೊಳಿಸು
ವುದಕ್ಕೆ ಮಾತ್ರ ಈ ವೇಳಾಪಟ್ಟಿಯಲ್ಲಿ ಕೆಲಸ ಮಾಡುವುದಿಲ್ಲ.

ಯಾವುದಕ್ಕೆ ಆದ್ಯತೆ ನೀಡಿ ಕೆಲಸ ಮಾಡಬೇಕು ಎಂದು ಪಟ್ಟಿ ಮಾಡಿಕೊಂಡು ಕೆಲಸ ಮಾಡುವುದರಿಂದ ಅಂದುಕೊಂಡ ಸಮಯಕ್ಕೆ ಕೆಲಸ ಮುಗಿಸಬಹುದು. ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿರುವ ಶ್ರೀಧರ್‌ ಮೇಲಿನಮನಿ ಕೂಡ ಇದನ್ನೇ ಹೇಳುವುದು.

‘ಬೆಳಿಗ್ಗೆ ಕಾಫಿ ಕುಡಿಯುವಾಗ ಮನಸ್ಸಿನಲ್ಲೇ ಒಂದು ಪಟ್ಟಿ ರೂಪುಗೊಳ್ಳುತ್ತದೆ. ಇವತ್ತು ಮಾಡುವ ಕೆಲಸಗಳು, ಅವುಗಳಲ್ಲಿ ಮೊದಲು ಮುಗಿಸಬೇಕಾದ ಕೆಲಸ.. ಹೀಗೆ ಪಟ್ಟಿ ಮಾಡಿಕೊಂಡು ಕೆಲಸ ಶುರು ಮಾಡುತ್ತೇನೆ. ನೂರಕ್ಕೆ ನೂರರಷ್ಟು ಕೆಲಸ ಮುಗಿಯದಿದ್ದರೂ, ಬಹುತೇಕ ಮಹತ್ವದ ಕೆಲಸ ಮುಗಿಸಿದ ತೃಪ್ತಿ ದಿನದ ಕೊನೆಗಿರುತ್ತದೆ’ ಎನ್ನುವ ಅವರ ಮಾತಿನಲ್ಲಿ ಒತ್ತಡದಿಂದ ಪಾರಾಗುವ ಸುಳಿವೂ ಇದೆ.

ಆದರೆ ಮಾಧ್ಯಮದಲ್ಲಿ ಕೆಲಸ ಮಾಡಿ ಈಗ ಬ್ರೇಕ್‌ ತೆಗೆದುಕೊಂಡಿರುವ ಸುಜ್ಞಾನ ಮೂರ್ತಿಗೆ ಇದು ಹೇಳುವಷ್ಟು ಸುಲಭವಲ್ಲ. ‘ಮಾಧ್ಯಮದಲ್ಲಿ ಕೆಲಸ ಮಾಡುವಾಗ ಅಂದಿನ ಕೆಲಸ ಅಂದೇ ಮಾಡಬೇಕಿತ್ತು. ಡೆಡ್‌ಲೈನ್‌ ಎಂಬುದು ಯಾವಾಗಲೂ ಮನಸ್ಸಿನಲ್ಲೇ ಇರುತ್ತಿತ್ತು. ಬೇರೆ ಯಾವುದಕ್ಕೂ ಸಮಯವಿಲ್ಲ ಎಂದು ಒಂದೇ ಸಮನೆ ಕೆಲಸ ಮಾಡುತ್ತಿದ್ದೆ. ಆದರೆ ಈಗ ದಂಡಿಯಾಗಿ ಸಮಯವಿದೆ. ನಾಳೆ ಮಾಡಿದರಾಯಿತು ಎಂಬ ಮನೋಭಾವ. ಎಷ್ಟೆಂದರೆ ಉದ್ಯೋಗದಲ್ಲಿದ್ದಾಗ ಬರೆದ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕೆಂದು ನಿರ್ಧರಿಸಿ ವರ್ಷಗಳೇ ಉರುಳಿದವು. ಇನ್ನೂ ಸಾಧ್ಯವಾಗಿಲ್ಲ ಎನ್ನುವುದಕ್ಕಿಂತ ನಾಳೆ, ನಾಡಿದ್ದು.. ಎಂದು ಮುಂದೂಡಿಕೊಂಡು ಬಂದಿದ್ದೇನೆ’ ಎನ್ನುತ್ತ ನಿಟ್ಟುಸಿರು ಬಿಡುತ್ತಾಳೆ.

ನಿವೃತ್ತ ಕಾಲೇಜು ಪ್ರಾಧ್ಯಾಪಕ ಪ್ರೊ. ಬಸವರಾಜು ಅಕ್ಕಿಹಾಳ್‌ ಹೇಳುವುದೇ ಬೇರೆ. ‘ಕಷ್ಟಕರವಾದ ಕೆಲಸ ಮೊದಲು ಮಾಡಿ. ಅದನ್ನು ಮುಗಿಸಿದ ನಂತರ ಮನಸ್ಸು ನಿರಾಳವಾಗುತ್ತದೆ. ನಂತರ ಸುಲಭವಾದ ಕೆಲಸಗಳನ್ನು ಮಾಡುತ್ತ ಹೋಗಬಹುದು’ ಎಂಬುದು ಅವರ ಅನುಭವದ ಮಾತು.

ಆದರೆ ಮನಸ್ಸು ಹಾತೊರೆಯುವುದು ಸುಲಭದ ಕೆಲಸಗಳತ್ತ. ಕಷ್ಟಕರ ಕೆಲಸಗಳು ಹಾಗೇ ಉಳಿದುಕೊಂಡು ಕಾಡಿಸುತ್ತವೆ. ಮನಸ್ಸನ್ನು ಕೆಡಿಸಿಬಿಡುತ್ತವೆ.

**

ಹೀಗೆ ಮಾಡಿ

* ಮಹತ್ವದ ಕೆಲಸಗಳನ್ನು ಪಟ್ಟಿ ಮಾಡಿ.

* ಮುಖ್ಯವಾದ ಕೆಲಸಕ್ಕೆ ಸಮಯ ನಿಗದಿಪಡಿಸಿಕೊಂಡು ಮೊದಲು ಮಾಡಿ ಮುಗಿಸಿ.

* ನಿಮ್ಮ ಏಕಾಗ್ರತೆ ಕೆಡಿಸುವಂತಹ ಚಟಗಳನ್ನು ದೂರವಿರಿಸಿ.

 * ಕೆಲಸ ಮುಗಿಸುವ ಬಗ್ಗೆ ಎಚ್ಚರಿಸುವಂತೆ ಸಹೋದ್ಯೋಗಿಗಳ ಬಳಿ ಕೇಳಿಕೊಳ್ಳಿ.

* ಸಮಸ್ಯೆಗಳು ಬಂದರೆ ತಕ್ಷಣ ಪರಿಹರಿಸುವತ್ತ ಗಮನಹರಿಸಿ. ಇಲ್ಲದಿದ್ದರೆ ಹಾಗೇ ರಾಶಿಯಾಗುತ್ತಾ ಹೋಗುತ್ತದೆ.

* ಅಂತರ್ಜಾಲ, ಆ್ಯಪ್‌, ಸಾಮಾಜಿಕ ಜಾಲತಾಣ, ಆನ್‌ಲೈನ್‌ ಷಾಪಿಂಗ್‌ನಂತಹ ಸಮಯ ಕೊಲ್ಲುವ ಹವ್ಯಾಸಕ್ಕೆ ಪೂರ್ಣವಿರಾಮವಲ್ಲದಿದ್ದರೂ ಅಲ್ಪವಿರಾಮ ನೀಡಿ.

* ಟಾಸ್ಕ್‌ ಮ್ಯಾನೇಜ್‌ಮೆಂಟ್‌ ಆ್ಯಪ್‌ ಬಳಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು