ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಮಹಿಳೆಯರ ಮಧ್ಯವಯಸ್ಸಿನ ಬಿಕ್ಕಟ್ಟುಗಳು

Last Updated 1 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ನಲವತ್ತೈದರ ಹರೆಯ ತಲುಪತ್ತಲೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು. ಏಕೆಂದರೆ, ಈ ಹಂತದಲ್ಲಿ ಅನುಸರಿಸುವ ಉತ್ತಮ ಜೀವನಶೈಲಿ ಮುಂದಿನ ದಿನಗಳಲ್ಲಿಯೂ ಅವರ ಆರೋಗ್ಯವನ್ನು ಕಾಪಾಡಬಲ್ಲದು ಎನ್ನುತ್ತವೆ ಅಧ್ಯಯನಗಳು. ಈಗ ವಹಿಸುವ ಕಾಳಜಿಯಿಂದ ವಯಸ್ಸಾದ ದಿನಗಳಲ್ಲಿಯೂ ಹೃದಯ ಮತ್ತು ಇತರ ಅಂಗಾಂಗ ವ್ಯವಸ್ಥೆಗಳ ಕಾರ್ಯಕ್ಷಮತೆ ಮತ್ತು ಮೆದುಳಿನ ಗ್ರಹಿಕಾ ಶಕ್ತಿ ಉತ್ತಮ ಮಟ್ಟದಲ್ಲಿರುತ್ತದೆ ಎನ್ನುತ್ತಾರೆ ವೈದ್ಯವಿಜ್ಞಾನಿಗಳು.

ಋತುಬಂಧದ ಆಸುಪಾಸಿನ ಈ ಹರೆಯದಲ್ಲಿ ಕ್ಷೀಣಗೊಳ್ಳುವ ಅಂಡಾಶಯದ ಕಾರ್ಯಕ್ಷಮತೆ ಶರೀರದ ಇತರ ಅಂಗಾಂಗಗಳ ಮೇಲೆಯೂ ಮಹತ್ತರವಾದ ಪರಿಣಾಮವನ್ನು ಬೀರಬಲ್ಲದು. ಇಳಿಮುಖವಾಗುವ ಅಂಡಾಶಯದ ರಸದೂತಗಳು ಮೊಟ್ಟಮೊದಲನೆಯದಾಗಿ ಮಾಸಿಕ ಋತುಚಕ್ರದ ಏರುಪೇರಿಗೆ ಕಾರಣವಾಗುತ್ತವೆ. ಇದರ ಜೊತೆಯಲ್ಲಿಯೇ ಆಗಾಗ್ಗೆ ಮುಖ ಮತ್ತು ಕುತ್ತಿಗೆಯ ಭಾಗ ಕೆಂಪಾಗಿ ಬಿಸಿಯಾಗುವುದು, ವಿಪರೀತ ತಲೆನೋವು, ವೇಗವಾದ ಎದೆ ಬಡಿದುಕೊಳ್ಳುವಿಕೆ, ಅತಿಯಾದ ಬೆವರುವಿಕೆ ಆಕೆಯನ್ನು ಘಾಸಿಗೊಳಿಸುತ್ತವೆ. ಇನ್ನು ಕೆಲವರನ್ನು ನಿದ್ರಾಹೀನತೆ, ಮರೆವು, ಏಕಾಗ್ರತೆಯ ಕೊರತೆಯೂ ಕಾಡಬಹುದು. ಈ ಘಟ್ಟದಲ್ಲಿ ಮಹಿಳೆಯರು ತೀವ್ರ ಭಾವೋದ್ವೇಗಕ್ಕೊಳಗಾಗಿ ಸಣ್ಣಪುಟ್ಟದಕ್ಕೂ ಸಿಡುಕುವುದೂ ಈ ಕಾರಣದಿಂದಲೇ. ಕುಟುಂಬದಲ್ಲಿನ ಇತರ ಸಮಸ್ಯೆಗಳು ಆಕೆಯ ಮಾನಸಿಕ ವೈಪರೀತ್ಯವನ್ನು ಇನ್ನಷ್ಟು ಹೆಚ್ಚಿಸಬಹುದು. ಹಾಗಾಗಿಯೇ ಮನೆಯ ಎಲ್ಲ ಸದಸ್ಯರ ಸಾಂತ್ವನ ಮತ್ತು ಬೆಂಬಲ ಈ ವಯಸ್ಸಿನಲ್ಲಿ ಮಹಿಳೆಗೆ ಅತ್ಯವಶ್ಯ.

ಸಾಮಾನ್ಯವಾಗಿ ನಲವತ್ತರ ನಂತರ ಮೂಳೆಗಳ ಸಾಂದ್ರತೆ ಇಳಿಮುಖವಾಗುತ್ತದೆ. ಮಹಿಳೆಯರಲ್ಲಿ ಅಂಡಾಶಯದಿಂದ ಸ್ರವಿಸುವ ಈಸ್ಟ್ರೋಜನ್ ಕ್ಷೀಣಿಸುವಿಕೆಯಿಂದ ಈ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯುತ್ತದೆ. ಇದರಿಂದ ಶರೀರದ ಮೂಳೆಗಳು ಟೊಳ್ಳಾಗಿ, ಸಣ್ಣ ಪುಟ್ಟ ಪೆಟ್ಟಿಗೂ ಮುರಿತಕ್ಕೊಳಗಾಗಬಹುದು. ಆಹಾರದಲ್ಲಿನ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಯು ಮೂಳೆ ಟೊಳ್ಳಾಗುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗವಾಗಿಸುತ್ತದೆ.

ರಸದೂತಗಳ ವ್ಯತ್ಯಾಸದಿಂದಾಗಿ ನಿತಂಬ ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರವಾಗುತ್ತದೆ. ವಯಸ್ಸಾಗುವ ಕಾರಣದಿಂದ ಕುಗ್ಗುವ ಚಯಾಪಚಯಾ ಕ್ರಿಯೆ ಮತ್ತು ದೋಷಪೂರಿತ ಆಹಾರ ಕ್ರಮದಿಂದಾಗಿ ಆಕೆಯ ದೇಹತೂಕ ಏರುಮುಖವಾಗುತ್ತದೆ. ಇದು ಕೂಡ ಒಮ್ಮೊಮ್ಮೆ ಆಕೆಯ ಮಾನಸಿಕ ತುಮುಲಕ್ಕೆ ಕಾರಣವಾಗಬಹುದು.

ಬೊಜ್ಜು ಮತ್ತು ಸ್ಥೂಲಕಾಯದ ಸಂಭವನೀಯ ಪರಿಣಾಮಗಳು ಒಂದೆರಡಲ್ಲ. ಈ ಏರಿದ ತೂಕ ಶರೀರದ ಕೀಲುಗಳಿಗೆ, ಅದರಲ್ಲಿಯೂ ಮುಖ್ಯವಾಗಿ ಮಂಡಿಗಳಿಗೆ ಬಹಳ ಅಪಾಯಕಾರಿ. ಶರೀರದ ಅತಿಯಾದ ಭಾರ ತನ್ನ ಮೇಲೆ ಬೀಳುವುದರಿಂದ ಕೀಲುಗಳ ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಟೊಳ್ಳಾದ ಮೂಳೆಗಳು ಮತ್ತು ತೆಳುವಾದ ಕೀಲು ಪದರಗಳಿಂದ ಆವೃತವಾದ ಕೀಲುಗಳಲ್ಲಿ ಉರಿಯೂತ ಪ್ರಕ್ರಿಯೆ ಆರಂಭವಾಗಿ ಸಂಧಿವಾತಕ್ಕೆ ಕಾರಣವಾಗುತ್ತದೆ. ಕೀಲುನೋವು ಅಥವಾ ಸಂಧಿವಾತ ಬಹುತೇಕ ಮಧ್ಯವಯಸ್ಸಿನ ಮಹಿಳೆಯರನ್ನು ಕಾಡುವ ಪ್ರಮುಖ ಸಮಸ್ಯೆ. ಇದು ಅವರ ದೈಹಿಕ ಕ್ಷಮತೆಯನ್ನು ಸಾಕಷ್ಟು ಕುಗ್ಗಿಸಿ ಚಲನವಲನಗಳನ್ನು ನಿರ್ಬಂಧಿಸುತ್ತದೆ.

ಈ ವಯಸ್ಸಿನಲ್ಲಿ ಹೊಟ್ಟೆ ಮತ್ತು ಸೊಂಟದ ಸುತ್ತ ಶೇಖರವಾಗುವ ಕೊಬ್ಬು ಮಧುಮೇಹವನ್ನು ಆಹ್ವಾನಿಸುತ್ತದೆ. ನಲವತ್ತರ ಆಸುಪಾಸಿನಲ್ಲಿ ಅಂಟಿಕೊಳ್ಳುವ ಅಧಿಕ ರಕ್ತದೊತ್ತಡ ಮಹಿಳೆಯರನ್ನು ಮತ್ತಷ್ಟು ಮೆತ್ತಗಾಗಿಸುತ್ತದೆ. ಕ್ಷೀಣಿಸುವ ಚಯಾಪಚಯ ಕ್ರಿಯೆ ಮತ್ತು ಜಡ ಜೀವನಶೈಲಿಯಿಂದಾಗಿ ರಕ್ತದ ವಿವಿಧ ಬಗೆಯ ಕೊಬ್ಬಿನಾಂಶವೂ ಹೆಚ್ಚಾಗಬಹುದು. ಎಲ್‍ಡಿಎಲ್ ಎಂಬ ಕೊಬ್ಬಿನಾಂಶವು ಬಹು ಅಪಾಯಕಾರಿಯಾಗಿದ್ದು, ರಕ್ತನಾಳಗಳ ಒಳಪದರಗಳಲ್ಲಿ ಶೇಖರವಾಗಿ ಅಂಗಾಂಗಗಳ ರಕ್ತ ಪೂರೈಕೆಯಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ. ಇದು ಮುಖ್ಯವಾಗಿ ಹೃದಯ ಮತ್ತು ಮೆದುಳಿನ ರಕ್ತಪೂರೈಕೆಗೆ ತಡೆಯೊಡ್ಡಿ ಹೃದಯಾಘಾತ ಮತ್ತು ಸ್ಟ್ರೋಕ್‍ಗೆ ಕಾರಣವಾಗಬಹುದು. ಸರಿಯಾಗಿ ನಿಯಂತ್ರಿಸದ ಮಧುಮೇಹವು ಮೂತ್ರಪಿಂಡ, ಕಣ್ಣು ಹಾಗೂ ನರಗಳ ಕಾರ್ಯಕ್ಷಮತೆಯನ್ನೂ ಕುಗ್ಗಿಸಬಹುದು.

ನಲವತ್ತೈದರ ನಂತರ ಸ್ತನ, ಅಂಡಾಶಯ, ಗರ್ಭಕೋಶ ಮತ್ತು ಗರ್ಭ ಕೊರಳಿನ ಕ್ಯಾನ್ಸರ್‌ಗಳ ಸಂಭವ ಹೆಚ್ಚು. ಹಾಗಾಗಿ ಈ ಎಲ್ಲ ಕ್ಯಾನ್ಸರ್ ಗುಣಲಕ್ಷಣಗಳ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರಬೇಕು. ಸ್ತನಗಳಲ್ಲಿ ಕಂಡುಬರುವ ಗಡ್ಡೆ, ಸ್ತನತೊಟ್ಟುಗಳ ಗಾತ್ರ-ಆಕಾರಗಳಲ್ಲಿ ವ್ಯತ್ಯಾಸ, ತೊಟ್ಟುಗಳಿಂದ ರಕ್ತ ಮಿಶ್ರಿತ ಅಥವಾ ತಿಳಿ ಬಣ್ಣದ ದ್ರವ ಸ್ರವಿಸುವಿಕೆ ಮೊದಲಾದ ಲಕ್ಷಣಗಳು ಕಂಡು ಬಂದಾಗ ಕೂಡಲೇ ವೈದ್ಯರಲ್ಲಿ ಸಲಹೆ ಪಡೆಯಬೇಕು. ಯೋನಿಯಲ್ಲಿ ಅತಿಯಾದ ರಕ್ತಸ್ರಾವ, ದುರ್ವಾಸನೆಯುಕ್ತ ಬಿಳಿಮುಟ್ಟು, ಋತುಬಂಧವಾಗಿ ಒಂದು ವರ್ಷದ ನಂತರ ಮುಟ್ಟು ಕಾಣಿಸಿಕೊಳ್ಳುವುದು, ಲೈಂಗಿಕ ಸಂಪರ್ಕದ ನಂತರ ರಕ್ತಸ್ರಾವ ಮೊದಲಾದ ಲಕ್ಷಣಗಳನ್ನು ನಿರ್ಲಕ್ಷ್ಯಿಸಬಾರದು.

ನಿಃಶಕ್ತಿ, ಆಯಾಸ ಮತ್ತು ಕೆಲಸದಲ್ಲಿ ನಿರಾಸಕ್ತಿ ಈ ವಯಸ್ಸಿನ ಮಹಿಳೆಯರನ್ನು ಕಾಡುವ ಮತ್ತೊಂದು ಮುಖ್ಯ ಸಮಸ್ಯೆ. ಬಹುತೇಕರಲ್ಲಿ ರಕ್ತಹೀನತೆಯೇ ಇದಕ್ಕೆ ಮುಖ್ಯ ಕಾರಣ. ಆಹಾರದಲ್ಲಿ ಕಬ್ಬಿಣ, ಫೋಲಿಕ್ ಆಮ್ಲ ಮತ್ತಿತರ ಪೌಷ್ಟಿಕಾಂಶಗಳ ಕೊರತೆ ಮತ್ತು ಅಧಿಕ ರಕ್ತಸ್ರಾವದ ಪರಿಣಾಮವೇ ರಕ್ತಹೀನತೆ. ರಕ್ತ ಪರೀಕ್ಷೆಯಿಂದ ಅದನ್ನು ಗುರುತಿಸಿ, ಸೂಕ್ತ ಔಷಧೋಪಚಾರವನ್ನು ಪಡೆಯುವುದು ಅತ್ಯಗತ್ಯ. ಒಮ್ಮೊಮ್ಮೆ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ವ್ಯತ್ಯಾಸವಾದಾಗಲೂ ಆಯಾಸ ಕಾಣಿಸಿಕೊಳ್ಳಬಹುದು. ಸಮಸ್ಯೆಯನ್ನು ಗುರುತಿಸಿ ವೈದ್ಯರ ಸಲಹೆಯ ಮೇರೆಗೆ ಔಷಧೋಪಚಾರದ ಮೂಲಕ ಸಮಸ್ಯೆಯನ್ನು ನಿಗ್ರಹಿಸಬಹುದು. ಜೊತೆಯಲ್ಲಿಯೇ ಸತ್ವಯುತ ಆಹಾರ ಸೇವನೆಯತ್ತಲೂ ಗಮನಹರಿಸಬೇಕು.

ಜೀವನಶೈಲಿ ಹೀಗಿರಲಿ

lಆದಷ್ಟೂ ನಿಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಲು ಪ್ರಯತ್ನಿಸಿ. ಈ ಬಗ್ಗೆ ಆರಂಭದಿಂದಲೂ ಕಾಳಜಿ ಇದ್ದರೆ ಒಳಿತು.

lಆಹಾರದಲ್ಲಿ ಸಿಹಿತಿಂಡಿಗಳು, ಬೆಣ್ಣೆ, ತುಪ್ಪ, ಎಣ್ಣೆಯಲ್ಲಿ ಕರಿದ, ಹುರಿದ ಪದಾರ್ಥಗಳು ಆದಷ್ಟು ಮಿತಿಯಲ್ಲಿರಲಿ. ಸಂಸ್ಕರಿಸಿದ ಆಹಾರಗಳು ಬೇಡವೇ ಬೇಡ.

lಸೊಪ್ಪು, ಹಸಿರು ತರಕಾರಿಗಳು, ಹಣ್ಣು, ಮೊಳಕೆಕಾಳುಗಳು, ಮೊಟ್ಟೆ, ಹಾಲು, ದ್ವಿದಳ ಧಾನ್ಯಗಳು ನಿಮ್ಮ ನಿತ್ಯದ ಆಹಾರದಲ್ಲಿರಲಿ.
ವೈದ್ಯರ ಸಲಹೆಯ ಮೇರೆಗೆ ಪೂರಕ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ತೆಗೆದುಕೊಳ್ಳಿ.

lಯಾವುದಾದರೊಂದು ಬಗೆಯ ವ್ಯಾಯಾಮವನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಿರಿ. ವಾಕಿಂಗ್, ಜಾಗಿಂಗ್, ಜಿಮ್‍ನಲ್ಲಿ ಬೆವರಿಳಿಸುವಿಕೆ,

lಯೋಗ, ಈಜು, ಯಾವುದಾದರೂ ಸರಿಯೆ, ಆದರೆ ನಿಯಮಿತವಾಗಿರಲಿ. ನೆನಪಿಡಿ, ವ್ಯಾಯಾಮದಿಂದ ನಿಮ್ಮ ಸ್ನಾಯುಗಳು ಸಬಲಗೊಂಡು ಸುಸ್ಥಿತಿಯಲ್ಲಿರುತ್ತವೆ.

lನಿಮ್ಮ ಮಾನಸಿಕ ತುಮುಲಗಳನ್ನು ಕುಟುಂಬವರೊಡನೆ ಮತ್ತು ಆಪ್ತರೊಡನೆ ಹಂಚಿಕೊಳ್ಳಿರಿ.

lಅತಿಯಾದ ಮೊಬೈಲ್ ಬಳಕೆ ಮತ್ತು ಇತರ ರೀತಿಯ ಕಾಲಹರಣವನ್ನು ಮಿತಿಗೊಳಿಸಿ. ಒಳ್ಳೆಯ ಪುಸ್ತಕಗಳನ್ನು ಓದಿ ನಿಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳಿ. ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಿ.

lಒಳ್ಳೆಯ ಸ್ನೇಹಿತರನ್ನು ಸಂಪಾದಿಸಿ. ಸದಾ ಕ್ರಿಯಾಶೀಲರಾಗಿರಿ. ಆಗಾಗ್ಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ. ಇದು ನಿಮ್ಮ ದೇಹ ಮತ್ತು ಮನಸ್ಸುಗಳನ್ನು ಪ್ರಫುಲ್ಲವಾಗಿಡುತ್ತದೆ.

lನಿಮ್ಮ ಪ್ರವೃತ್ತಿಗಳನ್ನು ಪ್ರಜ್ಞಾಪೂರ್ವಕವಾಗಿ ಪೋಷಿಸಿಕೊಳ್ಳಿರಿ.

lವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಿರಿ. ರಕ್ತದೊತ್ತಡ, ಮಧುಮೇಹ, ಕೊಬ್ಬಿನಾಂಶವನ್ನು ಆರಂಭದಿಂದಲೇ ನಿಯಂತ್ರಣದಲ್ಲಿಡುವುದು ಸೂಕ್ತ.

lವೈದ್ಯರ ಸಲಹೆಯ ಮೇರೆಗೆ ಕ್ಯಾನ್ಸರ್ ಸ್ಕ್ರೀನಿಂಗ್ ಪರೀಕ್ಷೆಗಳಾದ ಪ್ಯಾಪ್ ಸ್ಮಿಯರ್ ಪರೀಕ್ಷೆ ಮತ್ತು ಮ್ಯಾಮೊಗ್ರಾಮ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT