ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 14 - ವಿಶ್ವ ತಾಯಂದಿರ ದಿನ | ಅಮ್ಮ ನಿನ್ನ ಎದೆಯಾಳದಲ್ಲಿ

Published 12 ಮೇ 2023, 22:50 IST
Last Updated 12 ಮೇ 2023, 22:50 IST
ಅಕ್ಷರ ಗಾತ್ರ

ಡಾ. ಶುಭಾ ಮಧುಸೂದನ್‌

ಮೇ 14. ವಿಶ್ವ ತಾಯಂದಿರ ದಿನ. ವಾತ್ಸಲ್ಯ, ಮಮತೆ ಇವುಗಳ ರೂಪಕವೇ ಆಗಿರುವ ಅಮ್ಮನ ಕಾಳಜಿಯೊಂದು ಇದ್ದರೆ ಎಂಥ ಸೋಲನ್ನು ಸೋಲಿಸಬಹುದು. ದಣಿವರಿಯದೇ ದುಡಿಯುವ ಅಮ್ಮಂದಿರಿಗೂ ಆರೈಕೆಯ ಅಗತ್ಯವಿದೆ. ಇಡೀ ಕುಟುಂಬ ವ್ಯವಸ್ಥೆಯ ಬೇರುಗಳಂತಿರುವ ಅಮ್ಮಂದಿರ ಎದೆಯ ದನಿಗೆ ಕಿವಿಯಾಗೋಣ.

ಇ ಪ್ಪತ್ತೇಳು ವರ್ಷದ ಸಮನ್ವಿತಾ ಸ್ನಾತಕೋತ್ತರ ಪದವೀಧರೆ. ಒಂದೂವರೆ ವರ್ಷದ ಮಗು ಇರುವ ಆಕೆಗೆ ಕೆಲಸಕ್ಕೂ ಹೋಗಬೇಕೆಂಬ ಆಸೆ. ಆದರೆ ಗಂಡ ಮತ್ತು ಅತ್ತೆಯಿಂದ  ಅಸಹಕಾರ. ಕಲಿತ ವಿದ್ಯೆಗೆ ಬೆಲೆ ಇಲ್ಲವಲ್ಲ ಎಂದು ಒಮ್ಮೇಲೆ ಬೇಸರ ಬಂದರೆ, ಮಗು ಬಿದ್ದು ಪೆಟ್ಟುಮಾಡಿಕೊಂಡಾಗ, ‘ಅಬ್ಬಾ! ಕೆಲಸಕ್ಕೆ ಹೋಗಿದ್ದರೆ ಮಗುವನ್ನು ನೋಡಿಕೊಳ್ಳಲು ಆಗುತ್ತಿರಲಿಲ್ಲ. ಮಗುವನ್ನು ನೋಡಿಕೊಳ್ಳದೇ ಹೋದರೆ ನಾನೊಬ್ಬ ತಾಯಿಯಾ’ ಎಂಬ ಪ್ರಶ್ನೆ ಕಾಡುತ್ತದೆ. ಎರಡೂ ಸಂದರ್ಭಗಳಲ್ಲಿ ಅವಳ ಅಂತರಾತ್ಮ ಅವಳನ್ನು ಬಿಟ್ಟು ಬಿಡದೇ ಚುಚ್ಚುತ್ತದೆ. 

ತಾಯಿಯ ಅನುಪಸ್ಥಿತಿಯಲ್ಲಿ ಮಗು ಭಾವಶೂನ್ಯವಾಗಿ ಬೆಳೆಯುವುದೇ ಎಂಬ ಅನುಮಾನದ ಜತೆಗೆ, ಅನುಭವವಿಲ್ಲದೆ ನಂತರ ಯಾರು ಕೆಲಸ ಕೊಡುತ್ತಾರೆ ಎಂಬ ಪ್ರಶ್ನೆಯೂ ಏಳುತ್ತದೆ. ತಾಯ್ತನ, ಮಗು ಹಾಗೂ ಮನೆಯ ದೇಖರೇಖಿ ನೋಡಿಕೊಳ್ಳಲ್ಲಷ್ಟೇ ಬದುಕು ಸೀಮಿತವಾಯಿತೇನೋ ಎಂಬ ನೋವು ಇದ್ದೇ ಇರುತ್ತದೆ.

ಇದು ಒಂದು ಬಗೆಯ ಅಮ್ಮಂದಿರ ತೊಳಲಾಟವಾದರೆ. ಹಾಗೆಯೇ ಮನೆಯ ಅಷ್ಟೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಮತ್ತೊಂದು ಕಡೆ ಉದ್ಯೋಗವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿವರ್ಹಿಸುವ ಅಮ್ಮಂದಿರ ದೊಡ್ಡ ಪಡೆಯೇ ಇದೆ. ಅವರಲ್ಲಿಯೂ ಇರುವುದು ಮಗುವಿಗೆ ಸರಿಯಾಗಿ ಸಮಯ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಬೇಸರ. ಮನೆಯನ್ನು ಒಪ್ಪವಾಗಿ ನೋಡಿಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ಹಳಹಳಿಕೆಯೇ. 

ಮನೆ, ಗಂಡ, ಮಕ್ಕಳು, ಮೊಮ್ಮಕ್ಕಳು ಹೀಗೆ ಎಲ್ಲರನ್ನೂ ನೋಡಿಕೊಳ್ಳುವ ಅಮ್ಮಂದಿರ ಎದೆಯಲ್ಲಿ ಆಯಾ ಕಾಲಕ್ಕೆ ಹೊಸ ತಲ್ಲಣದ ನದಿಯೊಂದು ಗುಪ್ತವಾಗಿ ಹರಿಯುತ್ತಲೇ ಇರುತ್ತದೆ. ಅದರ ಹರಿಯುವಿಕೆಯ ದನಿಗೆ ಒಮೊಮ್ಮೆ ಓಗೊಟ್ಟು ಓಗೊಡದಂತಿರುವುದು ಅವಳಿಗೆ ಮಾತ್ರ ಸಾಧ್ಯ. 

ಭವದ್ದು, ಭಾವದ್ದು ಎಂಥದ್ದೆ ಸಮಸ್ಯೆ ಬಂದರೂ ಮೊದಲು ತಟ್ಟುವುದು ಮಾತೃ ಹೃದಯಕ್ಕೆ. ಬದುಕಿನ ನಾನಾ ಹಂತಗಳುದ್ದಕ್ಕೂ ಇರುವ ಧರ್ಮಸಂಕಟಗಳ ನಡುವೆ ತನ್ನ ಬದುಕನ್ನು ನಗುತ್ತಲೇ ಕಳೆಯುವ ಕಲೆಯೊಂದು ಅವಳಿಗೆ ಯಾರು ಹೇಳಿಕೊಡದೆಯೇ ಸಿದ್ಧಿಸಿದೆ. 

ಮಗು ಇಬ್ಬರದ್ದೂ ಆದ ಮೇಲೆ ಅದರ ಪೋಷಣೆಯಲ್ಲಿಯೂ ಇಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಉತ್ತೇಜನದಾಯಕ ತತ್ವವನ್ನು ಸಂಗಾತಿಯಾದವರು ಅಳವಡಿಸಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ.  ಮಾತೃ ಹೃದಯ ಬಯಸುವುದು ಇಂಥ ಚಿಕ್ಕ ಪುಟ್ಟ ಸಾಂತ್ವನಭರಿತ ನಡೆಯನ್ನೇ. ಕುಟುಂಬದ ಸದಸ್ಯರು ನೀಡಬೇಕಾಗಿದ್ದು ಇಂಥ ಬೆಂಬಲವನ್ನೇ.

ಬೆಂಬಲವೇ ಬಲ

ಪ್ರೀತಿ, ವಾತ್ಸಲ್ಯ, ತ್ಯಾಗ, ಸಹನೆ ಇವೆಲ್ಲವೂ ಅಮ್ಮನೆಂಬ ಮೋಹಕರಾಗದ ರೂಪಕಗಳೇ ಆಗಿದ್ದರೂ, ಅವುಗಳನ್ನು ಹೊರತುಪಡಿಸಿಯೂ ಅಮ್ಮನೆದೆಯಲ್ಲಿ ಆ ಕ್ಷಣಕ್ಕೆ   ಆಲಸಿತನವೋ, ಅಸಹನೆಯೂ ಒಡಮೂಡಿದರೆ ಅವಳನ್ನು ಜರೆದು, ಮನಸ್ಸಿಗೆ ಗಾಸಿ ಮಾಡುವ ಅಗತ್ಯವೇನೂ ಇರುವುದಿಲ್ಲ. ತಾಯಿಯಾದ ಮಾತ್ರಕ್ಕೆ ಪರಿಪೂರ್ಣತೆ ಇರಬೇಕು ಎಂದು ನಿರೀಕ್ಷೆ ಮಾಡುವುದೇ ತಪ್ಪು. ಬಂಧವಷ್ಟೆ ಅಲ್ಲ ಅದೊಂದು ದೊಡ್ಡ ಜವಾಬ್ದಾರಿಯೂ ಹೌದು. ಬದುಕಿನದ್ದಕ್ಕೂ ಪಾಲಿಸಬೇಕಾದ ಜವಾಬ್ದಾರಿ. ಸಣ್ಣ ಪುಟ್ಟ ತಪ್ಪುಗಳಾದಾಗ ‘ನೀನೆಂಥ ತಾಯಿ’ ಎನ್ನುವ ಆತ್ಮಘಾತುಕ ಮಾತುಗಳನ್ನು ಅವಳ ಮುಂದೆ ಆಡದೇ, ತಪ್ಪನ್ನು ನಾಜೂಕಾಗಿ ತೋರಿಸುವ ಪ್ರಯತ್ನ ಮಾಡೋಣ. 

ದೇಹದಲ್ಲಿ ರೋಗನಿರೋಧಕ ಶಕ್ತಿಯೊಂದು ಊರ್ಜಿತಗೊಳ್ಳುವುದಕ್ಕೆ ಮೂಲಪ್ರೇರಣೆಯೇ ತಾಯಿಯ ಎದೆಹಾಲು. ತಾಯಿಯನ್ನು ಕೃತಜ್ಞತಾ ಭಾವದಲ್ಲಿ ನೋಡಬೇಕಾಗಿರುವುದು ಈ ಕಾರಣಕ್ಕಾಗಿಯೇ. ಮಗುವಿನ ಸಮಗ್ರ ಆರೋಗ್ಯದ ಮೂಲಾಧಾರವು ತಾಯಿಯ ಎದೆಹಾಲಿನಲ್ಲಿ ಅಡಗಿದೆ. ಅದಕ್ಕೆ ಆ ಹಾಲನ್ನು ಅಮೃತಸಮಾನವೆನ್ನುವುದು. ಹಾಗೊಮ್ಮೆ ಅವಳಲ್ಲಿ ಹಲ ಬಗೆಯ ಒತ್ತಡಕ್ಕೆ ಹಾಲು ವರ್ಧಿಸದೇ ಬತ್ತಿ ಹೋದರೆ, ಕೀಳರಿಮೆ ತುಂಬಬೇಕಾಗಿಲ್ಲ. ಅವಳನ್ನು ನಿಶ್ಚಿಂತೆಯಿಂದ ಇರಲು ಬಿಟ್ಟರೆ ಎದೆಹಾಲು ತಾನಾಗಿಯೇ ವೃದ್ಧಿಗೊಳ್ಳುತ್ತದೆ. ಇಡೀ ಕುಟುಂಬದ ನಿರ್ವಹಣೆಯನ್ನು ಮಾಡುವ ಅವಳ ಪ್ರತಿ ಹೆಜ್ಜೆಗೂ ಸಹಕಾರ, ಸಾಮರಸ್ಯ ತುಂಬಿದ  ಪ್ರೀತಿ ತೋರಿಸಿದರೆ ಅವಳಾತ್ಮಕ್ಕೆ ಇನ್ನಷ್ಟು ಬಲ ತುಂಬಿದಂತೆ ಆಗುತ್ತದೆ. 

ಹೆತ್ತರಷ್ಟೆ ತಾಯಿಯಲ್ಲ!

ಸೌದಾಮಿನಿ ಸಹಜವಾಗಿ ತಾಯಿ ಆಗಲು ಸಾಧ್ಯವಿರಲಿಲ್ಲ.  ಹೀಗಾಗಿ ಮಗುವೊಂದನ್ನು ದತ್ತು ತೆಗೆದುಕೊಂಡು ಬೆಳೆಸಿದ್ದರು. ಮಗು  ಶಿಸ್ತು ಕಲಿಯಲಿ ಎಂದು  ಮನೆಗೆಲಸವನ್ನು ಮಾಡಿಸುತ್ತಿದ್ದರು. ಯಾರದ್ದೋ ಮಾತು ಕೇಳಿದ ಮಗು, ‘ದತ್ತು ತೆಗೆದುಕೊಂಡಿದ್ದೆ ಮನೆಗೆಲಸ ಮಾಡಿಸಲಿಕ್ಕೆ’ ಎಂದು ವಾದ ಮಾಡಲು ಶುರು ಮಾಡಿತು. ಮಾತೃ ಹೃದಯಕ್ಕೆ ದೊಡ್ಡ ಆಘಾತವೇ ಆಯಿತು. ಮಗುವಿನಲ್ಲಿ ಆದ ವ್ಯಕ್ತಿತ್ವ ದೋಷಕ್ಕೆ ಯಾರನ್ನು ಹೊಣೆ ಮಾಡುತ್ತೀರಿ?. ಹೆತ್ತವಳು ಮಾತ್ರ ತಾಯಿಯಾಗುವುದಲ್ಲ. ಪ್ರೀತಿ, ಕರುಣೆ, ಅಂತಃಕರಣ, ವಾತ್ಸಲ್ಯ  ತೋರುವ ಮಮತಾಮಯಿಗಳೆಲ್ಲರೂ ತಾಯಿಯೇ. ಇದೊಂದು ವಿಚಾರವನ್ನು ಅರ್ಥ ಮಾಡಿಕೊಂಡರೆ ಸಾಕು. ವಾತ್ಸಲ್ಯದ ಮೂರ್ತಿಯಂತಿರುವ ಹೆಣ್ಣುಮಕ್ಕಳೆಲ್ಲರೂ ನಿಜದ ತಾಯಂದಿರೇ.   ದುಡಿಯುವ ಕೈಗಳು ಸೋಲುತ್ತವೆ. ಅಮ್ಮಂದಿರಿಗೂ ದಣಿವಾಗುತ್ತದೆ. ಎಲ್ಲರ ಕಾಳಜಿ ಮಾಡುವ ಅವಳಿಗೆ ಆರೈಕೆ ಮಾಡುವ ಕೈಗಳು ಬೇಕಾಗುತ್ತವೆ. 

ನಾಳೆ ಅಮ್ಮಂದಿರ ದಿನ. ಅಮ್ಮ ಎಂಬ ಜೀವ ಆಲದವೃಕ್ಷವಿದ್ದ ಹಾಗೆ. ತಂಪನ್ನೀಯುತ್ತಲೇ ಇಡೀ ಕುಟುಂಬವನ್ನು ಪೋಷಿಸುವ ಅವಳಿಗೆ ಪ್ರೀತಿಯ ಅಪ್ಪುಗೆ ನೀಡಿ. ದೂರವಿದ್ದರೆ ಕರೆ ಮಾಡಿ, ಮಾತನಾಡಿ. ‘ಪ್ರತಿ ದಿನವೂ ನಿನ್ನದೇ ಆಗಿದ್ದರೂ, ಇದೊಂದು ದಿನವು ವಿಶೇಷವೇ ಅಮ್ಮ’ ಎಂದು ಹೇಳಿ. ಅವಳು  ಒಳಗೊಳಗೆ ಸಂಭ್ರಮಿಸುವುದನ್ನು ನೋಡಿ. ಇದರ ನಡುವೆಯೂ ಎಂದಿನಂತೆ ನಿಮಗೆ ಬುದ್ಧಿವಾದವನ್ನೂ ಹೇಳಬಹುದು!

ಲೇಖಕಿ ಮನೋಚಿಕಿತ್ಸಕರು

ಅಮ್ಮಂದಿರಿಗೆ ಕಿವಿಮಾತು

  • ಅತಿಯಾದ ಜವಾಬ್ದಾರಿ ತೆಗೆದುಕೊಳ್ಳುವ ಅಗತ್ಯವಿಲ್ಲ.

  • ಪರಿಪೂರ್ಣತೆಯ ಗೀಳು ಬೇಡ. 

  • ಪ್ರೀತಿ ಎಷ್ಟು ಕೊಟ್ಟರೂ ಸಾಲದು. ಯಾರಿಗೆ ಎಷ್ಟು ಕಾಳಜಿ, ಪ್ರೀತಿ ತೋರಿಸಬೇಕು ಅಷ್ಟನ್ನೇ ತೋರಿಸಿ.ಅತಿಯಾದ ಪ್ರೀತಿ, ಕಾಳಜಿ, ಭಾವಾನಾತ್ಮಕವಾಗಿ ಹಚ್ಚಿಕೊಳ್ಳುವುದನ್ನು ಮಾಡಬೇಡಿ.

  • ತನಗೋಸ್ಕರ , ತನಗಾಗಿ ಸಮಯ ಮೀಸಲಿಡುವುದನ್ನು ಪ್ರತಿಯೊಬ್ಬ ತಾಯಿಯು ಕಲಿಯಬೇಕು. ತನಗಿಷ್ಟವಾದ ಹವ್ಯಾಸವನ್ನು ಮಾಡುವಷ್ಟು ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಬೇಕು. 

  • ಮನೆಯಲ್ಲಿರುವ ಗೃಹಿಣಿಯರು ಪ್ರಚಲಿತ ವಿದ್ಯಮಾನಗಳ ಕಡೆಗೆ ಕುತೂಹಲ ಕಣ್ಣುಗಳಾಗಿ. ಇದರಿಂದ ಸದಾ ಪ್ರಪಂಚದೊಟ್ಟಿಗೆ ಒಂದು ಸಂಪರ್ಕ ಇದ್ದ ಹಾಗೇ ಅನಿಸುತ್ತದೆ. 

  • ಮಕ್ಕಳಾದ ಮೇಲೆ ದೇಹ ದಢೂತಿಯಾಗಬಹುದು. ನಿತ್ಯ ಯೋಗಾಭ್ಯಾಸದಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಧ್ಯಾನವನ್ನು ಕಲಿಯುವುದರಿಂದ ಮನಸ್ಸನ್ನು ಹತೋಟಿಗೆ ತರಬಹುದು.  ಸ್ವಕಾಳಜಿಯನ್ನು ಇಟ್ಟುಕೊಳ್ಳಿ. ಸದಾ ಆತ್ಮವಿಶ್ವಾಸದಿಂದ ಇರಲು ಬೇಕಾದ ಶಿಸ್ತನ್ನು ರೂಢಿಸಿಕೊಳ್ಳಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT