ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲದ ನೆಲೆಯೇ ಹೆಣ್ಣು

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

`ಕೊ ಟ್ಟ ಹೆಣ್ಣು ಕುಲಕ್ಕೆ ಹೊರಗು~ ಎನ್ನುವ ಮಾತು ಈಗ ಸವಕಲು. ಕುಲದ ನೆಲೆಯೇ ಹೆಣ್ಣು ಎನ್ನುವ ಕಾಲವಿದು. ಸಾಮಾಜಿಕ ಮನೋಭಾವ ಬದಲಾಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ಸರ್ಕಾರ ಹಾಗೂ ನ್ಯಾಯಾಲಯಗಳೆರಡೂ ಮಹಿಳೆಗೆ ಸಂವಿಧಾನಾತ್ಮಕ ಸ್ಥಾನಮಾನ ದೊರಕಿಸಿಕೊಡುವಲ್ಲಿ ಹಲವಾರು ಸೌಲಭ್ಯ ಮತ್ತು ನಿರ್ದೇಶನಗಳನ್ನು ನೀಡಿವೆ. ಈ ದಿಕ್ಕಿಗೆ ಇತ್ತೀಚಿನ ಸೇರ್ಪಡೆಯೆಂದರೆ ವಿವಾಹಿತ ಹೆಣ್ಣು ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೀಡುವ ನೌಕರಿಯ ಸೌಲಭ್ಯವನ್ನು ವಿಸ್ತರಿಸಿರುವುದು.

ಸರ್ಕಾರಿ, ಅನುದಾನಿತ  ಮತ್ತು ಅರೆಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಮಹಿಳೆ ಅಥವಾ ಪುರುಷ, ನಿವೃತ್ತಿ ಹೊಂದುವ ಮೊದಲೇ, ಅಕಾಲ ಮರಣಕ್ಕೆ ತುತ್ತಾದರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ, ತೀವ್ರತರ ಅನಾರೋಗ್ಯ ಪೀಡಿತರಾಗಿ ನೌಕರಿಯಲ್ಲಿ ಮುಂದುವರೆಯಲು ಅಸಾಧ್ಯವಾದಲ್ಲಿ, ಅನುಕಂಪದ ಆಧಾರದ ಮೇಲೆ ಅವರ ಕುಟುಂಬದ ವಯಸ್ಕ ವಾರಸುದಾರರೊಬ್ಬರಿಗೆ ಅದೇ ಸಂಸ್ಥೆಯಲ್ಲಿ ಸೂಕ್ತ ಕೆಲಸವೊಂದನ್ನು ನೀಡುವುದು ರಾಜ್ಯ ಸಿವಿಲ್ ಸೇವಾ ಅಧಿನಿಯಮಗಳ ಪ್ರಕಾರ ನಡೆದು ಬರುತ್ತಿರುವ ಒಂದು ರೂಢಿ. ಇದು ಸಂವಿಧಾನಾತ್ಮಕವಾಗಿ ಇರುವ ಹಕ್ಕು ಅಲ್ಲ.  ಸಾಮಾನ್ಯವಾಗಿ ಇಂತಹ ಕೆಲಸವು ಸಂಬಂಧಪಟ್ಟ ಉದ್ಯೋಗಸ್ಥರ ವಯಸ್ಕ ಗಂಡು ಮಕ್ಕಳಿಗೆ ಅಥವಾ ಗಂಡಸು ವಾರಸುದಾರರಿಗೆ ಸಿಗುತ್ತಿತ್ತು. ನಂತರ ಈ ನಿಯಮವನ್ನು ಅವಿವಾಹಿತ ಮಗಳಿಗೂ ಹಾಗೂ ಪತ್ನಿಯರಿಗೂ ವಿಸ್ತರಿಸಲಾಯಿತು. ಈಗಲೂ ಕರ್ನಾಟಕ ರಾಜ್ಯದ ಸಂಬಂಧಪಟ್ಟ ಅಧಿನಿಯಮಗಳ ಪ್ರಕಾರ, ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವ ಬಗ್ಗೆ ಪರಾಮರ್ಶಿಸುವಾಗ ಇದೇ ನಿಯಮಗಳನ್ನು ಪಾಲಿಸಲಾಗುತ್ತಿದೆ.

ಆದರೆ 2010ರ ನವೆಂಬರ್‌ನಲ್ಲಿ ಮೇಧ ಪರ್ಕೆ ಎನ್ನುವ ವಿವಾಹಿತೆ ಅನುಕಂಪದ ಆಧಾರದ ಮೆಲೆ ನೌಕರಿ ದೊರಕಿಸಿಕೊಂಡು ಕೆಲಸ ಮಾಡುತ್ತಿದ್ದುದ್ದನ್ನು ಮಹಾರಾಷ್ಟ್ರ ಸರ್ಕಾರ ಪ್ರಶ್ನೆ ಮಾಡಿತ್ತು. ಈ ವ್ಯಾಜ್ಯವನ್ನು ವಿಲೇವಾರಿ ಮಾಡುವಾಗ ಮುಂಬೈನ ಉಚ್ಚನ್ಯಾಯಾಲಯವು ಅನುಕಂಪದ ಆಧಾರದ ಮೇಲೆ ನೀಡುವ ನೌಕರಿಗೆ ವಿವಾಹಿತ ಪುತ್ರಿಯರನ್ನು ಗಣನೆಗೆ ತೆಗೆದುಕೊಳ್ಳದಿರುವುದನ್ನು ಅನುಚಿತ ಪಾಲನೆ  ಎಂದು ಗುರುತಿಸಿದೆ. ಇದೊಂದು ಗಮನಾರ್ಹವಾದ ತಾರತಮ್ಯ ಎಂದು ಅಭಿಪ್ರಾಯಪಟ್ಟಿದೆ.  ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 125ರ ಪ್ರಕಾರ ನಿರ್ಗತಿಕ ತಾಯ್ತಂದೆಯರ ಜವಾಬ್ದಾರಿ ಗಂಡು ಹಾಗೂ ಹೆಣ್ಣು ಮಕ್ಕಳ ಮೇಲೆ ಸಮವಾಗಿದೆ.

ಇಲ್ಲಿ ವಿವಾಹಿತ ಹೆಣ್ಣು ಮಕ್ಕಳೂ ಹೊಣೆಗಾರರು. ಹೀಗಿರುವಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವಾಗ ಮಾತ್ರ ಸೂಕ್ತ ವಿವಾಹಿತ ಹೆಣ್ಣು ಮಕ್ಕಳನ್ನು ಪರಿಗಣಿಸದಿರುವುದು ವಿಪರ್ಯಾಸ. ವಿವಾಹಿತ ಮಗಳು ಅನುಕಂಪದ ಆಧಾರದ ಮೇಲೆ ನೀಡುವ ಕೆಲಸಕ್ಕೆ ಸೂಕ್ತವಿದ್ದರೆ ಪರಿಗಣಿಸಬಹುದು. ಹಾಗೆಯೇ ಅವಿವಾಹಿತ ಮಗಳಿಗೆ ಒಮ್ಮೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಿದ್ದಾಗ ಆಕೆ ವಿವಾಹ ಮಾಡಿಕೊಂಡರೆ ಅದೇ ಕಾರಣಕ್ಕೆ ಆಕೆಯ ನೌಕರಿಯ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಈ ಬಗ್ಗೆ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮದಲ್ಲಿ ತಿದ್ದುಪಡಿ ತರುವುದು ಅತ್ಯಂತ ಅವಶ್ಯಕವಾದ ವಿಚಾರವಾಗಿದೆ. ಹೊರ ರಾಜ್ಯಗಳ ಉಚ್ಚನ್ಯಾಯಾಲಯಗಳ ತೀರ್ಪುಗಳನ್ನು ನಮ್ಮ ರಾಜ್ಯದ ನ್ಯಾಯಾಲಯಗಳು ವಿವೇಚನಾತ್ಮಕವಾಗಿ ಬಳಸಿಕೊಂಡು ಮಹಿಳೆಯರಿಗೆ ಅನ್ಯಾಯವಾಗದಂತಹ ನಿರ್ದೇಶನಗಳನ್ನು ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT