ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಎಂಬ ಸ್ತ್ರೀ ಸುಖ

Last Updated 23 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಗೋಕುಲಾಷ್ಟಮಿ'ಯ ಸಂಭ್ರಮ. ಪುಟ್ಟ ಕೃಷ್ಣ ಹುಟ್ಟಿದ ಈ ದಿನ, ಅವನನ್ನು ಪೂಜಿಸುವುದರ ಜೊತೆಗೇ ಮನಸ್ಸಿಗೆ `ಕೃಷ್ಣ' ಎಂಬ ವ್ಯಕ್ತಿಯ ಬಗ್ಗೆ ಅಚ್ಚರಿ-ಆಕರ್ಷಣೆಗಳನ್ನೂ ಮೂಡಿಸುವ ಸಮಯ. ನಮ್ಮ ಹಿಂದೂ ದೇವತೆಗಳಲ್ಲಿ ಬ್ರಹ್ಮ- ವಿಷ್ಣು ಗಂಭೀರವಾದ `ದೇವರು'ಗಳಾದರೆ, ಶಿವ ಸಂಸಾರವನ್ನು ಕಟ್ಟಿಕೊಂಡು ಒದ್ದಾಡುವ `ಭೋಲಾನಾಥ'! ಅದೇ ಈ ಕೃಷ್ಣ ವಿಷ್ಣುವಿನ ಅವತಾರ ಎಂದರೂ ಮನಸ್ಸಿಗೆ `ದೇವರು' ಎನ್ನಿಸದೆ `ಸಖ' ಎಂದೆನಿಸುವ `ಸಖ್ಯ' ಭಕ್ತಿಯ ದೇವ! ಹಾಗೆಂದೇ ಕೃಷ್ಣನ ಬಗ್ಗೆ ಹಾಡು- ಕವಿತೆ- ಕಥೆ- ಕಾವ್ಯ ಬರೆದ ಅವನ ಭಕ್ತರಲ್ಲಿ ಮಹಿಳೆಯರೂ ಮುಂದೆಯೇ! ಮೀರಾ, ರಾಧಾ, ಮಹಿಳಾ ಹರಿದಾಸರು... ಹೀಗೆ ಈ ಪಟ್ಟಿ ಮುಂದುವರಿಯುತ್ತದೆ.

ಆದರೆ ಮನೋವೈಜ್ಞಾನಿಕವಾಗಿ ಕೃಷ್ಣ `ಸ್ತ್ರೀ ಸಖ' ಎನಿಸುವುದು ತನ್ನ ಸುತ್ತಲಿರುವ ಸ್ತ್ರೀಯರು ಸುಖಿಗಳಾಗುವಂತೆ ಮಾಡುವ ಅವನ ಗುಣಗಳಿಂದ. ಹೆತ್ತ ತಾಯಿ ದೇವಕಿ, ಸಾಕಿದ ಮಮತೆಯ ಮಾತೆ ಯಶೋದೆ ಇಬ್ಬರಿಗೂ ದೇವಕೀನಂದನನಾಗಿ, ಯಶೋದಾ ಕಂದನಾಗಿರುವ ಕೃಷ್ಣ, ಇಂದಿಗೂ `ದತ್ತು ಮಕ್ಕಳ' ತಂದೆ-ತಾಯಿ `ನೀನು ದತ್ತು ಮಗು' ಎಂಬ ಸತ್ಯವನ್ನು ಮಕ್ಕಳಿಗೆ ಹೇಗೆ ಹೇಳುವುದು ಎಂಬ ಸಂಕಟದಿಂದ ಸಲಹೆ ಕೇಳಲು ಬಂದಾಗ ಮನೋ ವೈದ್ಯರಿಗೂ ನೆರವಾಗುತ್ತಾನೆ! ಅನಿವಾರ್ಯವಾಗಿ ಮಗುವನ್ನು ತೊರೆಯಲೇಬೇಕಾದ ದೇವಕಿ, ಮಮತೆ ಸ್ಫುರಿಸಲು ಮಕ್ಕಳಿಲ್ಲದೆ ಮಗುವಿಗಾಗಿ ಹಂಬಲಿಸುತ್ತಿದ್ದ ಯಶೋದೆ ಇಬ್ಬರ ವ್ಯಕ್ತಿತ್ವವನ್ನೂ ಗೌರವಿಸಲೇಬೇಕು ತಾನೇ?

ಇಂದಿನ ಮನೋವೈದ್ಯಕೀಯ ವಿಜ್ಞಾನದ ಪ್ರಕಾರ ಕೃಷ್ಣನ ತುಂಟತನ- ಬೆಣ್ಣೆ ಕದಿಯುವಿಕೆ- ಚೇಷ್ಟೆ- ಕಾಳಿಂದೀ ನದಿಯ ಕಾಳಿಂಗ ಮರ್ದನ, `ನಡವಳಿಕೆಯ ತೊಂದರೆ'(conduct disorder) ಎಂದೇ ಗುರುತಿಸಬಹುದಾದರೂ, ಮಕ್ಕಳ ಬಗ್ಗೆ ಮತ್ತೆ ಮತ್ತೆ ದೂರುವ ತಾಯಂದಿರಿಗೆ `ಕೃಷ್ಣ'ನ ನೆನಪು ಸಮಾಧಾನವನ್ನೇ ತರುತ್ತದೆ. ಕೃಷ್ಣ ಅಣ್ಣನೊಡನೆ ಜಗಳವಾಡುವ, ತಾಯಿಯೊಡನೆ ಹಟ ಮಾಡುವ, ಹಾಲು ಕುಡಿಯಲು ಒಲ್ಲದ ಸಂದರ್ಭಗಳನ್ನು ಕಥೆಯಲ್ಲಿ ಓದುವ, ನೋಡುವ, ಹಾಡಿನಲ್ಲಿ ಕೇಳುವ ನಮಗೆ `ಕೃಷ್ಣ' ನಮ್ಮ ಮನೆಯದೇ ಮಕ್ಕಳಂತೆ ಎನಿಸುತ್ತಾನೆ. ಮಕ್ಕಳಿಲ್ಲದೆ ಮಾನಸಿಕವಾಗಿ ನೋಯುವ ತಾಯಂದಿರಿಗೆ `ಮಗು'ವಾಗಿ ಭಾವಿಸಲು ಸಾಧ್ಯವಿರುವ ದೇವರಾಗುತ್ತಾನೆ.

ತಾಯಿ- ಮಗುವಿನ ವಾತ್ಸಲ್ಯದ ಬಾಂಧವ್ಯದಂತೆ ಮತ್ತೊಂದು ಮನಸೆಳೆಯುವ ಸಂಬಂಧ ಕೃಷ್ಣನ `ಪ್ರೇಮ ಕಥೆ'ಗಳು. ಸ್ತ್ರೀ ಮನಸ್ಸಿಗೆ ಅತ್ಯವಶ್ಯಕವಾದ ಭಾವನಾತ್ಮಕತೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ `ಕೃಷ್ಣ'ನ ಬಹು ಮುಖ್ಯ ಗುಣ. ತನಗಿಂತ ದೊಡ್ಡವಳಾದ, ಮದುವೆಯಾಗಿರುವ ರಾಧೆ, ಇತರ ಗೋಪಿಕೆಯರು, ನಂತರ ರುಕ್ಮಿಣಿ- ಸತ್ಯಭಾಮೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇವರೆಲ್ಲರೊಡನೆ ಕೃಷ್ಣನಿಗಿದ್ದ ಸಂಬಂಧ ಬಹು ಸಂಕೀರ್ಣ. ಒಬ್ಬ ವ್ಯಕ್ತಿಗೆ ಹಲವು ಸ್ತ್ರೀಯರೊಂದಿಗೆ ಸಂಬಂಧ ಇತ್ತೆಂಬ ಅಂಶಕ್ಕಿಂತ, ಭಾವನಾತ್ಮಕವಾಗಿ `ಸ್ತ್ರೀ' ಮನಸ್ಸಿಗೆ ಸ್ಪಂದಿಸಬಲ್ಲ, ಸಂಶಯ, ಅವಮಾನ, ಅಗೌರವಗಳಿರದ `ಪುರುಷ' ಮನಸ್ಸು ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯ ಎಂಬುದು ಗಮನಾರ್ಹ. ಅಂತೆಯೇ ಜಯದೇವ ಕವಿಯ ಅಷ್ಟಪದಿಯಲ್ಲಿ ಪ್ರೇಮ ಜ್ವರದ ವಿಷವಿಳಿಸಲು ತನ್ನ ತಲೆಯ ಮೇಲೆ ಕಾಲಿಡುವಂತೆ  ಕೃಷ್ಣ ರಾಧೆಗೆ ಹೇಳುತ್ತಾನೆ!

ಅತ್ತ ಪ್ರೇಮ- ಇತ್ತ ವಾತ್ಸಲ್ಯ, ಇವೆರಡಕ್ಕೂ ಮೀರಿದ ಭಾವ ಕೃಷ್ಣ- ದ್ರೌಪದಿಯರ ಸಂಬಂಧದಲ್ಲಿ ಕಂಡುಬರುತ್ತದೆ. ದ್ರೌಪದಿಯ ಪ್ರತಿ ಕಷ್ಟದ ಸಮಯದಲ್ಲೂ ನೆರವಿಗೆ ಬರುವ ಕೃಷ್ಣ `ಕಲ್ಮಶ' `ಪ್ರೇಮ' `ಲೈಂಗಿಕ' ಭಾವನೆಗಳಿಲ್ಲದೆಯೂ ಸ್ತ್ರೀಗೆ ನಿಜವಾದ `ಗೆಳೆಯ'ನಷ್ಟೇ ಆಗಿರುವ ಪುರುಷನಾಗಲು ಸಾಧ್ಯವಿದೆ ಎಂಬುದರ ಬಗ್ಗೆ ಚಿಂತನೆ ನಡೆಸುವಂತೆ ಮಾಡುತ್ತದೆ.

ಉಂಡೆ- ಚಕ್ಕುಲಿ- ಅವಲಕ್ಕಿಗಳಿಂದ ಮಕ್ಕಳಿಗೂ ಪ್ರೀತಿಯ ಹಬ್ಬವಾದ ಕೃಷ್ಣಾಷ್ಟಮಿ, ಗೋಕುಲಾಷ್ಟಮಿಯೂ ಹೌದು! ಅಂದರೆ ಅದು ಒಂದು ಸಮುದಾಯ- ಒಬ್ಬ ದೇವರು- ಒಂದು ಪಂಗಡ ಎಂಬುದಕ್ಕಿಂತ ಸಮಾಜದ ಸ್ವಾಸ್ಥ್ಯದ ಆಚರಣೆ. ಅದರಲ್ಲೂ ದ್ರೌಪದಿಯನ್ನು `ವಸ್ತ್ರಾಪಹರಣ'ದಿಂದ ರಕ್ಷಿಸುವ ಕೃಷ್ಣ, ಯಶೋದೆ- ದೇವಕಿ ಇಬ್ಬರಿಗೂ ಮಗನಾಗುವ ಕೃಷ್ಣ, ರಾಧೆಗೆ- ರುಕ್ಮಿಣಿಗೆ ಭಾವನಾತ್ಮಕವಾಗಿ ಸ್ಪಂದಿಸುವ ಕೃಷ್ಣ... ಹೀಗೆ ಅವನ ಹಲವು ಮೌಲ್ಯಗಳ ಆಚರಣೆ.

ದಿನಕ್ಕೊಂದು ಅತ್ಯಾಚಾರ, ಸ್ತ್ರೀಯರ ಭಾವನೆಗಳಿಗೆ ಕಿಂಚಿತ್ತೂ ಸ್ಪಂದಿಸದ ಸಮಾಜ, ಹೆತ್ತ ತಾಯಿಯನ್ನೂ ನೋಡಿಕೊಳ್ಳಲಾರೆವು ಎನ್ನುವ ಇಂದಿನ ಮಕ್ಕಳ ಮನೋಭಾವ ಎಲ್ಲವೂ ಬದಲಾಗಬೇಕಾದರೆ, ಕೃಷ್ಣನ ಹೆಸರಿನಲ್ಲಿ ಚಕ್ಕುಲಿ, ಉಂಡೆ ತಿನ್ನುವುದಷ್ಟೇ ಅಲ್ಲ, ಅವನ ಗುಣಗಳ ಬಗ್ಗೆಯೂ ಚಿಂತಿಸಬೇಕು ಅಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT