ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಸವಿರುಚಿ

ನಮ್ಮೂರ ಊಟ
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಆಕರ್ಷಕ ಬಣ್ಣ ಮತ್ತು ಬೀಜಗಳ ಸಂಯೋಜನೆಯನ್ನು ಹೊಂದಿರುವ ದಾಳಿಂಬೆಯಲ್ಲಿರುವ ಫೈಟೋಕೆಮಿಕಲ್ಸ್‌ಗಳು ಹೃದಯರೋಗ ಸಾಧ್ಯತೆ ಕಡಿಮೆಗೊಳಿಸುತ್ತದೆ. ಹೃದ್ಯಫಲವೆಂದೇ ಕರೆಯುವ ಈ ಹಣ್ಣಿನ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಾಶವಾಗುವುದಲ್ಲದೆ, ಕ್ಯಾನ್ಸ್‌ರ್ ನಿವಾರಣೆಗೂ ಸಹಕಾರಿಯಾಗಿದೆ.

ಅಧಿಕ ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುವ ಈ ಹಣ್ಣು ವೈರಸ್ ನಿರೋಧಕ ಹಾಗು ರೋಗ ನಿರೋಧಕ ಗುಣವನ್ನು ಹೊಂದಿದೆ. ರಕ್ತದಲ್ಲಿರುವ ಫ್ರೀರ್‌್ಯಾಡಿಕಲ್ಸ್‌ನ್ನು ನಾಶಗೊಳಿಸುವ ಈ ಹಣ್ಣಿನ ಸೇವನೆ ದಂತಕ್ಷಯ ನಿವಾರಣೆಗೆ, ಸಂಧಿವಾತದ ತೊಂದರೆಯವರಿಗೆ ಹಾಗೂ  ಮಧುಮೇಹಿಗಳಿಗೂ ಬಹಳ ಉಪಕಾರಿ. ಈಗಂತೂ ದಾಳಿಂಬೆ ಸೀಸನ್. ಪ್ರತೀದಿನ ದಾಳಿಂಬೆಯನ್ನು ಹಲವು ರೀತಿಯಲ್ಲಿ ಅಡುಗೆಯಲ್ಲಿ ಬಳಸಿಯೂ ಸವಿಯಬಹುದು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ ಗೀತಸದಾ, ಮೋಂತಿಮಾರು.


ದಾಳಿಂಬೆ ಚಟ್ನಿ
ಸಾಮಗ್ರಿ:
ದಾಳಿಂಬೆ ಕಾಳು- ಅರ್ಧ ಲೋಟ, ಪುಟಾಣಿ - ನಾಲ್ಕು ಚಮಚ, ತೆಂಗಿನತುರಿ - ಒಂದು ಲೋಟ, ಶುಂಠಿ - ಕಾಲು ಇಂಚು, ಪುದಿನಾ ಮತ್ತು ಕೊತ್ತಂಬರಿ ಸೊಪ್ಪು-ಎರಡು ಚಮಚ, ಲಿಂಬೆರಸ - ನಾಲ್ಕು ಚಮಚ, ಹಸಿಮೆಣಸು - ಎರಡು, ಉಪ್ಪು - ರುಚಿಗೆ.

ವಿಧಾನ: ಮಿಕ್ಸಿಜಾರಿಗೆ ಮೇಲಿನ ಸಾಮಗ್ರಿಗಳನ್ನು ಎಲ್ಲಾ ಹಾಕಿ ಬೇಕಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಗೆ ಲಿಂಬೆರಸ ಸೇರಿಸಿ ಕಲಸಿ. ಈಗ ತಯಾರಾದ ಚಟ್ನಿಗೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆ ಕೊಡಿ.

ದಾಳಿಂಬೆ ಮಸಾಲಾ ಪಾಪಡಿ ಚಾಟ್
ಸಾಮಗ್ರಿ:
ದಾಳಿಂಬೆ - ಹತ್ತು ಚಮಚ, ಪಪ್ಪಡ್ - ನಾಲ್ಕು, ಕ್ಯಾರೆಟ್‌ತುರಿ - ಅರ್ಧ ಲೋಟ, ಸ್ವೀಟ್ ಕಾರ್ನ್ - ಹತ್ತು ಚಮಚ, ಹೆಚ್ಚಿದ ಈರುಳ್ಳಿ - ಆರು ಚಮಚ, ಟೊಮೆಟೊ ಹಾಟ್ ಎಂಡ್ ಸ್ವೀಟ್ ಕೆಚಪ್ - ನಾಲ್ಕು ಚಮಚ, ಚಾಟ್‌ಪೌಡರ್ - ಎರಡು ಚಮಚ, ಕೊತ್ತಂಬರಿ ಮತ್ತು ಪುದಿನಾ ಪೇಸ್ಟ್ - ಎರಡು ಚಮಚ, ಹೆಚ್ಚಿದ ಚೆರಿಹಣ್ಣು - ನಾಲ್ಕು ಚಮಚ, ಹೆಸರುಬೇಳೆ - ಎಂಟು ಚಮಚ, ಉಪ್ಪು - ರುಚಿಗೆ.

ವಿಧಾನ: ಸುಟ್ಟಹಪ್ಪಳದ ಮೇಲೆ ಕ್ಯಾರೆಟ್, ಈರುಳ್ಳಿ ಹಾಗು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹರಡಿ. ಮೇಲಿನಿಂದ ಟೊಮೆಟೊ ಸಾಸ್ ಹಾಕಿ. ಕೊನೆಗೆ ಹೆಸರು ಬೇಳೆ ಅಥವಾ ಸೇಮೆ ಹರಡಿ ಸರ್ವ್ ಮಾಡಿ.

ರಾಯತ
ಸಾಮಗ್ರಿ:
ಬೇಯಿಸಿದ ಬಟಾಟೆ - ಒಂದು, ಹೆಚ್ಚಿದ ಕ್ಯಾಪ್ಸಿಕಂ - ನಾಲ್ಕು ಚಮಚ, ಸ್ವೀಟ್‌ಕಾರ್ನ್- ಆರು ಚಮಚ, ಹೆಚ್ಚಿದ ಸೇಬು- ಒಂದು, ಹೆಚ್ಚಿದ ನೀರುಸೌತೆ - ಆರು ಚಮಚ, ದ್ರಾಕ್ಷಿಹಣ್ಣು- ಹತ್ತು, ದಾಳಿಂಬೆ - ಆರು ಚಮಚ, ರುಬ್ಬಿದ ಕಾಯಿತುರಿ - ಆರು ಚಮಚ, ಪುದಿನ - ನಾಲ್ಕು ಚಮಚ, ವೈಟ್‌ಪೆಪ್ಪರ್ ಪುಡಿ - ಒಂದು ಚಮಚ, ಹಸಿಮೆಣಸಿನಕಾಯಿ - ಒಂದು, ಸಿಹಿಮೊಸರು - ಒಂದು ಕಪ್, ಉಪ್ಪು -ರುಚಿಗೆ.

ವಿಧಾನ: ಸ್ವೀಟ್‌ಕಾರ್ನ್ ಮತ್ತು ಕ್ಯಾಪ್ಸಿಕಂಅನ್ನು ಸ್ವಲ್ಪ ತುಪ್ಪ ಹಾಕಿ ಹಸಿವಾಸನೆ ಹೋಗುವವರೆಗೂ ಫ್ರೈ ಮಾಡಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಮ್ಯಾಶ್ ಮಾಡಿದ ಬಟಾಟೆ ಹಾಗು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ಕೊನೆಗೆ ಮೊಸರು ಹಾಕಿ ಕಲಸಿ. ಈಗ ತಯಾರಾದ ರಾಯತವನ್ನು ಚಪಾತಿ ಜೊತೆ ಅಥವಾ ಹಾಗೆಯೇ ಸವಿಯಬಹುದು.

ದಾಳಿಂಬೆ ಬನ್
ಸಾಮಗ್ರಿ:
ಹೆಚ್ಚಿದ ಈರುಳ್ಳಿ - ಒಂದು, ಬೇಯಿಸಿದ ಆಲೂಗಡ್ಡೆ - ಒಂದು, ದಾಳಿಂಬೆ ಕಾಳು- ಆರು ಚಮಚ, ಧನಿಯ ಪುಡಿ - ಕಾಲು ಚಮಚ, ಕೆಂಪುಮೆಣಸಿನ ಪುಡಿ - ಕಾಲು ಚಮಚ, ಕಾಳುಮೆಣಸಿನ ಪುಡಿ- ಕಾಲು ಚಮಚ, ಗರಂಮಸಾಲ - ಅರ್ಧ ಚಮಚ, ಬಿಳಿಎಳ್ಳು - ಎರಡು ಚಮಚ, ಅರಶಿಣಪುಡಿ - ಕಾಲು ಚಮಚ, ಕೊತ್ತಂಬರಿ ಮತ್ತು ಪುದಿನ ಸೊಪ್ಪಿನ ಪೇಸ್ಟು - ಎರಡು ಚಮಚ, ಟೀ ಬನ್ - ಎರಡು, ಉಪ್ಪು - ರುಚಿಗೆ.

ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಹಾಗೂ ಸ್ವೀಟ್‌ಕಾರ್ನ್‌ಅನ್ನು ಹುರಿಯಿರಿ. ಇದಕ್ಕೆ ಮ್ಯಾಶ್‌ಮಾಡಿದ ಆಲೂಗಡ್ಡೆ ಹಾಕಿ. ನಂತರ ಇದಕ್ಕೆ ಧನಿಯಾ, ಮೆಣಸಿನ ಪುಡಿಗಳು, ಹಳದಿ, ಪುದಿನ, ಹಸಿಮೆಣಸಿನ ಪೇಸ್ಟು ಮತ್ತು ಉಪ್ಪು ಹಾಕಿ ಕಲಸಿ. ಒಲೆಯಿಂದ ಇಳಿಸಿ ಇದು ಆರಿದ ಮೇಲೆ ದಾಳಿಂಬೆ ಕಾಳು ಹಾಗೂ ಹುರಿದು ಪುಡಿಮಾಡಿದ ಶೇಂಗಾ ಎರಡು ಚಮಚ ಹಾಕಿ ಚೆನ್ನಾಗಿ ಮಿಶ್ರಮಾಡಿಡಿ. ಟೀ ಬನ್‌ನ ಮಧ್ಯದ ಭಾಗ ಕಟ್‌ಮಾಡಿ ಅದರ ಒಳಭಾಗಕ್ಕೆ ಟೊಮೆಟೊ ಕೆಚಪ್ ಹಚ್ಚಿ ನಂತರ ಮಾಡಿಟ್ಟ ಮಿಶ್ರಣವನ್ನು ಹರಡಿ ಬನ್‌ಅನ್ನು ಮುಚ್ಚಿ ಮೇಲ್ಭಾಗಕ್ಕೆ ಎಣ್ಣೆ ಸವರಿ ಮೇಲಿನಿಂದ ಹುರಿದ ಬಿಳಿ ಎಳ್ಳನ್ನು ಉದುರಿಸಿ ತವಾದಲ್ಲಿ ಬಿಸಿಮಾಡಿ ಸರ್ವ್ ಮಾಡಿ.

ದಾಳಿಂಬೆ ಸಲಾಡ್
ಸಾಮಗ್ರಿ:
ದಾಳಿಂಬೆ ಕಾಳು- ಒಂದು ಲೋಟ, ಮೊಳಕೆ ಹೆಸರುಕಾಳು - ಅರ್ಧ ಲೋಟ, ಸ್ವೀಟ್‌ ಕಾರ್ನ್ - ಅರ್ಧಲೋಟ, ಹುರಿದ ಅಗಸೆಬೀಜ - ನಾಲ್ಕು ಚಮಚ, ತೆಂಗಿನತುರಿ - ಎರಡು ಚಮಚ, ಪುದಿನ ಮತ್ತು ಕೊತ್ತಂಬರಿ ಸೊಪ್ಪು - ಒಂದು ಚಮಚ, ಕ್ಯಾರೆಟ್ ತುರಿ - ಅರ್ಧ ಲೋಟ, ಲಿಂಬೆರಸ - ಎರಡು ಚಮಚ, ಕಾಳುಮೆಣಸಿನ ಪುಡಿ - ಒಂದು ಚಮಚ, ಉಪ್ಪು - ರುಚಿಗೆ.

ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೇಲೆ ತಿಳಿಸಿದ ಒಂದೊಂದೇ ಸಾಮಗ್ರಿಗಳನ್ನು ಹಾಕಿ. ನಂತರ ಕೊನೆಗೆ ಲಿಂಬೆರಸ ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಮಾಡಿ. ಈಗ ಬಹಳ ರುಚಿಯಾದ ಆರೋಗ್ಯಯುಕ್ತ ದಾಳಿಂಬೆ ಸಲಾಡ್ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT