ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಸಾಂಪ್ರದಾಯಿಕ ನೈವೇದ್ಯಗಳು

ನಮ್ಮೂರ ಊಟ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಗುಢಾನ್ನ (ಕೂಟು ಪಾಯಸ)
ಸಾಮಗ್ರಿಗಳು: ಗಂಧಸಾಲೆ ಬೆಳ್ತಿಗೆ ಅಕ್ಕಿ - ಒಂದು ಕಪ್, ಬೆಲ್ಲದಪುಡಿ1 ಕಪ್, ತೆಂಗಿನತುರಿ 1 ಕಪ್, ತುಪ್ಪ 8 ಚಮಚ, ಗೇರುಬೀಜ, ಒಣ ದ್ರಾಕ್ಷಿ ಕಾಲು ಕಪ್, ಏಲಕ್ಕಿ - ಸುವಾಸನೆಗೆ.

ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಪಾಕ ಮಾಡಿಕೊಳ್ಳಿ. ಇದಕ್ಕೆ ತೆಂಗಿನತುರಿ ಸೇರಿಸಿ ಮಿಶ್ರಮಾಡಿ. ನಂತರ, ಚೆನ್ನಾಗಿ ಬೇಯಿಸಿದ ಅನ್ನ ಹಾಗು ತುಪ್ಪ ಸೇರಿಸಿ ತಳಬಿಡುವವರೆಗೂ ಕಾಯಿಸಿ. ಆಮೇಲೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಹಾಗು ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಇಳಿಸಿ. ಈಗ ದೇವಿಗೆ ಬಹಳ ಪ್ರಿಯವಾದ ಸುವಾಸನೆಯುಕ್ತ ಗುಢಾನ್ನ ತಯಾರಾಯಿತು.

ತೆಂಗಿನಕಾಯಿ ಗೆಣಸಲೆ
ಸಾಮಗ್ರಿಗಳು:1ಕಪ್‌ ಬೆಳ್ತಿಗೆ ಅಕ್ಕಿ, ಒಂದುವರೆ ಕಪ್ ತೆಂಗಿನತುರಿ, ಅರ್ಧ  ಕಪ್ ಬೆಲ್ಲದಪುಡಿ, ಉಪ್ಪು - ರುಚಿಗೆ ತಕ್ಕಷ್ಟು.
ವಿಧಾನ: ನೆನೆಸಿದ ಬೆಳ್ತಿಗೆ ಅಕ್ಕಿಯನ್ನು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟಿಗೆ ಬೇಕಷ್ಟು ನೀರು ಸೇರಿಸಿಕೊಂಡು ದೋಸೆಹಿಟ್ಟಿನ ಹದಕ್ಕೆ ಮಾಡಿಕೊಂಡು ಒಲೆಯಲ್ಲಿ ಎರಡು ನಿಮಿಷ ಕಾಯಿಸಿಕೊಳ್ಳಿ. ಬೆಲ್ಲ ಬೆರೆಸಿದ ಕಾಯಿತುರಿಯನ್ನೂ ಎರಡು ನಿಮಿಷ ಬಾಣಲೆಯಲ್ಲಿ ಬಿಸಿಮಾಡಿ ಕೆಳಗಿಳಿಸಿ. ನಂತರ ಅಕ್ಕಿಹಿಟ್ಟನ್ನು ಬಾಡಿಸಿದ ಬಾಳೆಲೆಯಲ್ಲಿ ದೋಸೆಯಂತೆ ಹರಡಿ ಅದರ ಮೇಲೆ ಬೆಲ್ಲ ಸೇರಿಸಿದ ಕಾಯಿತುರಿಯನ್ನು ಹರಡಿ ಕಡುಬಿನಂತೆ ಮಡಿಸಿ ಅಟ್ಟದಲ್ಲಿ ಅರ್ಧಗಂಟೆ ಉಗಿಯಲ್ಲಿ ಬೇಯಿಸಿ. ಈಗ ರುಚಿಕರ ತೆಂಗಿನಕಾಯಿ ಗೆಣಸಲೆ ತಯಾರಾಯಿತು.

ಹಾಲು ಪಾಯಸ
ಸಾಮಗ್ರಿಗಳು: 1ಕಪ್‌ ಬೆಳ್ತಿಗೆ ಅನ್ನ, ಮೂರು ಕಪ್ ಹಾಲು,  ಅರ್ಧ ಕಪ್ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಬಾದಾಮಿ ಚೂರುಗಳು- ನಾಲ್ಕು ಚಮಚ, ಏಲಕ್ಕಿ -ಚಿಟಿಕಿ.
ವಿಧಾನ: ಚೆನ್ನಾಗಿ ಬೇಯಿಸಿದ ಅನ್ನಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ಬೇಯಿಸಿ. ನಂತರ ಹಾಲಿನ ಜೊತೆ ಸಣ್ಣ ಉರಿಯಲ್ಲಿ ಕುದಿಸಿ. ಆಮೇಲೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಕೇಸರಿ ಸೇರಿಸಿ ಕುದಿಸಿ ಇಳಿಸಿ. ಬಹಳ ಬೇಗನೆ ಸುಲಭವಾಗಿ ನೈವೇದ್ಯ ತಯಾರಾಯಿತು.

ಹಾಲುಬಾಯಿ
ಸಾಮಗ್ರಿಗಳು: ಬೆಳ್ತಿಗೆ ಅಕ್ಕಿ 1 ಕಪ್, ತೆಂಗಿನತುರಿ 1 ಕಪ್, ಬೆಲ್ಲದ ಪುಡಿ - ಅರ್ಧ ಕಪ್, ಉಪ್ಪು - ರುಚಿಗೆ ತಕ್ಕಷ್ಟು, ಏಲಕ್ಕಿ - ಸುವಾಸನೆಗೆ.
ವಿಧಾನ: ನೆನೆಸಿದ ಬೆಳ್ತಿಗೆ ಅಕ್ಕಿಗೆ ತೆಂಗಿನತುರಿ, ಬೆಲ್ಲ, ಉಪ್ಪು ಮತ್ತು ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ, ಇದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ದಪ್ಪ ತಳದ ಬಾಣಲೆಗೆ ಹಾಕಿ ಕಾಯಿಸಿ. ತಳ ಬಿಡುತ್ತಾಬಂದಾಗ ಇಳಿಸಿ ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.

ಮೋಹನ್ ಲಾಡು
ಸಾಮಗ್ರಿಗಳು: ಒಂದು ಕಪ್ ಮೈದಾ, ಮುಕ್ಕಾಲು ಕಪ್ ಸಕ್ಕರೆ, ನಾಲ್ಕು ಚಮಚ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ ಹಾಗೂ ಕರಿಯಲು ಎಣ್ಣೆ.


ವಿಧಾನ: ಮೊದಲು ಮೈದಾ ಹಿಟ್ಟಿಗೆ ನಾಲ್ಕು ಚಮಚ ತುಪ್ಪ ಸೇರಿಸಿ ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲಿಸಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ಸಕ್ಕರೆಯನ್ನು ಪಾಕ ಮಾಡಿಟ್ಟುಕೊಳ್ಳಿ. ಸ್ವಲ್ಪ ಸಮಯ ಆದ ನಂತರ ಕಲೆಸಿದ ಮೈದಾ ಹಿಟ್ಟಿನಿಂದ ತೆಳುವಾದ ಚಪಾತಿ ಲಟ್ಟಿಸಿ ಚಾಕುವಿನಿಂದ ಕಟ್ ಮಾಡಿ. ಕಾದ ಎಣ್ಣೆಯಲ್ಲಿ ನಿಧಾನವಾದ ಬೆಂಕಿಯಲ್ಲಿ ಗರಿಗರಿಯಾಗಿ ಕರಿಯಿರಿ. ನಂತರ ಪುಡಿ ಪುಡಿ ಮಾಡಿ ಪಾಕಕ್ಕೆ ಸೇರಿಸಿ, ಏಲಕ್ಕಿ ಪುಡಿಯನ್ನು ಸೇರಿಸಿ ಉಂಡೆಗಳನ್ನು ಕಟ್ಟಿದರೆ ಗರಿ ಗರಿಯಾದ ಮೋಹನ್‌ ಲಾಡು ತಯಾರು. ಗಾಳಿಯಾಡದ ಡಬ್ಬದಲ್ಲಿಟ್ಟರೆ ಒಂದು ವಾರದವರೆಗೆ ಹಾಳಾಗದೆ ಇರುತ್ತದೆ.

ಉದ್ದಿನ ಚಕ್ಕುಲಿ
ಸಾಮಗ್ರಿಗಳು: ಒಂದು ಪಾವು ಉದ್ದಿನ ಬೇಳೆ, ನಾಲ್ಕು ಪಾವು ಅಕ್ಕಿ, ಒಂದು ಮುಷ್ಟಿ ಬಿಳಿ ಎಳ್ಳು, ಒಂದು ಮುಷ್ಟಿ ಜೀರಿಗೆ, ಕಿತ್ತಳೆ ಗಾತ್ರದಷ್ಟು ದೊಡ್ಡ ಬೆಣ್ಣೆ, ಒಂದು ಸೌಟು ಬಿಸಿ ಎಣ್ಣೆ  ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ.

ವಿಧಾನ: ಅಕ್ಕಿಯನ್ನು ತೊಳೆದು ಹಾಕಿ ನೆರಳಿನಲ್ಲಿಯೇ ಒಂದು ದಿನ ಒಣಗಿಸಿ ಬೆಚ್ಚಗೆ ಘಮ ಬರುವಷ್ಟು ಹುರಿದುಕೊಳ್ಳಬೇಕು. ಉದ್ದಿನ ಬೇಳೆಯನ್ನು ಚೆನ್ನಾಗಿ ಹುರಿಯಬೇಕು. ಈ ಎರಡನ್ನೂ ಸೇರಿಸಿ ಮಿಲ್ಲಿನಲ್ಲಿ ಹಿಟ್ಟು ಮಾಡಿಸಬೇಕು. ಈ ಹಿಟ್ಟನ್ನು ಡಬ್ಬದಲ್ಲಿ ಇಟ್ಟುಕೊಂಡರೆ ತಿಂಗಳವರೆಗೆ ಹಾಳಾಗುವುದಿಲ್ಲ ವಾದುದರಿಂದ ಬೇಕಾದಷ್ಟು ಹಿಟ್ಟನ್ನೇ ಉಪಯೋಗಿಸಿಕೊಳ್ಳಬಹುದು. ಈ ಹಿಟ್ಟಿಗೆ ಜೀರಿಗೆ, ಎಳ್ಳು, ಬೆಣ್ಣೆ, ಬಿಸಿ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಿಸಿ ನಂತರ ನೀರು ಹಾಕಿ ಕಲಿಸಿ, ಚಕ್ಕುಲಿಯ ಅಚ್ಚಿನಲ್ಲಿ ಹಾಕಿ ನಿಧಾನವಾಗಿ ಒತ್ತುತ್ತಾ ಕಾದ ಎಣ್ಣೆಯಲ್ಲಿ ಕರಿದರೆ ಉದ್ದಿನ ಪರಿಮಳದ ಗರಿಗರಿಯಾದ ಚಕ್ಕುಲಿ ಸವಿಯಲು ಸಿದ್ಧ. ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ ಹದಿನೈದು ದಿನಗಳವರೆಗೂ ಗರಿಗರಿಯಾಗಿ ಹಾಗೇ ಇರುತ್ತದೆ.

ಮೈದಾ ಚಕ್ಕುಲಿ

ಸಾಮಗ್ರಿಗಳು: ಎರಡು ಕಪ್ ಮೈದಾ ಹಿಟ್ಟು, ಒಂದು ಟೇಬಲ್ ಚಮಚ ಬಿಸಿ ಎಣ್ಣೆ, ಎರಡು ಚಮಚ ಕರಿ ಎಳ್ಳು, ಕರಿಯಲು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ: ಒಂದು ಶುಭ್ರವಾದ ಬಿಳಿ ಬಟ್ಟೆಯಲ್ಲಿ ಮೈದಾವನ್ನು ಕಟ್ಟಿ ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಬೇಕು. ನಂತರ ಹೊರಗೆ ತೆಗೆದು ಚೆನ್ನಾಗಿ ಮಸೆದು ಪುಡಿ ಮಾಡಬೇಕು. ಜರಡಿ ಹಿಡಿದು ಅದಕ್ಕೆ ಉಪ್ಪು ಹಾಗೂ ಎಳ್ಳನ್ನು ಸೇರಿಸಬೇಕು. ನಂತರ ಬಿಸಿ ಎಣ್ಣೆ ಸೇರಿಸಿ ನೀರು ಹಾಕಿ ಕಲಿಸಿ ಚಕ್ಕುಲಿ ಒರಳಲ್ಲಿ ಹಾಕಿ ಒತ್ತಿದರೆ ಬಿಳಿಯಾದ ಗರಿಗರಿಯಾದ ಮೈದಾ ಚಕ್ಕುಲಿ ತಯಾರು.

ಪಾಲಕ್ ಚಕ್ಕುಲಿ

ಸಾಮಗ್ರಿಗಳು: ಒಂದು ಕಟ್ಟು ಪಾಲಕ್, ಒಂದು ಕಪ್ ಹುರಿಗಡಲೆ ಹಿಟ್ಟು, ನಾಲ್ಕು ಕಪ್ ಅಕ್ಕಿಹಿಟ್ಟು, ಒಂದು ಸೌಟು ಬಿಸಿ ಎಣ್ಣೆ, ಎರಡು ಚಮಚ ಜೀರಿಗೆ, ಕರಿಯಲು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ: ಪಾಲಕ್ ಅನ್ನು ಸ್ವಚ್ಛಗೊಳಿಸಿ ಬೇಯಿಸಿ ಮಿಕ್ಸಿಯಲ್ಲಿ  ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ಅದಕ್ಕೆ ಉಳಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಕಲಿಸಿ ಚಕ್ಕುಲಿ ಒರಳಿನ ಸಹಾಯದಿಂದ ಒತ್ತಿ. ಕಾದ ಎಣ್ಣೆಯಲ್ಲಿ ಕರಿದರೆ ಹಸಿರು ಬಣ್ಣದ  ಪಾಲಕ್ ರುಚಿಯೊಂದಿಗೆ ಗರಿಗರಿಯಾದ ಚಕ್ಕುಲಿ ತಿನ್ನಲು ತಯಾರು.

ರಾಗಿ ಚಕ್ಕುಲಿ

ಸಾಮಗ್ರಿಗಳು: ಒಂದು ಕಪ್ ರಾಗಿ ಹಿಟ್ಟು, ಅರ್ಧ ಕಪ್ ಅಕ್ಕಿಹಿಟ್ಟು, ಅರ್ಧ ಕಪ್ ಕಡಲೇಹಿಟ್ಟು, 1 ಚಮಚ ಜೀರಿಗೆ, 1 ಚಮಚ ಬಿಳಿ ಎಳ್ಳು, 1 ಚಮಚ ಖಾರದ ಪುಡಿ, 1 ಟೇಬಲ್ ಚಮಚ ಬಿಸಿ ಎಣ್ಣೆ, ಕರಿಯಲು ಎಣ್ಣೆ  ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ: ಎಣ್ಣೆ ಬಿಟ್ಟು ಉಳಿದ ಸಾಮಗ್ರಿಗಳನ್ನು ಚೆನ್ನಾಗಿ ಕಲಿಸಿಕೊಂಡು ಬಿಸಿಯಾದ ಎಣ್ಣೆಯನ್ನು ಸೇರಿಸಿ ಕಲಿಸಿ ನೀರನ್ನು ಹಾಕಿ ಕಲಿಸಿ ಚಕ್ಕುಲಿ ಒರಳಲ್ಲಿ ಒತ್ತಿ ಕಾದ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಚಕ್ಕುಲಿ ತಯಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT