ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಗೃಹಿಣಿಯರು.. ಕುಟುಂಬ ಕಾರ್ಮಿಕರು

Last Updated 29 ಜುಲೈ 2011, 19:30 IST
ಅಕ್ಷರ ಗಾತ್ರ

ಆಹಾ, ಪುರುಷಾಕಾರಂ!... ನನ್ನ ಹತ್ತಿರದ ಸಂಬಂಧಿ ಹೆಸರಾಂತ ವೈದ್ಯ. ಹೆಸರಿನ ಮುಂದೆ  ಆರು ಡಿಗ್ರಿಗಳನ್ನು ಹೊತ್ತವನು. ಲಕ್ಷಾಧೀಶ. ಅವನ ಹೆಂಡತಿ ವಿದ್ಯಾವಂತೆ, ರೂಪವಂತೆ. ಕೆಲಸಕ್ಕಾಗಿ ಹೊರಗೆ ಹೋಗದೇ ಮನೆವಾರ್ತೆಯನ್ನು ಸಮರ್ಪಕವಾಗಿ ನಿಭಾಯಿಸುವವಳು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ಗಂಡ ಹೆಂಡತಿಗೆ ಹೇಳುತ್ತಿದ್ದ ಮಾತು ನನ್ನ ಕಿವಿಗೆ ಬಿದ್ದದ್ದು ಹೀಗೆ: `ನಿನ್ಗೇನು ಮೂರ‌್ಹೊತ್ತು ತಿಂದ್ಕೊಂಡು ಮನೇಲಿ ಬಿದ್ದಿರುತ್ತೀಯಲ್ಲ.~

ಪ್ರಕಾಶ ನನ್ನ ಸ್ನೇಹಿತ. ಸೋಮವಾರದ ಬೆಳಗಿನ ಸೂರ್ಯನೊಂದಿಗೆ ಕೆಲಸ ಆರಂಭಿಸುವ ಅವನು ಶುಕ್ರವಾರದ ಸಂಜೆ ಸೂರ್ಯನೊಂದಿಗೇ ವಿರಮಿಸುವುದು. ಶ್ರಮಜೀವಿ. ಶ್ರೀಮಂತ. ಅವನ ಹೆಂಡತಿ ಎರಡು ಮಕ್ಕಳನ್ನು, ಮನೆಯನ್ನು ತಣಿಸುತ್ತಿರುವ ವಿದ್ಯಾವಂತ ಗೃಹಿಣಿ.
 
ಶನಿವಾರ-ಭಾನುವಾರಗಳಂದು ಟಿವಿ ನೋಡುತ್ತಾ ಮನೆಯಲ್ಲೇ ಆರಾಮದ ಬದುಕು ಅವನದ್ದು. ಅವನು ಫೋನ್‌ನ ಸಮೀಪದಲ್ಲೇ ಇದ್ದರೂ, ಏನೇ ಕೆಲಸವಿದ್ದರೂ ಇವಳೇ ಉತ್ತರಿಸಬೇಕು. ಬೀದಿ ಬಾಗಿಲಿನ ಕರೆಗಂಟೆಗೆ ಅವನು ಉತ್ತರಿಸುವುದಂತೂ ದೂರವೇ ಸರಿ.~ ವಾರವಿಡೀ ದುಡೀತೀನಿ. ನೀನೇನು ಮಾಡಿರ್ತೀಯ?~- ಇದು ಅವನ ವಾದ.

ನನ್ನ ಅತ್ತಿಗೆ ಎಲ್ಲ ರೀತಿಯಿಂದಲೂ ಆಧುನಿಕ ಮತ್ತು ಉತ್ತಮ ಗೃಹಿಣಿ. ನಮ್ಮಣ್ಣ ಒಮ್ಮೆಯೂ ಅವಳನ್ನು ಹೊಗಳಿದ್ದಾಗಲೀ, ಯಾವುದಕ್ಕೂ ಅವಳ ಅಭಿಪ್ರಾಯ ಕೇಳಿದ್ದಾಗಲೀ ನಾನು ಕಂಡಿಲ್ಲ. ಆಕೆಯ ಸ್ನೇಹಿತೊಬ್ಬಳು ಹೆಸರಾಂತ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಾಳೆ.
 
ಅವಳನ್ನು ಕಂಡೊಡನೆ ನಮ್ಮಣ್ಣ ನೀಡುವ ಮರ್ಯಾದೆ, ಗೌರವ ಎಲ್ಲವೂ ಕಣ್ಣು ಕುಕ್ಕುತ್ತೆ. ಇವಳಿಗೇನು ಗೊತ್ತು ಯಾವಾಗಲೂ ಮನೆಯಲ್ಲೇ ಇರ್ತಾಳೆ. ಹೊರಗೆ ಹೋಗಿ ದುಡಿದರೆ ತಾನೆ ಬುದ್ದಿ ಹೆಚ್ಚೋದು ಇದು ಇವನ ಅಭಿಪ್ರಾಯ.

ಗೆಳತಿ ಸುಗುಣ ಅವಳಿ ಜವಳಿಗಳ ತಾಯಿ. ತುಂಬು ಕುಟುಂಬದ ಅಪ್ಪಟ ಗೃಹಿಣಿ. ವಿದ್ಯಾವಂತೆ. ಬಿಡುವಿನ ಸಮಯದಲ್ಲಿ ಚಿತ್ರಕಲೆಯಿಂದ ಮಾಡುವ ಸಂಪಾದನೆಯಿಂದ ಸ್ವಂತದ ಪೂರ್ತಿ ಖರ್ಚನ್ನು ತೂಗಿಸಿಕೊಳ್ಳುವುದು ಮಾತ್ರವಲ್ಲ  ನಾಲ್ಕು  ಬಡ ಮಕ್ಕಳ ಶಾಲೆಯ ಫೀಸು ನೀಡುತ್ತಾಳೆ.
 
ಶ್ರೀಮಂತ ಗಂಡನ ದುಡಿಮೆಯಿಂದ ಸಂಸಾರದ ಮಿಕ್ಕ ಅವಶ್ಯಕತೆಗಳು ಪೂರೈಕೆಯಾಗಿಯೂ ದುಡ್ಡು ಮಿಗುತ್ತೆ. ಆದರೂ ಅವನಿಗೆ ಸಮಾಧಾನವಿಲ್ಲ. ಸಂಸಾರಕ್ಕಾಗಿ ನೀನೇನು ದುಡೀತೀಯಾ? ಎಂದು ಎಲ್ಲರೆದುರೂ ಮೂದಲಿಸುತ್ತಿರುತ್ತಾನೆ.

ಸಾಫ್ಟ್‌ವೇರ್ ಎಂಜಿನಿಯರ್ ರವಿ ನನ್ನ ಪಕ್ಕದ ಮನೆಯವನು. ವಿದ್ಯಾವಂತ ಹೆಂಡತಿ ಮನೆಯಲ್ಲಿಯೇ ಇದ್ದು ಎಲ್ಲವನ್ನೂ ನಿಭಾಯಿಸುತ್ತಾಳೆ. ಆದರೂ ಆಗಾಗ್ಗೆ ಇವನ ಹೇಳಿಕೆ -~ಹೆಂಗಸಾಗಿ ನಿನಗೇ ಇಷ್ಟಿದ್ದರೆ ಗಂಡಸಾಗಿ ನನಗಿನ್ನೆಷ್ಟಿರಬೇಡ~. ಇದಕ್ಕೆನು ಅರ್ಥ? ಹುಡುಕುತ್ತಲೇ ಇರುತ್ತೇನೆ.

ವೆಂಕಟೇಶನ ಹೆಂಡತಿ ಖಾಸಗಿ ಶಾಲೆಯೊಂದರಲ್ಲಿ ವಿಜ್ಞಾನ ಉಪಾಧ್ಯಾಯಳಾಗಿದ್ದಳು. ಎರಡು ಪುಟ್ಟ ಮಕ್ಕಳು ಮತ್ತು ವಯಸ್ಸಾದ ಅತ್ತೆ ಮಾವಂದಿರನ್ನು ನೋಡಿಕೊಳ್ಳುವ ಸಲುವಾಗಿ ಮನೆಯಲ್ಲಿದ್ದಾಳೆ. ಗಂಡ ಯಶಸ್ವೀ ವ್ಯಾಪಾರಸ್ಥ. ಎರಡು ಕಂಪನಿಗಳ ಮಾಲೀಕ. ಮನೆಗೆ ಎಷ್ಟು ಬೆಲೆಯ ಹಾಲು, ಹೂವು ತರಬೇಕೆಂಬುದೂ ಅವನದೇ ನಿರ್ಧಾರ.

ಹೊರಗಿನ ಉದ್ಯೋಗಕ್ಕೆ ಹೋಗದೇ ಮನೆಯಲ್ಲಿಯೇ ಇರುವ ಗೃಹಿಣಿಯನ್ನು ಕಾಡುವ ಕೀಳರಿಮೆ ಇಂಟರ್‌ನೆಟ್ ಯುಗದಲ್ಲೂ ಇದ್ದದ್ದೇ. ಇದಕ್ಕೆ ಮುಖ್ಯ ಕಾರಣ ಅವಳಿಗೇ ಗೃಹಕೃತ್ಯದ ಬಗ್ಗೆ ಗೌರವವಿಲ್ಲದ್ದು ಮತ್ತು ಗಂಡಸಿಗೆ ಮನೆ ಸಂಭಾಳಿಸುವುದರ ಮಹತ್ವ ತಿಳಿಯದಿರುವುದು. ಎಲ್ಲಕ್ಕೂ ಮಿಗಿಲಾಗಿ ದುಡಿಮೆಯೆಂದರೆ ದುಡ್ಡು ಗಳಿಸುವುದು ಮಾತ್ರವೆನ್ನುವ ಆಳವಾದ ಸಾಮಾಜಿಕ ನಂಬಿಕೆ.

`ಹೆಂಡತಿಯೆಂದರೆ ಖಂಡಿತ ಅಲ್ಲ ದಿನವೂ ಕೊರೆಯುವ ಬೈರಿಗೆ; ಭಂಡರು ಯಾರೊ ಆಡುವ ಮಾತಿನ ಬೈದವರುಂಟೇ ದೇವಿಗೆ.....~ ಉದ್ಯೋಗಸ್ಥರಲ್ಲದ ಗೃಹಿಣಿಯರಿಗೆ ಇತ್ತೀಚಿನ ಗಣತಿಯಲ್ಲಿ ಭಿಕ್ಷುಕರ ಸ್ಥಾನಮಾನ ಕೊಟ್ಟಿದ್ದ ಸರ್ಕಾರದ ಮತಿಹೀನತೆಗೆ ಸರ್ವೋಚ್ಚ ನ್ಯಾಯಾಲಯವು ಛೀಮಾರಿ ಹಾಕಿತ್ತು.

ದೆಹಲಿ ವಿಶ್ವವಿದ್ಯಾಲಯವೊಂದು ನಗರ ಪ್ರದೇಶದ, ವಿದ್ಯಾವಂತ ಗೃಹಿಣಿಯರ ಬಗ್ಗೆ ನಡೆಸಿದ ಸಮೀಕ್ಷೆಯ ಪ್ರಕಾರ; 70% ಗೃಹಿಣಿಯರು ಉದ್ಯೋಗಸ್ತರಲ್ಲ. ಕೃಷಿ, ಶುಚಿ, ರುಚಿ, ಸಾಮಾನು ಖರೀದಿ, ನಿತ್ಯ ವೈದ್ಯ, ನಾಳಿನ ತಯಾರಿ, ಹವ್ಯಾಸಗಳ ಅಭ್ಯಾಸ, ಕುಟುಂಬ ಮನೋರಂಜನೆಯ ಏರ್ಪಾಡು, ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ಸದಸ್ಯರ ಬೇಕು ಬೇಡಗಳೆಡೆಗೆ ಗಮನ, ಬಿಲ್ ಪಾವತಿ, ಗೃಹ ಸಾಮಾನುಗಳ  ಪಾಲನೆ ಮತ್ತು ರಿಪೇರಿ, ಸಣ್ಣ ಉಳಿತಾಯ,
 
ದಿನದ ಬಟ್ಟೆಯ ಶುಚಿತ್ವ ಮತ್ತು ಇಸ್ತ್ರೀ, ಕುಟುಂಬದ ಒಳಉಡುಪಿನಿಂದ ಪಾರ್ಟೀ ದಿರಿಸಿನವರೆಗೂ ಒಪ್ಪ ಓರಣ, ಸಂಬಂಧಿಗಳೊಡನೆ ಸತ್ಸಂಬಂಧ, ಅತ್ತೆ-ಮಾವ, ಅತ್ತಿಗೆ, ನಾದಿನಿಯರೊಡನೆ ಸಾಮರಸ್ಯ, ಸ್ನೇಹಿತರೊಡನೆ ಸಂಪರ್ಕ ಮತ್ತು ಸದ್ಭಾವ ಹೊಂದಿರುವಿಕೆ, ಕುಟುಂಬದ ಹೊರ ಸದಸ್ಯರ ಮತ್ತು ನೆರೆಹೊರೆಯವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು,
 
ಸಭೆ ಸಮಾರಂಭಗಳ ಸಕಾಲ ನೆನಪುಗಳು ಮತ್ತು ಪಾಲ್ಗೊಳ್ಳುವಿಕೆ, ಜೀವ ಮತ್ತು ಆರೋಗ್ಯ ವಿಮೆಗಳ ಬಗ್ಗೆ ಗಮನ ಹರಿಸುವುದು - ಹೀಗೆ ದುಡಿಮೆಯಲ್ಲಿ ಗಂಡಸರಿಗಿಂತ ಮುಂದಿದ್ದಾರೆ.

100% ಅಪ್ಪಟ ಗೃಹಿಣಿಯರು ಇಂತಿಷ್ಟು ಎನ್ನುವ ಸಂಬಳ ಪಡೆಯದೆಯೂ ದೇಶದ ಮೂಲಭೂತ ಒಟ್ಟು ಆದಾಯಕ್ಕೆ 32% ಬೆಳವಣಿಗೆಯ ಯೋಗದಾನ ನೀಡಿದ್ದಾರೆ.

50% ಗೃಹಿಣಿಯರು ತಮ್ಮದೇ ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ದೇಶದ ಆರ್ಥಿಕ ಸುಸ್ಥಿತಿಯ ಬೆನ್ನೆಲುಬಾಗಿದ್ದಾರೆ. ತಮ್ಮದೇ ಬ್ಯಾಂಕ್ ಖಾತೆ ಹೊಂದಿರುವ 42% ಗೃಹಿಣಿಯರು ತಾವೇ ಸ್ವತಃ ಆಪರೇಟ್ ಮಾಡುವುದಿಲ್ಲ. 88% ಗೃಹಿಣಿಯರು ಕುಟುಂಬದ ಕಷ್ಟ ಕಾಲದಲ್ಲಿ ತಮ್ಮ ಒಡವೆಗಳ ಮೇಲೆ ಸಾಲ ತೆಗೆದು ಕೊಡುತ್ತಾರೆ.

27% ಗೃಹಿಣಿಯರು ಕುಟುಂಬದ ಕಷ್ಟ ನೀಗಲು ತಮ್ಮ ಒಡವೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. 87% ಗೃಹಿಣಿಯರು ತಮ್ಮ ಅನಾರೋಗ್ಯವನ್ನು ಮುಚ್ಚಿಟ್ಟು ಗೃಹಕೃತ್ಯಗಳಲ್ಲಿ ತೊಡಗುತ್ತಾರೆ.

ಸಣ್ಣ ಸಂಬಳದ ದೊಡ್ಡ ಗಂಡನನ್ನು ಸಾಕುವ ಹೆಣ್ಣಿನ ಕಷ್ಟ ಹೆಣ್ಣಿಗೆ ಮಾತ್ರವೇ ಗೊತ್ತು ಸಾಕಿ ಬೈಯ್ಯಿಸಿಕೊಳ್ಳೊ ಅನಿಷ್ಟ...

ಯಾರನ್ನೂ ಅವಲಂಬಿಸದೆ ಆಪತ್ಕಾಲದಲ್ಲೂ, ತುರ್ತು ಸಂದರ್ಭದಲ್ಲೂ ಕುಟುಂಬವನ್ನು ನಿರ್ವಹಿಸಬಲ್ಲ ಶಕ್ಯತೆ ಮುಕ್ಕಾಲು ಪಾಲು ವಿದ್ಯಾವಂತ ಮಹಿಳೆಯರಿಗೆ ಸಹಜವಾಗಿ ಇರುತ್ತೆ. ಬಹುಪಾಲು ವಿದ್ಯಾವಂತ ಗೃಹಿಣಿಯರು ಯಾವುದೇ ಹಣದ ಅಭಿಲಾಷೆಯಿಲ್ಲದೆ ಗಂಡನ ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಪಟ್ಟ ಕೆಲಸಗಳನ್ನೂ ನಿರ್ವಹಿಸುತ್ತಾರೆ.

ಹಣಕಾಸು ವಿಷಯದಲ್ಲಿ ಗಂಡನ ವಿಪರೀತವೆನಿಸುವಷ್ಟು ಹಿಡಿತ ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತೆ. ಅವಶ್ಯಕತೆಯಿದ್ದಲ್ಲಿ ಹಣ ಕೇಳಿದಾಗ ಆಕೆಯನ್ನು ಮೂದಲಿಸುವುದು, ಬೆಲೆ ಹೆಚ್ಚಳದಿಂದ ಒತ್ತಡಕ್ಕೊಳಗಾಗುವ ಗೃಹಿಣಿಯ ಕುಟುಂಬ ನಿರ್ವಹಣೆಯೆಡೆಗಿರುವ ಅವಶ್ಯಕತೆಗಳನ್ನೂ ಗಮನಿಸದೆ ಅವಳನ್ನು ನಿಂದಿಸುವುದು, ಇವೆಲ್ಲವೂ ಅವಳ ಸಾಮರ್ಥ್ಯವನ್ನು ಕುಗ್ಗಿಸಿಬಿಡುತ್ತವೆ ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗುತ್ತವೆ.

ಇವಳ ಸಹನೆಗೆ ಹೆಸರು ಸೀತೆಯೆಂದು ಪ್ರೀತಿ ಕ್ಷಮೆ ಕರುಣೆಯೇ ರೀತಿಯೆಂದೂ...
ಆಕೆ ಯಾವುದನ್ನೂ ವಿರೋಧ ಮಾಡಲಾರಳು ಅಂದ ಮಾತ್ರಕ್ಕೆ ಗಮನಿಸಿರಲಾರಳೆಂದರ್ಥವಲ್ಲ.

ವಿಭಕ್ತ-ಅವಿಭಕ್ತ ಯಾವುದೇ ವಿಧದ ಕುಟುಂಬಗಳಿಗೂ ಇರಬಹುದಾದ, ಅವುಗಳದ್ದೇ ಆದ ಅನಾನುಕೂಲತೆಗಳನ್ನು, ಮಿತಿಗಳನ್ನು ಎದುರಿಸಿಕೊಂಡೇ ಜೀವನ ನಡೆಸುವ ಇಂದಿನ ವಿದ್ಯಾವಂತ ಗೃಹಿಣಿ ಲೋಕಜ್ಞಾನಿಯೂ ಹೌದು. ಯಾವ ಸಂಬಂಧಗಳೂ ಹಕ್ಕು ಮತ್ತು ಅಧಿಕಾರ ಚಲಾವಣೆಗೆ ನಾಂದಿ ಹಾಕಿ ಕೊಡುವುದಿಲ್ಲ. ಪತಿ ಪತ್ನಿಯರ ನಡುವೆಯೂ ಸ್ವೇಚ್ಛಾಚಾರ ಮತ್ತು ಸ್ವಾತಂತ್ರ್ಯದ ನಡುವಿನ ಸೂಕ್ಷ್ಮ ಗೆರೆಯನ್ನು ಗೌಣವಾಗಿಸಬಾರದು.
 
ಎಲ್ಲಿಯವರೆಗೂ ಪುರುಷ ಹೆಂಡತಿಯ `ಇರುವಿಕೆಯ~ ಅವಶ್ಯಕತೆಯನ್ನು ಮತ್ತು ಸಾಮರ್ಥ್ಯವನ್ನು ಗುರ್ತಿಸುವುದಿಲ್ಲವೋ ಅಲ್ಲಿಯವರೆಗೂ ಸಂಸಾರ ಅಸುಖಿ. ಪರಸ್ಪರರ ಬಗ್ಗೆ ಗೌರವ, ಅಭಿಮಾನ ಇಲ್ಲದಿದ್ದರೆ ಕಾಮ-ಪ್ರೇಮಗಳ ಹದವರಿತ ಪ್ರೀತಿಯು ಹುಟ್ಟಲಾರದು.
 
ಪ್ರೀತಿಯಿಲ್ಲದ ಮೇಲೆ ಸಂಬಂಧ ಉಳಿದೀತು ಹೇಗೆ? ಅದಕ್ಕೇ ಇರಬೇಕು ಇಂದು ಕೌಟುಂಬಿಕ ದೌರ್ಜನ್ಯ ತಡೆ ಕಾನೂನಿನ ನೆರಳಿನಲ್ಲಿ ಹೆಂಗಸರು ರೊಚ್ಚಿಗೇಳುತ್ತಿರುವುದು. ಹಗ್ಗ ಕಡಿಯುವವರೆಗೂ ಎಳೆಯಬಾರದು ಎನ್ನುವ ಗಾದೆ ಮಾತನ್ನು ನಾವು ನೀವು ಮರೆತಿರುವುದರ ಪ್ರಭಾವವಿದು.

ಹೊತ್ತು ಹೊತ್ತಿಗೆ ತುತ್ತು ಉಣಿಸಿ ತಂದೆ ಮಗುವ ತಬ್ಬಿದಾಕೆ ನಿನಗೆ ಸ್ತ್ರೀ ಎಂದರೆ ಅಷ್ಟೇ ಸಾಕೆ?
 ಪ್ರತೀ ಗಂಡಿಗೂ ಅಹಂಗೆ ಪೆಟ್ಟು ಬೀಳದಂತಹ ಗೌರವ ದೊರೆಯಬೇಕೆನ್ನುವ ಅಪೇಕ್ಷೆ ಇರುವುದು ಹೇಗೋ, ಹಾಗೆಯೇ ಹೆಣ್ಣಿಗೆ ಆದರ, ಅಭಿಮಾನಗಳ ಪೋಷಣೆಯ ಬಯಕೆ ಇರುವುದು ಸಹಜ. ಮನೆಯಲ್ಲಿ ತಾಯಿಯ ಆತ್ಮ ಸಂತೋಷ ಮತ್ತು ನಿಜವಾದ ಸಂತೃಪ್ತ ಭಾವವು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮನೋವಿಜ್ಞಾನಿಗಳು ಕಂಡುಕೊಂಡಿರುವ ಸತ್ಯ.
 
ಹೀಗಿದ್ದೂ, ಉದ್ಯೋಗಕ್ಕಾಗಿ ಹೊರಗೆ ಹೋಗದೆ ಸಂಸಾರ ನಿರ್ವಹಿಸುವ ಗೃಹಿಣಿ ಯಾವುದರಲ್ಲಿ ತಾನೆ ಕಡಿಮೆಯಾಗಿದ್ದಾಳೆ? ಆದರೂ ಏಕಾಗಿ ಈ ಅವಗಣನೆ, ಮೂದಲಿಕೆ ಮತ್ತು ನಿಂದನೆ?

ಗಂಡಸು ಕೋಟಿ ರೂಪಾಯಿ ದುಡಿದು ತಂದರೂ ಅದನ್ನು ನಿಭಾಯಿಸಬಲ್ಲ ಸಮರ್ಥ ಗೃಹಿಣಿ ಇಲ್ಲವೆಂದಾದರೆ ಅವನ ದುಡಿಮೆಯ ಸಾರ್ಥಕತೆ ಹೇಗೆ? ಇಂದಿನ ಗೃಹಿಣಿಯರು ಗಂಡನಿಂದ ಹೆಚ್ಚಿನದೇನನ್ನೂ ಬಯಸುತ್ತಿಲ್ಲ. ಆತ ಮಾನವೀಯ ನೆಲೆಯಲ್ಲಿ ಜಾಗೃತಗೊಂಡರೆ ಅಷ್ಟು ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT