ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ನಿರೀಕ್ಷೆಯಲ್ಲಿ...

ಒಡಲ ದನಿ
Last Updated 8 ನವೆಂಬರ್ 2013, 19:30 IST
ಅಕ್ಷರ ಗಾತ್ರ

ನಿರೀಕ್ಷಾ ನಿನಗೊಂದು ಪ್ರೀತಿಯ ಕರೆಯೋಲೆ,
ಚಿನ್ನು  ಹೇಗಿದ್ದೀಯಾ? ಎಲ್ಲಿದ್ದೀಯಾ? ನೀನಂತೂ ನಮ್ಮನ್ನು ಮರೆತೇಬಿಟ್ಟಿದ್ದೀಯಾ. ನಿನ್ನ ಅಮ್ಮನ ನೋವಿಗೆ ನೀನೇ ಕಾರಣವಾಗಿಬಿಟ್ಟಿದ್ದೀಯ. ನಿನ್ನ ಬರುವಿಕೆಯೇ ಈ ಅಮ್ಮನ ನೋವಿಗೆ ಸಾಂತ್ವನ. ನಿನ್ನ ಸ್ವಾಗತಕ್ಕಾಗಿ ನಾನು– ನಿನ್ನಪ್ಪ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಿನ್ನ ಅಜ್ಜಿ– -ತಾತ, ಅತ್ತೆ– -ಮಾವ, ಚಿಕ್ಕಿ– -ಚಿಕ್ಕಪ್ಪ ಎಲ್ಲರೂ ಹರಕೆ ಹೊತ್ತು ದೇವರಿಗೆ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಬೇಗ ಬಾ ಮರಿ...

ಈ ಪತ್ರ ಬರೆಯಲು ಕಾರಣ ಈ ದಿನ ಯೋಗ ಕೇಂದ್ರಕ್ಕೆ ಭೇಟಿ ನೀಡಿ ಗುರುಗಳೊಂದಿಗೆ ನನ್ನ ತೊಂದರೆ ಹೇಳಿಕೊಂಡೆ, ಅದಕ್ಕೆ ತಕ್ಕ ಆಸನಗಳನ್ನು ಹೇಳಿಕೊಡುವಂತೆ ವಿನಂತಿಸಿದೆ. ನನ್ನ ಸಮಸ್ಯೆಯನ್ನು ಕೂಲಂಕಷವಾಗಿ ತಿಳಿದ ನಂತರ,  ‘ಈ ವಿಷಯದ ಬಗ್ಗೆ ಹೆಚ್ಚು ಚಿಂತಿಸಬೇಡಿ, ನೀವು ಮದುವೆಯಾಗಿ ಮೂರು ವರ್ಷವಷ್ಟೇ. ಸ್ವಲ್ಪ ತಡವಾಗಿದೆ. ಬಹು ಒತ್ತಡದ ಈ ಕಾಲದಲ್ಲಿ ಇದು ಸಾಮಾನ್ಯ. ಮೊದಲು ಚಿಂತೆಯಿಂದ ಹೊರಗೆ ಬಂದು ಸಂತೋಷವಾಗಿರಲು, ಶಾಂತಿಯಿಂದಿರಲು ಪ್ರಯತ್ನಿಸಿ, ತಾನೇತಾನಾಗಿ ಎಲ್ಲವೂ ಸರಿಹೋಗುತ್ತದೆ’ ಎಂದು ಹೇಳುತ್ತಾ, ಐದು-– ಹತ್ತು ವರ್ಷಗಳ ನಂತರ ಹಡೆದ ತಾಯಂದಿರ ಉದಾಹರಣೆಗಳನ್ನು ಹೇಳಿ ಧೈರ್ಯ ತುಂಬಿದರು.

ಅವರು ಹೇಳುವಾಗ ಎಲ್ಲವೂ ಸರಿ ಎನಿಸುತ್ತದೆ, ಭರವಸೆ ಮೂಡುತ್ತದೆ. ಆದರೆ ಕಾಡುವ ಜನಗಳನ್ನು ನೆನೆದರೆ ಮತ್ತೆ ಚಿಂತೆ ಆವರಿಸುತ್ತದೆ. ಮದುವೆ, ಸಮಾರಂಭಗಳಿಗೆ ಹೋಗಲಿ ಅಥವಾ ಊರಿಗೆ ಹೋಗಲಿ ಒಂದೇ ಪ್ರಶ್ನೆ ‘ಏನಾದರೂ ಗುಡ್ ನ್ಯೂಸ್?’  ಆಮೇಲೆ ಒಂದಷ್ಟು ವೈದ್ಯರ ವಿಳಾಸ, ದೇವಸ್ಥಾನ, ವ್ರತಗಳ ವಿವರ, ಜೊತೆಗೆ ಒಂದಷ್ಟು ಉದಾಹರಣೆಗಳು. ಇನ್ನು ನನ್ನ ಕಚೇರಿಯಲ್ಲಿ ನನ್ನ ಬಗ್ಗೆ ಇನ್ನಿಲ್ಲದ ಕಾಳಜಿ. ಇನ್ನೂ ಪ್ಲಾನಿಂಗಾ? ಅಂತ ಒಬ್ಬರು, ಏಜ್ ಜಾಸ್ತಿ ಆದಷ್ಟೂ ತೊಂದರೆ ಜಾಸ್ತಿ ಅನ್ನುವ ಇನ್ನೊಬ್ಬರು, ಏನೇನೋ ಮಾತ್ರೆಗಳನ್ನು ತೆಗೆದುಕೊಳ್ಳಬೇಡ ಎನ್ನುವ ಬುದ್ಧಿವಾದ, ಮಕ್ಕಳಾಗೋದನ್ನ ಮುಂದೂಡುವುದು ಸಿಟಿ ಮಂದಿಯ ಫ್ಯಾಷನ್ ಅನ್ನುವ ಕುಹಕಿಗಳು..., ಸಾಕು ಸಾಕೆನಿಸುತ್ತಿದೆ. ಮದುವೆ, ಇತರ ಸಮಾರಂಭ, ಊರು ಇವುಗಳನ್ನು ಹೇಗಾದರೂ ತಪ್ಪಿಸಿಕೊಳ್ಳುತ್ತೇನೆ, ಆದರೆ ಆಫೀಸು? ವಿಧಿಯಿಲ್ಲ ಅನಿವಾರ್ಯ.
 
  ಪ್ರತಿ ಋತುಚಕ್ರ ನಿಲ್ಲುವುದನ್ನೂ ಕಾಯುತ್ತೇನೆ, ಬೇಡುತ್ತೇನೆ, ರಕ್ತಸ್ರಾವವಾದಾಗ ಒಮ್ಮೆಲೇ ಕುಸಿಯುತ್ತೇನೆ. ನಿನ್ನಪ್ಪನ ಧೈರ್ಯದ ಮಾತುಗಳು ನನ್ನ ಕಿವಿಗೆ ಹೋಗುತ್ತಿಲ್ಲ, ನನ್ನಮ್ಮನ ಸಮಾಧಾನ ಸಾಕಾಗುವುದಿಲ್ಲ, ಮತ್ತೆ ಕಾಯುತ್ತೇನೆ. ಸಾಕಷ್ಟು ವ್ರತಗಳನ್ನು ಮಾಡಿದ್ದಾಯಿತು, ದೇವಸ್ಥಾನಗಳನ್ನು ಸುತ್ತಿಯಾಯ್ತು, ದೇವರಿಗೆ ಮಾತ್ರ ಇನ್ನೂ ನಿನ್ನನ್ನು ನನ್ನ ಮಡಿಲಿಗೆ ತುಂಬುವ ಕರುಣೆ ಬಂದಿಲ್ಲ. ವೈದ್ಯರೇನೋ ನಿಮ್ಮಿಬ್ಬರಲ್ಲಿ ಏನೂ ತೊಂದರೆಯಿಲ್ಲ ಎನ್ನುತ್ತಾರೆ. ಅದೆಷ್ಟೋ ಸ್ಕ್ಯಾನ್‌ಗಳನ್ನು ಮಾಡಿಸಿದ್ದಾರೆ, ಮಾತ್ರೆಗಳನ್ನು ನುಂಗಿಸಿದ್ದಾರೆ. ಆದರೂ ಅವರಿಗೇ ಅರ್ಥವಾಗದ ಏನೋ ಅಡ್ಡಿ ಇದೆ ಎಂಬುದು ಸುತ್ತಲಿನ ಈ ಜನಗಳಿಗೆ ಅರ್ಥವಾಗುವುದಿಲ್ಲ.  ಮದುವೆಯಾಗುವವರೆಗೂ ಇನ್ನೂ ಮದುವೆಯಾಗಲಿಲ್ಲವೇ ಎಂಬ ಪ್ರಶ್ನೆ, ಮದುವೆಯಾದ ವರ್ಷಕ್ಕೆ ‘ಮಗು’?  ಎಂಬ ಪ್ರಶ್ನೆ.

ಮಾನವನ ಬಳಿ ಸೃಷ್ಟಿಯ ನಿಗೂಢಗಳಿಗೆಲ್ಲಾ ಉತ್ತರವಿಲ್ಲ. ವೈದ್ಯಕೀಯ ಜಗತ್ತು ಸಾಧ್ಯ ಎಂದದ್ದನ್ನು ಅಸಾಧ್ಯಗೊಳಿಸುವ, ಅಸಾಧ್ಯ ಎಂದದ್ದನ್ನು ಸಾಧ್ಯಗೊಳಿಸುವ ಕಾಣದ ಶಕ್ತಿ ಇರುವುದು ಸತ್ಯ. ವೈದ್ಯಕೀಯ ಪ್ರಯತ್ನದಿಂದಲೋ, ದೈವೀ ಕೃಪೆಯಿಂದಲೋ ನನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ನನಗಿದೆ. ಆದರೆ ಈ ಜನ ಅಲ್ಲಿಯವರೆಗೂ ನನ್ನನ್ನು ನನ್ನ ಪಾಡಿಗೆ ಬಿಟ್ಟು ನನ್ನ ಮತ್ತು ಮನೆಯವರ ತಲೆ ಕೆಡಿಸದಿದ್ದರೆ ಸಾಕು.

ಹಳ್ಳಿಯವರೇನೋ ಅಶಿಕ್ಷಿತರು ಇರಲಿ, ಮೂರೊತ್ತೂ ಅಂತರ್ಜಾಲದ ಮುಂದೆ ಕುಳಿತುಕೊಳ್ಳುವ ಸುಶಿಕ್ಷಿತರು ಸಹ ಇಂತಹ ಖಾಸಗಿ ವಿಷಯದಲ್ಲಿ ಮೂಗು ತೂರಿಸುವುದು ಸಹ್ಯ ಎನಿಸುವುದಿಲ್ಲ. ಕೆಲವು ಮನೆಗಳಲ್ಲಂತೂ ಮಕ್ಕಳಾಗದ ಹೆಣ್ಣು ಮಕ್ಕಳನ್ನು ನಿಂದಿಸುವ, ಗಂಡನಿಗೆ ಇನ್ನೊಂದು ಮದುವೆ ಮಾಡುವ ಹುನ್ನಾರವೂ ನಡೆಯುತ್ತದಂತೆ. ಸದ್ಯ ನನ್ನ ಪಾಲಿಗೆ ಇಂತಹ ಹಿಂಸೆಯಿಲ್ಲ ಎಂಬುದೇ ಸಮಾಧಾನ.
    ಅದಕ್ಕೆ ಚಿನ್ನು, ನೀನು ಬಂದು ನನ್ನ ಮಡಿಲು ಸೇರಿದರೆ, ಈ ಎಲ್ಲ ಪ್ರಶ್ನೆಗಳಿಗೂ, ನನ್ನ ದುಃಖಕ್ಕೂ ಫುಲ್‌ಸ್ಟಾಪ್‌್. ಈ ಪತ್ರ ಕಂಡೊಡನೆ, ಆ ದೇವರಿಗೆ ನಿನ್ನಮ್ಮನ ದುಃಖವನ್ನು ಅರ್ಥ ಮಾಡಿಸಿ ಓಡೋಡಿ ಬಾ ಕಂದ...
ಇಂತಿ,   
ನಿನ್ನದೇ ನಿರೀಕ್ಷೆಯಲ್ಲಿ ನಿನ್ನ ಅಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT