ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿರಲಿ ಮನೇಲಿ...

Last Updated 25 ಮೇ 2012, 19:30 IST
ಅಕ್ಷರ ಗಾತ್ರ

ಮಕ್ಕಳ್‌ಸ್ಕೂಲು ಮನೇಲಲ್ವೇ...~  ಎಂಬ ಟಿ.ಪಿ.ಕೈಲಾಸಂರವರ ಸಾರ್ವಕಾಲಿಕವಾದ ಅಂಬೋಣ ಇಂದು ಎಷ್ಟರ ಮಟ್ಟಿಗೆ ಪ್ರಸ್ತುತ ಎಂಬ ಸಂಶಯ ಈಗ ಮೂಡುವುದು ಸಹಜ. ಏಕೆಂದರೆ ಮಕ್ಕಳು ಹುಟ್ಟಿ ಅಂಬೆಗಾಲಿಡುತ್ತಲೇ ಪ್ರಿಸ್ಕೂಲುಗಳ ಹುಡುಕಾಟ ಆರಂಭವಾಗಿರುತ್ತದೆ.
 
ದುಡಿಯುವ ತಂದೆತಾಯಿಯರಿಬ್ಬರೂ ಸಾವಿರಾರು ರೂಪಾಯಿಗಳನ್ನು ನೀಡಿ ಪ್ರಸಿದ್ಧವಾದ ಪ್ರಿಸ್ಕೂಲುಗಳಿಗೇ ಸೇರಿಸುತ್ತಾರೆ. ಅಲ್ಲದೆ ಇವುಗಳಲ್ಲಿ ಕೆಲವು, ಹುಟ್ಟಿ ಕೆಲವು ತಿಂಗಳಾದ ಮಕ್ಕಳನ್ನೂ ನೋಡಿಕೊಳ್ಳುವ ವ್ಯವಸ್ಥೆಯನ್ನೂ ಹೊಂದಿರುತ್ತವೆ(ಡೇ ಕೇರ್). ಇಂಥ ಶಾಲೆಗಳಲ್ಲಿ ಕೆಲಸ ಮಾಡುವ ನನ್ನ ಗೆಳತಿಯೊಬ್ಬಳು ಹೇಳಿದ ಘಟನೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ.

ಅವಳ ಶಾಲೆಯಲ್ಲಿ ಮಗುವೊಂದಿದೆ, 7-8 ತಿಂಗಳಿನದ್ದು (ಡೇಕೇರ್). ಅದರ ಅಪ್ಪ ಅಮ್ಮ ಇರುವುದು ವಿದೇಶದಲ್ಲಿ. ಇಲ್ಲಿ ಅಜ್ಜ-ಅಜ್ಜಿಯರ ಹತ್ತಿರ ಅದನ್ನು ಬಿಟ್ಟಿದ್ದಾರೆ. ಆದರೆ ಅವರಿಬ್ಬರೂ ಕೆಲಸಕ್ಕೆ ಹೋಗುವವರು. ಆ ಮಗುವನ್ನು ನೋಡಿಕೊಳ್ಳುವವರಿಲ್ಲದೆ, ಗೆಳತಿಯ ಶಾಲೆಯಲ್ಲಿ ಸೇರಿಸಿದ್ದಾರೆ.

ಅದನ್ನು ನೋಡಿಕೊಳ್ಳಲು ಒಬ್ಬಳನ್ನು ನೇಮಿಸಿಕೊಂಡಿದ್ದಾರೆ. ಈಗ ಆ ಮಗು ಅವಳನ್ನು ಎಷ್ಟು ಅವಲಂಬಿಸಿಕೊಂಡಿದೆಯೆಂದರೆ ಎಲ್ಲದಕ್ಕೂ ಅವಳೇ ಆಗಬೇಕು ಎನ್ನುತ್ತದಂತೆ. ವಿಚಿತ್ರವಾಗಿದೆಯಲ್ಲವೇ? ಈ ಘಟನೆ ಕೇಳಿದಾಗ ನನಗನ್ನಿಸಿದ್ದು, ಮಗುವಿನ ಅಪ್ಪ- ಅಮ್ಮ ಬಂದಾಗ ಅವರು ಅದಕ್ಕೆ ಯಾರೋ ಅಂಕಲ್- ಆಂಟಿ ಅನ್ನಿಸಬಹುದಲ್ಲವೇ?

ಇನ್ನೊಂದು, ಇನ್ನೊಬ್ಬ ಗೆಳತಿಯ ಕತೆ. ಅವಳು ಪ್ರಿಸ್ಕೂಲ್‌ನಲ್ಲಿ ಕೆಲಸ ಮಾಡುವಾಕೆ. ಅವಳಲ್ಲೂ `ಡೇಕೇರ್~ ವ್ಯವಸ್ಥೆ ಇದೆ. ಹಲವು ಚಿಕ್ಕ ಮಕ್ಕಳನ್ನು ಅವಳು ನೋಡಿಕೊಳ್ಳುತ್ತಾಳೆ. ಅವಳಿಗೂ ಸಣ್ಣ ಎಂಟು ತಿಂಗಳ ಮಗುವೊಂದಿದೆ. ಆದರೆ ಮಗುವನ್ನು ನೋಡಿಕೊಳ್ಳುವವರಿಲ್ಲದೆ ಕೆಲಸದಾಕೆಯೊಬ್ಬಳನ್ನು ಅವಳು ಇಟ್ಟುಕೊಂಡಿದ್ದಾಳೆ.

ಪರರ ಮಕ್ಕಳನ್ನು ನೋಡಿಕೊಳ್ಳುವ ಈಕೆಗೆ ತನ್ನ ಮಗುವಿಗಾಗಿ ಸಮಯವನ್ನು ನೀಡಲಾಗುವುದಿಲ್ಲ. ಎಂಥ ವಿಪರ್ಯಾಸ?ಈ ಎರಡು ಘಟನೆಗಳ ಹಿಂದೆಯೇ ಇಂಟರ್‌ನೆಟ್‌ನಲ್ಲಿ ಹಾರಿ ಬಂದ ಕತೆಯೊಂದು ನೆನಪಾಗುತ್ತಿದೆ. ಅದೊಂದು ಕರುಣಾಜನಕ ಪುಟ್ಟ ಕತೆ. ಬರೆದವರಿಗೆ ಈ ಮೂಲಕ ಕೃತಜ್ಞತೆ ಅರ್ಪಿಸುತ್ತಿದ್ದೇನೆ. 

 ಅದೊಂದು ಪುಟ್ಟ ಸಂಸಾರ. ಗಂಡ, ಹೆಂಡತಿ, ಒಂದು ಮಗು. ಇಬ್ಬರೂ ಕೆಲಸಕ್ಕೆ ಹೋಗುವವರು. ತಾಯಿ ಮಗುವಿನ ಶಾಲೆಯಲ್ಲೇ ಟೀಚರ್.

ಒಮ್ಮೆ ಬೇರೆ ವಿಷಯದ ಅಧ್ಯಾಪಕರು ಇವಳಿಗೆ ಕನ್ನಡ ಪರೀಕ್ಷೆಯ ಉತ್ತರಪತ್ರಿಕೆಯನ್ನು ತಿದ್ದಲು ಕೊಟ್ಟಿದ್ದರು. ಅದರಲ್ಲಿ ಒಂದು ಪ್ರಬಂಧ ಬರೆಯುವ ಪ್ರಶ್ನೆಗೆ ಉತ್ತರವೂ ಇದ್ದಿತ್ತು. ವಿಷಯ - `ದೇವರು ವರವನ್ನು ಕೇಳಿದರೆ ಏನು ಕೇಳಿಕೊಳ್ಳುತ್ತೀರಿ?~ ಎಂದು. ಯಾವುದೇ ಪತ್ರಿಕೆಗಳಲ್ಲೂ ಅಂಥ ವಿಶೇಷವೇನೂ ಕಾಣಿಸಲಿಲ್ಲ ಅವಳಿಗೆ.
 
ಆದರೆ ಮುಂದಿನ ಪತ್ರಿಕೆ ಓದುತ್ತಿದ್ದಂತೆ ಅವಳಿಗೆ ದುಃಖ ಒತ್ತರಿಸಿಕೊಂಡು ಬಂದಿತ್ತು. ಆ ಪತ್ರಿಕೆಯ ಮಗು ದೇವರಲ್ಲಿ ತನ್ನನ್ನು ಕೋಣೆಯಲ್ಲಿರುವ ಟಿ.ವಿ. ಮಾಡು ಎಂದು ಬರೆದಿತ್ತು. ಅದಕ್ಕೆ ಕೊಟ್ಟ ಕಾರಣವೂ ಮನಕಲಕುವಂತಿತ್ತು.  ಅಪ್ಪ ಇಡೀ ದಿನ ಲ್ಯಾಪ್‌ಟಾಪ್‌ನಲ್ಲಿ ಮುಳುಗಿರುತ್ತಾರೆ.

ಅಮ್ಮ -ಅಡುಗೆಮನೆಯಲ್ಲಿ. ಏನಾದರೂ ಕೇಳಿದರೆ,  `ಒಂದ್ನಿಮಿಷ ತಡಿ~  ಎನ್ನುತ್ತಾರೆ. ಮೈಮೇಲೆ ಕುಳಿತುಕೊಂಡರೂ, `ಯಾಕೇ ಯಾವಾಗಲೂ ಮೈಮೇಲೆ ಬೀಳ್ತೀಯಾ?~ ಎನ್ನುತ್ತಾರೆ. ಶೀತ, ಜ್ವರ ಬಂದರೂ ತನಗೇ ಬಯ್ಯುತ್ತಾರೆ. ಹೀಗೆ ಅನೇಕ ದೂರುಗಳಿದ್ದವು.

ಕೊನೆಗೆ ಮಗು ಬರೆದಿತ್ತು- `ಅಪ್ಪ -ಅಮ್ಮ ಖುಷಿಯಾಗಿರುವುದು ಟಿ.ವಿ. ಮುಂದೆ ಮಾತ್ರ. ಅದರ ಮುಂದೆ ಕುಳಿತು ನಗುತ್ತಾರೆ, ಖುಷಿಪಡುತ್ತಾರೆ, ಸಂತೋಷದಿಂದ ಇರುತ್ತಾರೆ. ನಾನೇನಾದರೂ ಟಿ.ವಿ. ಆದರೆ ಅಪ್ಪಅಮ್ಮ ಇಬ್ಬರೂ ನನ್ನ ಜೊತೆಯಲ್ಲೇ ಇರುತ್ತಾರೆ. ಅದಕ್ಕೆ ನನ್ನನ್ನು ಟಿ.ವಿ. ಮಾಡು...~ ಯಾರು ಬರೆದದ್ದು ಇದು ಎಂದು ಕಣ್ಣೊರೆಸಿಕೊಳ್ಳುತ್ತಾ ನೋಡಿದರೆ ಅದನ್ನು ಅವಳ ಮಗುವೇ ಬರೆದಿತ್ತು! ದುಃಖ ಒತ್ತರಿಸಿಕೊಂಡು ಬಂದಿತ್ತು.

ನಾನು ಈ ಲೇಖನ ಬರೆಯುವಾಗ ನನ್ನ ನಾಲ್ಕು ವರ್ಷದ ಮಗಳು, ನಾನು ಅವಳ ಕಡೆಗೆ ಗಮನ ಕೊಡುತ್ತಿಲ್ಲವೆಂದು ಏನೇನೋ ನೆಪಗಳನ್ನು ಒಡ್ಡಿ ನನ್ನನ್ನು ಬರವಣಿಗೆಯ ಕೆಲಸದಿಂದ ವಿಮುಖಳನ್ನಾಗಿಸಲು ಮಾಡುವ ಪ್ರಯತ್ನವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ.

ಆಗ ಎಲ್ಲಿ ನಾನೂ ಈ ಮೇಲಿನ ತಾಯಿಯಂತೆಯೇ ಆಗುತ್ತಿರುವೆನೇನೋ ಎಂಬ ಪ್ರಜ್ಞೆ ನನ್ನನ್ನು ಕಾಡಿದಿದ್ದೆ. ಹಾಗೆಂದು ಎಲ್ಲಾ ದುಡಿಯುವ ತಂದೆತಾಯಿಯರೂ ಹೀಗೆ ಎಂದು ಹೇಳುತ್ತಿಲ್ಲ.

ಜನಪದ ಸ್ತ್ರೀಯರು ತಮ್ಮ ಕಷ್ಟಕಾರ್ಪಣ್ಯಗಳನ್ನು, ದಿನದ ದುಡಿಮೆಯ ಆಯಾಸವನ್ನು ಮರೆಯುತ್ತಿದ್ದುದು ಮಕ್ಕಳ ಆಟಪಾಟಗಳನ್ನು ನೋಡಿ.

ಕೂಸು ಇದ್ದ ಮನೀಗೆ ಬೀಸಣಿಗೆ ಯಾಕ
ಕೂಸು ಕಂದಯ್ಯ ಒಳಹೊರಗ ಆಡಿದರ
ಬೀಸಣಿಗೆ ಗಾಳಿ ಸುಳಿದಾವ
ಆದರೆ ನಾವಿಂದು ಸಹಜವಾದ ಬೀಸಣಿಕೆ ಬಿಟ್ಟು ಫ್ಯಾನ್ ಗಾಳಿಗೆ ಮೊರೆಹೋಗಿದ್ದೇವೆ!
ಅಂದು,

 ಆಡಿ ಬಾ ನನ ಕಂದ ಅಂಗಾಲ ತೊಳೆದೇನ
 ತೆಂಗಿನಕಾಯ ಎಳನೀರು ತಕ್ಕೊಂಡು
 ಬಂಗಾರ ಮೋರೆ ತೊಳೆದೇನು
ಬಡತನವು ಹಾಸಿ ಹೊದೆಯುವಷ್ಟು ಇದ್ದರೂ, ಕನಸು ಕಾಣುವುದಕ್ಕೇನೂ ಬರವಿದ್ದಿರಲಿಲ್ಲ ಅವರಿಗೆ. ಅದರಲ್ಲೇ ಆತ್ಮಾನುಸಂಧಾನಗೈಯುತ್ತಿದ್ದವರು ಅವರು. ಆದರೆ ಈ ರೀತಿಯ ಕಲ್ಪನೆ ಮಾಡಿಕೊಳ್ಳಲು ಇಂದಿನ ನಗರವಾಸಿಗಳಿಗೆ ಪುರುಸೊತ್ತೇ ಇಲ್ಲ.

ಇಂದು ಮಕ್ಕಳ ಆಟ ಆರಂಭವಾಗುವುದೇ ಶಾಲೆಗಳಲ್ಲಿ. ಅಂದು ಪ್ರಕೃತಿಯ ಮಡಿಲಲ್ಲೇ ಬೆಳೆದವರು ನಾವು. ನಮ್ಮ ಸೃಜನಶೀಲ ಬೆಳವಣಿಗೆಗೆ ಅನೇಕ ಅವಕಾಶಗಳಿದ್ದವು ಆಗ. ಆದರೆ ಈಗ ಕಂಪ್ಯೂಟರ್, ಮೊಬೈಲ್, ಟಿ.ವಿ ಇವೇ ಮಕ್ಕಳಿಗೆ ಲೋಕವಾಗಿದೆ. ಇದರಿಂದ ಸೃಜನಶೀಲತೆ ಬೆಳೆಯುವುದಾದರೂ ಹೇಗೆ?

`ಮಕ್ಕಳಿರಲವ್ವ ಮನೆ ತುಂಬ~ ಎಂದು ಹಾಡಿದ ನಾವು, ಇಂದು  `ಮಕ್ಕಳಿರಲವ್ವ ಒಂದೇಒಂದು~ ಎಂದೆನ್ನುತ್ತಾ ಅವರ ಭವ್ಯ ಭವಿಷ್ಯ ರೂಪಿಸುವ ಏಕೈಕ ಗುರಿಯ ನಡುವೆ ತಾಯ್ತನದ ಪ್ರೀತಿಯನ್ನು ನೀಡದೆ ಅವರನ್ನು ನಿರ್ಭಾವುಕರನ್ನಾಗಿಸುವ ದುರಂತದ ಹೊತ್ತಿನಲ್ಲಿದ್ದೇವೆ ಎಂದೆನಿಸುವುದಿಲ್ಲವೇ? ಹಾಗಿದ್ದರೆ ನಮ್ಮ ಮುಂದಿನ ಗುರಿ ಏನಾಗಬೇಕು? ಸಮಾಜ ಹೇಗೆ ಇದಕ್ಕೆ ನೆರವಾಗಬಹುದು? ಯೋಚಿಸಬೇಕಾದ ಸಮಯವಿದು!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT