ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬ ಕುಂದದಿರಲಿ ಸಂಭ್ರಮ...

Last Updated 9 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಯಾಕಮ್ಮಾ ಬಿ.ಪಿ. ಮಾತ್ರೆ ಬಿಟ್ಟಿದ್ದೀರಿ?'
`ಬರೋಕ್ಕೆ ಆಗ್ಲಿಲ್ಲ ಡಾಕ್ಟ್ರೇ. ಹಬ್ಬ ಮಾಡೋದು ಬೇಡ್ವೇ? ಹಬ್ಬ ಮುಗಿಸಿ ಹೋಗೋಣಾಂತ ಲೇಟಾಗಿ ಬಂದೆ. ಅಷ್ಟರಲ್ಲಿ ಮಾತ್ರೆ ಖಾಲಿಯಾಗಿತ್ತು'. ಜೊತೆಗೆ ಬಿ.ಪಿ.ಯೂ ಜಾಸ್ತಿಯಾಗಿತ್ತು!

ಶ್ರಾವಣ ಆರಂಭವಾಗಿದೆ. ಹಬ್ಬಗಳ ಸಾಲೂ ಇಲ್ಲಿಂದಲೇ ಶುರು. ಬರೀ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಂ ಬಾಂಧವರ ರಂಜಾನ್ ಕೂಡ ಈಗಲೇ. ಹಬ್ಬ ಹರಿದಿನಗಳು ಮನೆಯ ಬೇರೆಲ್ಲರಿಗೆ ರಜೆ, ಆರಾಮ, ಹಬ್ಬದೂಟಗಳ ಹರುಷ ತಂದರೆ, ಮನೆಯ ಮಹಿಳೆಗೆ ಮಾತ್ರ ಇದು ಆರಾಮದಾಯಕ ಎನ್ನುವಂತಿಲ್ಲ. ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ, ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರಪಂಚಮಿ... ಹಬ್ಬ ಮಾಡುವವರಿಗೆ ನಿತ್ಯ ಒಂದೊಂದು ಹಬ್ಬ ಮಾಡುವಷ್ಟು ಬಗೆಬಗೆಯ ದಿನಗಳು. ಬಗೆ ಬಗೆಯ ಸೀರೆ ಪ್ರದರ್ಶನಗಳೂ!

ತನ್ನ ಕುಟುಂಬದ ಒಳಿತಿಗೆ, `ಪತಿ ದೇವರ' ಆರೋಗ್ಯಕ್ಕೆ, ತನ್ನ ಮುತ್ತೈದೆತನಕ್ಕೆ ಮಹಿಳೆ ಈ ಎಲ್ಲವನ್ನೂ ಮಾಡಬೇಕು ಎಂಬುದು ಸಾಂಪ್ರದಾಯಿಕ ನಂಬಿಕೆ. ಆದರೆ ಕುಟುಂಬದ ಒಳಿತಿಗಾಗಿ ಎಲ್ಲವನ್ನೂ ಮಾಡುವ ಮಹಿಳೆಯ ಆರೋಗ್ಯದ ಮೇಲೆ ಈ ದಿನಗಳಲ್ಲಿ ಆಗುವ ಪರಿಣಾಮಗಳೇನು?

ಹಬ್ಬಗಳ ಹೆಸರಿನಲ್ಲಿ ಹೆಚ್ಚು ಸಿಹಿ ತಿಂಡಿಗಳನ್ನು ತಿನ್ನುವುದು, ಉಪವಾಸ ಮಾಡುವುದು, ಯಾವುದೇ ವ್ಯಾಯಾಮ ಮಾಡದಿರುವುದು (ನೂರು ಜನರಿಗೆ ಅಡುಗೆ ಮಾಡಿದರೂ ತೂಕ ಕಾಯ್ದುಕೊಳ್ಳಲು ಮತ್ತು ಮನಸ್ಸು- ದೇಹದ ಸುಸ್ಥಿತಿಗೆ ವ್ಯಾಯಾಮ ಬೇಕೇ ಬೇಕು) ಪರಿಣಾಮ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೆಚ್ಚಾಗುವುದು.

ತಮ್ಮ ನಿಯಮಿತ ಚಿಕಿತ್ಸೆ, ತಪಾಸಣೆಗಳಿಗೆ ಹೋಗದೇ ಇರುವುದು. ಕೆಲಸದ ಒತ್ತಡ ಈ ದಿನಗಳಲ್ಲಿ ಒಮ್ಮೆಲೇ ಹೆಚ್ಚುವುದು. ಮಡಿ- ಪದ್ಧತಿ- ಸಂಪ್ರದಾಯಗಳನ್ನು ಮಾಡಿಯೇ ತೀರುತ್ತೇನೆ ಎಂಬ ಹಟದಿಂದ ಮಾನಸಿಕ ಒತ್ತಡ.

ಮಗಳು/ ಸೊಸೆ ಈ ಎಲ್ಲ ವ್ರತಗಳನ್ನೂ ಸಾಂಪ್ರದಾಯಿಕವಾಗಿಯೇ ಮಾಡಬೇಕೆಂಬ ಆಸೆ. ಹಾಗಾಗದೇ ಇದ್ದಾಗ ಕಿರಿಕಿರಿ, ಅಸಹನೆ, ಸಿಟ್ಟು.

ಭಕ್ತಿ ಇರಲಿ, ಇಲ್ಲದಿರಲಿ ಉದ್ಯೋಗಸ್ಥ ಮಹಿಳೆಯರೂ, ಹೊಸದಾಗಿ ಮದುವೆಯಾದ ಯುವತಿಯರೂ ಅತ್ತೆ/ ತಾಯಿಯ ಹೆದರಿಕೆಯಿಂದ ಒಳಗೊಳಗೇ ಬೈದುಕೊಂಡು ವ್ರತ ಮಾಡಬೇಕಾದ ಒತ್ತಡ.

ಇವೆಲ್ಲದರ ಪರಿಣಾಮವಾಗಿ ಮನೆಯ `ಗೌರಿ' ಬೆಳಗ್ಗಿನಿಂದ ಪೂಜೆ ಮಾಡಿ, ಅಡುಗೆ ಮಾಡಿ ದುಡಿದು ಹೈರಾಣಾಗುತ್ತಾಳೆ. ಅದರಿಂದ, ಎಲ್ಲರೂ ಕುಳಿತು ಸಂತೋಷದಿಂದ ಊಟ ಮಾಡುವ ಹೊತ್ತಿನಲ್ಲಿ ಸಿಡಿಮಿಡಿಗೊಂಡು ಕಣ್ಣೀರು ಹಾಕಿ `ಇದೇನು ಹಬ್ಬದ ದಿನವೂ ನಿನ್ನದು ಇ್ದ್ದದದ್ದೇ ಗೋಳು' ಎನ್ನುವ ಟೀಕೆಗೆ ಗುರಿಯಾಗುತ್ತಾಳೆ.

ಹಾಗೆ ನೋಡಿದರೆ ಧರ್ಮ, ಭಕ್ತಿ ಎಲ್ಲವೂ ಅವರವರ ವೈಯಕ್ತಿಕ ಆಯ್ಕೆಗೆ ಸಂಬಂಧಿಸಿದ್ದು. ಉಪವಾಸವನ್ನು ತನ್ನ ಆರೋಗ್ಯಕ್ಕಾಗಿ ಶ್ರದ್ಧೆಯಿಂದ ಯಾವಾಗಲಾದರೊಮ್ಮೆ ಮಾಡುವುದಕ್ಕೂ, ಸರಿಯಾಗಿ ಓದದ ಮಗನಿಗೆ ಹೆಚ್ಚು ಅಂಕಗಳು ಬರಲೆಂಬ ಬೇಡಿಕೆ ಇಟ್ಟು ಹರಕೆಯ ಹೆಸರಿನಲ್ಲಿ ಉಪವಾಸ ಮಾಡುವುದಕ್ಕೂ ವ್ಯತ್ಯಾಸ ಇದೆ. ಭಕ್ತಿಗಾದರೂ ಅಷ್ಟೇ. ಇಂದು ಭಯವೇ ಭಕ್ತಿಯ ಮೂಲ! ಯಾವ ಪ್ರಯತ್ನವನ್ನೂ ಮಾಡದೆ ಕೇವಲ ಹಟ ಸಾಧಿಸುವುದು, ಮುಂದೇನಾದೀತೋ ಎಂಬ ಭಯದಿಂದ, ತಪ್ಪು ಮಾಡಿದ್ದೇನೆ ಎಂಬ ಪಾಪ ಭೀತಿಯಿಂದ ದೇವರ ಮೊರೆ ಹೋಗುವುದೇ ಹೆಚ್ಚು.

ಹಬ್ಬಗಳನ್ನು ನಾವು ನೋಡುವ, ಆಚರಿಸುವ ದೃಷ್ಟಿಕೋನ ಬದಲಾಗಬೇಕಿದೆ. ಹಿಂದಿನದೆಲ್ಲವೂ ಸರಿ, ಶ್ರೇಷ್ಠ ಎಂದುಕೊಳ್ಳುವುದಕ್ಕೆ ಬದಲಾಗಿ, ಇಂದಿನ ಪರಿಸ್ಥಿತಿಗೆ ತಕ್ಕಂತೆಯೂ ಆರೋಗ್ಯಕರವಾಗಿ ಸಂತೋಷದಿಂದ ಹಬ್ಬಗಳನ್ನು ಆಚರಿಸಲು ಸಾಧ್ಯ ಎಂಬುದನ್ನು ವಿಶೇಷವಾಗಿ ಮಹಿಳೆಯರು ಮನಗಾಣಬೇಕಾಗಿದೆ.

ಪಾಲಿಸಿ ನೋಡಿ
ಈ ವರ್ಷದ ಹಬ್ಬಗಳ ಸಾಲಿಗೆ ಕೆಳಗಿನ ಅಂಶಗಳನ್ನು ಪ್ರಯೋಗಾತ್ಮಕವಾಗಿಯಾದರೂ ಪಾಲಿಸಿ ನೋಡಿ. `ದೇವರಿಗೂ' ಒಂದು ಬದಲಾವಣೆ ಬೇಕಷ್ಟೆ!

ಹಬ್ಬಗಳು ಪ್ರಕತಿಯ ಬೇರೆ ಬೇರೆ ಸ್ಥಿತಿಗಳಿಗೆ, ಆರಾಧನೆಗೆ ಸಂಬಂಧಿಸಿದವು. ಹಾಗಾಗಿ ಮನೆಯವರೆಲ್ಲರೂ ಆಸಕ್ತಿಪೂರ್ಣವಾದ ವಿಷಯಗಳನ್ನು ಪರಂಪರೆಗೆ ಸಂಬಂಧಿಸಿದಂತೆ ಒಟ್ಟಿಗೇ ಸೇರಿ ತಿಳಿದುಕೊಳ್ಳುವುದು, ಸಿಹಿಯೂಟ ಮಾಡಿ ಸಂತೋಷದಿಂದ ಕಾಲ ಕಳೆಯುವುದು ಹಬ್ಬಗಳ ಮುಖ್ಯ ಗುರಿ.

ಪಾಪ- ಪುಣ್ಯಗಳನ್ನು ಬದಿಗಿಟ್ಟು ಸ್ವಪ್ರಯತ್ನದ ಮೇಲೆ ನಂಬಿಕೆ ಇಡಿ. ಪ್ರಾರ್ಥನೆಯನ್ನು ಆತ್ಮಪರಿಶೀಲನೆಯ, ಆತ್ಮಶುದ್ಧಿಯ ಚಟುವಟಿಕೆಯಾಗಿ ರೂಢಿಸಿಕೊಳ್ಳಿ. ಒಣ ನಂಬಿಕೆಯಿಂದ ಯಾಂತ್ರಿಕ ವಿಧಿವಿಧಾನಗಳನ್ನು ಅವಲಂಬಿಸದೆ, ಮಂತ್ರ- ಶ್ಲೋಕ- ಪದ್ಧತಿಗಳಲ್ಲಿ ಸಾಹಿತ್ಯ, ಕಲಾತ್ಮಕತೆಯನ್ನು ನೋಡಿ ಆನಂದಿಸಿ. ಒಂದು ದೇವರನಾಮವನ್ನು/ ಭಾವಗೀತೆಯನ್ನು ಮನಸ್ಸಿಟ್ಟು ಹಾಡುವುದೂ ಒಂದು ಗಂಟೆ ಪೂಜೆ ಮಾಡಿದಷ್ಟೇ ತೃಪ್ತಿಯನ್ನು ನಿಮಗೆ (ದೇವರಿಗೂ!) ನೀಡಬಲ್ಲದು.

ಕಾಫಿ ಕುಡಿದು ಖಾಲಿ ಹೊಟ್ಟೆಯಲ್ಲಿ ಇರುವುದು, ಮೇಲಿಂದ ಮೇಲೆ ಉಪವಾಸ, ಒಂದು ಹೊತ್ತಿಗೆ 10- 15 ಖಾದ್ಯಗಳನ್ನು ಮಾಡಿಯೇ ತೀರುತ್ತೇನೆ ಎಂಬ ಹಟ ಒಳ್ಳೆಯದಲ್ಲ. ಬದಲಾಗಿ ಮನೆಯವರೆಲ್ಲರ ಸಹಾಯ ಪಡೆದು ಸಾಧ್ಯವಾಗುವುದಷ್ಟನ್ನೇ ಮಾಡುವುದು ಸೂಕ್ತ.
ಯಾವುದೇ ಕಾರಣಕ್ಕೂ ಚಿಕಿತ್ಸೆ, ಔಷಧಿ ನಿಲ್ಲಿಸಬೇಡಿ. ನಿಮ್ಮ ಆರೋಗ್ಯ ಕಾಯ್ದುಕೊಳ್ಳಲು ಕೇವಲ ದೇವರ ಪ್ರಯತ್ನ ಸಾಲದು. ನಿಮ್ಮ ಭಕ್ತಿ, ಪುಣ್ಯ ನಿಮ್ಮ ವಿಷಯ. ಮಗಳು/ ಸೊಸೆಯ ಮೇಲೆ ಇದನ್ನು ಹೇರಬೇಡಿ. ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಪ್ರತಿ ಪದ್ಧತಿ, ಹಬ್ಬ, ಪೂಜೆಗಳಲ್ಲಿನ ಆಸಕ್ತಿಪೂರ್ಣ ವಿಷಯಗಳನ್ನು ತಿಳಿಸಿ. ಹೆಣ್ಣು ಮಗು ಪೂಜೆ ಅಡುಗೆ ಮಾಡಲಿ, ಗಂಡು ಮಕ್ಕಳು ಸಿಹಿ ಊಟಕ್ಕೆ ಮಾತ್ರ ಬಂದರೆ ಸಾಕು ಎಂಬ ಮನೋಭಾವ, ಈಗಿನ ಕಾಲದವರು ಹಬ್ಬಗಳ ಬಗ್ಗೆ ಉತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತದೆ.

ಅತಿಯಾದ ಮಡಿ, ಸಂಪ್ರದಾಯಗಳ ಹೇರುವಿಕೆ ಸಂಬಂಧಗಳಲ್ಲಿ ಬಿರುಕು ತರಬಹುದು. ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನಡೆಯುವ ಪೂಜೆಯ ಫಲ ವಿರುದ್ಧವಾಗಬಹುದು ಎಂಬ ಎಚ್ಚರಿಕೆ ಇರಲಿ. ಧಾರ್ಮಿಕ ಪದ್ಧತಿಗಳು ಮಾನವೀಯತೆಯ ನೆಲೆಯಲ್ಲಿ ಇದ್ದಾಗ ಮಾತ್ರ ಆರೋಗ್ಯ- ಆನಂದದಾಯಕ ಎನಿಸಲು ಸಾಧ್ಯ. ಇಲ್ಲದಿದ್ದರೆ ಅದು ಸ್ತ್ರೀ ಶೋಷಣೆಯ ಅಧರ್ಮದತ್ತ ತಿರುಗಿ ಪುಣ್ಯಕ್ಕಿಂತ ಪಾಪವನ್ನು, ಆನಂದಕ್ಕಿಂತ ದುಃಖವನ್ನು ತರುವ ಸಾಧ್ಯತೆಯೇ ಹೆಚ್ಚು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT