ಇರಾನ್‌ನ ಅಣು ವಿಜ್ಞಾನಿ ಹತ್ಯೆಗೆ ಹಲವು ಆಯಾಮ

ಇರಾನ್‌ನ ಹಿರಿಯ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೆ ಅವರು ಕಳೆದ ಶುಕ್ರವಾರ ಆಗಂತುಕರಿಂದ ಹತ್ಯೆಯಾಗಿದ್ದಾರೆ. ಹತ್ಯೆಗೆ ಇಸ್ರೇಲ್ ಕಾರಣ ಎಂದು ಇರಾನ್ ನೇರ ಆರೋಪ ಹೊರಿಸಿದೆ. ಮೊಹ್ಸೆನ್ ಅಂತ್ಯಕ್ರಿಯೆ ವೇಳೆ ಮಾತನಾಡಿದ ರಕ್ಷಣಾ ಸಚಿವ ಜನರಲ್ ಅಮಿರ್ ಹತಮಿ, ಪ್ರತೀಕಾರದ ಮಾತಾಡಿದ್ದಾರೆ. ಆದರೆ ಇಸ್ರೇಲ್ ಈ ಆರೋಪದ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಈ ಘಟನೆಯು ಅಂತರ ರಾಷ್ಟ್ರೀಯ ರಾಜಕೀಯ ದಾಳವಾಗಿ ಮಾರ್ಪಟ್ಟಿದ್ದು, ಇಸ್ರೇಲ್ ಮತ್ತು ಇರಾನ್ ನಡುವಣ ಮತ್ತೊಂದು ಸುತ್ತಿನ ಬಿಕ್ಕಟ್ಟಿಗೆ ನಾಂದಿ ಹಾಡಿದೆ.
2000ನೇ ದಶಕದ ಆರಂಭದಿಂ ದಲೇ ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಮೊಹ್ಸೆನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಇರಾನ್, ಅಣ್ವಸ್ತ್ರ ಅಭಿವೃದ್ಧಿ ಮಾಡುತ್ತಿದೆ ಎಂಬ ಗುಮಾನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇತ್ತು. ಆದರೆ, ಇರಾನ್ ಸರ್ಕಾರ ಇದನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ತಡೆಯುವುದೇ ಮೊಹ್ಸೆನ್ ಹತ್ಯೆಯ ಹಿಂದಿನ ಉದ್ದೇಶ ಎಂಬ ವಾದವೂ ಇದೆ. ಆದರೆ, ಹತ್ಯೆಗೆ ಬೇರೆ ಆಯಾಮಗಳೂ ಇವೆ ಎನ್ನಲಾಗುತ್ತಿದೆ.
ಹತ್ಯೆ ನಡೆದಿದ್ದು ಹೇಗೆ?
ರಾಜಧಾನಿ ಟೆಹರಾನ್‌ನ ಪೂರ್ವಭಾಗದಲ್ಲಿ ಮೊಹ್ಸೆನ್ ಅವರ ಚಲಿಸುತ್ತಿದ್ದ ಕಾರಿನ ಮೇಲೆ ರಿಮೋಟ್ ಕಂಟ್ರೋಲ್ ನಿರ್ದೇಶಿತ ಎಲೆಕ್ಟ್ರಾನಿಕ್ ಉಪಕರಣದಿಂದ ದಾಳಿ ನಡೆಸಲಾಗಿದೆ. ಬಳಿಕ, ಮೂವರು ಅಥವಾ ನಾಲ್ವರು ವ್ಯಕ್ತಿಗಳು ಕಾರಿನ ಮೇಲೆ ಗುಂಡಿನ ಮಳೆಗರೆದಿದ್ದಾರೆ.
‘ಮೊಹ್ಸೆನ್ ಅವರ ಮಾರ್ಗದರ್ಶನದಲ್ಲಿ ಅಣ್ವಸ್ತ್ರ ತಯಾರಿಕೆಯ ಮಹತ್ವಾಕಾಂಕ್ಷೆ ಹೊಂದಿದ್ದ ಇರಾನ್, ಜಗತ್ತಿಗೆ ಭೀತಿ ಮೂಡಿಸಿತ್ತು. ಈಗ ಇಡೀ ಜಗತ್ತು ಇಸ್ರೇಲ್‌ಗೆ ಧನ್ಯವಾದ ಹೇಳಬೇಕು’ ಎಂಬುದಾಗಿ ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದ ಇಸ್ರೇಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮೊಹ್ಸೆನ್ ಗುರಿಯಾಗಿದ್ದು ಏಕೆ?
ಮೊಹ್ಸೆನ್ ಫಕ್ರಿಜಾದೆ ಅವರು ಇರಾನ್ ಪರಮಾಣು ಕಾರ್ಯಕ್ರಮಗಳ ಮುಖ್ಯವ್ಯಕ್ತಿ. ‘ಪ್ರಾಜೆಕ್ಟ್ ಅಮದ್’ ಎಂಬ ರಹಸ್ಯ ಕಾರ್ಯಕ್ರಮವನ್ನು ಅವರು ಮುನ್ನಡೆಸಿದ್ದಾರೆಂದು ಹೇಳಲಾಗುತ್ತದೆ. ಅಣುಬಾಂಬ್ ತಯಾರಿಕೆ ಬಗ್ಗೆ ಸಂಶೋಧನೆ ನಡೆಸಲು ಇರಾನ್ 1989ರಲ್ಲಿ ಯೋಜನೆ ಶುರುಮಾಡಿತು. ಅಂತರರಾಷ್ಟ್ರೀಯ ಪರಮಾಣು ಸಂಸ್ಥೆ ಪ್ರಕಾರ ಯೋಜನೆಯನ್ನು 2003ರಲ್ಲಿ ಸ್ಥಗಿತಗೊಳಿಸಲಾಯಿತು. ಮೊಹ್ಸೆನ್ ನೇತೃತ್ವದಲ್ಲಿ ರಹಸ್ಯ ಕಾರ್ಯಕ್ರಮ ಮುಂದುವರಿದಿದೆ ಎಂಬುದಕ್ಕೆ ದಾಖಲೆಗಳಿವೆ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು 2018ರಲ್ಲಿ ತಿಳಿಸಿದ್ದರು.
2010ರಿಂದ 2012ರ ನಡುವೆ ಇರಾನ್‌ನ ನಾಲ್ವರು ಪರಮಾಣು ವಿಜ್ಞಾನಿಗಳನ್ನು ಇಸ್ರೇಲ್ ಹತ್ಯೆ ಮಾಡಿದೆ ಎಂದು ಇರಾನ್ ಈ ಮೊದಲು ಆರೋಪಿಸಿತ್ತು. ಮೊಹ್ಸೆನ್ ಹತ್ಯೆಯು ಇರಾನಿನ ಪರಮಾಣು ಕಾರ್ಯಕ್ರಮಗಳನ್ನು ಕುಂಠಿತಗೊಳಿಸುವ ಯತ್ನ ಎಂಬುದಕ್ಕಿಂತ ಜೋ ಬೈಡನ್ ಅವರಿಗೆ ಸಂದೇಶ ನೀಡುವ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
2015ರಲ್ಲಿ ಇರಾನ್ ಜೊತೆ ಅಮೆರಿಕ ಪರಮಾಣು ಒಪ್ಪಂದ ಮಾಡಿಕೊಂಡಿತ್ತು. ಆದರೆ 2018ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಪ್ಪಂದ ಮುರಿದು ಅದರಿಂದ ಹೊರಗೆ ಬಂದು, ಇರಾನ್ ಮೇಲೆ ದಿಗ್ಬಂಧನ ಹೇರಿದ್ದರು. ಇದೀಗ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಅವರು ಹಳೆಯ ಒಪ್ಪಂದವನ್ನು ಮರು ಜಾರಿಗೊಳಿಸಿ, ಇರಾನ್ ವಿರುದ್ಧ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಗೊಳಿಸುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.