ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಕಟುಕ, ಅಧಿಕಾರದಲ್ಲಿ ಇರಕೂಡದು: ಬೈಡನ್‌

ಅಮೆರಿಕ ಅಧ್ಯಕ್ಷರ ಟೀಕಾಪ್ರಹಾರ * ಲುವಿವ್‌ ನಗರದ ಮೇಲೆ ಕ್ರೂಸ್‌ ಕ್ಷಿಪಣಿಗಳ ದಾಳಿ ನಡೆಸಿದ ರಷ್ಯಾ
Last Updated 27 ಮಾರ್ಚ್ 2022, 20:22 IST
ಅಕ್ಷರ ಗಾತ್ರ

ವಾರ್ಸಾ, ಪೋಲೆಂಡ್: ‘ವ್ಲಾಡಿಮಿರ್‌ ಪುಟಿನ್ ಒಬ್ಬ ಕಟುಕ’ ಎಂದು ಟೀಕಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ‘ಆತ ಇನ್ನು ಅಧಿಕಾರದಲ್ಲಿ ಇರಕೂಡದು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನ್ಯಾಟೊ ಸದಸ್ಯ ರಾಷ್ಟ್ರಗಳ ಒಂಂದಿಂಚು ಪ್ರದೇಶವನ್ನು ವಶಪಡಿಸಿಕೊಳ್ಳುವ ಬಗ್ಗೆಯೂ ರಷ್ಯಾ ಯೋಚನೆ ಮಾಡಬಾರದು’ ಎಂದು ರಷ್ಯಾಕ್ಕೆ ಎಚ್ಚರಿಕೆಯನ್ನೂ ನೀಡಿದರು.

ಪೋಲೆಂಡ್‌ನ ವಾರ್ಸಾ ನಗರದಲ್ಲಿ ಉಕ್ರೇನ್‌ನ ಸಚಿವರೊಂದಿಗೆ ಸಭೆ ನಡೆಸಿದ ನಂತರ ರಾಯಲ್‌ ಕ್ಯಾಸಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೈಡನ್, ಪುಟಿನ್‌ ವಿರುದ್ಧ ಕಟು ಟೀಕೆ ಮಾಡಿದರೆ, ರಷ್ಯಾ ಪ್ರಜೆಗಳ ಕುರಿತು ಅಷ್ಟೇ ಮೃದು ಮಾತುಗಳನ್ನಾಡಿದರು.

‘ರಷ್ಯನ್ನರು ನಮ್ಮ ಶತ್ರುಗಳಲ್ಲ. ಆದರೂ, ರಷ್ಯಾ ಮೇಲೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರಿ ನಿರ್ಬಂಧಗಳನ್ನು ಹೇರಿವೆ. ಇಂಥ ಬೆಳವಣಿಗೆಗೆ ರಷ್ಯನ್ನರು ತಮ್ಮ ಅಧ್ಯಕ್ಷನನ್ನೇ ದೂರಬೇಕು’ ಎಂದು ಬೈಡನ್‌ ಹೇಳಿದರು.

ಪುಟಿನ್‌ ವಿರುದ್ಧ ವಾಗ್ದಾಳಿಯನ್ನು ಬೈಡನ್‌ ಹರಿತಗೊಳಿಸಿದ ಬೆನ್ನಲ್ಲೇ, ಶ್ವೇತಭವನವು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಯಿತು. ‘ಅಧ್ಯಕ್ಷ ಬೈಡನ್‌ ಅವರು ರಷ್ಯಾದಲ್ಲಿನ ಆಡಳಿತ ಬದಲಾಗಬೇಕು ಎಂದು ಬಯಸುತ್ತಿಲ್ಲ. ನೆರೆ ರಾಷ್ಟ್ರಗಳು ಸೇರಿದಂತೆ ಪ್ರಾದೇಶಿಕವಾಗಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪುಟಿನ್‌ ಪ್ರಯತ್ನಿಸುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ’ ಎಂದು ಶ್ವೇತಭವನ ಸಮಜಾಯಿಷಿ ನೀಡಿದೆ.

‘ಇಂತಹ ವೈಯಕ್ತಿಕ ಟೀಕೆ, ದಾಳಿಗಳಿಂದಾಗಿ, ಬಿಕ್ಕಟ್ಟು ನಿವಾರಣೆ ಹಾಗೂ ದ್ವಿಪಕ್ಷೀಯ ಸಂಬಂಧಕ್ಕೆ ಪುನಶ್ಚೇತನ ನೀಡುವ ಅವಕಾಶ ಮತ್ತಷ್ಟೂ ಕ್ಷೀಣಿಸಲಿದೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ರಾಷ್ಟ್ರಗಳಿಗೆ ಧೈರ್ಯ ಇಲ್ಲ: ಝೆಲೆನ್‌ಸ್ಕಿ ಟೀಕೆ

ಲುವಿವ್, ಉಕ್ರೇನ್: ದೇಶದ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಹೋರಾಡಲು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಧೈರ್ಯ ಇಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಟೀಕಿಸಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಧೋರಣೆ ಬಗ್ಗೆ ಉದ್ವೇಗದಿಂದಲೇ ಮಾತನಾಡಿದ ಝೆಲೆನ್‌ಸ್ಕಿ, ಮತ್ತೊಂದೆಡೆ, ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಹೋರಾಟ ನಡೆಸುತ್ತಿರುವ ಉಕ್ರೇನ್‌ಗೆ ಯುದ್ಧವಿಮಾನಗಳು ಹಾಗೂ ಟ್ಯಾಂಕ್‌ಗಳನ್ನು ಪೂರೈಸುವಂತೆಯೂ ಅಂಗಲಾಚಿದ್ದಾರೆ.

ಪೋಲೆಂಡ್‌ನಲ್ಲಿ ಉಕ್ರೇನ್‌ನ ಅಧಿಕಾರಿಗಳೊಂದಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಸಭೆ ನಡೆಸಿದ ನಂತರ ಅವರು ವರ್ಚುವಲ್‌ ಆಗಿ ಮಾತನಾಡಿದರು.

‘ಉಕ್ರೇನ್‌ಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಯಾರು ಮತ್ತು ಹೇಗೆ ಪೂರೈಸಬೇಕು ಎಂಬ ಬಗ್ಗೆ ಪಶ್ಚಿಮ ರಾಷ್ಟ್ರಗಳು ಮೀನ–ಮೇಷ ಎಣಿಸುತ್ತಿವೆ. ಇನ್ನೊಂದೆಡೆ ರಷ್ಯಾ ಪಡೆಗಳಿಂದ ಕ್ಷಿಪಣಿ ದಾಳಿ ಮುಂದುವರಿದಿದ್ದು, ಜನರು ಸಾಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಮರಿಯುಪೊಲ್‌ ರಕ್ಷಣೆಗಾಗಿ ಉಕ್ರೇನ್‌ ಪಡೆಗಳು ನಡೆಸುತ್ತಿರುವ ದೃಢವಾದ ಹೋರಾಟ, ಯೋಧರ ಸ್ಥೈರ್ಯ–ಸಾಹಸ ಅದ್ಭುತ’ ಎಂದು ಬಣ್ಣಿಸಿದ್ದಾರೆ.

ಲುವಿವ್‌ ಮೇಲೆ ಕ್ರೂಸ್‌ ಕ್ಷಿಪಣಿಗಳ ದಾಳಿ

ಲಂಡನ್ (ರಾಯಿಟರ್ಸ್): ಪಶ್ಚಿಮ ಉಕ್ರೇನ್‌ನ ಲುವಿವ್‌ ನಗರದ ಮೇಲೆ, ಹೆಚ್ಚು ನಿಖರವಾಗಿ ಗುರಿತಲುಪುವ ಸಾಮರ್ಥ್ಯದ ಕ್ರೂಸ್‌ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

ಲುವಿವ್‌ ನಗರದಲ್ಲಿರುವ ಉಕ್ರೇನ್‌ ಪಡೆಗಳಿಗೆ ಸೇರಿದ ಇಂಧನ ಸಂಗ್ರಹಾಗಾರದ ಮೇಲೆ ಬಹುದೂರದ ವರೆಗೆ ಚಿಮ್ಮಬಲ್ಲ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಯುದ್ಧನಿರೋಧಕ ವ್ಯವಸ್ಥೆಗಳನ್ನು ದುರಸ್ತಿ ಮಾಡುವ ಘಟಕ, ರಾಡಾರ್‌ ಕೇಂದ್ರಗಳು, ಯುದ್ಧಟ್ಯಾಂಕ್‌ಗಳನ್ನು ನಿಲುಗಡೆ ಮಾಡಿರುವ ಪ್ರದೇಶಗಳನ್ನು ಗುರಿಯಾಗಿಸಿ ಕ್ರೂಸ್‌ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ದಿನದ ಬೆಳವಣಿಗೆಗಳು

* ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್‌ನ ಇಬ್ಬರು ಸಚಿವರನ್ನು ಪೋಲೆಂಡ್ ರಾಜಧಾನಿ ವಾರ್ಸಾದಲ್ಲಿ ಭೇಟಿ ಮಾಡಿದರು. ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ಬಳಿಕ ಉಕ್ರೇನ್ ಸಚಿವರ ಜತೆಗಿನ ಅಧ್ಯಕ್ಷ ಬೈಡನ್ ಅವರ ಮೊದಲ ಮುಖಾಮುಖಿ ಭೇಟಿ ಇದಾಗಿದೆ.

* ಉಕ್ರೇನ್ ಮೇಲಿನ ದಾಳಿ ವೇಳೆ ರಷ್ಯಾ ಸೇನೆಯ ಮತ್ತೊಬ್ಬ ಲೆಫ್ಟಿನೆಂಟ್ ಜನರಲ್ ಯಕೋವ್ ರೆಜಂಟ್‌ಸೆವ್ ಅವರು ಹತ್ಯೆಗೀಡಾಗಿದ್ದಾರೆ. ಇದರೊಂದಿಗೆ ಉಕ್ರೇನ್ ಮೇಲೆ ಯುದ್ಧ ಸಾರಿದಾಗಿನಿಂದ ಈವರೆಗೆ ರಷ್ಯಾದ 7 ಜನರಲ್‌ಗಳು ಬಲಿಯಾದಂತಾಗಿದೆ. ನೈತಿಕ ಸ್ಥೈರ್ಯ ಕಳೆದುಕೊಂಡ ರಷ್ಯಾ ಸೇನಾ ಸಿಬ್ಬಂದಿಯೇ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

* ಉಕ್ರೇನ್‌ನಲ್ಲಿ ಸಂಭವಿಸುತ್ತಿರುವ ಘಟನೆಗಳು ಯಾವಾಗ ಬೇಕಾದರೂ ಬಿಕ್ಕಟ್ಟುಗಳಾಗಿ ಪರಿವರ್ತನೆಯಾಗಬಹುದು. ಹೀಗಾಗಿ ಎಲ್ಲಾ ದೇಶಗಳು ಇಂಥ ತುರ್ತು ಪರಿಸ್ಥಿತಿ ಉದ್ಭವಿಸಿದಾಗ ಅವುಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಸುಧಾರಿಸಿಕೊಳ್ಳಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂಬಂಥ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ವರದಿ ಸಲಹೆ ನೀಡಿದೆ.

* ಕೊರೊನಾ ವೈರಸ್ ಬಿಕ್ಕಟ್ಟು ಹಾಗೂ ಜಾಗತಿಕ ಹವಾಮಾನ ಬದಲಾವಣೆ ಸೇರಿದಂತೆ ಇನ್ನಿತರ ವಿಪತ್ತುಗಳು ಶಿಕ್ಷಣದ ಗುಣಮಟ್ಟದ ಮೇಲೆ ಭೀತಿಯೊಡ್ಡಿವೆ ಎಂದು ಯುನೆಸ್ಕೊ ವರದಿ ಕಳವಳ ವ್ಯಕ್ತಪಡಿಸಿದೆ.

* ಉಕ್ರೇನ್‌ನ ಹಾರ್ಕೀವ್‌ನಲ್ಲಿರುವ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ಶೆಲ್ಲಿಂಗ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏನೆಲ್ಲಾ ಹಾನಿಯಾಗಿದೆ ಎಂಬುದು ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ: ಉಕ್ರೇನ್ ಪರಮಾಣು ಮೇಲ್ವಿಚಾರಕ ಸಂಸ್ಥೆ

* ರಷ್ಯಾದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಯಾವುದೇ ಯೋಜನೆ ನಮಗಿಲ್ಲ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಸ್ಪಷ್ಟನೆ.

* ಉಕ್ರೇನ್‌ನ ಇಂಧನ ಮತ್ತು ಆಹಾರ ಸಂಗ್ರಹಗಾರಗಳನ್ನು ರಷ್ಯಾ ನಾಶಪಡಿಸಲು ಆರಂಭಿಸಿದೆ. ಹೀಗಾಗಿ ಉಗ್ರಾಣದಲ್ಲಿರುವ ದಾಸ್ತಾನುಗಳನ್ನು ಬೇರೆ ಕಡೆ ಸ್ಥಳಾಂತರಿಸಲಿದೆ: ಉಕ್ರೇನ್ ಆಂತರಿಕ ಸಚಿವಾಲಯದ ಸಲಹೆಗಾರ ಮಾಹಿತಿ

* ಉಕ್ರೇನ್ ಮೇಲಿನ ಯುದ್ಧ ಮತ್ತು ರಷ್ಯಾದ ಮೇಲೆ ಹಲವು ದೇಶಗಳು ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಇದರಿಂದ ಉದ್ಯೋಗ ಸಮಸ್ಯೆ ಎದುರಾಗಲಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ. ಈ ಮೂಲಕ ಮಧ್ಯ ಪೂರ್ವ ಸೇರಿದಂತೆ ಇನ್ನಿತರ ದೇಶಗಳಲ್ಲಿ ನಾಗರಿಕರ ಶಾಂತಿಗೆ ಭಂಗವಾಗಲಿದೆ: ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಎಚ್ಚರಿಕೆ

* ಉಕ್ರೇನ್ ಅನ್ನು ರಷ್ಯಾದ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಟರ್ಕಿ ಸೇರಿದಂತೆ ಇನ್ನಿತರ ದೇಶಗಳು ರಷ್ಯಾದ ಜತೆ ಮಾತುಕತೆ ನಡಸಲೇಬೇಕು. ಉಕ್ರೇನ್‌ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಚ್ಚಿನ ಬೆಂಬಲ ಬೇಕಿದೆ: ಟರ್ಕಿ ಅಧ್ಯಕ್ಷರ ವಕ್ತಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT