ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟರ್ಕಿ–ಸಿರಿಯಾ: ಮೃತ ಮಗಳ ಕೈಹಿಡಿದು ರೋಧಿಸುತ್ತಿರುವ ತಂದೆ– ಸಂತ್ರಸ್ತರ ಆಕ್ರಂದನ

Last Updated 8 ಫೆಬ್ರುವರಿ 2023, 14:13 IST
ಅಕ್ಷರ ಗಾತ್ರ

ಅಂಕರಾ(ಟರ್ಕಿ): ಅವಶೇಷಗಳಡಿ ಸಿಲುಕಿರುವ ನವಜಾತ ಶಿಶುವನ್ನು ಹೊರತೆಗೆಯಲು ಹರಸಾಹಸ, ದುಃಖತಪ್ತ ತಂದೆ ತನ್ನ ಮೃತ ಮಗಳ ಕೈಯನ್ನು ಹಿಡಿದ ದೃಶ್ಯಗಳು.. ಹೀಗೆ ಒಂದಾ ಎರಡಾ.. ಭೂಕಂಪದಿಂದ ತತ್ತರಿಸಿರುವ ಸಿರಿಯಾ ಮತ್ತು ಟರ್ಕಿಯಲ್ಲಿ ಕಂಡು ಬಂದ ಹೃದಯವಿದ್ರಾವಕ ದೃಶ್ಯಗಳಿವು.

ಈ ಭೀಕರ ಭೂಕಂಪದಲ್ಲಿ ಎರಡೂ ದೇಶಗಳಲ್ಲಿ ಮೃತರ ಸಂಖ್ಯೆ ಬುಧವಾರದ ವೇಳೆಗೆ 9,500 ದಾಟಿದೆ. ಗಾಯಾಳುಗಳ ಸಂಖ್ಯೆಯೂ ಬಹಳಷ್ಟಿದ್ದು, ಅವಶೇಷಗಳನ್ನು ತೆರವು ಮಾಡಿದಂತೆ ಮೃತದೇಹಗಳು ಸಿಗುತ್ತಲೇ ಇವೆ.

7.8 ತೀವ್ರತೆಯ ಭೂಕಂಪನ ಸಂಭವಿಸಿ ಎರಡು ದಿನ ಕಳೆದಿದೆ. ಆದರೆ, ನಂತರದ ಹಲವು ಬಾರಿ ಸಂಭವಿಸಿರುವ ಕಂಪನಗಳು ಜನರ ಜೀವ ತೆಗೆದಿವೆ. ಅನೇಕ ಕಟ್ಟಡಗಳು ಧರೆಗುರುಳಿವೆ. ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿ ಇನ್ನೆಷ್ಟು ಮಂದಿ ಜೀವಂತ ಸಮಾಧಿಯಾಗಿದ್ದಾರೋ ಎಂಬ ಆತಂಕ ಮನೆ ಮಾಡಿದೆ.

ಭೂಕಂಪದಿಂದ ಟರ್ಕಿಯಲ್ಲಿ ಈವರೆಗೆ 6,957 ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ 2,547 ಮಂದಿ ಅಸುನೀಗಿದ್ದಾರೆ. ಈ ಸಂಖ್ಯೆ ದುಪ್ಪಟ್ಟಾಗುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಗಾಯಗೊಂಡಿರುವ ಹಲವರ ರಕ್ಷಣಾ ಕಾರ್ಯಾಚರಣೆ ಶೀಘ್ರವಾಗಿ ನಡೆಸುವಂತೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೇಸಸ್ ಒತ್ತಾಯಿಸಿದ್ದಾರೆ. ಈಗಾಗಲೇ ಸಮಯ ಮೀರಿದೆ ಎಂದು ಅವರು ಹೇಳಿದ್ದಾರೆ.


ಭೂಕಂಪ ಕೇಂದ್ರದ ಸಮೀಪದಲ್ಲಿರುವ ಟರ್ಕಿಯ ನಗರ ಕಹ್ರಮನ್‌ಮರಸ್‌ನಲ್ಲಿ ಮನಕಲಕುವ ದೃಶ್ಯವೊಂದು ಕಂಡುಬಂದಿದೆ.

ಇಲ್ಲಿನ ನಿವಾಸಿ ಮೆಸುಟ್ ಹ್ಯಾನ್ಸರ್‌, ಮೈಕೊರೆವ ಚಳಿಯಲ್ಲಿ ಅವಶೇಷಗಳ ಮೇಲೆ ಕುಳಿತು, ಕಾಂಕ್ರೀಟ್ ಚಪ್ಪಡಿಗಳ ಅಡಿ ಸಿಲುಕಿರುವ ತನ್ನ 15 ವರ್ಷದ ಮಗಳು ಇರ್ಮಾಕ್‌ ಕೈ ಹಿಡಿದು ರೋಧಿಸುತ್ತಿದ್ದರು. ಯಾರು ಎಷ್ಟೇ ಹೇಳಿದರೂ ಮೆಸುಟ್ ಮಗಳ ಕೈ ಬಿಡಲು ಒಪ್ಪಲಿಲ್ಲ.

ಭೂಕಂಪದಿಂದ ಹೇಗೋ ಬದುಕುಳಿದವರಿಗೂ ಸಹ ಭವಿಷ್ಯ ಕತ್ತಲೆಯಾಗಿದೆ. ಮನೆಗಳನ್ನು ಕಳೆದುಕೊಂಡು ಹಿಮ ಮಳೆ ಮತ್ತು ಚಳಿಯಿಂದ ರಕ್ಷಣೆ ಪಡೆಯಲು ಶಾಲೆಗಳು, ಮಸೀದಿಗಳು ಮತ್ತು ಬಸ್ ನಿಲ್ದಾಣಗಳ ಮೊರೆಹೋಗಿದ್ದಾರೆ.

ಸರ್ಕಾರದಿಂದ ಸಿಗಬೇಕಾದ ನೆರವು ವಿಳಂಬವಾಗುತ್ತಿದ್ದು, ಸಂತ್ರಸ್ತರಲ್ಲಿ ಹತಾಶೆ ಉತ್ತುಂಗಕ್ಕೆ ಏರಿದೆ.

‘ನಾನು ನನ್ನ ಸಹೋದರನನ್ನು ಬದುಕಿಸಿಕೊಳ್ಳಲು ಸಾಧ್ಯವಿಲ್ಲ, ನನ್ನ ಸೋದರಳಿಯನನ್ನು ಬದುಕಿಸಲಾಗದು. ಸುತ್ತಲೂ ಒಮ್ಮೆ ನೋಡಿ. ಇಲ್ಲಿ ನಮ್ಮ ರಕ್ಷಣೆಗೂ ಒಬ್ಬನೇ ಒಬ್ಬ ಅಧಿಕಾರಿ ಇಲ್ಲ. ದೇವರೇ ನಮಗೆ ದಿಕ್ಕು’ ಎಂದು ಕಹ್ರಮನ್ಮರಾಸ್‌ನ ಅಲಿ ಸಗಿರೊಗ್ಲು ಎಂಬ ನಿವಾಸಿ ನೋವು ತೋಡಿಕೊಂಡಿದ್ದಾರೆ.

‘ಎರಡು ದಿನಗಳಿಂದ ನಾವು ಅಧಿಕಾರಿಗಳ ಮುಖ ನೋಡಿಲ್ಲ. ಮಕ್ಕಳು ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ತತ್ತರಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT