ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮೊದಲು ಪತ್ತೆಯಾಗಿದ್ದ ಚೀನಾದ ವುಹಾನ್ ನಗರದಲ್ಲಿ ಸಾಮೂಹಿಕ ಪರೀಕ್ಷೆಗೆ ಆದೇಶ

Last Updated 3 ಆಗಸ್ಟ್ 2021, 9:35 IST
ಅಕ್ಷರ ಗಾತ್ರ

ಬೀಜಿಂಗ್: 2019ರಲ್ಲಿ ಕೊರೊನಾ ವೈರಸ್ ಮೊದಲು ಪತ್ತೆಯಾದ ಚೀನಾದ ವುಹಾನ್‌ ನಗರದಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಲಾಗಿದೆ. ನಗರದಲ್ಲಿ ಕೊರೊನಾ ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಪ್ರಕ್ರಿಯೆಗೆ ಮುಂದಾಗಿದ್ದಾರೆ.

1.1 ಕೋಟಿ ಜನಸಂಖ್ಯೆ ಇರುವ ವುಹಾನ್, ಮಧ್ಯ ಚೀನಾದ ಪ್ರಾಂತೀಯ ರಾಜಧಾನಿ. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ಕೊರೊನಾ ಪರೀಕ್ಷೆಗೆ ಆದೇಶಿಸಲಾದ ಚೀನಾದ ಮೊದಲ ನಗರವಾಗಿದೆ. ಸೋಮವಾರ ಇಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದ್ದವು.

2019ರ ಆರಂಭದಲ್ಲಿ ವುಹಾನ್ ನಗರದಲ್ಲಿ ವ್ಯಾಪಕವಾಗಿ ಹರಡಿದ್ದ ಕೊರೊನಾ ಇಲ್ಲಿನ ಜನರನ್ನು ಕಂಗೆಡಿಸಿತ್ತು, ಬಳಿಕ, ದೇಶದ ಇತರೆ ಭಾಗಗಳು ಮತ್ತು ವಿದೇಶಕ್ಕೂ ಹರಡಿತ್ತು. ಶೀಘ್ರ ಕಾರ್ಯಾಚರಣೆ ನಡೆಸಿ ಕೊರೊನಾವನ್ನು ಚೀನಾ ಹತೋಟಿಗೆ ತಂದಿತ್ತು.

ಅಂದಿನಿಂದ, ಅಧಿಕಾರಿಗಳು ಸೋಂಕಿತ ಜನರನ್ನು ಪ್ರತ್ಯೇಕಿಸಲು ತ್ವರಿತ ಲಾಕ್‌ಡೌನ್‌ಗಳು ಮತ್ತು ಸಾಮೂಹಿಕ ಪರೀಕ್ಷೆಗಳಂತಹ ತುರ್ತು ಕ್ರಮಗಳ ಮೂಲಕ ರೋಗವನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ.

ಪ್ರಸ್ತುತ ಚೀನಾದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ನೂರರಲ್ಲಿದ್ದರೂ ಸಹ ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ಪ್ರಾಂತ್ಯಗಳು ಮತ್ತು ನಗರಗಳನ್ನು ತಲುಪಿದೆ.

ಈ ಪೈಕಿ ಹಲವರಿಗೆ ಹೆಚ್ಚು ಸಾಂಕ್ರಾಮಿಕ ಎನ್ನಲಾದ ಡೆಲ್ಟಾ ರೂಪಾಂತರ ತಗುಲಿದೆ ಎಂದು ಗುರುತಿಸಲಾಗಿದೆ. ಡೆಲ್ಟಾ ತಳಿಯು ವಿಶ್ವದ ಹಲವು ದೇಶಗಳಲ್ಲಿ ವ್ಯಾಪಕ ಹರಡುವಿಕೆಗೆ ಕಾರಣವಾಗಿದೆ.

24 ಗಂಟೆಗಳಲ್ಲಿ 90 ಹೊಸ ಪ್ರಕರಣಗಳು ದೃಢಪಟ್ಟಿವೆ. 61 ಮಂದಿ ಸ್ಥಳೀಯರಾದರೆ 29 ಮಂದಿ ವಿದೇಶಗಳಿಂದ ಬಂದವರಾಗಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗವು ಮಂಗಳವಾರ ತಿಳಿಸಿದೆ

ಹೆಚ್ಚಿನ ಕೋವಿಡ್ ಪ್ರಕರಣಗಳು ಜಿಯಾಂಗ್ಸು ಪ್ರಾಂತ್ಯದಲ್ಲಿವೆ. ಈ ಪ್ರಾಂತ್ಯದ ರಾಜಧಾನಿಯಾದ ನಾನ್ಜಿಂಗ್‌ನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳು ಮೊದಲಿಗೆ ಪತ್ತೆಯಾಗಿದ್ದವು. ಜೊತೆಗೆ 105 ಕಿಲೋಮೀಟರ್ (65 ಮೈಲಿ) ದೂರದಲ್ಲಿರುವ ಯಾಂಗ್‌ಝೌ ನಗರಕ್ಕೂ ಹರಡಿತ್ತು.

ರಾಷ್ಟ್ರದ ಅತಿದೊಡ್ಡ ನಗರವಾದ ಶಾಂಘೈನ ವಿಮಾನ ನಿಲ್ದಾಣದಲ್ಲಿ ಚಾಲಕನೊಬ್ಬನಿಗೆ ಕೋವಿಡ್ ದೃಢಪಟ್ಟಿದೆ. ಬೀಜಿಂಗ್‌ನಲ್ಲಿ 5 ಪ್ರಕರಣ ಪತ್ತೆಯಾಗಿವೆ.

ಕೊರೊನಾ ವೈರಸ್‌ನ ಹೊಸ ತಳಿಗಳ ವಿರುದ್ಧ ಚೀನಾದ ಲಸಿಕೆಗಳು ಕಡಿಮೆ ಪರಿಣಾಮಕಾರಿ ಎಂದು ಅಲ್ಲಿನ ವಿಜ್ಞಾನಿಗಳೇ ಹೇಳಿದ್ದಾರೆ. ಆದರೆ, ಅಲ್ಪಮಟ್ಟದ ರಕ್ಷಣೆ ನೀಡುತ್ತವೆ ಎಂದಿದ್ದಾರೆ. ಚೀನಾದಲ್ಲಿ ಪ್ರಸ್ತುತ ಚೀನಾದ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ. ಅಲ್ಲಿನ ಅಧಿಕಾರಿಗಳು ಹೇಳುವಂತೆ 160 ಕೋಟಿಗೂ ಹೆಚ್ಚು ಡೋಸ್‌ ಲಸಿಕೆಗಳನ್ನು ಈಗಾಗಲೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT