ಬೀಜಿಂಗ್: ಪಾಕಿಸ್ತಾನದಲ್ಲಿ ಸಂಭವಿಸಿದ ಬಸ್ ದುರಂತದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರವಾನಿಸುತ್ತಿರುವುದಾಗಿ ಚೀನಾ ಗುರುವಾರ ಹೇಳಿದೆ. ಬುಧವಾರ ಪಾಕಿಸ್ತಾನದಲ್ಲಿ ನಡೆದಿದ್ದ ಬಸ್ ದುರಂತದಲ್ಲಿ ಚೀನಾದ 9 ಎಂಜಿನಿಯರ್‌ಗಳೂ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು. ಬಸ್ ಸ್ಫೋಟಗೊಂಡು ಸಂಭವಿಸಿದ ಈ ಪ್ರಕರಣವು ಭಯೋತ್ಪಾದಕ ದಾಳಿಯೋ ಅಥವಾ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟವೋ ಎಂಬುದರ ಬಗ್ಗೆ ಮಿತ್ರರಾಷ್ಟ್ರಗಳು ಭಿನ್ನಾಭಿಪ್ರಾಯ ಹೊಂದಿವೆ.
‘ಘಟನೆಗೆ ಸಂಬಂಧಿಸಿದ ಕಾರ್ಯ ಕೈಗೊಳ್ಳಲು ಚೀನಾ ಇಂದು (ಜುಲೈ 15) ಜಂಟಿ ಕಾರ್ಯಪಡೆಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದೆ‘ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
‘ಘಟನೆಯಲ್ಲಿ ಚೀನಿಯರೇ ಹೆಚ್ಚಾಗಿ ಸಾವಿಗೀಡಾಗಿರುವುದು ನಮ್ಮನ್ನು ಆಘಾತಕ್ಕೆ ತಳ್ಳಿದೆ,’ ಎಂದು ಅವರು ಹೇಳಿದ್ದಾರೆ.
ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಜಿಲ್ಲೆಯ ದಾಸು ಪ್ರದೇಶದಲ್ಲಿ ಬುಧವಾರ ಈ ದುರಂತ ಸಂಭವಿಸಿತ್ತು. ಈ ಪ್ರದೇಶದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ ಭಾಗವಾಗಿ, 60 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಇದರಲ್ಲಿ ಚೀನಾದ ಎಂಜಿನಿಯರ್‌ಗಳು ಮತ್ತು ನಿರ್ಮಾಣ ಕಾರ್ಮಿಕರು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ದಾಸು ಅಣೆಕಟ್ಟು ಇರುವ ಸ್ಥಳಕ್ಕೆ ಚೀನಾದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಸ್ಫೋಟಗೊಂಡು ಚೀನಾದ 9 ಪ್ರಜೆಗಳು ಮತ್ತು ಇಬ್ಬರು ಸೈನಿಕರು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದರು. ಅಲ್ಲದೆ, 39 ಮಂದಿ ಗಾಯಗೊಂಡಿದ್ದರು. ಸ್ಫೋಟದ ನಂತರ ಬಸ್ ಆಳವಾದ ಕಂದಕಕ್ಕೆ ಉರುಳಿ ಬಿದ್ದಿತ್ತು.
ಬಸ್ ಸ್ಫೋಟ ಪ್ರಕರಣದಲ್ಲಿ ಚೀನಾದವರೇ ಹೆಚ್ಚಿನ ಮಂದಿ ಮೃತಪಟ್ಟಿರುವುದು ಆ ದೇಶವನ್ನು ಸಹಜವಾಗಿಯೇ ಆತಂಕಕ್ಕೆ ದೂಡಿದೆ. ಮಿತ್ರ ರಾಷ್ಟ್ರಗಳಾಗಿರುವ ಪಾಕಿಸ್ತಾನ ಮತ್ತು ಚೀನಾ ಘಟನೆ ಹಿಂದಿನ ಕಾರಣದ ವಿಚಾರದಲ್ಲಿ ವ್ಯತಿರಿಕ್ತ ನಿಲುವು ತಳೆದಿವೆ.
ಚೀನಾ ಈ ಅಪಘಾತವನ್ನು ಬಾಂಬ್ ದಾಳಿ ಎಂದು ಹೇಳಿದರೆ, ಪಾಕಿಸ್ತಾನವು ಅನಿಲ ಸೋರಿಕೆಯಿಂದ ಉಂಟಾಗಿದೆ ಹೇಳುತ್ತಿದೆ. ಈ ವಿಭಿನ್ನ ಅಭಿಪ್ರಾಯ ಮತ್ತು ಪಾಕಿಸ್ತಾನದಲ್ಲಿ ಚೀನಾದ ನಾಗರಿಕರಿಗೆ ಸಿಗುತ್ತಿರುವ ರಕ್ಷಣೆ ಬಗ್ಗೆ ಬೀಜಿಂಗ್ ತೃಪ್ತಿ ಹೊಂದಿದೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ,‘ ಎಂದು ಝಾವೋ ಲಿಜಿಯಾನ್ ತಿಳಿಸಿದರು.
"ಈ ಘಟನೆ ಇನ್ನೂ ತನಿಖೆ ಹಂತದಲ್ಲಿದೆ. ಚೀನಾ ಪಾಕಿಸ್ತಾನದ ಜೊತೆ ನಿಕಟವಾಗಿ ಸಹಕರಿಸುತ್ತದೆ. ಈ ಘಟನೆಯನ್ನು ಜಂಟಿಯಾಗಿ ತನಿಖೆ ಮಾಡುತ್ತೇವೆ,‘ ಎಂದು ಅವರು ಹೇಳಿದರು. ಚೀನಾ ಮತ್ತು ಪಾಕಿಸ್ತಾನಗಳು ಸಾಂಪ್ರದಾಯಿಕ ಸ್ನೇಹ ಮತ್ತು ರಾಜಕೀಯ ವಿಶ್ವಾಸದೊಂದಿಗೆ ಎಲ್ಲಾ ಕಾಲಮಾನದಲ್ಲೂ ಸಹಕಾರ ಸಹಭಾಗಿತ್ವವನ್ನು" ಹಂಚಿಕೊಳ್ಳುತ್ತವೆ ಎಂದೂ ಅವರು ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.