ಸೋಮವಾರ, ಅಕ್ಟೋಬರ್ 26, 2020
30 °C

Covid-19 Vaccine Update: ರಷ್ಯಾ ಲಸಿಕೆಯ 1.2 ಶತಕೋಟಿ ಡೋಸ್‌ಗೆ ಬೇಡಿಕೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಏಷ್ಯಾ, ದಕ್ಷಿಣ ಅಮೆರಿಕ ಮತ್ತು ಮಧ್ಯಪ್ರಾಚ್ಯದ ಸುಮಾರು 10 ದೇಶಗಳು ರಷ್ಯಾ ಅಭಿವೃದ್ಧಿಪಡಿಸಿರುವ ಕೋವಿಡ್-19 ತಡೆಗಟ್ಟುವ ಲಸಿಕೆ ಸ್ಪುಟ್ನಿಕ್-5ಕ್ಕೆ ಬೇಡಿಕೆ ಸಲ್ಲಿಸಿವೆ. ಈ ಸಂಬಂಧ ರಷ್ಯಾದ ಕಂಪನಿಯೊಂದಿಗೆ ಒಪ್ಪಂದಗಳನ್ನೂ ಮಾಡಿಕೊಂಡಿವೆ ಎಂದು ಅಮೆರಿಕದ ಪ್ರತಿಷ್ಠಿತ 'ವಾಲ್‌ಸ್ಟ್ರೀಟ್ ಜರ್ನಲ್' ದಿನ ಪತ್ರಿಕೆಯು ವರದಿ ಮಾಡಿದೆ. 

ರಷ್ಯಾದ ಲಸಿಕೆಗೆ ಬೇಡಿಕೆಯಿಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಹೈದರಾಬಾದ್‌ ಮೂಲಕ ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಕಂಪನಿಯು ರಷ್ಯಾದಲ್ಲಿ ಲಸಿಕೆ ಅಭಿವೃದ್ಧಿಪಡಿಸಿರುವ ಕಂಪನಿಯೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಕೊನೆಯ ಹಂತದ ಪರೀಕ್ಷೆಗಳನ್ನು (ಟ್ರಯಲ್) ನಡೆಸಿ, ನಂತರ 1 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಡಾ.ರೆಡ್ಡೀಸ್‌ ಭಾರತದಲ್ಲಿ ವಿತರಿಸಲಿದೆ. ರಷ್ಯಾದ ಕಂಪನಿಯು ಭಾರತದಲ್ಲಿ ಲಸಿಕೆ ಉತ್ಪಾದಿಸಬಲ್ಲ ಸಹವರ್ತಿ ಕಂಪನಿಗಾಗಿ ಹುಡುಕಾಟ ನಡೆಸಿದೆ.

ಬ್ರೆಜಿಲ್, ದಕ್ಷಿಣ ಆಫ್ರಿಕಾ, ಮೆಕ್ಸಿಕೊ ಮತ್ತು ಸೌದಿ ಅರೇಬಿಯಾ ದೇಶಗಳೂ ರಷ್ಯಾದ ಲಸಿಕೆಯನ್ನು ತಮ್ಮ ದೇಶಗಳ ಜನರಿಗೆ ಪಡೆಯಲು ಒಪ್ಪಂದ ಮಾಡಿಕೊಂಡಿವೆ. ಈವರೆಗೆ 1.2 ಶತಕೋಟಿ ಡೋಸ್‌ಗಳಷ್ಟು ಲಸಿಕೆಗಾಗಿ ವಿವಿಧ ದೇಶಗಳಿಂದ ಬೇಡಿಕೆ ಬಂದಿದೆ. ಇನ್ನೂ ಸುಮಾರು 10 ದೇಶಗಳು ಲಸಿಕೆ ಖರೀದಿಗಾಗಿ ಒಪ್ಪಂದದ ಮಾತುಕತೆ ನಡೆಸುತ್ತಿವೆ ಎಂದು ರಷ್ಯಾ ಹೇಳಿದೆ.

ಸಾರ್ವಜನಿಕ ಬಳಕೆಗಾಗಿ ಅನುಮೋದನೆ ಪಡೆದುಕೊಂಡ ಮೊದಲ ಕೊರೊನಾವೈರಸ್ ಲಸಿಕೆ ಸ್ಪುಟ್ನಿಕ್-5. ಆಗಸ್ಟ್ 2ನೇ ವಾರದಲ್ಲಿ ಲಸಿಕೆಯ ಸಾರ್ವಜನಿಕ ಬಳಕೆಗೆ ಅನುಮೋದನೆ ಸಿಕ್ಕಿತ್ತು. ಇದಕ್ಕೂ ಮೊದಲೂ ಚೀನಾ ತನ್ನ ದೇಶದಲ್ಲಿ ಅಭಿವೃದ್ಧಿಯಾಗಿದ್ದ ಒಂದು ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಅನುಮತಿ ನೀಡಿತ್ತು.

ಲಸಿಕೆ ಪರೀಕ್ಷೆಯ ಮಾಹಿತಿ ಬಹಿರಂಗಗೊಳಿಸಿದ ಆಸ್ಟ್ರಾ ಝೆನೆಕಾ

ಮೊಡೆರ್ನಾ ಮತ್ತು ಫಿಝರ್ ಕಂಪನಿಗಳ ಮೇಲ್ಪಂಕ್ತಿ ಅನುಸರಿಸಿರುವ ಔಷಧ ತಯಾರಕಾ ಕಂಪನಿ ಆಸ್ಟ್ರಾ ಝೆನೆಕಾ ಲಸಿಕೆ ಪರೀಕ್ಷೆಗಳ ವಿಸ್ತೃತ ವರದಿಯನ್ನು ಬಹಿರಂಗಪಡಿಸಿದೆ. ಅಮೆರಿಕದಲ್ಲಿ ಲಸಿಕೆಯ ಕ್ಲಿನಿಕಲ್ ಟ್ರಯಲ್‌ 3ನೇ ಹಂತಕ್ಕೆ ಬಂದಿರುವ ಕಂಪನಿಗಳಿವು. ಕೊರೊನಾವೈರಸ್‌ ಲಸಿಕೆಯನ್ನು ಅಭಿವೃದ್ಧಿಪಡಿಸುವ ಮುಂಚೂಣಿ ಕಂಪನಿಗಳಿವು ಎಂದು ಹೇಳಲಾಗಿದೆ.

ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಅನುಸರಿಸಿದ ವಿಧಾನಗಳ ಬಗ್ಗೆ ಫಲಿತಾಂಶ ಪ್ರಕಟಿಸುವವರೆಗೂ ಸಾಮಾನ್ಯವಾಗಿ ಮಾಹಿತಿ ನೀಡುವುದಿಲ್ಲ. ಆದರೆ ಕೊರೊನಾವೈರಸ್ ಲಸಿಕೆಗೆ ಸಂಬಂಧಿಸಿದಂತೆ ಇದೀಗ ಕಂಡುಬರುತ್ತಿರುವ ಸಿನಿಕತನ, ವಿಪರೀತ ಒತ್ತಡ, ರಾಜಕೀಯ ಆಸಕ್ತಿಯ ಹಿನ್ನೆಲೆಯಲ್ಲಿ ಲಸಿಕೆ ತಯಾರಿಕೆ ಕಂಪನಿಗಳು ಹೆಚ್ಚು ಪಾರದರ್ಶಕತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿವೆ.

ಇಂಗ್ಲೆಂಡ್‌ನಲ್ಲಿ ಆಸ್ಟ್ರಾಜೆನೆಕಾ ಕಂಪನಿಯ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರಲ್ಲಿ ಗಂಭೀರ ಸ್ವರೂಪದ ತೊಂದರೆಗಳು ಕಾಣಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಬ್ರಿಟನ್‌ನ ಪರಿಣಿತರ ಸ್ವತಂತ್ರ ತಂಡವೊಂದು ಕ್ಲಿನಿಕಲ್ ಟ್ರಯಲ್‌ಗಳನ್ನು ಪರಿಶೀಲಿಸಿತ್ತು. ನಂತರ ಸರ್ಕಾರಿ ಔಷಧ ನಿಯಂತ್ರಕರೂ ಟ್ರಯಲ್‌ಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕಂಪನಿಯು ಪೂರ್ಣ ಮಾಹಿತಿ ಹಂಚಿಕೊಳ್ಳುತ್ತಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಇದೀಗ ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ ದೇಶಗಳಲ್ಲಿ ಕ್ಲಿನಿಕಲ್ ಟ್ರಯಲ್‌ಗಳು ಮತ್ತೆ ಆರಂಭವಾಗಿವೆ. ಆದರೆ ಅಮೆರಿಕದಲ್ಲಿ ಮಾತ್ರ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆಯು ಇನ್ನೂ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಹೀಗಾಗಿ ಅಲ್ಲಿ ಟ್ರಯಲ್‌ಗಳು ಮತ್ತೆ ಆರಂಭವಾಗಿಲ್ಲ.

ಕೊರೊನಾಗೆ ಲಸಿಕೆ: ಈವರೆಗಿನ ಬೆಳವಣಿಗೆಗಳು

* ಪ್ರಿ-ಕ್ಲಿನಿಕಲ್, ಕ್ಲಿನಿಕಲ್ ಟ್ರಯಲ್ ಹಂತದಲ್ಲಿ 182 ಲಸಿಕೆಗಳು
* ಕ್ಲಿನಿಕಲ್ ಟ್ರಯಲ್ ಹಂತದಲ್ಲಿ 36 ಲಸಿಕೆಗಳು
* ಅಂತಿಮ ಹಂತದಲ್ಲಿ ಅಂದರೆ ಮನುಷ್ಯರ ಮೇಲೆ ಪ್ರಯೋಗ ನಡೆಸುವ ಫೇಸ್‌-3 ಹಂತದಲ್ಲಿ 9 ಲಸಿಕೆಗಳಿವೆ
At least eight candidate vaccines being developed in India.
* ಭಾರತದಲ್ಲಿ 8 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಪೈಕಿ 2 ಲಸಿಕೆಗಳು 2ನೇ ಹಂತದ ಪ್ರಯೋಗ ಆರಂಭಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು