ಶನಿವಾರ, ಸೆಪ್ಟೆಂಬರ್ 19, 2020
23 °C

Covid-19 World Update | 2 ಕೋಟಿ ದಾಟಿದ ಸೋಂಕು, ಸೆಪ್ಟೆಂಬರ್‌ಗೆ ಜರ್ಮನಿ ಲಸಿಕೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿತರ ಒಟ್ಟು ಸಂಖ್ಯೆ 2 ಕೋಟಿ ದಾಟಿದ್ದು 7.50 ಲಕ್ಷ ಜನರು ಮೃಪಟ್ಟಿದ್ದಾರೆ. ಈ ನಡುವೆ ಮುಂದಿನ ತಿಂಗಳು ಲಸಿಕೆ ಲಭ್ಯವಾಗಲಿದೆ ಎಂದು ಜರ್ಮನಿ ಹೇಳಿದೆ.

ಮುಂದಿನ ತಿಂಗಳು ಲಸಿಕೆ ಲಭ್ಯವಾಗಲಿದೆ ಎಂದು ಜರ್ಮನಿ ಹೇಳಿದ್ದು, ರಷ್ಯಾ ಲಸಿಕೆ ಸಂಪೂರ್ಣವಾಗಿ ಪರೀಕ್ಷೆಗೆ ಒಳಪಟ್ಟಿಲ್ಲ ಎಂದು ಆರೋಪಿಸಿದೆ. 

ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಅವರು ಗುರುವಾರ ಕೋವಿಡ್‌ ಲಸಿಕೆ ಕುರಿತಂತೆ ಜರ್ಮನಿ ಆರೋಗ್ಯ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ರಾತ್ರಿ 10 ಗಂಟೆಯವರೆಗೆ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಒಟ್ಟು  2,06, 2,105 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  ಈವರೆಗೆ ಸೋಂಕಿನಿಂದ 7,50,490 ಮಂದಿ ಮೃತಪಟ್ಟಿದ್ದಾರೆ. ಸೋಂಕು ತಗುಲಿದ್ದ 1.35 ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.  ಸೋಂಕಿತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಈವರೆಗೆ ಒಟ್ಟು 31,64,785 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  23 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಭಾರತ ಮೂರನೇ ಸ್ಥಾನದಲ್ಲಿದೆ.

ಇದು ಮೂರ್ಖತನ: ರಷ್ಯಾ ಲಸಿಕೆ ಅಂಗೀಕರಿಸಿರುವ ಬಗ್ಗೆ ತಜ್ಞರ ಅಭಿಪ್ರಾಯ

ದೊಡ್ಡ ಪ್ರಮಾಣದ ಕ್ಲಿನಿಕಲ್ ಪ್ರಯೋಗಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲದ ಕೊರೊನಾವೈರಸ್ ಲಸಿಕೆಯನ್ನು ರಷ್ಯಾ ಅಂಗೀಕರಿಸಿದೆ ಎಂದು ವ್ಲಾಡಿಮಿರ್ ಪುಟಿನ್ ಮಂಗಳವಾರ ಘೋಷಿಸಿದ್ದು ಈ ಬಗ್ಗೆ ಲಸಿಕೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದು ನಿಜವಾಗಿಯೂ ಭಯಾನಕವಾಗಿದೆ. ಇದು ನಿಜವಾಗಿಯೂ ಅಪಾಯಕಾರಿ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಲಸಿಕೆ ಸುರಕ್ಷತೆ ಸಂಸ್ಥೆಯ ನಿರ್ದೇಶಕ ಡೇನಿಯಲ್ ಸಾಲ್ಮನ್ ಹೇಳಿದ್ದಾರೆ.

ಈ ಲಸಿಕೆ ಪ್ಲೇಸ್‌ಬೊಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಪಡೆಯುವ ಕೆಲವು ಜನರಿಗೆ ಹಾನಿ ಉಂಟುಮಾಡುವುದಿಲ್ಲ ಎಂಬುದನ್ನು ಮುೂರನೇ ಹಂತದ ಪ್ರಯೋಗ ನಿರ್ಧರಿಸುತ್ತದೆ. ಆದರೆ 3 ಹಂತದ ಪ್ರಯೋಗಗಳಿಗಿಂತ ಮುಂದೆ ಜಿಗಿಯುವ ಮೂಲಕ ರಷ್ಯಾ ಅಪಾಯಕಾರಿ ಹೆಜ್ಜೆ ಇಡುತ್ತಿದೆ ಎಂದು  ಸಾಲ್ಮನ್ ಮತ್ತು ಇತರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅನಾರೋಗ್ಯ ಪೀಡಿತರಿಗೆ ನೀಡಲಾಗುವ ಪ್ರಾಯೋಗಿಕ ಔಷಧಿಗಳಿಗಿಂತ ಭಿನ್ನವಾಗಿ, ಲಸಿಕೆಗಳನ್ನು ಆರೋಗ್ಯವಂತ ಜನರಿಗೆ ನೀಡಲಾಗುತ್ತದೆ. ಆದ್ದರಿಂದ ಅವರು ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕು. ಲಕ್ಷಾಂತರ ಜನರು ಲಸಿಕೆ ಪಡೆದರೆ, ಸಾವಿರಾರು ಜನರಲ್ಲಿ ಅಪರೂಪದ ಅಡ್ಡಪರಿಣಾಮವೂ ಕೂಡಾ ಉಂಟಾಗುವ ಸಾಧ್ಯತೆ ಇದೆ ಎಂದಿದ್ದಾರೆ ತಜ್ಞರು. 

ರಷ್ಯಾ ಸಾವಿನ ಸಂಖ್ಯೆ ಹೆಚ್ಚಳ

ರಷ್ಯಾದಲ್ಲಿ ಕೊರೊನಾ ಚಿಕಿತ್ಸೆಗೆ ಲಸಿಕೆ ಬಳಕೆ ಆರಂಭಿಸಲು ಅನುಮತಿ ಸಿಕ್ಕಿರುವುದು ಅಲ್ಲಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಲಸಿಕೆಯ ಸುರಕ್ಷತೆಯ ಬಗ್ಗೆ ಬುಧವಾರವೂ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವು ದೇಶಗಳು ಪ್ರಶ್ನೆಗಳನ್ನು ಮುಂದಿಟ್ಟವು.

'ಮೊದಲು ಲಸಿಕೆ ಮಾಡಬೇಕು ಎನ್ನುವುದು ನಮ್ಮ ಗುರಿಯಲ್ಲ, ಸುರಕ್ಷಿತ ಲಸಿಕೆ ನಮ್ಮ ಗುರಿ' ಎಂದು ಅಮೆರಿಕ ಸರ್ಕಾರ ರಷ್ಯಾದ ಕಾಲೆಳೆದಿದೆ.

ಈ ನಡುವೆ ವಿಶ್ವದ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಇಂದೂ (ಆಗಸ್ಟ್ 12) ಸಹ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿಯೇ ವರದಿಯಾಗಿದೆ. ಹೊಸದಾಗಿ 5,102 ಪ್ರಕರಣಗಳು ವರದಿಯಾಗಿದ್ದು, 129 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಷ್ಯಾದಲ್ಲಿ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 15,260 ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ  9,02,701 ಮುಟ್ಟಿದೆ.

ಕೋವಿಡ್-19ರ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯ ಸುರಕ್ಷೆಯ ಬಗ್ಗೆ ವಿಶ್ವದ ಹಲವು ದೇಶಗಳು ಕೇಳಿರುವ ಪ್ರಶ್ನೆಗಳನ್ನು ರಷ್ಯಾ 'ಆಧಾರ ರಹಿತ' ಎಂದು ಸಾರಾಸಗಟಾಗಿ ತಿರಸ್ಕರಿಸಿದೆ.

ಲಸಿಕೆಯ ಪ್ರಯೋಗ ಪೂರ್ಣಪ್ರಮಾಣದಲ್ಲಿ ಮುಗಿದಿಲ್ಲ. ನಡೆದ ಪ್ರಯೋಗದ ಫಲಿತಾಂಶವೂ ಬಂದಿಲ್ಲ. ಅಷ್ಟರೊಳಗೆ ಲಸಿಕೆಯ ಬಳಕೆಗೆ ಅನುಮತಿ ನೀಡಿರುವ ಬಗ್ಗೆ ರಷ್ಯಾದಲ್ಲಿಯೂ ಆತಂಕ ವ್ಯಕ್ತವಾಗಿದೆ. 'ರಾಷ್ಟ್ರದ ಪ್ರತಿಷ್ಠೆಯನ್ನು ಸುರಕ್ಷೆಯ ಎದುರು ಸರ್ಕಾರ ಇರಿಸಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ರಷ್ಯಾದ ಆರೋಗ್ಯ ಸಚಿವ ಮೈಖೆಲ್ ಮುರಶ್ಕೊ ಮಾತ್ರ, 'ಲಸಿಕೆ ಸುರಕ್ಷಿತ. ಶೀಘ್ರದಲ್ಲಿಯೇ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಜನರಿಗೆ ಲಸಿಕೆ ನೀಡಲಾಗುವುದು' ಎಂದು ಘೋಷಿಸಿದ್ದಾರೆ.

ಲಸಿಕೆಗಾಗಿ 1.5 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡ ಅಮೆರಿಕ

ಅಮೆರಿಕ ಸರ್ಕಾರವು ಕೋವಿಡ್ ಲಸಿಕೆಯನ್ನು ಬೇಗ ಹೊಂದಬೇಕು ಎಂಬ ಆಸೆಯಿಂದ ಹಿಂದೆ ಸರಿದಿಲ್ಲ. ಮೊಡೆರ್ನಾ ಇಂಕ್‌ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ 1 ಕೋಟಿ ಡೋಸ್‌ಗಳಿಗಾಗಿ ಅಮೆರಿಕ ಸರ್ಕಾರ 1.5 ಶತಕೋಟಿ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಲಸಿಕೆ ತಯಾರಿಕೆ ಸ್ಪರ್ಧೆಯಲ್ಲಿರುವ ಮತ್ತೊಂದು ಪ್ರಮುಖ ಕಂಪನಿ ಜಾನ್ಸನ್‌ ಅಂಡ್ ಜಾನ್ಸನ್ ಮುಂದಿ ವರ್ಷ 100 ಕೋಟಿ ಡೋಸ್ ಉತ್ಪಾದಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಅಮೆರಿಕ ಮತ್ತು ಚೀನಾ ಕಂಪನಿಗಳು ತಯಾರಿಸಿರುವ ಲಸಿಕೆಯ ಪ್ರಯೋಗಕ್ಕೆ ಮೆಕ್ಸಿಕೊ ಒಪ್ಪಿಕೊಂಡಿದೆ. ಪ್ರಯೋಗ ಪೂರ್ಣಗೊಂಡ ನಂತರ ಎರಡೂ ದೇಶಗಳು ಲಸಿಕೆ ತಯಾರಿಕೆಯ ಘಟಕವನ್ನು ತನ್ನ ದೇಶದಲ್ಲಿಯೂ ತೆರೆಯಬೇಕು ಎಂದು ಮೆಕ್ಸಿಕೊ ಸರ್ಕಾರ ಹೇಳಿದೆ.

ಸ್ವಿಡ್ಜರ್‌ಲೆಂಡ್: ಸಾರ್ವಜನಿಕ ಸಮಾರಂಭಕ್ಕೆ ಅವಕಾಶ

ಅಕ್ಟೋಬರ್ 1ರಿಂದ 1000ಕ್ಕೂ ಹೆಚ್ಚು ಜನರು ಸೇರುವ ಕ್ರೀಡಾಕೂಟ, ಸಂಗೀತ ಕಛೇರಿಗಳಿಗೆ ಅವಕಾಶ ನೀಡಲು ಸ್ವಿಡ್ಜರ್‌ಲೆಂಡ್ ಸರ್ಕಾರ ನಿರ್ಧರಿಸಿದೆ. ಆಯೋಜಕರು ಮೊದಲೇ ಈ ಬಗ್ಗೆ ಅರ್ಜಿ ಸ್ಲಲಿಸಿ ಅನಮತಿ ಪಡೆದುಕೊಳ್ಳಬೇಕು. ಅಂತರ ಪಾಲಿಸುವ ನಿಯಮಕ್ಕೂ ಬದ್ಧರಾಗಿರಬೇಕು. ಆರ್ಥಿಕತೆಗೆ ಚಾಲನೆ ಸಿಗಲು ಇಂಥ ಕ್ರಮ ಅನಿವಾರ್ಯ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಜರ್ಮನಿಯಲ್ಲಿ ಮತ್ತೆ ಸೋಂಕು ಹೆಚ್ಚಳ

ಜರ್ಮನಿಯಲ್ಲಿ ಸೋಂಕಿನ ಪ್ರಮಾಣ ಮತ್ತೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಬುಧವಾರ ಒಂದೇ ದಿನ ಜರ್ಮನಿಯಲ್ಲಿ 1,226 ಹೊಸ ಪ್ರಕರಣಗಳು ವರದಿಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಜರ್ಮನಿಯ ಆರೋಗ್ಯ ಸಚಿವ ಜೆನ್ಸ್‌ ಸ್ಪಾಶ್ನ್‌ ವಿದೇಶಗಳಿಂದ ಬರುತ್ತಿರುವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಗಮನ ಕೊಡುತ್ತಿಲ್ಲ. ಸೋಂಕು ಹರರಡಲು ಇದು ಮುಖ್ಯ ಕಾರಣ ಎಂದು ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿತ

ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದೆನೆಸಿದ ಬ್ರಿಟನ್‌ನ ಕೈಗಾರಿಕೆಗಳು ಕೊರೊನಾ ವೈರಸ್ ಪಿಡುಗಿಗೆ ಕಂಗಾಲಾಗಿವೆ. 1955ರ ನಂತರ ಇದೇ ಮೊದಲ ಬಾರಿಗೆ ಗಣನೀಯ ಪ್ರಮಾಣದಲ್ಲಿ ಕೈಗಾರಿಕಾ ಉತ್ಪನ್ನಗಳ ಪ್ರಮಾಣ ಕಡಿಮೆಯಾಗಿದೆ. ಬ್ರಿಟನ್ ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ ಎಂದು ಅಲ್ಲಿನ ಸಂಖ್ಯಾಶಾಸ್ತ್ರ ಇಲಾಖೆ ಘೋಷಿಸಿದೆ.

ಜರ್ಮನಿ, ಫ್ರಾನ್ಸ್‌, ಇಟಲಿ ಮತ್ತು ಅಮೆರಿಕಗಳಿಗೆ ಹೋಲಿಸಿದರೂ ಬ್ರಿಟನ್‌ನ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಯೂರೋಪ್‌ನಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಶೋಂಕಿನ ಸಾವುಗಳು ಬ್ರಿಟನ್‌ನಲ್ಲಿ ಸಂಭವಿಸಿತ್ತು. ಈವವರೆಗೆ ಬ್ರಿಟನ್‌ನಲ್ಲಿ 46,611 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ನೀಡಿರುವ ಅಂಕಿಅಂಶಕ್ಕಿಂತ ವಾಸ್ತವ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು