ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳಲ್ಲಿ ಕಾಣಿಸುವ ಕೊರೊನಾ ವೈರಸ್ ಮಾನವನಲ್ಲಿ ಪತ್ತೆ, ಆತಂಕ ಬೇಡ: ವಿಜ್ಞಾನಿಗಳು

Last Updated 29 ಮೇ 2021, 9:51 IST
ಅಕ್ಷರ ಗಾತ್ರ

ಕೇಂಬ್ರಿಡ್ಜ್: ನಾಯಿಗಳಲ್ಲಿ ಕಂಡುಬರುವ ಕೊರೊನಾ ವೈರಸ್ (ಕೆನೈನ್ ಕೊರೊನಾ ವೈರಸ್) ಮನುಷ್ಯರಲ್ಲಿಯೂ ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಾದ ಕೆಲವರಲ್ಲಿ ಈ ವೈರಸ್ ಪತ್ತೆಯಾಗಿದೆ.

ಆದರೆ, ಈ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಲೇಷ್ಯಾದ ಸರಾವಾಕ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಎಂಟು ಮಂದಿಯಲ್ಲಿ ‘ಕೆನೈನ್ ಕೊರೊನಾ ವೈರಸ್’ ಪತ್ತೆಯಾಗಿದೆ. ಆದರೆ ಇದರಿಂದಾಗಿ ನಾಯಿಗಳೂ ಮನುಷ್ಯರಲ್ಲಿ ಕೊರೊನಾ ವೈರಸ್ ಹರಡಬಹುದು ಎಂಬ ಆತಂಕಪಡುವ ಅಗತ್ಯವಿಲ್ಲ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ಗುಂಪು ಹೇಳಿದೆ.

ಕೋವಿಡ್–19 ಸೋಂಕಿಗೆ ಕಾರಣವಾಗುವ ‘ಸಾರ್ಸ್–ಕೊವ್–2’ ಹಾಗೂ ‘ಕೆನೈನ್ ಕೊರೊನಾ ವೈರಸ್’ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಕೊರೊನಾ ವೈರಸ್‌ ಅನ್ನು ಆಲ್ಫಾ, ಬೇಟಾ, ಗಾಮಾ ಹಾಗೂ ಡೆಲ್ಟಾ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

‘ಸಾರ್ಸ್–ಕೊವ್–2’ ಬೇಟಾ ಕೊರೊನಾವೈರಸ್ ಗುಂಪಿಗೆ ಸೇರಿದೆ. ‘ಕೆನೈನ್ ಕೊರೊನಾ’ ಸಂಪೂರ್ಣ ಭಿನ್ನವಾಗಿದ್ದು, ಆಲ್ಫಾ ಕೊರೊನಾ ವೈರಸ್ ಗುಂಪಿಗೆ ಸೇರಿದೆ.

‘ಕೆನೈನ್ ಕೊರೊನಾ’ ಬಗ್ಗೆ ಸುಮಾರು 50 ವರ್ಷಗಳ ಹಿಂದೆಯೇ ವಿಜ್ಞಾನಿಗಳಿಗೆ ಮಾಹಿತಿ ಇದೆ ಎನ್ನಲಾಗಿದೆ. ಇದು ಈ ಹಿಂದೆ ಜನರಲ್ಲಿ ಸೋಂಕು ಉಂಟುಮಾಡಿದ ಬಗ್ಗೆ ದಾಖಲೆಗಳಿಲ್ಲ. ಇದೀಗ ವಿಶ್ವದಾದ್ಯಂತ ಕೊರೊನಾ ವೈರಸ್‌ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಈ ವೈರಸ್ ಬಗ್ಗೆಯೂ ಗಮನಹರಿಸುವಂತಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಕೆನೈನ್ ಕೊರೊನಾ ವೈರಸ್’ ಮಾನವನಿಗೆ ತಗುಲಿರುವುದು ಇತ್ತೀಚೆಗೆ ಆಕಸ್ಮಿಕವಾಗಿ ಪತ್ತೆಯಾಗಿತ್ತು. ಒಂದೇ ಬಾರಿಗೆ ಎಲ್ಲ ಮಾದರಿಯ ಕೊರೊನಾ ವೈರಸ್‌ ಅನ್ನು ಪತ್ತೆಮಾಡುವ ಹೊಸ ಪರೀಕ್ಷಾ ವಿಧಾನ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಯತ್ನಿಸಿದ್ದರು. ಆ ಸಂದರ್ಭ ಇದು ಪತ್ತೆಯಾಗಿತ್ತು.

ನ್ಯುಮೋನಿಯಾದಿಂದ ಮಲೇಷ್ಯಾದ ಆಸ್ಪತ್ರೆಗಳಲ್ಲಿ ದಾಖಲಾಗಿರುವ 192 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಪೈಕಿ ಎಂಟು ಮಂದಿಯಲ್ಲಿ ‘ಕೆನೈನ್ ಕೊರೊನಾ’ ಪತ್ತೆಯಾಗಿದೆ.

ಈ ವೈರಸ್ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆಯೇ ಮತ್ತು ಜನರಿಂದ ಜನರಿಗೆ ಹರಡುತ್ತವೆಯೇ ಎಂಬ ಬಗ್ಗೆ ಈಗಲೇ ಏನೂ ಹೇಳಲಾಗದು. ಯಾಕೆಂದರೆ ಈ ವೈರಸ್ ಪತ್ತೆಯಾದ ಸೋಂಕಿತರಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುವ ಬೇರೆ ವೈರಸ್ ಸಹ ಪತ್ತೆಯಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT