ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಮಾಜಿ ಅಧ್ಯಕ್ಷ, ಜನರಲ್‌ ಪ‍ರ್ವೇಜ್‌ ಮುಷರಫ್‌ ನಿಧನ 

Last Updated 5 ಫೆಬ್ರುವರಿ 2023, 12:48 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌/ದುಬೈ: ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ, ಮಾಜಿ ಅಧ್ಯಕ್ಷ ಜನರಲ್‌ (ನಿವೃತ್ತ) ಪರ್ವೇಜ್‌ ಮುಷರ‍್ರಷ್ (79) ದುಬೈನಲ್ಲಿ ಭಾನುವಾರ ನಿಧನರಾದರು.

ದೀರ್ಘ ಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರಿಗೆ ದುಬೈನ ಅಮೆರಿಕನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

‘ಅಂತ್ಯಕ್ತಿಯೆಗಾಗಿ ಮುಷರ‍್ರಫ್‌ ಅವರ ಪಾರ್ಥಿವ ಶರೀರವನ್ನು ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಲು ಅವರ ಕುಟುಂಬ ನಿರ್ಧರಿಸಿದೆ’ ಎಂದು ಪಾಕಿಸ್ತಾನದ ಜಿಯೊ ನ್ಯೂಸ್‌ ಚಾನೆಲ್‌ ವರದಿ ಮಾಡಿದೆ.

‘ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆಯಿಂದ ಸೇನೆಯ ವಿಶೇಷ ವಿಮಾನವೊಂದು ದುಬೈಗೆ ತೆರಳಲಿದೆ’ ಎಂದೂ ಚಾನೆಲ್‌ ವರದಿ ಮಾಡಿದ್ದು, ಅಂತ್ಯಕ್ರಿಯೆ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.

‘ಅಮೈಲೊಯ್ಡೊಸಿಸ್‌’ ಎಂಬ ಅಪರೂಪದ ಕಾಯಿಲೆಗೆ ಅವರು ತುತ್ತಾಗಿದ್ದರು. ದೇಶದ ಅಂಗಾಂಗಗಳು ಹಾಗೂ ಅಂಗಾಂಶಗಳಲ್ಲಿ ‘ಅಮೈಲೊಯ್ಡ್’ ಎಂಬ ಪ್ರೊಟೀನ್ ಅಸಹಜ ಪ್ರಮಾಣದಲ್ಲಿ ಶೇಖರಣೆಯಾಗುವುದರಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ಅವರ ಕುಟುಂಬ ಮೂಲಗಳು ಹೇಳಿವೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ 2016ರ ಮಾರ್ಚ್‌ನಲ್ಲಿ ದುಬೈಗೆ ತೆರಳಿದ್ದರು. ಮುಷರ‍್ರಫ್‌ ಅವರು ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದುದನ್ನು ಅವರ ಪಕ್ಷವಾದ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌ (ಎಪಿಎಂಎಲ್‌) 2018ರಲ್ಲಿ ಬಹಿರಂಗಪಡಿಸಿತ್ತು.

1999ರಲ್ಲಿ ಕಾರ್ಗಿಲ್‌ ಯುದ್ಧಕ್ಕೆ ಕಾರಣರಾಗಿದ್ದ ಮುಷರ‍್ರಫ್‌, ಈ ದುಸ್ಸಾಹಸದಲ್ಲಿ ಪರಾಭವಗೊಂಡರು. ಇದಾದ ನಂತರ, ಆಗಿನ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧವೇ ದಂಗೆ ಎದ್ದು, ಅವರನ್ನು ಗದ್ದುಗೆಯಿಂದ ಕೆಳಗಿಳಿಸಿದ್ದರು.

ನಂತರ, 1999ರಿಂದ 2008ರ ವರೆಗೆ ಅವರು ಪಾಕಿಸ್ತಾನದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. 2007ರಲ್ಲಿ ವಿರೋಧ ಪಕ್ಷದ ನಾಯಕಿ ಬೆನಜೀರ್‌ ಭುಟ್ಟೊ ಅವರ ಹತ್ಯೆಯಾಯಿತು. ಮಾರನೇ ವರ್ಷ ನಡೆದ ಚುನಾವಣೆಯಲ್ಲಿ ಮುಷರ‍್ರಫ್‌ರ ಮಿತ್ರಪಕ್ಷಗಳು ಭಾರಿ ಸೋಲನುಭವಿಸಿದವು. ಈ ಬೆಳವಣಿಗೆ ಪಾಕಿಸ್ತಾನದ ರಾಜಕಾರಣದಲ್ಲಿ ಅವರನ್ನು ಏಕಾಂಗಿಯಾಗಿಸಿತ್ತು.

2013ರಲ್ಲಿ ಪುನಃ ಅಧಿಕಾರದ ಗದ್ದುಗೆ ಏರಲು ಅವರು ಪ್ರಯತ್ನಿಸಿದರು. ಆಗ ನಡೆದ ಚುನಾವಣೆಯಲ್ಲಿ ಅವರು ಷರೀಫ್‌ ವಿರುದ್ಧ ಪರಾಭವಗೊಂಡರು.

2007ರಲ್ಲಿ ನವೆಂಬರ್‌ 3ರಂದು ಸಂವಿಧಾನವನ್ನು ಅಮಾನತಿನಲ್ಲಿಟ್ಟಿದ್ದರು ಎಂಬ ಆರೋಪ ಮುಷರ‍್ರಫ್‌ ವಿರುದ್ಧ ಕೇಳಿಬಂದಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಪ್ರಕರಣದಲ್ಲಿ ಮುಷರ‍್ರಫ್ ತ‍ಪ್ಪಿತಸ್ಥ ಎಂಬುದಾಗಿ 2014ರ ಮಾರ್ಚ್‌ನಲ್ಲಿ ತೀರ್ಪು ನೀಡಿತ್ತು.

ದೇಶದ್ರೋಹ ಪ್ರಕರಣವೊಂದರಲ್ಲಿ ಮುಷರ‍್ರಫ್‌ ಅವರಿಗೆ ಮರಣ ದಂಡನೆ ವಿಧಿಸಿ ವಿಶೇಷ ನ್ಯಾಯಾಲಯವು 2019ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿತ್ತು. ನಂತರ, ನ್ಯಾಯಾಲಯವೇ ಈ ತೀರ್ಪನ್ನು ರದ್ದುಪಡಿಸಿತ್ತು. ಈ ನಡುವೆ, ಮೂರು ಬಾರಿ ಅವರ ಹತ್ಯೆಗೆ ಯತ್ನಗಳು ನಡೆದಿದ್ದವು.

ಭಾರತದೊಂದಿಗೆ ನಂಟು: ಮುಷರ‍್ರಫ್‌ ಅವರು 1943ರ ಆಗಸ್ಟ್‌ 11ರಂದು ದೆಹಲಿಯಲ್ಲಿ ಜನಿಸಿದ್ದರು. 1947ರಲ್ಲಿ ಅವರ ಕುಟುಂಬ ಕರಾಚಿಗೆ ವಲಸೆ ಹೋಯಿತು. ಕ್ವೆಟ್ಟಾದಲ್ಲಿರುವ ಆರ್ಮಿ ಸ್ಟಾಫ್‌ ಅಂಡ್‌ ಕಮಾಂಡ್‌ ಕಾಲೇಜ್‌ನ ಪದವೀಧರರಾಗಿದ್ದ ಅವರು, 1964ರಲ್ಲಿ ಪಾಕಿಸ್ತಾನ ಸೇನೆ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT