ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ದಾಳಿ: 6 ಮಂದಿ ಸಾವು

ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ
Last Updated 19 ಮೇ 2021, 14:40 IST
ಅಕ್ಷರ ಗಾತ್ರ

ಗಾಜಾ ನಗರ, ಜೆರುಸಲೇಂ: ಗಾಜಾದಲ್ಲಿ ಬುಧವಾರ ಬೆಳಿಗ್ಗೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.

ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಯಿತು. ಖಾನ್‌ ಯುನಿಸ್‌ ಮತ್ತು ರಫಾಹ್‌ ನಗರಗಳ ಸುತ್ತಮುತ್ತ 52 ಯುದ್ಧ ವಿಮಾನಗಳ ಮೂಲಕ 40 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಹಮಸ್ ಉಗ್ರರು ಬಳಸುತ್ತಿದ್ದ ಸುರಂಗಗಳ ಮೇಲೆಯೂ ದಾಳಿ ನಡೆಸಲಾಗಿದೆ.

ಧರ್ಮ ಪ್ರಚಾರಕರು ಸೇರಿದಂತೆ ಸುಮಾರು 40 ಮಂದಿ ವಾಸಿಸುತ್ತಿದ್ದ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ನಡೆಸುವ ಮುನ್ನ ಎಚ್ಚರಿಕೆ ನೀಡಲು ಕ್ಷಿಪಣಿ ದಾಳಿ ನಡೆಸಲಾಗಿತ್ತು. ಹೀಗಾಗಿ, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ವೇಳೆ, ಹಮಸ್‌ ಸಂಘಟನೆ ಸಹ ರಾಕೆಟ್‌ ದಾಳಿ ನಡೆಸಿದೆ. ದಾಳಿ–ಪ್ರತಿದಾಳಿಯಿಂದ ನಾಗರಿಕರು ತತ್ತರಿಸಿದ್ದಾರೆ.

‘ಇಲ್ಲಿ ಎಲ್ಲವೂ ನಾಶವಾಗುತ್ತಿದೆ. ನಮಗೆ ಯಾರೂ ನೆರವಿಗೆ ಬರುತ್ತಿಲ್ಲ. ದೇವರೇ ನಮಗೆ ನೆರವಾಗಬೇಕು’ ಎಂದು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಅಹ್ಮದ್‌ ಅಲ್‌–ಅಸ್ತಲ್‌ ಅಳಲು ತೋಡಿಕೊಂಡಿದ್ದಾರೆ.

ಕದನ ವಿರಾಮಕ್ಕೆ ಯತ್ನ

ಕದನ ವಿರಾಮ ಘೋಷಿಸುವಂತೆ ಅಂತರರಾಷ್ಟ್ರೀಯ ಸಮುದಾಯದ ಒತ್ತಡ ಹೆಚ್ಚುತ್ತಿದೆ. ಕದನವಿರಾಮ ಘೋಷಿಸಲು ತಾತ್ವಿಕವಾಗಿ ಇಸ್ರೇಲ್‌ ಮತ್ತು ಹಮಸ್‌ ಸಂಘಟನೆಗಳು ಒಪ್ಪಿಕೊಂಡಿವೆ ಎಂದು ಈಜಿಪ್ಟ್ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸಹ ಬುಧವಾರ ಸಂಘರ್ಷ ಅಂತ್ಯಗೊಳಿಸುವ ಕುರಿತು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಮಾತುಕತೆ ನಡೆಸಿದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಸಂಘರ್ಷವನ್ನು ಅಂತ್ಯಗೊಳಿಸಲು ಯಾವುದೇ ರೀತಿಯ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಇಸ್ರೇಲ್‌ ತಿಳಿಸಿದೆ.

‘ಹಮಾಸ್‌ ಸಂಘಟನೆಯನ್ನು ನಿಷ್ಕ್ರಿಯಗೊಳಿಸಲು ದಾಳಿ ಮುಂದುವರಿಸಲಾಗುವುದು. ಹಮಸ್‌ ವಿರುದ್ಧ ನಾವು ಜಯಗಳಿಸುತ್ತೇವೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಮಕ್ಕಳು: ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ ಹಲವು ಮಕ್ಕಳು ಅನಾಥರಾಗಿದ್ದಾರೆ.

ಮೇ 10ರಿಂದ ಇದುವರೆಗೆ ಸುಮಾರು 63 ಮಕ್ಕಳು ಸಾವಿಗೀಡಾಗಿರಬಹುದು ಎಂದು ಗಾಜಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ಮೇಲೆ ದಾಳಿ ನಡೆಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಸ್ರೇಲ್‌ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT