ಬುಧವಾರ, ಏಪ್ರಿಲ್ 14, 2021
24 °C

ಕೋವಿಡ್‌– 19: ವಿಶ್ವದಲ್ಲಿ 30 ಲಕ್ಷ ಗಡಿದಾಟಿದ ಸಾವಿನ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು (ರಾಯಿಟರ್ಸ್‌): ಕೋವಿಡ್‌ 19 ಲಸಿಕೆಯ ಅಭಿಯಾನದ ನಡುವೆಯೂ ಸೋಂಕಿನ ಪ್ರಕರಣಗಳು ವಿಶ್ವದಾದ್ಯಂತ ಹೆಚ್ಚುತ್ತಿದ್ದು, ಕೊರೊನಾ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 30 ಲಕ್ಷದ ಗಡಿಯನ್ನು ಮಂಗಳವಾರ ದಾಟಿದೆ.

ವಿಶ್ವದಾದ್ಯಂತ ಕೋವಿಡ್‌ 19 ಸಾವಿನ ಸಂಖ್ಯೆ ಮತ್ತೊಮ್ಮೆ ಏರಿಕೆಯಾಗುತ್ತಿದೆ. ಅದರಲ್ಲೂ ಬ್ರೆಜಿಲ್‌ ಮತ್ತು ಭಾರತದಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಏರುತ್ತಿದೆ. ಬ್ರಿಟನ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ರೂಪಾಂತರಿ ಕೊರೊನಾ, ಲಾಕ್‌ಡೌನ್‌ ಮತ್ತು ಕೋವಿಡ್‌ ಮಾರ್ಗಸೂಚಿ ಸರಿಯಾಗಿ ಪಾಲಿಸದ ಹಾಗೂ ಸಾರ್ವಜನಿಕರ ನಿಲಕ್ಷ್ಯದಿಂದಾಗಿ ಸೋಂಕು ವ್ಯಾಪಿಸುತ್ತಿದೆ. ಮರಣ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ದೂಷಿಸಿದ್ದಾರೆ.

ರಾಯಿಟರ್ಸ್‌ ಸುದ್ದಿಸಂಸ್ಥೆ ಮಾಡಿರುವ ಲೆಕ್ಕಾಚಾರದ ಪ್ರಕಾರ, ಜಾಗತಿಕವಾಗಿ ಕೊರೊನಾ ವೈರಸ್ ಸಂಬಂಧಿ ಸಾವಿನ ಸಂಖ್ಯೆ 20 ಲಕ್ಷ ತಲುಪಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು. ಮುಂದಿನ 10 ಲಕ್ಷ ಸಾವುಗಳು ಕೇವಲ ಮೂರು ತಿಂಗಳಲ್ಲಿ ಸಂಭವಿಸಿವೆ.

ರಾಯಿಟರ್ಸ್ ವಿಶ್ಲೇಷಣೆಯ ಪ್ರಕಾರ, ಪ್ರತಿದಿನದ ಸರಾಸರಿ ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಪ್ರತಿದಿನ ವಿಶ್ವದಾದ್ಯಂತ ಸಂಭವಿಸುವ ಕೋವಿಡ್‌ ಸಂಬಂಧಿತ ನಾಲ್ಕು ಸಾವುಗಳಲ್ಲಿ ಒಂದು ಸಾವಿನ ಪ್ರಕರಣ ಬ್ರೆಜಿಲ್‌ನಲ್ಲಿ ವರದಿಯಾಗುತ್ತಿದೆ.

ಕೊರೊನಾ ವೈರಸ್‌ನಿಂದಾಗಿ ಬ್ರೆಜಿಲ್‌ನಲ್ಲಿ ಭೀಕರ ಪರಿಸ್ಥಿತಿ ಎದುರಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದು, ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶವೇ ಇಂದು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ ಎಂದು ಅದು ಹೇಳಿದೆ.

 ‘ಇದೀಗ ಬ್ರೆಜಿಲ್‌ ತುಂಬಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಅನೇಕ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು ಶೇ 90ಕ್ಕಿಂತಲೂ ಹೆಚ್ಚು ತುಂಬಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾರಿಯಾ ವ್ಯಾನ್ ಕೆರ್ಖೋವ್ ಕಳೆದ ಗುರುವಾರ ಹೇಳಿದ್ದರು.

ಭಾರತದಲ್ಲೂ ಸೋಮವಾರ ಕೋವಿಡ್‌ 19 ಸೋಂಕು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಅಮೆರಿಕದ ನಂತರ ಒಂದು ದಿನದಲ್ಲಿ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ ಎರಡನೇ ರಾಷ್ಟ್ರವೆನಿಸಿದೆ. ಭಾರತದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿ ಹೋಗಿವೆ. ಆ ರಾಜ್ಯದಲ್ಲಿ ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚಲು ಪ್ರಾರಂಭಿಸಲಾಗಿದೆ.

*
ಇದೀಗ ಬ್ರೆಜಿಲ್‌ ತುಂಬಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಅನೇಕ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು ಶೇ 90ಕ್ಕಿಂತಲೂ ಹೆಚ್ಚು ತುಂಬಿವೆ.
-ಮಾರಿಯಾ ವ್ಯಾನ್ ಕೆರ್ಖೋವ್, ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು