ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬರ್ಬರ ಹತ್ಯೆ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ (53) ಅವರನ್ನು ಬುಧವಾರ ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿದೆ. ಈ ವೇಳೆ ಮೊಯಿಸ್ ಅವರ ಪತ್ನಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತ ಮಾಹಿತಿಯನ್ನು ಮಧ್ಯಂತರ ಪ್ರಧಾನಿ ಕ್ಲೌಡ್ ಜೋಸೆಫ್ ಪ್ರಕಟಿಸಿದ್ದಾರೆ. ತಾನು ದೇಶದ ಉಸ್ತುವಾರಿ ವಹಿಸಿಕೊಂಡಿರುವುದಾಗಿ ಜೋಸೆಫ್ ಹೇಳಿದ್ದಾರೆ.
ಸಾರ್ವಜನಿಕರು ಶಾಂತವಾಗಿರಬೇಕು ಎಂದು ಒತ್ತಾಯಿಸಿರುವ ಅವರು, ಪೊಲೀಸ್ ಮತ್ತು ಸೇನೆಯು ಜನರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.
‘ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯನ್ನು ಮಾತನಾಡುವ ವಿದೇಶಿಯರು ಅಧ್ಯಕ್ಷರನ್ನು ಅವರ ಮನೆಯಲ್ಲಿ ಹತ್ಯೆ ಮಾಡಿದ್ದಾರೆ’ ಎಂದು ಜೋಸೆಫ್ ಹೇಳಿದ್ದಾರೆ.
ಅಮೆರಿಕ ಖಂಡದಲ್ಲೇ ಅತ್ಯಂತ ಬಡ ರಾಷ್ಟ್ರವಾಗಿರುವ ಹೈಟಿಯಲ್ಲಿ 2017ರಿಂದ ಮೊಯಿಸ್ ಅವರು ಆಡಳಿತ ನಡೆಸುತ್ತಿದ್ದರು. 2010ರಲ್ಲಿ ಸಂಭವಿಸಿದ ಭೂಕಂಪ ಮತ್ತು 2016ರಲ್ಲಿ ಸಂಭವಿಸಿದ್ದ ಮ್ಯಾಥ್ಯೂ ಚಂಡಮಾರುತಗಳು ದೇಶವನ್ನು ಜರ್ಜರಿತಗೊಳಿಸಿದ್ದವು.
ರಾಜಕೀಯ ಅಸ್ಥಿರತೆಯೂ ಕಾಡಿದ್ದರಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೇಗುದಿಗಳು ಅಧಿಕವಾಗಿದ್ದವು. ಅವರ ಅಧಿಕಾರ ಅವಧಿ ಈ ವರ್ಷದ ಫೆಬ್ರುವರಿಯಲ್ಲೇ ಅಂತ್ಯವಾಗಿದೆ, ಹೀಗಾಗಿ ಮೊಯಿಸ್ ಅವರು ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.