ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಬಡ ವಿದ್ಯಾರ್ಥಿಗಳ ನೆರವಿಗೆ 1 ಲಕ್ಷ ಡಾಲರ್‌ ಸಂಗ್ರಹಿಸಿದ ಹಿಂದೂ ಸಂಸ್ಥೆ

Last Updated 24 ನವೆಂಬರ್ 2020, 9:43 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಕಡಿಮೆ ಆದಾಯದ ಅಮೆರಿಕದ ಯುವಕರಿಗೆ ವೃತ್ತಿಪರ ವಿದ್ಯಾರ್ಥಿವೇತನ ಒದಗಿಸಲು, ಲಾಭರಹಿತ ಉದ್ದೇಶದ ಹಿಂದೂ ಸಂಸ್ಥೆಯೊಂದು ವರ್ಚುವಲ್‌ ಕಾರ್ಯಕ್ರಮ ಆಯೋಜಿಸಿ 1,00,000 ಅಮೆರಿಕನ್‌ ಡಾಲರ್ (₹73.97 ಲಕ್ಷ)‌ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

'ಹಿಂದೂ ಚಾರಿಟೀಸ್ ಫಾರ್ ಅಮೆರಿಕ' (ಎಚ್‌ಸಿ4ಎ) ಸಂಸ್ಥೆ 'ಸ್ವಾವಲಂಬನೆಗಾಗಿ ಶಿಕ್ಷಣ' ಎಂಬ ಹೆಸರಿನಲ್ಲಿ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ನೂರಾರು ಅಮೆರಿಕನ್ನರು, ಭಾರತೀಯ ಸೆಲೆಬ್ರೆಟಿಗಳು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.

ಸೆಲೆಬ್ರೆಟಿ ಭಾಷಣಕಾರರಲ್ಲಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಮತ್ತು ಗ್ರ್ಯಾಮಿ ನಾಮನಿರ್ದೇಶಿತ ಗೀತರಚನೆಕಾರ ಸಾವನ್ ಕೊಟೆಚಾ ಇದ್ದರು.

'ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌'ನ ಪ್ರೊಫೆಸರ್ ಕಸ್ತೂರಿ ರಂಗನ್, 'ವೆಂಚರ್ ಕ್ಯಾಪಿಟಲಿಸ್ಟ್' ಮತ್ತು ಉದ್ಯಮಿ ದೇಶ್ ದೇಶಪಾಂಡೆ ಮತ್ತು ಐಯೋಟಾಸ್ಕ್‌ನ ವ್ಯವಸ್ಥಾಪಕ ಪಾಲುದಾರರಾದ ಗೀತಾಂಜಲಿ ಸ್ವಾಮಿ ಸೇರಿದಂತೆ ಹಲವು ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದರು.

ಶ್ರೀಮಂತರ ರಾಷ್ಟ್ರವೊಂದರ ಆರ್ಥಿಕ ದುರ್ಬಲರಿಗೆ ನೆರವು ನೀಡಿದ್ದಕ್ಕಾಗಿ ಅನುಪಮ್‌ ಖೇರ್‌ ಅವರು ದಾನಿಗಳನ್ನು ಅಭಿನಂದಿಸಿದರು.

'ತಾನು ಸೇವೆ ಸಲ್ಲಿಸುತ್ತಿರುವ ಸಮುದಾಯಕ್ಕೆ ಸಂಪೂರ್ಣ ಪ್ರಮಾಣದ ಸಮರ್ಪಣಾ ಭಾವ ಹೊಂದಿರುವ, ಪ್ರೋತ್ಸಾಹಕರರೊಂದಿಗೆ ಪಾರದರ್ಶಕತೆ ಕಾಯ್ದುಕೊಂಡಿರುವ, ಸೇವೆ ಮಾಡಲು ಪರಿಣಾಮಕಾರಿ ಮತ್ತು ಅರ್ಥಪೂರ್ಣ ಮಾರ್ಗಗಳನ್ನು ಕಂಡುಕೊಂಡಿರುವ 'ಎಚ್‌ಸಿ4ಎ' ಸಂಸ್ಥೆಯ ಸ್ವಯಂಸೇವಕ ನಡೆಯು ಮಾದರಿಯಾಗುವಂಥದ್ದು ಎಂದು ಆಸ್ಟಿನ್ ಮೇಯರ್ ಸ್ಟೀವ್ ಆಡ್ಲರ್ ಕೊಂಡಾಡಿದರು.

'ಅಮೆರಿಕದಲ್ಲಿಯೂ ಬಡತನವಿದೆ. ಅಮೆರಿಕದಲ್ಲಿ ಅಗತ್ಯವಿರುವವರಿಗೆ ಸೇವೆ ಸಲ್ಲಿಸಲು ಭಾರತೀಯ ಸಮುದಾಯವು ಒಂದಾಗಿ ಕೆಲಸ ಮಾಡಿದರೆ ಅದು ತುಂಬಾ ಉತ್ತಮ ಕೆಲಸ ಎಂದು ನಾನು ಭಾವಿಸಿದ್ದೇನೆ' ಎಂದು 'ಎಚ್‌ಸಿ4ಎ' ಸಂಸ್ಥೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಹರೀಶ್ ಕೊಟೆಚಾ ಹೇಳಿದರು. ಭಾರತ ಮೂಲದ ಹರೀಶ್‌ ಕೊಟೆಚಾ ಅವರು 1971 ರಲ್ಲಿ ಉಗಾಂಡಾದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು.

'ಎಚ್‌ಸಿ4ಎ' ಸಂಸ್ಥೆಯು ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಸಾಮಗ್ರಿಗಳನ್ನು ಮತ್ತು ಸಾಂಪ್ರದಾಯಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಬಡ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ಇಂಟರ್ನೆಟ್ ಸಂಪರ್ಕವನ್ನು ಪಡೆಯಲೂ ಸಂಸ್ಥೆ ನೆರವು ನೀಡಿದೆ.

ಸಂಸ್ಥೆ ಸಂಸ್ಥಾಪಕ ಹರೀಶ್‌ ಕೊಟೆಚಾ ಅವರಿಗೆ ಅಕ್ಟೋಬರ್‌ನಲ್ಲಿ ಎನ್‌ಎಇಎಚ್‌ಸಿವೈ (ಮನೆಯಿಲ್ಲದ ಮಕ್ಕಳ ಮತ್ತು ಯುವಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಸಂಘ)ದಿಂದ 'ಸಾಂಡ್ರಾ ನೀಸ್' ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಕೊಟೆಚಾ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT