ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದೇಗುಲ ಧ್ವಂಸ: ಪೊಲೀಸ್‌ ಇಲಾಖೆಗೆ ಪಾಕ್‌ ಮುಖ್ಯ ನ್ಯಾಯಮೂರ್ತಿ ಛೀಮಾರಿ

Last Updated 6 ಆಗಸ್ಟ್ 2021, 11:43 IST
ಅಕ್ಷರ ಗಾತ್ರ

ಇಸ್ಲಾಮಾಬಾದ್:‌ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗುಲ್ಜರ್‌ ಅಹ್ಮದ್‌ ಅವರು ಪೊಲೀಸ್‌ ಇಲಾಖೆಗೆ ಛೀಮಾರಿ ಹಾಕಿದ್ದಾರೆ. ಅಷ್ಟಲ್ಲದೇ, ಕಿಡಿಗೇಡಿಗಳನ್ನು ಬಂಧಿಸುವಂತೆ ಆದೇಶಿಸಿದ್ದಾರೆ.

ಪಾಕಿಸ್ತಾನದ ಭೋಂಗ್ ಪಟ್ಟಣದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಸಂಬಂಧಿಸಿದಂತೆ ಹಿಂದೂ ಕೌನ್ಸಿಲ್‌ನ ಮುಖ್ಯಸ್ಥ ರಮೇಶ್‌ ಕುಮಾರ್‌ ಅವರೊಂದಿಗೆ ನ್ಯಾ. ಗುಲ್ಜಾರ್‌ ಸಭೆ ನಡೆಸಿದರು. ಬಳಿಕ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ನೋಟಿಸ್‌ ಜಾರಿ ಮಾಡಿದ್ದಾರೆ. ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್‌ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ರಹೀಂ ಯಾರ್‌ ಖಾನ್‌ ಜಿಲ್ಲೆಯಲ್ಲಿರುವ ದೇವಾಲಯದ ಮೇಲೆ ಉದ್ರಿಕ್ತ ಗುಂಪೊಂದು ಬುಧವಾರ ದಾಳಿ ಮಾಡಿತ್ತು. ಹಿಂದೂ ಸಮುದಾಯದ ನಾಯಕ ಮತ್ತು ಪಾಕಿಸ್ತಾನದಲ್ಲಿ ಶಾಸಕರೂ ಆಗಿರುವ ರಮೇಶ್‌ ಕುಮಾರ್‌ ಅವರು ಘಟನೆಗೆ ಸಂಬಂಧಿಸಿದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಕಿಡಿಗೇಡಿಗಳ ಗುಂಪು ದಾಳಿ ನಡೆಸುತ್ತಿರುವುದು, ವಿಗ್ರಹಗಳು ಮತ್ತು ದೇಗುಲದ ವಿನ್ಯಾಸವನ್ನು ನಾಶ ಮಾಡುತ್ತಿರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.

ದೇವಾಲಯದ ಮೇಲಿನ ದಾಳಿಯನ್ನು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರೂ ಗುರುವಾರ ಖಂಡಿಸಿದ್ದರು.

ʼಭೋಂಗ್‌ನಲ್ಲಿರುವ ಗಣೇಶ ಮಂದಿರದ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಎಲ್ಲ ತಪ್ಪಿತಸ್ಥರನ್ನು ಬಂಧಿಸುವಂತೆ ಮತ್ತು ಪ್ರಕರಣದಲ್ಲಿ ಪೊಲೀಸರ ಬೇಜವಾಬ್ದಾರಿ ಕಂಡುಬಂದರೆ ಕ್ರಮ ಕೈಗೊಳ್ಳುವಂತೆ ಪಂಜಾಬ್‌ ಪೊಲೀಸ್‌ ಮುಖ್ಯಸ್ಥರಿಗೆ ಈಗಾಗಲೇ ಸೂಚಿಸಿದ್ದೇನೆ. ದೇವಾಲಯದ ಪುನರ್‌ನಿರ್ಮಾಣ ಕಾರ್ಯವನ್ನು ಸರ್ಕಾರ ಕೈಗೊಳ್ಳಲಿದೆʼ ಎಂದು ಟ್ವೀಟ್‌ ಮಾಡಿದ್ದರು.

ಇದೇ ವಿಚಾರವಾಗಿ ಭಾರತವೂ ಪಾಕಿಸ್ತಾನಕ್ಕೆ ಸಮನ್ಸ್‌ ಜಾರಿಮಾಡಿದೆ. ಮಾತ್ರವಲ್ಲದೆ, ಪಾಕಿಸ್ತಾನದ ರಾಜತಾಂತ್ರಿಕರನ್ನು ಕರೆಸಿ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT