ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಕಾರ್ಯಸೂಚಿ: ಭಾರತ–ಅಮೆರಿಕ ಜಂಟಿ ಸಮಾಲೋಚನೆ

Last Updated 30 ಅಕ್ಟೋಬರ್ 2020, 7:03 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಬುಧವಾರ ಮತ್ತು ಗುರುವಾರ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಕಾರ್ಯಸೂಚಿ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿವೆ.

ಈ ವೇಳೆ ಉಭಯ ರಾಷ್ಟ್ರಗಳು, ತಾವುಪ್ರಜಾಪ್ರಭುತ್ವ, ಬಹುತ್ವ, ನಿಯಮ ಆಧಾರಿತ ಅಂತರರಾಷ್ಟ್ರೀಯ ಆದೇಶಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಲು ಸಮ್ಮತಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವರ್ಷದ ಆರಂಭದಲ್ಲಿ ಭಾರತ, ಮೆಕ್ಸಿಕೊ ಮತ್ತು ಐರ್ಲ್ಯಾಂಡ್‌ ರಾಷ್ಟ್ರಗಳನ್ನು ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ವರ್ಷ ಜನವರಿಯಿಂದ ಇವುಗಳ ಕಾರ್ಯನಿರ್ವಹಣೆ ಆರಂಭವಾಗಲಿದೆ.

ಮುಂದಿನ ವರ್ಷ ವಿಶ್ವಸಂಸ್ಥೆಯಲ್ಲಿ ಪ್ರಮುಖ ಜಾಗತಿಕ ವಿಚಾರಗಳು ಚರ್ಚೆಗೆ ಬಂದಾಗ ಭಾರತ ಮತ್ತು ಅಮೆರಿಕ ಸಂಯೋಜಿತ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ಈಗ ಸಮಾಲೋಚನೆ ನಡೆಸಿವೆ.

‘ಅಮೆರಿಕ ಮತ್ತು ಭಾರತವು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಸೂಚಿ ಮತ್ತು ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದವು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ತಾತ್ಕಾಲಿಕ ಸದಸ್ಯತ್ವದ ಅವಧಿ ಮುಂದಿನ ವರ್ಷ ಆರಂಭಗೊಳ್ಳಲಿದ್ದು, ಈ ಅವಧಿಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ’ ಎಂದ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಸಮಾಲೋಚನೆ ನಡೆದಿದೆ. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿನಯ್‌ ಕುಮಾರ್‌ ಅವರು ಭಾರತದ ನಿಯೋಗದ ನೇತೃತ್ವವನ್ನು ವಹಿಸಿದ್ದರು. ಇದರಲ್ಲಿ ವಿದೇಶಾಂಗ ಸಚಿವಾಲಯ, ಭಾರತದ ಶಾಶ್ವತ ಮಿಷನ್‌, ವಾಷಿಂಗ್ಟನ್‌ನ ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.

ಅಮೆರಿಕದ ನಿಯೋಗದ ನೇತೃತ್ವವನ್ನು ಅಂತರರಾಷ್ಟ್ರೀಯ ವ್ಯವಹಾರಗಳ ಇಲಾಖೆಯ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಪಮೇಲಾ ಡಿ ಪ್ರೈಯರ್ ಅವರು ವಹಿಸಿದ್ದರು. ಇದರಲ್ಲಿ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT