ಕೋವಿಡ್ಗೆ ಬೆದರಿ 3 ತಿಂಗಳು ವಿಮಾನ ನಿಲ್ದಾಣದಲ್ಲೇ ವಾಸ!

ಲಾಸ್ ಏಂಜಲೀಸ್: ಕೋವಿಡ್–19ಕ್ಕೆ ಬೆದರಿ ಚಿಕಾಗೊದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾರಿಗೂ ತಿಳಿಯದಂತೆ ಮೂರು ತಿಂಗಳು ವಾಸಿಸಿದ್ದ 36 ವರ್ಷದ ಭಾರತೀಯ ಸಂಜಾತರೊಬ್ಬರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಉಪನಗರದಲ್ಲಿ ವಾಸಿಸುತ್ತಿರುವ ಆದಿತ್ಯ ಸಿಂಗ್, ಅ.19ರಿಂದ ವಿಮಾನ ನಿಲ್ದಾಣದಲ್ಲೇ ವಾಸವಾಗಿದ್ದರು. ಅವರನ್ನು ಎರಡನೇ ಟರ್ಮಿನಲ್ ಸಮೀಪದಿಂದ ಶನಿವಾರ ಬಂಧಿಸಲಾಗಿದೆ ಎಂದು ಚಿಕಾಗೊ ಟ್ರಿಬ್ಯೂನ್ ವರದಿ ಮಾಡಿದೆ.
ಲಾಸ್ ಏಂಜಲೀಸ್ನಿಂದ ಒಹೇರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಂಗ್, ವಿಮಾನ ನಿಲ್ದಾಣದ ಭದ್ರತಾ ವಲಯದಲ್ಲಿ ವಾಸವಾಗಿದ್ದರು. ಪ್ರಯಾಣಿಕರು ನೀಡುತ್ತಿದ್ದ ಹಣ ಹಾಗೂ ಇತರೆ ವಸ್ತುಗಳನ್ನು ಪಡೆದು ಬದುಕುತ್ತಿದ್ದರು. ಯುನೈಟೆಡ್ ಏರ್ಲೈನ್ಸ್ ಸಿಬ್ಬಂದಿಯೊಬ್ಬ ಸಿಂಗ್ ಅವರ ಬಳಿ ಗುರುತಿನ ಚೀಟಿ ಕೇಳಿದ ಸಂದರ್ಭದಲ್ಲಿ ಅವರು, ಗುರುತಿನ ಚೀಟಿಯೊಂದನ್ನು ನೀಡಿದ್ದರು.
ಆ ಗುರುತಿನ ಚೀಟಿ ಕಾರ್ಯಾಚರಣೆ ವ್ಯವಸ್ಥಾಪಕರದ್ದಾಗಿತ್ತು. ಕಳೆದ ಅಕ್ಟೋಬರ್ನಲ್ಲಿ ಗುರುತಿನ ಚೀಟಿ ಕಳೆದು ಹೋಗಿರುವುದಾಗಿ ಸಹಾಯಕ ರಾಜ್ಯ ಅಟಾರ್ನಿ ಕ್ಯಾಥಲೀನ್ ಹಾಗರ್ಟಿ ಹೇಳಿದರು.
ಕೋವಿಡ್ ಕಾರಣದಿಂದಾಗಿ ಮನೆಗೆ ತೆರಳಲು ಭಯವಿತ್ತು ಎಂದು ಸಿಂಗ್ ಹೇಳಿರುವುದಾಗಿ ಅವರು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.