ಮಂಗಳವಾರ, ಅಕ್ಟೋಬರ್ 27, 2020
22 °C
ಬಲವಂತವಾಗಿ ಕಾರ್ಮಿಕರನ್ನು ದುಡಿಸಿಕೊಂಡ ಆರೋಪ

ಕಾರ್ಮಿಕರ ಕಾನೂನು ಉಲ್ಲಂಘನೆ: ಭಾರತ ಮೂಲದ ಅಮೆರಿಕ ಮಹಿಳೆಗೆ 15 ವರ್ಷ ಸೆರೆವಾಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕಡಿಮೆ ವೇತನ ನೀಡಿ, ಹೆಚ್ಚು ಸಮಯ ದುಡಿಸಿಕೊಳ್ಳುವ ಮೂಲಕ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿರುವ ಭಾರತ ಮೂಲಕ ಅಮೆರಿಕ ಮಹಿಳೆಗೆ ನ್ಯಾಯಾಲಯ 15 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದೆ.

ಕಾರ್ಮಿಕರನ್ನು ನಿಯಮ ಮೀರಿ ದುಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಹೊತ್ತಿರುವವರು ಶರ್ಮಿಷ್ಠ ಬರೈ ಮತ್ತು ಪತಿ ಸತೀಶ್ ಕರ್ತನ್ ದಂಪತಿ.

ಕಳೆದ ಮಾರ್ಚ್‌ ತಿಂಗಳಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದೆ.  ಮಾರ್ಚ್‌ 14,2019ರಂದು ನಡೆದ ವಿಚಾರಣೆಯಲ್ಲಿ ಫೆಡರಲ್‌ ನ್ಯಾಯಾಲಯ, ಈ ದಂಪತಿಯನ್ನು ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುವ ಸಂಚು ರೂಪಿಸಿರುವ ವಿಚಾರದಲ್ಲಿ ತಪ್ಪಿತಸ್ಥರೆಂದು ತೀರ್ಮಾನಿಸಿತು. ಈಗ ಶರ್ಮಿಷ್ಠ ಅವರಿಗೆ ಸೆರೆವಾಸದ ಶಿಕ್ಷೆ ವಿಧಿಸಿದೆ. ಸತೀಶ್ ಕರ್ತನ್‌ ಅವರಿಗೆ ಅಕ್ಟೋಬರ್ 22ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ.

‘ಯುನೈಟೆಡ್ ಸ್ಟೇಟ್ಸ್ 150 ವರ್ಷಗಳ ಹಿಂದೆ ಗುಲಾಮಗಿರಿ ಮತ್ತು ಅನುಮತಿ ಇಲ್ಲದ ದಾಸ್ಯ ಪದ್ಧತಿಯನ್ನು ರದ್ದುಗೊಳಿಸಿದೆ. ಆದರೂ ಅಮಾನವೀಯವಾಗಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಮಾನವ ಕಳ್ಳಸಾಗಾಣೆದಾರರು ಈ ಆಧುನಿಕ ಯುಗದಲ್ಲಿ ಗುಲಾಮಿ ಕಾರ್ಮಿಕರನ್ನು ತಯಾರಿಸುವ ಮಾಸ್ಟರ್ಸ್‌ಗಳಾಗಿದ್ದು, ಅವರು ತಮ್ಮ ಜತೆಗಿರುವ ಮನುಷ್ಯರನ್ನೇ ಲಾಭ ಮತ್ತು ಇನ್ನಿತರ ಉದ್ದೇಶಗಳಿಗಾಗಿ ಶೋಷಿಸುತ್ತಾರೆ‘ ಎಂದು ಸಹಾಯಕ ಅಟಾರ್ನಿ ಜನರಲ್‌ ಎರಿಕ್ ಡ್ರೀಬ್ಯಾಂಡ್ ಹೇಳಿದ್ದಾರೆ.

‘ಆರೋಪಿ ಶರ್ಮಿಷ್ಠ– ಸತೀಶ್ ದಂಪತಿ, ಕಾರ್ಮಿಕರಿಗೆ ಕನಿಷ್ಠ ವೇತನ ನೀಡಿ, ನಿತ್ಯ 18 ಗಂಟಗಳವರೆಗೆ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದರು. ಜತೆಗೆ, ಬೆದರಿಕೆ, ಹಿಂಸಾಚಾರ ಮಾಡುತ್ತಿದ್ದರು. ಇದರಿಂದ ಸಂತ್ರಸ್ತ ಕಾರ್ಮಿಕರ ವೈಯಕ್ತಿಕ ಹಕ್ಕುಗಳು ಉಲ್ಲಂಘನೆಯಾಗಿದೆ‘ ಎಂದು ಎರಿಕ್ ಹೇಳಿದ್ದಾರೆ.

ಪ್ರಕರಣದ ವಿಚಾರಣೆ ವೇಳೆ ಪ್ರಸ್ತುತ ಪಡಿಸಿದ ಸಾಕ್ಷ್ಯಗಳ ಪ್ರಕಾರ,  ಫೆಬ್ರವರಿ 2014 ಮತ್ತು ಅಕ್ಟೋಬರ್ 2016 ರ ನಡುವೆ, ಕರ್ತನ್ ಮತ್ತು ಶರ್ಮಿಷ್ಠ ದಂಪತಿ ಕ್ಯಾಲಿಫೋರ್ನಿಯಾದ ಸ್ಟಾಕ್‌ಟನ್‌ನಲ್ಲಿರುವ ತಮ್ಮ ಮನೆಯಲ್ಲಿ ಮನೆ ಕೆಲಸಕ್ಕಾಗಿ ವಿದೇಶಿ ಕೆಲಸಗಾರರನ್ನು ಇಟ್ಟುಕೊಂಡಿದ್ದರು.  ಮನೆಗೆಲಸದವರಿಗಾಗಿ  ಇಂಟರ್ನೆಟ್‌ ಮತ್ತು ಭಾರತ ಮೂಲದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು, ಅದರಲ್ಲಿ ಉದ್ಯೋಗದ ವೇತನ ಮತ್ತು ನಿಬಂಧನೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ವಿಧಾನದಲ್ಲಿ ಕೆಲಸಕ್ಕೆ ಸೇರಿಸಿಕೊಂಡವರಿಗೆ ದಂಪತಿ ಸರಿಯಾಗಿ ವೇತನ ನೀಡುತ್ತಿರಲಿಲ್ಲ. ಕಾರ್ಮಿಕರನ್ನು ಹೊರಗಡೆ ಹೋಗದಂತೆ ನಿರ್ಬಂಧ ವಿಧಿಸಿದ್ದರು. ಜತೆಗೆ, ಅವರಿಗೆ ಬೆದರಿಕೆ ಹಾಕುವ ಜತೆಗೆ, ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂಬ ಆರೋಪವೂ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು