ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಅಮೆರಿಕನ್ನರಿಂದ ‘ಛಠ್ ಪೂಜೆ‘

ನದಿ ದಂಡೆಗಳಲ್ಲಿ ಪೂಜೆ; ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ಲ್ಲಿ ಆಚರಣೆ ವೀಕ್ಷಣೆ
Last Updated 22 ನವೆಂಬರ್ 2020, 6:08 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ನೆೆಲೆಸಿರುವ ಉತ್ತರ ಭಾರತ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಭಾರತೀಯ ಮೂಲದವರು ಸೂರ್ಯ ದೇವರನ್ನು ಪೂಜಿಸುವ ಹಿಂದೂಗಳ ಪ್ರಸಿದ್ಧ ಹಬ್ಬವಾದ ‘ಛಠ್‌ ಪೂಜೆ‘ಯನ್ನು ಅಮೆರಿಕದ ವಿವಿಧ ಭಾಗಗಳಲ್ಲಿ ಆಚರಿಸಿದರು.

ವಿವಿಧ ನದಿ ದಂಡೆಗಳು, ಕೊಳಗಳ ಸಮೀಪದಲ್ಲಿ ನಾಲ್ಕು ದಿನಗಳಿಂದ ನಡೆದ ಈ ಸಾಂಪ್ರದಾಯಿಕ ಹಬ್ಬ ಶನಿವಾರ ಮುಂಜಾನೆ ಸೂರ್ಯೋದಯದೊಂದಿಗೆ ಮುಕ್ತಾಯವಾಯಿತು.

ವರ್ಜೀನಿಯಾದಲ್ಲಿರುವ ಐತಿಹಾಸಿಕ ಪೊಟೊಮ್ಯಾಕ್ ನದಿಯ ದಡದಿಂದ ನ್ಯೂಜೆರ್ಸಿಯ ಸರೋವರದವರೆಗೆ ಹಾಗೂ ಮನೆಗಳಲ್ಲೇ ಇರುವ ಕೊಳಗಳ ಬಳಿಯಲ್ಲಿ ಭಾರತೀಯ ಸಮುದಾಯದವರು ಛಠ್‌ ಪೂಜೆ ನೆರವೇರಿಸಿದರು. ‘ಕೋವಿಡ್‌ 19‘ ಸಾಂಕ್ರಾಮಿಕದ ಕಾರಣ, ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸದಸ್ಯರು ಪಾಲ್ಗೊಂಡಿರಲಿಲ್ಲ.

‘ಕೋವಿಡ್‌19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದಕ್ಕಾಗಿ 25 ಮಂದಿ ಕುಟುಂಬ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪೊಟೊಮ್ಯಾಕ್ ನದಿಯ ದಡದಲ್ಲಿ ನಡೆದ ಪೂಜೆಯನ್ನು ಜನರು ದೂರದಿಂದಲೇ ನಿಂತು ವೀಕ್ಷಿಸಿದರು‘ ಎಂದು ಕೃಪ ಸಿಂಗ್ ಹೇಳಿದರು. ಸಾಫ್ಟ್‌ವೇರ್‌ ಎಂಜಿನಿಯರ್ ಕೃಪ ಅವರು ಪತ್ನಿ ಅನಿತಾ ಅವರೊಂದಿಗೆ 2006ರಿಂದಲೂ ಪೊಟೊಮ್ಯಾಕ್ ನದಿಯ ದಂಡೆಯ ಮೇಲೆ ನಡೆಯುವ ಛಠ್ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶುಕ್ರವಾರ ಸೂರ್ಯಾಸ್ತದ ಪೂಜೆ ಮತ್ತು ಶನಿವಾರ ಸೂರ್ಯೋದಯದ ಪೂಜಾ ಕಾರ್ಯಕ್ರಮಗಳನ್ನು ಝೂಮ್‌ ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ನೂರಾರು ಭಾರತೀಯ-ಅಮೆರಿಕನ್ನರು ಈ ಜಾಲತಾಣಗಳ ಮೂಲಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಈ ಛಠ್‌ ಪೂಜೆಯನ್ನು ಹೆಚ್ಚಾಗಿ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಜನರು ಉಪವಾಸ ಮಾಡುತ್ತಾರೆ. ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಆರೋಗ್ಯ, ಆಯಸ್ಸು ಕೊಟ್ಟು, ಭೂಮಿಯ ಮೇಲೆ ಜೀವಿಸಲು ಅವಕಾಶ ನೀಡಿದ್ದಕ್ಕಾಗಿ ಸೂರ್ಯ ದೇವರನ್ನು ಪೂಜಿಸಿ, ಧನ್ಯವಾದ ಅರ್ಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT