ಶನಿವಾರ, ಏಪ್ರಿಲ್ 10, 2021
32 °C

ಭಾರತೀಯ ನವೋದ್ಯಮಿಗೆ ವಿಶ್ವಸಂಸ್ಥೆಯ ‘ಯಂಗ್‌ ಚಾಂಪಿಯನ್ಸ್ ಆಫ್ ಅರ್ಥ್‌’ ಪ್ರಶಸ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪರಿಸರ ವಿಭಾಗವು ನೀಡುವ ಪ್ರತಿಷ್ಠಿತ ‘ಯಂಗ್‌ ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌–2020’ ಪ್ರಶಸ್ತಿಗೆ ಭಾರತದ ನವೋದ್ಯಮಿಯೊಬ್ಬರು ಆಯ್ಕೆಯಾಗಿದ್ದಾರೆ. ಒಟ್ಟು ಏಳು ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ತಲಾ ₹ 7.35 ಲಕ್ಷ ನಗದು ಒಳಗೊಂಡಿದೆ.

ಅನ್ವೇಷಣೆ ಹಾಗೂ ಮಹಾತ್ತ್ವಾಕಾಂಕ್ಷೆಯ ಕ್ರಮಗಳ ಮೂಲಕ ಪರಿಸರ ಮಾಲಿನ್ಯ ತಡೆಗೆ  ಪರಿಹಾರ ಕಂಡುಹುಡುಕಿದವರಿಗೆ ವಿಶ್ವಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ. ‘ಸಾಮಾಜಿಕ ಉದ್ಯಮ ‘ತಕಚರ್‌’ ಸಂಸ್ಥಾಪಕ, ಎಂಜಿನಿಯರ್‌ ಪದವೀಧರ 29 ವರ್ಷದ ವಿದ್ಯುತ್‌ ಮೋಹನ್‌ ಈ ಪ್ರಶಸ್ತಿಗೆ ಪಾತ್ರರಾದವರು.

‘ಕೃಷಿ ತ್ಯಾಜ್ಯವನ್ನು ಸುಡುವುದರ ಬದಲು ಅದನ್ನು ಇಂಧನ, ಗೊಬ್ಬರ, ಮೌಲ್ಯವರ್ಧಿತ ರಾಸಾಯನಿಕಗಳಾಗಿ ಮಾರ್ಪಡಿಸಿ, ರೈತರಿಗೆ ಹೆಚ್ಚುವರಿ ಆದಾಯವನ್ನು ಬರುವ ನವೋದ್ಯಮವನ್ನು ಪ್ರಾರಂಭಿಸಿದ್ದಾರೆ’ ಎಂದು ವಿಶ್ವಸಂಸ್ಥೆ ಪರಿಸರ ಯೋಜನೆಯು (ಯುಎನ್‌ಇಪಿ) ಪ್ರಕಟಣೆಯಲ್ಲಿ ತಿಳಿಸಿದೆ. 

‘ಭತ್ತದ ಹೊಟ್ಟು ಹಾಗೂ ಹುಲ್ಲು, ತೆಂಗಿನ ಚಿಪ್ಪು ಮುಂತಾದ ಕೃಷಿ ತ್ಯಾಜ್ಯಗಳನ್ನು ಕಲ್ಲಿದ್ದಲಾಗಿ ಪರಿವರ್ತಿಸಿ ತ್ಯಾಜ್ಯ ಸುಡುವಿಕೆ ತಪ್ಪಿಸುತ್ತಿದ್ದಾರೆ. 2018ರಲ್ಲಿ ಮೋಹನ್‌ ಹಾಗೂ ಸಹಸಂಸ್ಥಾಪಕ ಕೆವಿನ್‌ ಕುಂಗ್‌ ಪ್ರಾರಂಭಿಸಿದ ಈ ಉದ್ಯಮ, 4,500ಕ್ಕೂ ಅಧಿಕ ರೈತರೊಂದಿಗೆ ಕಾರ್ಯನಿರ್ವಹಿಸಿದ್ದು, 3 ಸಾವಿರ ಟನ್‌ ಕೃಷಿ ತ್ಯಾಜ್ಯ ಪರಿವರ್ತಿಸಿದೆ’.

‘ಕೃಷಿ ತ್ಯಾಜ್ಯ ಸುಡುವುದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಮೋಹನ್‌ ಅವರ ನವೋದ್ಯಮವು, ಇಂಥ ಮಾಲಿನ್ಯಕ್ಕೆ ಕಡಿವಾಣ ಹಾಕುವುದರ ಮುಖಾಂತರ ರೈತರಿಗೆ ಕೃಷಿ ತ್ಯಾಜ್ಯದಿಂದಲೂ ಆದಾಯವನ್ನು ತರುತ್ತಿದೆ’ ಎಂದು ಯುಎನ್‌ಇಪಿ ಇಂಧನ ವಿಭಾಗದ ಮುಖ್ಯಸ್ಥರಾದ ಮಾರ್ಕ್‌ ರಡ್ಕಾ ತಿಳಿಸಿದರು.

ಕೀನ್ಯಾದ ಜಾಂಬಿ ಮಟೇ, ಚೀನಾದ ಷಿಯಾಯುನ್‌ ರೆನ್‌, ಗ್ರೀಕ್‌ನ ಲೆಫ್ಟರಿಸ್‌ ಅರಪಕಿಸ್‌, ಪೆರುವಿನ ಮ್ಯಾಕ್ಸ್‌ ಹಿಂಡಲ್ಗೊ ಕ್ವಿಂಟೊ, ಅಮೆರಿಕದ ನಿರಿಯಾ ಅಲಿಸಿಯಾ ಗ್ರೇಸಿಯಾ, ಕುವೈಟ್‌ನ ಫಾತಿಮಾ ಅಲ್‌ಜೀಲಾಜೀಲಾ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಬಡ ಸಮುದಾಯಗಳಿಗೆ ಆದಾಯದ ಅವಕಾಶಗಳನ್ನು ಒದಗಿಸುವುದು ಹಾಗೂ ಇಂಧನದ ಲಭ್ಯತೆ ಸೃಷ್ಟಿಸುವುದು ನನ್ನ ಗುರಿಯಾಗಿತ್ತು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಹವಾಮಾನ ಬದಲಾವಣೆ ಎರಡನ್ನೂ ಸಮಾನವಾಗಿ ಹೊಂದಿಸಿಕೊಂಡು ಹೋಗುವ ಕಠಿಣ ಪ್ರಶ್ನೆಗೆ ಇಂಥ ಆಲೋಚನೆಗಳೇ ಉತ್ತರವನ್ನು ನೀಡುತ್ತದೆ ಎಂಬುವುದು ಮೋಹನ್‌ ಅವರ ಅಭಿಪ್ರಾಯ’ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು