ಶನಿವಾರ, ಸೆಪ್ಟೆಂಬರ್ 26, 2020
26 °C

ಶ್ರೀಲಂಕಾ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಅಧಿಕಾರ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ಶ್ರೀಲಂಕಾದ ಪ್ರಧಾನಿಯಾಗಿ ಪುನರಾಯ್ಕೆಯಾದ 74 ವರ್ಷದ ಮಹಿಂದಾ ರಾಜಪಕ್ಸ ಭಾನುವಾರ ಇಲ್ಲಿನ ಐತಿಹಾಸಿಕ ಬೌದ್ಧ ದೇಗುಲದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇವರ ಸಹೋದರರೇ ಆಗಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಮಾಜಿ ಅಧ್ಯಕ್ಷರೂ ಆದ ಮಹಿಂದಾ ನೇತೃತ್ವದ ಶ್ರೀಲಂಕನ್  ಪೀಪಲ್ಸ್ ಪಾರ್ಟಿ (ಎಸ್.ಎಲ್.ಪಿ.ಪಿ) ದೇಶದ 9ನೇ ಸಂಸತ್ತಿಗೆ ಈಚೆಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿತ್ತು.  ಸಂಸತ್ತಿನ ಸದಸ್ಯ ಬಲ 225 ಆಗಿದ್ದು, ಎಸ್.ಎಲ್.ಪಿ.ಪಿ 145 ಸ್ಥಾನ ಗೆದ್ದುಕೊಂಡಿದೆ. ಮೈತ್ರಿ ಪಕ್ಷಗಳು 5 ಸ್ಥಾನ ಗೆದ್ದುಕೊಂಡಿದ್ದವು.

ಮಹಿಂದಾ ರಾಜಪಕ್ಸ ಅವರು ಕಳೆದ ತಿಂಗಳಷ್ಟೇ ರಾಷ್ಟ್ರ ರಾಜಕಾರಣದಲ್ಲಿ 50 ವರ್ಷ ಪೂರೈಸಿದ್ದರು. 1970ಲ್ಲಿ ಮೊದಲ ಬಾರಿ, 24ನೇ ವಯಸ್ಸಿನಲ್ಲಿಯೇ ಸಂಸತ್ತಿಗೆ ಚುನಾಯಿತರಾಗಿದ್ದರು. ನಂತರದ ವರ್ಷಗಳಲ್ಲಿ ಎರಡು ಬಾರಿ ಅಧ್ಯಕ್ಷರಾಗಿ, ಮೂರು ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಶ್ರೀಲಂಕನ್ ಪೀಪಲ್ಸ್ ಪಾರ್ಟಿಯು ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮಹಿಂದಾ ರಾಜಪಕ್ಸ ಅವರಿಗೆ 5 ಲಕ್ಷ ವೈಯಕ್ತಿಕ ಪ್ರಾಶಸ್ತ್ಯ ಮತಗಳು ಲಭಿಸಿದ್ದವು. ಇದು, ಶ್ರೀಲಂಕಾದ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಪಡೆದಿರುವ ಗರಿಷ್ಠ ಸಂಖ್ಯೆಯ ಮತಗಳಾಗಿವೆ.

ಮಹಿಂದಾ ರಾಜಪಕ್ಸ, ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಪಕ್ಷದ ರಾಷ್ಟ್ರೀಯ ಸಂಘಟಕರೂ ಆಗಿರುವ ಕಿರಿಯ ಸಹೋದರ ಬಸಿಲ್ ರಾಜಪಕ್ಸ ಅವರನ್ನು ಒಳಗೊಂಡ ಕುಟುಂಬವು ಕಳೆದ ಎರಡು ದಶಕಗಳಿಂದ ಶ್ರೀಲಂಕಾದ ರಾಜಕಾರಣದ ಮೇಲೆ ತನ್ನ ಪ್ರಾಬಲ್ಯ ಸಾಧಿಸಿದೆ.

ಯುನೈಟೆಡ್ ನ್ಯಾಷನಲ್ ಪಕ್ಷದ (ಯು.ಎನ್.ಪಿ) ಮುಖಂಡ, ನಾಲ್ಕು ಬಾರಿ ಪ್ರಧಾನಮಂತ್ರಿಯಾಗಿದ್ದ ರನಿಲ್‌  ವಿಕ್ರಮಸಿಂಘೆ ಅವರು 1997ರಲ್ಲಿ ಚುನಾವಣಾ ರಂಗಕ್ಕಿಳಿದ ಬಳಿಕ ಇದೇ ಮೊದಲ ಬಾರಿ ಪರಾಭವಗೊಂಡಿದ್ದಾರೆ. ಅವರ ಪಕ್ಷ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು