ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ನಲ್ಲಿ ಓಮೈಕ್ರಾನ್‌ 8 ಪ್ರಕರಣ ದೃಢ

Last Updated 5 ಡಿಸೆಂಬರ್ 2021, 11:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನ್ಯೂಯಾರ್ಕ್‌ನಲ್ಲಿ ಕೊರೊನಾ ವೈರಾಣುವಿನ ಓಮೈಕ್ರಾನ್‌ ರೂಪಾಂತರದ ಮೂರು ಹೊಸ ಪ್ರಕರಣಗಳು ಶನಿವಾರ ವರದಿಯಾಗಿವೆ. ಇದರಿಂದ ನ್ಯೂಯಾರ್ಕ್‌ ರಾಜ್ಯದಲ್ಲಿ ಓಮೈಕ್ರಾನ್‌ ರೂಪಾಂತರ ದೃಢಪಟ್ಟ ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿದಂತಾಗಿದೆ.

‘ಹೊಸ ರೂಪಾಂತರವು ಈಗ ಇಲ್ಲೂ ಧಾವಿಸಿದೆ. ಅದು ಸಮುದಾಯದಲ್ಲಿ ಪ್ರಸರಣ ಆಗುತ್ತಿರುವುದನ್ನು ಕಾಣುತ್ತಿದ್ದೇವೆ’ ಎಂದು ರಾಜ್ಯ ಆರೋಗ್ಯ ಆಯುಕ್ತರಾದ ಮೇರಿ ಬಸ್ಸೆಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಜೆರ್ಸಿ, ಜಾರ್ಜಿಯಾ, ಪೆನ್ಸಿಲ್ವೇನಿಯಾ, ಮೇರಿಲ್ಯಾಂಡ್‌, ಮಿಸ್ಸೋರಿಯಲ್ಲಿ ಓಮೈಕ್ರಾನ್‌ನ ಮೊದಲ ಪ್ರಕರಣಗಳು ವರದಿಯಾಗಿವೆ. ಇದರಿಂದ ಅಮೆರಿಕದಲ್ಲಿ ಹೊಸ ರೂಪಾಂತರ ಪ್ರಸರಣವಾಗುತ್ತಿರುವ ರಾಜ್ಯಗಳ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ.

ಹೊಸ ರೂಪಾಂತರವು ನೆಬ್ರಾಸ್ಕಾ, ಮಿನ್ನೆಸೋಟ, ಕ್ಯಾಲಿಫೋರ್ನಿಯಾ, ಹವಾಯಿ, ಕೊಲೊರಾಡೊದಲ್ಲೂ ಪತ್ತೆಯಾಗಿದೆ.

ಕೋವಿಡ್‌ ಹಿಂದಿನ ಅಲೆಗಳ ಸಂದರ್ಭದಲ್ಲಿ ಜಾಗತಿಕ ಕೇಂದ್ರಬಿಂದುವಾಗಿದ್ದ ನ್ಯೂಯಾರ್ಕ್‌ ನಗರದಲ್ಲಿಯೇ ಹೊಸ ರೂಪಾಂತರದ ಏಳು ಪ್ರಕರಣಗಳು ದೃಢಪಟ್ಟಿವೆ.

ಕಳೆದ 30 ದಿನಗಳಿಂದ ರಾಜ್ಯದಲ್ಲಿ ಕೋವಿಡ್‌–19 ದೃಢಪಡುತ್ತಿರುವವರ ಸಂಖ್ಯೆ ದ್ವಿಗುಣವಾಗುತ್ತಿದೆ. ಸಿಬ್ಬಂದಿ ಕೊರತೆಯ ನಡುವೆಯೂ ನ್ಯೂಯಾರ್ಕ್‌ನ ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿವೆ. ಬಹುತೇಕ ಸೋಂಕಿತರು ಡೆಲ್ಟಾ ತಳಿಯ ಬಾಧಿತರಾಗಿದ್ದಾರೆ.

–––

ಹಡಗಿನಲ್ಲಿ 10 ಜನರಿಗೆ ಕೋವಿಡ್‌ ದೃಢ

ನ್ಯೂ ಓರ್ಲಿಯನ್ಸ್‌ (ಎಪಿ): ನ್ಯೂ ಓರ್ಲಿಯನ್ಸ್ ಸಮೀಪಿಸುತ್ತಿರುವ ನಾರ್ವೇಜಿಯನ್ ಐಷಾರಾಮಿ ಪ್ರಯಾಣಿಕರ ಹಡಗಿನಲ್ಲಿದ್ದ ಹತ್ತು ಮಂದಿಗೆ ಕೋವಿಡ್-19 ದೃಢಪಟ್ಟಿದೆ ಎಂದು ಅಧಿಕಾರಿಗಳು ಶನಿವಾರ ರಾತ್ರಿ ತಿಳಿಸಿದ್ದಾರೆ.

ಈ ಹಡಗು ನವೆಂಬರ್ 28 ರಂದು ನ್ಯೂ ಓರ್ಲಿಯನ್ಸ್‌ನಿಂದ ನಿರ್ಗಮಿಸಿತ್ತು. ಅದು ಈ ವಾರಾಂತ್ಯದಲ್ಲಿ ಹಿಂತಿರುಗಲಿದೆ. ಕಳೆದ ವಾರ ಹಡಗು ಬಲೀಜ್‌, ಹೊಂಡುರಾಸ್‌ ಮತ್ತು ಮೆಕ್ಸಿಕೊದಲ್ಲಿ ನಿಂತಿತ್ತು ಎಂದು ಲೂಯಿಸಿಯಾನದ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹಡಗಿನಲ್ಲಿ 3,200ಕ್ಕೂ ಹೆಚ್ಚು ಜನರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿತರನ್ನು ಹಡಗಿನಲ್ಲಿ ಪ್ರತ್ಯೇಕವಾಸದಲ್ಲಿ ಇಡಲಾಗಿದ್ದು, ಕೋವಿಡ್‌ ಮಾರ್ಗಸೂಚಿ ಪಾಲಿಸಲಾಗುತ್ತಿದೆ ಎಂದು ಹಡಗಿನ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT